‘ಪಿಎಫ್‌’ ಬಡ್ಡಿ ದರ ಬದಲಿಲ್ಲ?

7
ಫೆಬ್ರುವರಿ 21ರಂದು ನಡೆಯುವ ಸಭೆಯಲ್ಲಿ ಅಂತಿಮ ನಿರ್ಧಾರ

‘ಪಿಎಫ್‌’ ಬಡ್ಡಿ ದರ ಬದಲಿಲ್ಲ?

Published:
Updated:
Prajavani

ನವದೆಹಲಿ: ಪಿಂಚಣಿ ನಿಧಿ ಸಂಸ್ಥೆಯಾಗಿರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯು (ಇಪಿಎಫ್‌ಒ) ಪ್ರಸಕ್ತ ಹಣಕಾಸು ವರ್ಷಕ್ಕೆ (2018–19) ಬಡ್ಡಿ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.

2017–18ನೆ ವರ್ಷಕ್ಕೆ ನೀಡಲಾಗುತ್ತಿರುವ ಶೇ 8.55 ಬಡ್ಡಿ ದರವನ್ನೇ ಈ ವರ್ಷಕ್ಕೂ ಮುಂದುವರೆಸುವ ಆಲೋಚನೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ವರ್ಷಕ್ಕೆ ಬಡ್ಡಿ ದರ ನಿಗದಿ ಮಾಡುವ ಸಂಬಂಧ ಸಂಘಟನೆಯ ಟ್ರಸ್ಟಿಗಳ ಸಭೆ ಇದೇ 21ರಂದು ನಡೆಯಲಿದೆ. ಸಂಘಟನೆಗೆ ಈ ವರ್ಷ ಬರಲಿರುವ ವರಮಾನದ ಅಂದಾಜಿನ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಲಾಗುವುದು. ಅದನ್ನು ಆಧರಿಸಿ ಬಡ್ಡಿ ದರ ನಿಗದಿ ಮಾಡುವ ಸಾಧ್ಯತೆ ಇದೆ.

ಲೋಕಸಭಾ ಚುನಾವಣೆ ಕಾರಣಕ್ಕೆ ಶೇ 8.55ರ ಬಡ್ಡಿ ದರ ಹೆಚ್ಚಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದೂ ಮೂಲಗಳು ತಿಳಿಸಿವೆ.

ಕೇಂದ್ರ ಕಾರ್ಮಿಕ ಸಚಿವರ ನೇತೃತ್ವದಲ್ಲಿನ ಟ್ರಸ್ಟಿಗಳ ಕೇಂದ್ರೀಯ ಮಂಡಳಿಯು (ಸಿಬಿಟಿ) ಸಂಘಟನೆಯ ಉನ್ನತ ಮಟ್ಟದ ನೀತಿ ನಿರ್ಧಾರದ ಸಮಿತಿಯಾಗಿದೆ. ಇದು ಭವಿಷ್ಯ ನಿಧಿಯ ಬಡ್ಡಿ ದರವನ್ನು ಅಂತಿಮಗೊಳಿಸಲಿದೆ.

ಒಂದೊಮ್ಮೆ ‘ಸಿಬಿಟಿ’ ಅನುಮೋದಿಸಿದ ಬಡ್ಡಿ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಬೇಕಾಗುತ್ತದೆ. ಇದಾದ ನಂತರವೇ ಬಡ್ಡಿಯನ್ನು ಸಂಘಟನೆಯ ಸದಸ್ಯರ ಖಾತೆಗೆ ವರ್ಗಾಯಿಸಲಾಗುವುದು.

2017–18ನೆ ಸಾಲಿಗೆ ನೀಡಲಾಗುತ್ತಿರುವ ಶೇ 8.55 ಬಡ್ಡಿ ದರವು ಐದು ವರ್ಷಗಳ ಕನಿಷ್ಠ ದರವಾಗಿದೆ.

‘ಇಟಿಎಫ್‌’ ಹೂಡಿಕೆ ಪರಾಮರ್ಶೆ: ಇದೇ 21ರಂದು ನಡೆಯಲಿರುವ ಸಭೆಯಲ್ಲಿ ಹೊಸ ನಿಧಿ ನಿರ್ವಾಹಕರ ನೇಮಕ ಮತ್ತು ಷೇರುಪೇಟೆಯ ವಿನಿಮಯ ಹೂಡಿಕೆ ನಿಧಿಗಳಲ್ಲಿನ (ಇಟಿಎಫ್‌) ಹೂಡಿಕೆಯ ಪರಾಮರ್ಶೆಯೂ ನಡೆಯಲಿದೆ.

ಸಂಘಟನೆಯು 2016ರ ಆಗಸ್ಟ್‌ನಲ್ಲಿ ‘ಇಟಿಎಫ್‌’ಗಳಲ್ಲಿ ಹೂಡಿಕೆ ಮಾಡಲು ಆರಂಭಿಸಿತ್ತು. ಹೂಡಿಕೆ ಮಾಡಬಹುದಾದ ಮೊತ್ತದ
ಶೇ 15ರಷ್ಟನ್ನು ಪ್ರತಿ ವರ್ಷ ಹೂಡಿಕೆ ಮಾಡಲಾಗುತ್ತಿದೆ. ಇದುವರೆಗೆ ₹ 50 ಸಾವಿರ ಕೋಟಿಗಳನ್ನು ಹೂಡಿಕೆ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !