ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈಲ ದರ ಇಳಿಕೆ ಗ್ರಾಹಕರಿಗಿಲ್ಲ: ಎಕ್ಸೈಸ್‌ ಸುಂಕ ಲೀಟರ್‌ಗೆ ₹ 3ರಂತೆ ಹೆಚ್ಚಳ

ಕೇಂದ್ರದ ನಿರ್ಧಾರ
Last Updated 14 ಮಾರ್ಚ್ 2020, 19:45 IST
ಅಕ್ಷರ ಗಾತ್ರ
ADVERTISEMENT
""
""

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಇಳಿಮುಖವಾಗಿದೆ. ಆದರೆ ಕೇಂದ್ರ ಸರ್ಕಾರ ಶನಿವಾರ ಎಕ್ಸೈಸ್‌ ಸುಂಕ ಹೆಚ್ಚಿಸುವ ಮೂಲಕ ದರ ಇಳಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿದೆ. ಹೀಗಾಗಿ ಗ್ರಾಹಕರಿಗೆ ಸುಂಕದ ಹೊರೆ ಬೀಳುವುದಿಲ್ಲವಾದರೂ, ದರ ಇಳಿಕೆ ಪ್ರಯೋಜನವೂ ಸಿಗದಂತಾಗಲಿದೆ.

ಆರ್ಥಿಕತೆಯು ಮಂದಗತಿಯಲ್ಲಿ ಸಾಗುತ್ತಿರುವುದರಿಂದ ವರಮಾನ ಸಂಗ್ರಹ ಹೆಚ್ಚಿಸಿಕೊಳ್ಳಲು ಸರ್ಕಾರ ಹೆಚ್ಚು ಗಮನ ನೀಡುತ್ತಿದೆ. ಇದರ ಭಾಗವಾಗಿ,ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಶೇಷ ಎಕ್ಸೈಸ್‌ ಸುಂಕವನ್ನು ಪ್ರತಿ ಲೀಟರಿಗೆ ₹ 3ರಂತೆ ಏರಿಕೆ ಮಾಡಿದೆ. ಇದರಿಂದ ₹ 39 ಸಾವಿರ ಕೋಟಿ ಹೆಚ್ಚುವರಿ ವರಮಾನ ಸಂಗ್ರಹವಾಗಲಿದೆ.

2019–20ನೇ ಹಣಕಾಸು ವರ್ಷ ಅಂತ್ಯವಾಗಲು ಮೂರು ವಾರ ಬಾಕಿ ಇದೆ. ಈ ಮೂರು ವಾರಗಳಲ್ಲಿ ಸರ್ಕಾರಕ್ಕೆ ₹ 2 ಸಾವಿರ ಕೋಟಿಗಳಷ್ಟು ವರಮಾನ ಬರುವ ಅಂದಾಜು ಮಾಡಲಾಗಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಭಾರಿ ಇಳಿಕೆ ಕಂಡುಬರುತ್ತಿದೆ. ಹೀಗಾಗಿ ತೈಲ ಮಾರಾಟ ಕಂಪನಿಗಳು ಎಕ್ಸೈಸ್‌ ಸುಂಕವನ್ನು ಕಚ್ಚಾ ತೈಲ ದರದಲ್ಲಿ ಆಗಿರುವ ಇಳಿಕೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಿವೆ. ಇದರಿಂದಾಗಿ ರಿಟೇಲ್‌ ಮಾರಾಟ ದರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ.

2014–15ರಲ್ಲಿಯೂ ಕೇಂದ್ರ ಸರ್ಕಾರ ಕಚ್ಚಾ ತೈಲ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ.

ಪ್ರತಿ ಲೀಟರ್‌ಗೆ ₹ 2ರಂತೆ ಎಕ್ಸೈಸ್‌ ಸುಂಕ ಮತ್ತು ₹1ರಂತೆ ರಸ್ತೆ ಸೆಸ್‌ ವಿಧಿಸಲಾಗಿದೆ ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

2014 ನವೆಂಬರ್‌ನಿಂದ 2016ರ ಜನವರಿವರೆಗೆ 9 ಬಾರಿ ಸುಂಕ ಹೆಚ್ಚಿಸಲಾಗಿದೆ. 2017ರ ಅಕ್ಟೋಬರ್‌ ಮತ್ತು ನಂತರ ಪ್ರತಿ ಲೀಟರಿಗೆ ಒಟ್ಟಾರೆ ₹3.50ರಷ್ಟು ಸುಂಕ ಇಳಿಕೆ ಮಾಡಲಾಗಿತ್ತು. 2019ರ ಜುಲೈನಲ್ಲಿ ಲೀಟರಿಗೆ ₹2ರಂತೆ ಏರಿಕೆ ಮಾಡಲಾಗಿದೆ.

‘ಗ್ರಾಹಕರಿಗೆ ದರ ಇಳಿಕೆ ಲಾಭ ವರ್ಗಾಯಿಸಿ’
ಎಕ್ಸೈಸ್‌ ಸುಂಕ ಏರಿಕೆ ಮಾಡಿರುವ ಕೇಂದ್ರದ ನಿರ್ಧಾರವನ್ನು ಕಾಂಗ್ರೆಸ್‌ ಟೀಕಿಸಿದೆ. ಕಚ್ಚಾತೈಲ ದರ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಆಗ್ರಹಿಸಿದೆ.

ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ದರದಲ್ಲಿ ಶೇ 35 ರಿಂದ ಶೇ 40ರಷ್ಟು ಕಡಿಮೆ ಮಾಡುವಂತೆ ಕಾಂಗ್ರೆಸ್‌ನ ಹಿರಿಯ ವಕ್ತಾರ ಅಜಯ್‌ ಮಕೇನ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT