ಮಂಗಳವಾರ, ಮೇ 26, 2020
27 °C
ಮರುಪಾವತಿ ಅವಧಿಯೂ ವಿಸ್ತರಣೆ

ಇಎಂಐ ಮುಂದೂಡಿಕೆ: ಗ್ರಾಹಕರಿಗೆ ಬರೆ, ಸಾಲದ ಬಡ್ಡಿ ಹೆಚ್ಚಳದ ಹೊರೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅವಧಿ ಸಾಲಗಳ ಮರುಪಾವತಿಗೆ ಮೂರು ತಿಂಗಳ ಬಿಡುವಿನ ಸೌಲಭ್ಯ ಬಳಸಿಕೊಳ್ಳುವುದರಿಂದ  ಸಾಲಗಾರರಿಗೆ ಪ್ರಯೋಜನಕ್ಕಿಂತ ಹೆಚ್ಚು ನಷ್ಟವೇ ಉಂಟಾಗಲಿದೆ.

 ‘ಕೊರೊನಾ–2‘ ವೈರಸ್‌ ಹಾವಳಿಯಿಂದ ಉದ್ಭವಿಸಿರುವ ಬಿಕ್ಕಟ್ಟಿನಿಂದ ಆದಾಯಕ್ಕೆ ಖೋತಾ ಬಿದ್ದಿರುವಾಗ, ಆರ್‌ಬಿಐ ಪ್ರಕಟಿಸಿದ ಪರಿಹಾರ ಕ್ರಮ ಆಯ್ಕೆ ಮಾಡಿಕೊಂಡರೆ ಹೆಚ್ಚು ಹೊರೆ ಹೊರಬೇಕಾಗುತ್ತದೆ. ಇದು ಸಾಲಗಾರರ ಸಂಕಟ ಹೆಚ್ಚಿಸಲಿದೆ.

ಮರು ಪಾವತಿಯ 3 ತಿಂಗಳ ಬಿಡುವಿನ ಅವಧಿಯಲ್ಲಿ ಸಾಲಗಾರರು ಪಾವತಿಸಬೇಕಾಗಿರುವ ಒಟ್ಟು ಅಸಲಿನ ಮೇಲಿನ ಬಡ್ಡಿ ನಿರಂತರವಾಗಿ ಹೆಚ್ಚುತ್ತಲೇ ಹೋಗುತ್ತದೆ. ಹೀಗೆ ಹೆಚ್ಚಳಗೊಂಡ ಬಡ್ಡಿಯನ್ನು ಬ್ಯಾಂಕ್‌ಗಳು ಸಾಲಗಾರರಿಂದ ಹೆಚ್ಚುವರಿ ‘ಇಎಂಐ’ (ಮಾಸಿಕ ಸಮಾನ ಕಂತು)  ಮೂಲಕ ವಸೂಲಿ ಮಾಡಲಿವೆ. ಸಾಲ ಮರುಪಾವತಿ ಅವಧಿಯು 6ರಿಂದ 10 ತಿಂಗಳವರೆಗೂ ವಿಸ್ತರಣೆಯಾಗಲಿದೆ.

ಉದಾಹರಣೆ: ಸಾಲಗಾರರ ಮೇಲಿನ ಹಣಕಾಸಿನ ಹೊರೆಯನ್ನು ಇಲ್ಲಿ ಎಸ್‌ಬಿಐ ನೀಡಿರುವ ನಿದರ್ಶನವೊಂದರ ಮೂಲಕ ವಿವರಿಸಲಾಗಿದೆ. ಗ್ರಾಹಕನೊಬ್ಬ ₹ 30 ಲಕ್ಷದ ಗೃಹ ಸಾಲವನ್ನು ಬ್ಯಾಂಕ್‌ನಿಂದ ಈಗಾಗಲೇ ಪಡೆದಿದ್ದು, ಇನ್ನೂ 15 ವರ್ಷಗಳ ಕಾಲ ಮರುಪಾವತಿ ಮಾಡಬೇಕಾಗಿದೆ. ಆತ ಆರ್‌ಬಿಐ ಕೊಡುಗೆ ಆಯ್ಕೆ ಮಾಡಿಕೊಂಡರೆ ಹೆಚ್ಚುವರಿಯಾಗಿ  ಅಂದಾಜು ₹ 2.34 ಲಕ್ಷ ಬಡ್ಡಿ ಪಾವತಿಸಬೇಕಾಗುತ್ತದೆ. ಇದು 8 ‘ಇಎಂಐ‘ಗಳಿಗೆ ಸಮನಾಗಿರುತ್ತದೆ.

ನಿದರ್ಶನ 2: ಗ್ರಾಹಕನೊಬ್ಬ ₹ 6 ಲಕ್ಷಕ್ಕೆ ವಾಹನ ಖರೀದಿಸಿದ್ದರೆ 54 ತಿಂಗಳ ಕಂತು ಬಾಕಿ ಇದ್ದ ಸಂದರ್ಭದಲ್ಲಿ ಅಂದಾಜು ₹ 19 ಸಾವಿರ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗುತ್ತದೆ.

ಬ್ಯಾಂಕ್‌ಗಳು ಪ್ರಕಟಿಸಿರುವ ನಿಯಮಗಳ ಪ್ರಕಾರ, ಮೂರು ತಿಂಗಳವರೆಗಿನ ಅವಧಿಗೆ ಅವುಗಳು ಬಡ್ಡಿ ವಿಧಿಸಲಿವೆ. ಇದು ಸಾಲಗಾರರು ಪಾವತಿಸುವ ಸಾಲದ ಮೊತ್ತ ಹೆಚ್ಚಳಕ್ಕೆ ಕಾರಣವಾಗಲಿದೆ. ಮರುಪಾವತಿ ಮುಂದೂಡಲು ಇಚ್ಛಿಸದ ಸಾಲಗಾರರು ಈಗಿನಂತೆಯೇ ಸಾಲ ಮರುಪಾವತಿಸಬಹುದು. ನ್ಯಾಷನಲ್ ಆಟೊಮೇಟೆಡ್‌ ಕ್ಲಿಯರಿಂಗ್ ಹೌಸ್‌ (ಎನ್‌ಎಸಿಎಚ್‌) ಮೂಲಕ ಸ್ವಯಂಚಾಲಿತವಾಗಿ ಕಂತು ಮುರಿದುಕೊಳ್ಳಲಾಗುತ್ತದೆ.

ಸಾಲ ಮರುಪಾವತಿ ಮುಂದೂಡಲು ಇಚ್ಛಿಸುವವರು ಕಂತಿನ ಹಣ ಮುರಿದುಕೊಳ್ಳದಂತೆ ಬ್ಯಾಂಕ್‌ ಶಾಖೆಗೆ ಇ–ಮೇಲ್‌ ಮೂಲಕ ಮಾಹಿತಿ ನೀಡಬೇಕು ಎಂದು ಎಸ್‌ಬಿಐ ತಿಳಿಸಿದೆ.

ಸಾಮಾನ್ಯವಾಗಿ ಸಾಲ ಮರುಪಾವತಿ ಅವಧಿ ಹೆಚ್ಚಿದಷ್ಟೂ ಸಾಲಗಾರರ ಮೇಲಿನ ಹೊರೆ ಹೆಚ್ಚಳಗೊಳ್ಳುತ್ತದೆ. ಸಾಲ ಮರುಪಾವತಿಯ ಆರಂಭಿಕ ವರ್ಷಗಳಲ್ಲಿ ‘ಇಎಂಐ‘ನಲ್ಲಿನ ಬಹುಪಾಲು ಮೊತ್ತ (ಶೇ 80) ಬಡ್ಡಿ ಪಾವತಿಗೆ ಬಳಕೆಯಾಗುತ್ತದೆ. ಮರುಪಾವತಿಯ ಕೊನೆ ಹಂತದಲ್ಲಿ ‘ಇಎಂಐ‘ನಲ್ಲಿನ ಬಡ್ಡಿಯ ಪಾಲು ಶೇ 10ಕ್ಕೆ ಇಳಿದಿರುತ್ತದೆ.

ಅನುಮಾನ ಪರಿಹರಿಸುವ ‘ಐಬಿಎ’ ಮಾಹಿತಿ
ನವದೆಹಲಿ: ಸಾಲಗಾರರಲ್ಲಿ ಮೂಡಿರುವ ಅನುಮಾನಗಳನ್ನು ಬಗೆಹರಿಸಲು ಭಾರತದ ಬ್ಯಾಂಕ್‌ ಸಂಘವು (ಐಬಿಎ) ಪ್ರಶ್ನೋತ್ತರ ರೂಪದಲ್ಲಿ ಮಾಹಿತಿ ನೀಡಿದೆ.

*ನಿಮಗೆ ಬರಬೇಕಾದ ಹಣ ಸಕಾಲದಲ್ಲಿ ಕೈಸೇರದಿದ್ದರೆ ಅಥವಾ ಆದಾಯ ಕಡಿಮೆಯಾಗಿದ್ದರೆ ಆರ್‌ಬಿಐ ಕೊಡುಗೆಯ ಪ್ರಯೋಜನ ಪಡೆದುಕೊಳ್ಳಿ.

*ಆದಾಯಕ್ಕೆ ಧಕ್ಕೆಯಾಗದವರು ಸಕಾಲದಲ್ಲಿ ‘ಇಎಂಐ’ ಪಾವತಿಸಿ.

*ಸಾಲಗಳ ಮೇಲಿನ ಬಡ್ಡಿ ದರವನ್ನು ತಕ್ಷಣಕ್ಕೆ ಪಾವತಿಸಬೇಕಾದ ನಿಬಂಧನೆ ಇಲ್ಲ. ಮೂರು ತಿಂಗಳವರೆಗೆ ಕಂತು ಪಾವತಿ ಮುಂದೂಡಬಹುದು. ಇದರಿಂದ ನಿಮ್ಮ ಸಾಲದ ಮೇಲಿನ ಬಡ್ಡಿ ನಿರಂತರವಾಗಿ ಹೆಚ್ಚುತ್ತದೆ. ಅದು ನಿಮಗೆ ಹೊರೆಯಾಗಿ ಪರಿಣಮಿಸಲಿದೆ.

*ಒಂದು ವೇಳೆ ನೀವು ಪಾವತಿಸಬೇಕಾದ ಸಾಲದ ಮೊತ್ತ ₹ 1 ಲಕ್ಷ ಇದ್ದಾಗ ಮತ್ತು ಅದಕ್ಕೆ ಶೇ 12ರಷ್ಟು ವಾರ್ಷಿಕ ಬಡ್ಡಿ ವಿಧಿಸಿದ್ದರೆ ನೀವು ಪ್ರತಿ ತಿಂಗಳೂ ₹ 1,000ರಂತೆ ಬಡ್ಡಿ ಪಾವತಿಸಬೇಕಾಗುತ್ತದೆ. ಮರು ಪಾವತಿ ಮುಂದೂಡಿದರೆ ಮೂರು ತಿಂಗಳ ನಂತರ ನೀವು ₹ 3,030 ಪಾವತಿಸಬೇಕಾಗುತ್ತದೆ.

*ಒಂದು ವೇಳೆ ಬಡ್ಡಿ ದರ ಶೇ 10ರಷ್ಟಿದ್ದರೆ ತಿಂಗಳ ಬಡ್ಡಿ ಮೊತ್ತ ₹ 833 ಇರುತ್ತದೆ. ಮೂರು ತಿಂಗಳ ನಂತರ ₹ 2,511
ಪಾವತಿಸಬೇಕಾಗುತ್ತದೆ.

ಕ್ರೆಡಿಟ್‌ ಕಾರ್ಡ್‌

*ಕ್ರೆಡಿಟ್‌ ಕಾರ್ಡ್‌ ಪಾವತಿ ವಿಷಯದಲ್ಲಿ ಪ್ರತಿ ತಿಂಗಳೂ ಕನಿಷ್ಠ ಮೊತ್ತ ಪಾವತಿಸಬೇಕಾಗುತ್ತದೆ. ಈ ಮೊತ್ತ ಪಾವತಿಸದಿದ್ದರೆ ಸಾಮಾನ್ಯವಾಗಿ ಅದನ್ನು ಕ್ರೆಡಿಟ್‌ ಬ್ಯೂರೊದ ಗಮನಕ್ಕೆ ತರಲಾಗುತ್ತದೆ. ಆರ್‌ಬಿಐ ಸುತ್ತೋಲೆ ಪ್ರಕಾರ, ಮೂರು ತಿಂಗಳವರೆಗೆ ಕ್ರೆಡಿಟ್‌ ಬ್ಯೂರೊಗಳ ಗಮನಕ್ಕೆ ತರಲಾಗುವುದಿಲ್ಲ.

*ಪಾವತಿಸಲಾರದ ಮೊತ್ತಕ್ಕೆ ಕ್ರೆಡಿಟ್‌ ಕಾರ್ಡ್‌ ವಿತರಿಸಿದ ಕಂಪನಿಗಳು ಬಡ್ಡಿ ವಿಧಿಸುತ್ತವೆ. ಈ 3 ತಿಂಗಳ ಅವಧಿಯಲ್ಲಿ ದಂಡದ ರೂಪದಲ್ಲಿ ಬಡ್ಡಿ ವಿಧಿಸುವುದಿಲ್ಲ.

*ಕ್ರೆಡಿಟ್‌ ಕಾರ್ಡ್‌ ಮೇಲಿನ ಬಡ್ಡಿ ದರವು ಬ್ಯಾಂಕ್‌ಗಳಿಂದ ಪಡೆಯುವ ಸಾಲದ ಮೇಲಿನ ಬಡ್ಡಿಗಿಂತ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಿಗೆ ಇರಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು