ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ದಾಖಲಾತಿ: ಮೇಷ್ಟ್ರು ಎತ್ತಂಗಡಿ

ಮಕ್ಕಳನ್ನು ಶಾಲೆಗೆ ಕರೆತರುವ ಜವಾಬ್ದಾರಿ ಮುಖ್ಯಶಿಕ್ಷಕರ, ಶಿಕ್ಷಕರ ಹೆಗಲಿಗೆ
Last Updated 5 ಜೂನ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಶಾಲೆಯ ಶಿಕ್ಷಕರು ಶತಾಯಗತಾಯ ದಾಖಲಾತಿಯನ್ನು ಹೆಚ್ಚಿಸಲೇಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ಒಂದು ವೇಳೆ ವಿಫಲರಾದರೆ ಅಂತಹವರು ವರ್ಗಾವಣೆ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಶಾಲಾ ದಾಖಲಾತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ರೂಪಿಸಿದ್ದು, ಮಕ್ಕಳನ್ನು ಕರೆತರುವ ಹೊಣೆಯನ್ನು ಶಿಕ್ಷಕರ ಮೇಲೆ ಹೊರಿಸಿದೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರದ ಮೂಲಕ ನಿರ್ದೇಶನ ನೀಡಿರುವ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ‘ಶೂನ್ಯ ದಾಖಲಾತಿ ಮತ್ತು ಕಡಿಮೆ ದಾಖಲಾತಿ ಇರುವ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರೇ ಮಕ್ಕಳನ್ನು ದಾಖಲಿಸಲು ಶ್ರಮಪಡಬೇಕು’ ಎಂದಿದ್ದಾರೆ.

‘ಪ್ರಸಕ್ತ ವರ್ಷ 261 ಪ್ರಾಥಮಿಕ ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. ಇಲ್ಲಿ ಒಟ್ಟು 229 ಶಿಕ್ಷಕರು ಕೆಲಸ ಮಾಡುತ್ತಿದ್ದು, ಪಾಠವೇ ಮಾಡದೇ ಸಂಬಳ ಪಡೆಯುತ್ತಿದ್ದಾರೆ. ಇದೇ ರೀತಿ 57 ಪ್ರೌಢ ಶಾಲೆಗಳಲ್ಲಿ 137 ಶಿಕ್ಷಕರು ಕೆಲಸವೇ ಮಾಡದೆ ವೇತನ ಗಳಿಸುತ್ತಿದ್ದಾರೆ’ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘50 ಮಕ್ಕಳಿಗಿಂತ ಕಡಿಮೆ ದಾಖಲಾತಿ ಇದ್ದರೆ ಅದನ್ನು ಹೆಚ್ಚಿಸುವ ಜವಾಬ್ದಾರಿ ಮುಖ್ಯಶಿಕ್ಷಕರು ಮತ್ತು ಶಿಕ್ಷಕರದ್ದಾಗಿರುತ್ತದೆ. ಶೂನ್ಯ ದಾಖಲಾತಿ ಇರುವ ಪ್ರಾಥಮಿಕ ಶಾಲೆಗಳು 25 ಹಾಗೂ ಪ್ರೌಢ ಶಾಲಾ ಶಿಕ್ಷಕರು 50 ಮಕ್ಕಳನ್ನು ಶಾಲೆಗೆ ಸೇರಿಸದಿದ್ದರೆ, ಸಿಇಒ ಅಲ್ಲಿನ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ಮರು ನಿಯೋಜನೆ ಮಾಡಬೇಕು’ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಕಡಿಮೆ ದಾಖಲಾತಿ ಆಗಿರುವುದಕ್ಕೆ ಶಿಕ್ಷಕರು ವಿವರಣೆ ನೀಡಬೇಕು ಎಂಬ ಸುತ್ತೋಲೆಯನ್ನು ಇಲಾಖೆ ಹೊರಡಿಸಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಶೂನ್ಯ ದಾಖಲಾತಿ ಇರುವ ಶಾಲೆಗಳನ್ನು ಮುಚ್ಚವ ಬಗ್ಗೆ ಯಾವುದೇ ಪ್ರಸ್ತಾವವಿಲ್ಲ. ಅಂತಹ ಶಾಲೆಗಳಲ್ಲಿ ಕೇವಲ ಒಬ್ಬ ಶಿಕ್ಷಕರನ್ನು ನಿಯೋಜಿಸಿ ಉಳಿದವರನ್ನು ಹೆಚ್ಚು ದಾಖಲಾತಿ ಇರುವ ಶಾಲೆಗಳಿಗೆ ಮರು ನಿಯೋಜನೆ ಮಾಡಲಾಗುವುದು ಎಂದು ಹೇಳಿವೆ.

ಐದು ವರ್ಷಗಳ ನಂತರ ಬದಲಾದ ಚಿತ್ರಣ
ಐದು ವರ್ಷಗಳಿಂದ ಶೂನ್ಯದಾಖಲಾತಿ ಇದ್ದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಜಿನ ಕೆಲಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಬಾರಿ ಉತ್ತಮ ದಾಖಲಾತಿಯಾಗಿದೆ ಎಂದು ಶಾಲಿನಿ ರಜನೀಶ್‌ ತಿಳಿಸಿದ್ದಾರೆ.

ಇದೇ ರೀತಿ ಉಡುಪಿ ಜಿಲ್ಲೆಯ ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಒಂದೇ ದಿನದಲ್ಲಿ 101 ಮಕ್ಕಳನ್ನು ದಾಖಲಾತಿ ಮಾಡಿಕೊಂಡು ಶೂನ್ಯ ದಾಖಲಾತಿ ಹೊಂದಿರುವ ಶಾಲೆಗಳಿಗೆ ಮಾದರಿ ಎನಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT