ಬುಧವಾರ, ಮಾರ್ಚ್ 22, 2023
32 °C

ಹೂಡಿಕೆ, ಲಾಭ: ಒಂದೇ ಕಲ್ಲಲ್ಲಿ ಎರಡು ಹಕ್ಕಿ

ರೋಹಿತ್‌ ಸಿಂಘಾನಿಯಾ Updated:

ಅಕ್ಷರ ಗಾತ್ರ : | |

Prajavani

ಹಣಕಾಸನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಜನರು ಬೇರೆ ಬೇರೆ ವಯೋಮಾನದಲ್ಲಿ ಮಾಡುವ ತಪ್ಪುಗಳನ್ನು ಕುರಿತ ಲೇಖನವೊಂದು ಈಚೆಗೆ ವಾಲ್‌ಸ್ಟ್ರೀಟ್‌ ಜರ್ನಲ್‌ನಲ್ಲಿ ಪ್ರಕಟವಾಗಿತ್ತು. ಆ ಲೇಖನದ ಒಂದು ಅಂಶ ನನ್ನನ್ನು ಯೋಚನೆಗೆ ಹಚ್ಚುವಂತೆ ಮಾಡಿತು. ‘ತಮ್ಮ ನಿವೃತ್ತಿಯ ನಂತರದ ಬದುಕಿಗೆ ಬೇಕಾಗುವಷ್ಟು ಹಣವನ್ನು ತಾವು ಸಂಪಾದಿಸಿ ಇಟ್ಟಿಲ್ಲ ಎಂಬ ಕೊರಗು 50ರ ವಯಸ್ಸಿಗೆ ಕಾಲಿಡುವ ಅನೇಕರನ್ನು ಬಹುವಾಗಿ ಕಾಡುತ್ತದೆ’ ಎಂಬ ಸಂಗತಿಗೆ ಆ ಲೇಖನದಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು.

ಅದು ವಾಸ್ತವ. 50ನೇ ವಯಸ್ಸಿಗೆ ಬರುತ್ತಿದ್ದಂತೆಯೇ ಉಳಿತಾಯದ ಬಗ್ಗೆ ಹೆಚ್ಚು ಚಿಂತೆಗೆ ಒಳಗಾಗುವ ಅನೇಕರು, ದುಗುಡಕ್ಕೆ ಒಳಗಾಗಿ ತಮ್ಮ ಜೀವನ ಶೈಲಿಯನ್ನೇ ಬದಲಿಸುತ್ತಾರೆ. ಕೈಯಲ್ಲಿ ದುಡ್ಡು ಇದ್ದ ಕಾಲದಲ್ಲಿ ಉಳಿತಾಯದ ಬಗ್ಗೆ ಚಿಂತಿಸುವಷ್ಟು ಸಮಯ ಇರುವುದಿಲ್ಲ. ಈಗ ಸಮಯ ಇದೆ, ಆದರೆ ಉಳಿತಾಯ ಮಾಡಲು ಹಣವಿಲ್ಲ ಎಂಬ ಬಿಕ್ಕಟ್ಟಿನ ಪರಿಸ್ಥಿತಿ ಅವರದ್ದಾಗಿರುತ್ತದೆ. ಸಣ್ಣ ವಯಸ್ಸಿನಲ್ಲೇ ಉಳಿತಾಯ ಆರಂಭಿಸುವುದೊಂದೇ ಈ ಸಮಸ್ಯೆಗೆ ಇರುವ ಏಕೈಕ ಪರಿಹಾರವಾಗಿರುತ್ತದೆ.

ರಿಸ್ಕ್‌ ತೆಗೆದುಕೊಳ್ಳಿ

ಉಳಿತಾಯದ ಹಣ ನಷ್ಟವಾಗಬಾರದೆಂಬ ಕಾರಣಕ್ಕೆ ಅನೇಕ ಯುವಕರು ಹಣವನ್ನು ಅವಧಿ ಠೇವಣಿ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌)ಗಳಂಥ ರಿಸ್ಕ್‌ ರಹಿತ ಸಾಂಪ್ರದಾಯಿಕ ಹಣಕಾಸು ಉತ್ಪನ್ನಗಳಲ್ಲಿ ಹೂಡಿಕೆ ಮಾಡುತ್ತಾರೆ. ಹಾಗೆ ಮಾಡುವುದರಿಂದ ಹೆಚ್ಚು ಹೆಚ್ಚು ಹಣವನ್ನು ಗಳಿಸುವ ಅವಕಾಶದಿಂದ ವಂಚಿತರಾಗುತ್ತಾರೆ ಎಂಬುದನ್ನು ಅವರು ಮರೆಯುತ್ತಾರೆ. ನಿವೃತ್ತಿಯ ವಯಸ್ಸಿನಲ್ಲಿ ದೊಡ್ಡ ನಿಧಿಯೊಂದು ಇರಬೇಕು ಎಂಬುದು ನಿಮ್ಮ ಬಯಕೆಯಾಗಿದ್ದರೆ, ಷೇರು ಸಂಬಂಧಿ ಉಳಿತಾಯ ಯೋಜನೆಗಳಲ್ಲಿ (ELSS) ಹೂಡಿಕೆ ಮಾಡುವುದು ಅನಿವಾರ್ಯ. ಇದಕ್ಕೊಂದು ಉದಾಹರಣೆ ಕೊಡಬೇಕೆಂದರೆ– ಕಳೆದ 15ಕ್ಕೂ ಹೆಚ್ಚು ವರ್ಷಗಳಿಂದ ಪಿಪಿಎಫ್‌ನಲ್ಲಿ ಮಾಡಿದ ಹೂಡಿಕೆಯು ಹೂಡಿಕೆದಾರರಿಗೆ ಶೇ 8.25ರಷ್ಟು ಗಳಿಕೆಯನ್ನು ಮಾತ್ರ ತಂದುಕೊಟ್ಟಿದೆ. ಆದರೆ ನಿಫ್ಟಿ–500ರಲ್ಲಿ ಮಾಡಿರುವ ಹೂಡಿಕೆಯ ಶೇ 15.46ರಷ್ಟು ಗಳಿಕೆ ತಂದಿದೆ.

ತೆರಿಗೆ ಉಳಿಸುವುದೇ ಗುರಿಯಲ್ಲ!

ವಾರ್ಷಿಕ ₹1.5 ಲಕ್ಷವನ್ನು ಪಿಪಿಎಫ್‌, ಎನ್‌ಪಿಎಸ್‌, ಅಂಚೆ ಕಚೇರಿ ಠೇವಣಿ, ವಿಮೆ ಮುಂತಾದ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಆದಾಯ ತೆರಿಗೆಯಲ್ಲಿ ಉಳಿತಾಯ ಮಾಡಬಹುದು ಎಂಬ ಭಾವನೆ ಅನೇಕರಲ್ಲಿದೆ. ಇದು ನಿಜವೂ ಹೌದು. ಆದರೆ ಹಾಗೆ ಯೋಚಿಸುವುದಕ್ಕೂ ಮುನ್ನ, ಅದೇ ಹಣವನ್ನು ಷೇರು ಆಧಾರಿತ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಬರುವ ಆದಾಯವನ್ನು ಲೆಕ್ಕ ಹಾಕಿ ನೋಡುವುದು ಅಗತ್ಯ.

ಇಲ್ಲಿ ಒಂದು ಸರಳ ಉದಾಹರಣೆಯನ್ನು ನೋಡೋಣ. 20ವರ್ಷಗಳ ಕಾಲ ಒಬ್ಬ ವ್ಯಕ್ತಿಯು ಪ್ರತಿ ವರ್ಷವೂ ₹ 1.5 ಲಕ್ಷವನ್ನು ಯಾವುದಾದರೂ ತೆರಿಗೆ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾನೆ ಎಂದಿಟ್ಟುಕೊಳ್ಳೋಣ. ಆತನ ಒಟ್ಟಾರೆ ಹೂಡಿಕೆ ₹ 30 ಲಕ್ಷವಾಗುತ್ತದೆ. ಈ ಹಣವನ್ನು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದ್ದರೆ 20ನೇ ವರ್ಷದಲ್ಲಿ (2018ರ ಬಡ್ಡಿ ದರದ ಪ್ರಕಾರ) ಅದು ₹ 75.47 ಲಕ್ಷ ಆಗಿರುತ್ತದೆ. ಇದು ದೊಡ್ಡ ಮೊತ್ತವೇ ಸರಿ. ಪಿಪಿಎಫ್‌ ಹೆಚ್ಚು ಜನರನ್ನು ಆಕರ್ಷಿಸುವುದರ ಹಿಂದಿರುವ ಕಾರಣವೂ ಇದೇ ಆಗಿರಬಹುದು. ಆದರೆ. ಅದೇ ಅವಧಿಯಲ್ಲಿ ಅಷ್ಟೇ ಹಣವನ್ನು ಷೇರು ಸಂಬಂಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ 20ನೇ ವರ್ಷದಲ್ಲಿ ಅದು ₹ 1.77 ಕೋಟಿ ಆಗುತ್ತಿತ್ತು. ಪಿಪಿಎಫ್‌ ಗಳಿಕೆಗೆ ಹೋಲಿಸಿದರೆ ಇದು ಸುಮಾರು 2.4 ಪಟ್ಟು ಹೆಚ್ಚಿನ ಗಳಿಕೆ.

ಭಾರತದಲ್ಲಿ ಅನೇಕ ‘ಇಎಲ್‌ಎಸ್‌ಎಸ್‌’ ಯೋಜನೆಗಳು ನಿರೀಕ್ಷೆಗೂ ಮೀರಿದ ಸಾಧನೆಯನ್ನು ದಾಖಲಿಸಿವೆ. ಈ ಯೋಜನೆಗಳ ನಿರ್ಬಂಧ ಅವಧಿ (ಲಾಕ್‌ ಇನ್‌) ಕೇವಲ ಮೂರು ವರ್ಷಗಳದ್ದಾಗಿರುತ್ತದೆ. ಅಷ್ಟೇ ಅಲ್ಲ, ಈ ಫಂಡ್‌ಗಳಲ್ಲಿ ಮಾಡಿದ ಹೂಡಿಕೆಯ ಡಿವಿಡೆಂಡ್‌ಗಾಗಲಿ, ದೀರ್ಘಾವಧಿ ಬಂಡವಾಳ ಗಳಿಕೆಗಾಗಲಿ ತೆರಿಗೆ ಇರುವುದಿಲ್ಲ.

ಪ್ರತಿ ತಿಂಗಳೂ ಇರಲಿ ಹೂಡಿಕೆ

ವೇತನದಾರರು ಸಾಮಾನ್ಯವಾಗಿ ಜನವರಿ ತಿಂಗಳಿನಿಂದ ಮಾರ್ಚ್‌ ಅವಧಿಯಲ್ಲಿ ಹೂಡಿಕೆಯ ಬಗ್ಗೆ ಗಂಭೀರವಾಗಿ ಯೋಚಿಸಲು ಆರಂಭಿಸುತ್ತಾರೆ. ಕೊನೆಗೆ ತೆರಿಗೆ ಉಳಿಸುವ ಸಲುವಾಗಿ ಒಂದೇ ಬಾರಿಗೆ ₹ 1.5 ಲಕ್ಷ ಹೂಡಿಕೆಗೆ ಮುಂದಾಗುತ್ತಾರೆ. ಹೀಗೆ ಮಾಡುವುದು ಸರಿಯೇ. ಒಂದೇ ಬಾರಿಗೆ ಅಷ್ಟೊಂದು ಹೂಡಿಕೆ ಮಾಡುವಷ್ಟು ಬ್ಯಾಂಕ್‌ ಬ್ಯಾಲೆನ್ಸ್‌ ಇರುತ್ತದೆಯೇ? ಹೀಗೆ ಮಾಡುವ ಬದಲು, ಪ್ರತಿ ತಿಂಗಳೂ ₹12,500ರಂತೆ ಹೂಡಿಕೆ ಮಾಡುತ್ತಾ ಹೋದರೆ ಒಮ್ಮೆಲೇ ಹೊರೆ ಬೀಳುವುದೂ ತಪ್ಪುತ್ತದೆ.

ಪ್ರತಿ ತಿಂಗಳೂ ಹೂಡಿಕೆ ಮಾಡುವುದರಿಂದ ಇತರ ಕೆಲವು ಲಾಭಗಳೂ ಇವೆ. ಮೊದಲನೆಯದಾಗಿ, ಆರ್ಥಿಕ ವರ್ಷದ ಕೊನೆಯ ಮೂರು ತಿಂಗಳಲ್ಲಿ ಬರುವ ಹಣಕಾಸಿನ ಒತ್ತಡವನ್ನು ನಿವಾರಿಸಬಹುದು. ಇನ್ನೊಂದು ಲಾಭವೆಂದರೆ– ಪ್ರತಿ ತಿಂಗಳ ಆರಂಭದಲ್ಲೇ ಹೂಡಿಕೆ ಮಾಡುವುದರಿಂದ ಒಂದು ಆರ್ಥಿಕ ಶಿಸ್ತನ್ನು ಪಾಲಿಸಿದಂತಾಗುತ್ತದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಬೀಳುತ್ತದೆ. ಮೂರನೆಯ ಲಾಭವೆಂದರೆ– ನೀವು ಹೂಡಿಕೆ ಮಾಡುವ ತಿಂಗಳಲ್ಲಿ ಫಂಡ್‌ನ ಯೂನಿಟ್‌ ಮೌಲ್ಯ ಕಡಿಮೆ ಇದ್ದರೆ ಹೆಚ್ಚು ಯೂನಿಟ್‌ಗಳು ನಿಮ್ಮ ಕೈಸೇರುತ್ತವೆ. ಇದು ನಿಮ್ಮ ಯೂನಿಟ್‌ ಖರೀದಿಯ ಸರಾಸರಿ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಒಟ್ಟಾರೆಯಾಗಿ ಹೇಳಬೇಕೆಂದರೆ, ‘ಇಎಲ್‌ಎಸ್‌ಎಸ್‌’ ನಲ್ಲಿ ಮಾಡಿದ ಹೂಡಿಕೆಯಿಂದ ₹1.5ಲಕ್ಷ ಉಳಿತಾಯವಾಗುವುದರ ಜೊತೆಗೆ ಅದರ ಡಿವಿಡೆಂಡ್‌ ಮೇಲಿನ ತೆರಿಗೆ ಮತ್ತು ದೀರ್ಘಾವದಿ ಬಂಡವಾಳ ಗಳಿಕೆಯ ಮೇಲಿನ ತೆರಿಗೆಯನ್ನೂ ಉಳಿಸಬಹುದು. ಎಂದರೆ ಒಂದೇ ಕಲ್ಲಿನಿಂದ ಎರಡು ಹಕ್ಕಿಗಳನ್ನು ಹೊಡೆದಂತೆ. ಒಂದು ಒಳ್ಳೆಯ ನಿಧಿಯನ್ನು ಕ್ರೋಡೀಕರಿಸಲು ಇಷ್ಟೊಂದು ಒಳ್ಳೆಯ ಉತ್ಪನ್ನ ಲಭ್ಯವಿರುವಾಗ, ವ್ಯವಸ್ಥಿತವಾಗಿ ಹೂಡಿಕೆ ಮಾಡಲು ಹಿಂಜರಿಯುವುದು ಸರಿಯಲ್ಲ.

(ಲೇಖಕ: ಡಿಎಸ್‌ಪಿ ಮ್ಯೂಚುವಲ್‌ ಫಂಡ್‌ನ ನಿಧಿ ವ್ಯವಸ್ಥಾಪಕ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು