3

ಬಾಹ್ಯ ಕಾರಣಗಳಿಗೆ ಏರಿಳಿತ

Published:
Updated:

ಅಂಕಿ ಅಂಶ ತಜ್ಞರಿಗೆ  ಈ ವಾರ ಬಿಡುವಿಲ್ಲದ ಕಾರ್ಯವನ್ನು ಪೇಟೆಗಳು ಒದಗಿಸಿವೆ. ಅಮೆರಿಕಾದ ಡಾಲರ್ ವಿರುದ್ಧ ರುಪಾಯಿಯ ಬೆಲೆ ಸರ್ವಕಾಲೀನ ಕನಿಷ್ಠಕ್ಕೆ ಕುಸಿತ,  ಕಚ್ಚಾ ತೈಲ ದರ ಏರಿಕೆ, ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ವಾಣಿಜ್ಯ ಸಮರ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಿದವು.

ಗುರುವಾರ ರೂಪಾಯಿಯ ಬೆಲೆ ಸರ್ವಕಾಲೀನ ಕನಿಷ್ಠಕ್ಕೆ ಕುಸಿದಿದೆ ಎಂಬ ಕಾರಣಕ್ಕೆ ಆರಂಭಿಕ ಚಟುವಟಿಕೆಯಲ್ಲಿ ಘಟಾನುಘಟಿ ಕಂಪನಿಗಳಾದ ಲಾರ್ಸನ್ ಅಂಡ್ ಟೊಬ್ರೊ,  ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್, ರಿಲಯನ್ಸ್ ಇಂಡಸ್ಟ್ರೀಸ್, ಹೀರೊ ಮೊಟೊಕಾರ್ಪ್‌ಗಳಲ್ಲದೆ ತೈಲ ಕಂಪನಿಗಳಾದ ಐಒಸಿ, ಎಚ್‌ಪಿಸಿ ಎಲ್, ಬಿಪಿಸಿಎಲ್, ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಭಾರಿ ಇಳಿಕೆಗೊಳಪಟ್ಟವು. ಇಳಿಕೆಯ ಪ್ರಮಾಣ ಹೇಗಿತ್ತೆಂದರೆ ಎಚ್‌ಪಿಸಿಎಲ್‌  ಷೇರಿನ ಬೆಲೆ ದಿನದ ಮೊದಲ ಅರ್ಧ ಘಂಟೆಯೊಳಗೆ ₹259 ರ ಸಮೀಪದಿಂದ ₹275ರವರೆಗೂ ಏರಿಕೆ ಕಂಡು ನಂತರ ₹260 ರ ಸಮೀಪಕ್ಕೆ ಹಿಂದಿರುಗಿತು.

ಕಮ್ಮಿನ್ಸ್ ಲಿಮಿಟೆಡ್, ಒಎನ್‌ಜಿಸಿ, ಎಚ್‌ಎಎಲ್‌, ಬಿಇಎಲ್, ಬಿಎಚ್‌ಇಎಲ್‌, ಎಂಜಿನಿಯರ್ಸ್‌ ಇಂಡಿಯಾ, ಐಓಸಿ, ಎಚ್‌ಪಿಸಿಎಲ್‌, ಎನ್‌ಎಂಡಿಸಿ,  ಎನ್‌ಟಿಪಿಸಿ, ಆರ್‌ಇಸಿ, ಪವರ್ ಗ್ರಿಡ್, ಟಾಟಾ ಮೋಟರ್, ಕ್ಯಾನ್ ಫಿನ್ ಹೋಮ್ಸ್,  ಇಂಡಿಯಾ ಸಿಮೆಂಟ್ಸ್, ಮದರ್ ಸನ್ ಸುಮಿ, ಯು ಫ್ಲೆಕ್ಸ್,  ಯು ಪಿ ಎಲ್, ಮುಂತಾದ ಅಗ್ರಮಾನ್ಯ ಕಂಪನಿಗಳು ಭಾರಿ ಕುಸಿತದಿಂದ ವಾರ್ಷಿಕ ಕನಿಷ್ಠ ಬೆಲೆ ದಾಖಲಿಸಿವೆ.

ಆದರೆ ಶುಕ್ರವಾರ ಷೇರಿನ ಬೆಲೆಗಳು ದಿನದ ಆರಂಭದಿಂದಲೇ ಏರಿಕೆ ಕಂಡುಕೊಂಡಿತು.   ಪ್ರಮುಖ ಕಂಪನಿಗಳಾದ ಬಜಾಜ್ ಆಟೋ ಸುಮಾರು ₹೯೩ ರಷ್ಟು ಏರಿಕೆ ಕಂಡರೆ, ಟಾಟಾ ಸ್ಟಿಲ್, ಯೆಸ್‌ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ ಶೇ3 ರಷ್ಟು ಏರಿಕೆ ಕಂಡುಕೊಂಡಿವೆ. 

ಮಧ್ಯಮ ಶ್ರೇಣಿ ಕಂಪನಿಗಳಾದ ಐಡಿಬಿಐ, ಪೆಟ್ರೋನೆಟ್, ಜಿಂದಾಲ್ ಸ್ಟಿಲ್ ಅಂಡ್ ಪವರ್, ಎಂಆರ್‌ಪಿಎಲ್‌, ಬಿಇಎಲ್‌, ನ್ಯಾಲ್ಕೋ, ದಿವೀಸ್ ಲ್ಯಾಬ್, ಹ್ಯಾವೆಲ್ಸ್ ಮುಂತಾದವುಗಳು ಗಮನಾರ್ಹ ಏರಿಕೆ ಕಂಡರೆ, ಕೆಳಮಧ್ಯಮ ಶ್ರೇಣಿ ಕಂಪೆನಿಗಳಲ್ಲಿ ಅಲ್ಸೇಕ್ ಟೆಕ್, ಇಐಡಿ ಪ್ಯಾರಿ, ರೇನ್ ಇಂಡಸ್ಟ್ರೀಸ್, ಎಡೆಲ್ವಿಸ್  ಮುಂತಾದವು ಗಮನಾರ್ಹ ಏರಿಕೆ ಕಂಡುಕೊಂಡವು.

ಕಂಪನಿಗಳ  ಸಾಧನೆಯನ್ನಾಧರಿಸಿ ಪ್ರದರ್ಶಿತವಾಗುತ್ತದ್ದ ಏರಿಳಿತಗಳು ಈಗ ಚರಿತ್ರೆಯ ಪುಟಗಳನ್ನೂ ಸೇರಿದೆ. ಸದ್ಯ ಕೇವಲ ಬಾಹ್ಯ ಕಾರಣಗಳಿಂದ ಏರಿಳಿತ ಪ್ರದರ್ಶಿಸುವುದನ್ನು ಕಾಣುತ್ತಿದ್ದೇವೆ.

ಏಪ್ರಿಲ್ ಮಧ್ಯಂತರದಲ್ಲಿ ಒಂದು ಸಾವಿರ ರೂಪಾಯಿಗಳನ್ನು ದಾಟಿ ವಾರ್ಷಿಕ ಗರಿಷ್ಠದಲ್ಲಿದ್ದ ಟೈಟಾನ್ ಕಂಪನಿ ಷೇರು ಕಳೆದ ಒಂದು ತಿಂಗಳಿಂದ ₹945 ರ ಸಮೀಪದಿಂದ ₹825 ರವರೆಗೂ ಇಳಿಕೆ ಕಂಡಿದ್ದು, ಶುಕ್ರವಾರ ₹825 ರ ಹಂತಕ್ಕೆ ತಲುಪಲು ಪ್ರಮುಖ ಕಾರಣ ದಿನದ ಆರಂಭದಲ್ಲಿ ಪ್ರಮುಖ ಹೂಡಿಕೆದಾರರು ಶೇ 1.4 ರಷ್ಟು ಕಂಪನಿಯ ಷೇರುಗಳನ್ನು ಕಳೆದ ಒಂದು ತಿಂಗಳಿನಿಂದಲೂ ಮಾರಾಟ ಮಾಡಿದ್ದಾರೆ ಎಂಬುದಾಗಿದೆ.  ಈ ಸುದ್ದಿಯ ಮೇಲೆ ಹೆಚ್ಚಿನ ಮಾರಾಟದ ಒತ್ತಡದ ಕಾರಣ ಕುಸಿದರೆ ನಂತರದಲ್ಲಿ ₹883 ರವರೆಗೂ ನಿರಂತರ ಏರಿಕೆ ಕಂಡುಕೊಂಡಿತು.

ಷೇರಿನ ಬೆಲೆ ಕುಸಿತ ಕಂಡಮೇಲೆ ಕುಸಿತದ ಕಾರಣ ಹೊರಬಿದ್ದಿದೆ. ಈ ಅಂಶವನ್ನು ಗಮನಿಸಿ ನಿಯಂತ್ರಿತ ನಿರ್ಧಾರ ಕೈಗೊಂಡಲ್ಲಿ ಮಾತ್ರ ಬಂಡವಾಳ ಸುರಕ್ಷತೆ ಬಯಸಬಹುದು.ಸಾರ್ವಜನಿಕ ವಲಯದ ಬ್ಯಾಂಕ್ ಇಂಡಿಯನ್ ಬ್ಯಾಂಕ್ ಈ ಹಿಂದೆ ಪ್ರಕಟಿಸಿದ್ದ ಪ್ರತಿ ಷೇರಿಗೆ ₹6 ರ ಲಾಭಾಂಶವನ್ನು ರದ್ದುಗೊಳಿಸಿರುವುದು ಬ್ಯಾಂಕಿಂಗ್ ವಲಯದ ಕಂಪನಿಗಳ ಮೇಲೆ ಪ್ರಭಾವ ಬೀರಿತು.  ಈ ವಲಯದ ಕಂಪೆನಿಗಳಲ್ಲಿ ವಿಜಯ ಬ್ಯಾಂಕ್ ಒಂದೇ ಲಾಭಾಂಶ ವಿತರಿಸಿದ ಕಂಪನಿಯಾಗಿ ಹೊರಹೊಮ್ಮಿದೆ.

ಹೆಚ್ಚಿನ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆ  ನಡೆಸಲು ಅನುವಾಗುತ್ತಿವೆ.  ಈ ಮಧ್ಯೆ ಮತ್ತೊಂದು ತ್ರೈಮಾಸಿಕ ಅಂತ್ಯಗೊಂಡಿದೆ. ಕಾಲ್ಗೇಟ್ ಪಾಲ್ಮೊಲೀವ್, ಟಿಸಿಎಸ್ ಮತ್ತು ಇನ್ಫೊಸಿಸ್‌ ಕಂಪನಿಗಳು ತಮ್ಮ ಫಲಿತಾಂಶ ಪ್ರಕಟಿಸುವ ದಿನಗಳನ್ನು ಗೊತ್ತುಪಡಿಸಿಕೊಂಡಿವೆ.  ಟಿಸಿಎಸ್ ಕಂಪನಿಯ ಬೈಬ್ಯಾಕ್ ಯೋಜನೆಗೆ ಅಂಚೆ ಮತದಾನದ ಮೂಲಕ ಷೇರುದಾರರ ಸಮ್ಮತಿ ದೊರೆಯಬೇಕಾಗಿದೆ. ಈ ಬೈಬ್ಯಾಕ್ ಯೋಜನೆಯಲ್ಲಿ ಪ್ರವರ್ತಕರು ಸಹ ಭಾಗಿಯಾಗಲು ನಿರ್ಧರಿಸಿರುವುದು ಸಾರ್ವಜನಿಕರ ಪಾಲು ಸ್ವಲ್ಪ ಕಡಿತವಾದಂತಾಗಿದೆ. ಆದರೂ ತಾಂತ್ರಿಕ ವಲಯದ ಷೇರುಗಳು ರೂಪಾಯಿಯ ಕುಸಿತದಿದ್ನಾಗಿ ಉತ್ತಮ ಏರಿಕೆ ಪ್ರದರ್ಶಿಸುತ್ತಿವೆ.

ಪೇಟೆಯ ಚಟುವಟಿಕೆಯ ರೀತಿ ಎಷ್ಟು ಹರಿತ ಎಂಬುದಕ್ಕೆ ಗುರುವಾರ ಎಡೆಲ್ವಿಸ್  ಫೈನಾನ್ಶಿಯಲ್‌ ಸರ್ವೀಸಸ್‌  ಲಿಮಿಟೆಡ್  ಷೇರಿನ ಬೆಲೆ ₹ 271 ರಸಮಿಪಕ್ಕೆ ಕುಸಿದಿದ್ದು, ಶುಕ್ರವಾರ ಪೇಟೆಯ ಚೇತರಿಕೆ ಕಾರಣ ಸುಮಾರು ₹20 ರಷ್ಟು ಏರಿಕೆ ಕಂಡಿತು. ಈ ಷೇರಿನ ಬೆಲೆ ಕಳೆದ ಒಂದು ತಿಂಗಳಿನಲ್ಲಿ ₹339 ರ ಸಮೀಪದಿಂದ ಕುಸಿದಿದೆ ಎಂಬುದು ಗಮನದಲ್ಲಿರಿಸಬೇಕಾದ ಅಂಶ. ಈ ರೀತಿಯ ರಭಸದ ಏರಿಳಿತಗಳಿಗೆ ಕಂಪನಿಯ ಆಂತರಿಕ ಸಾಧನೆಯಾಗಲಿ, ಬೆಳವಣಿಗೆಗಳಾಗಲಿ ಕಾರಣವಾಗಿರುವುದಿಲ್ಲ.

ವಾರದ ವಹಿವಾಟು

266 ಅಂಶ

ಒಟ್ಟಾರೆ ಸಂವೇದಿ ಸೂಚ್ಯಂಕ ಇಳಿಕೆ

388 ಅಂಶ

ಮಧ್ಯಮ ಶ್ರೇಣಿ ಸೂಚ್ಯಂಕ ಇಳಿಕೆ‌

537 ಅಂಶ

ಕೆಳಮಧ್ಯಮ ಶ್ರೇಣಿ ಸೂಚ್ಯಂಕ ಇಳಿಕೆ

₹ 1,380 ಕೋಟಿ

ವಿದೇಶಿ ವಿತ್ತೀಯ ಸಂಸ್ಥೆಗಳ ಮಾರಾಟ

₹ 2,941 ಕೋಟಿ

ಸ್ವದೇಶಿ ವಿತ್ತೀಯ ಸಂಸ್ಥೆಗಳ ಖರೀದಿ

₹ 145 ಲಕ್ಷ ಕೋಟಿ

ಪೇಟೆಯ ಬಂಡವಾಳ ಮೌಲ್ಯ

ಬೋನಸ್ ಷೇರು: ಅಶೋಕ ಬ್ಯುಲ್ಡ್ ಕಾನ್ ಲಿಮಿಟೆಡ್ ವಿತರಿಸಲಿರುವ 1:2 ರ  ಅನುಪಾತದ ಬೋನಸ್ ಷೇರಿಗೆ ಜುಲೈ 12 ನಿಗದಿತ ದಿನ.
ಕರೂರ್ ವೈಶ್ಯ ಬ್ಯಾಂಕ್ 1:10 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಹೊಸ ಷೇರು: ಇತ್ತೀಚಿಗೆ ಪ್ರತಿ ಷೇರಿಗೆ ₹185 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ರೈಟ್ಸ್ ಲಿಮಿಟೆಡ್ ಕಂಪನಿಯ ಷೇರುಗಳು ಜುಲೈ 2 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಪ್ರತಿ ಷೇರಿಗೆ ₹783 ರಂತೆ ಆರಂಭಿಕ ಷೇರು ವಿತರಣೆ ಮಾಡಿದ ಫೈನ್ ಆರ್ಗಾನಿಕ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಜೂನ್ 2 ರಿಂದ ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಸ್ಟ್ರೈಡ್ಸ್ ಶಾಸೂನ್ ಲಿಮಿಟೆಡ್  ಸಮೂಹ ಕಂಪನಿಗಳ ವ್ಯವಸ್ಥಿತ ಯೋಜನೆಯಂತೆ ಹೊಸ ಅವತಾರದ ಸೋಲಾರ ಆಕ್ಟಿವ್ ಫಾರ್ಮಾ ಸೈನ್ಸಸ್ ಲಿಮಿಟೆಡ್ 27 ರಿಂದ ಟಿ ಗುಂಪೆನಿಯಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ತಲ್ವಾಲ್ಕರ್ ಬೆಟ್ಟರ್ ವ್ಯಾಲ್ಯೂ ಫಿಟ್ನೆಸ್ ಲಿಮಿಟೆಡ್ ಕಂಪನಿಯ 'ಜಿಮ್' ವ್ಯವಹಾರವನ್ನು ಬೇರ್ಪಡಿಸಿ ವಿಲೀನಗೊಳಿಸಿಕೊಂಡ ತಲ್ವಾಲ್ಕರ್ ಲೈಫ್ ಸ್ಟೈಲ್ಸ್ ಲಿಮಿಟೆಡ್ ಕಂಪನಿಯ ಷೇರುಗಳು ಶುಕ್ರವಾರ 29 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಗಾಯಿತ್ರಿ ಪ್ರಾಜೆಕ್ಟ್ಸ್ ಲಿಮಿಟೆಡ್ ಮತ್ತು ಸಮೂಹ ಕಂಪನಿಗಳ ವ್ಯವಸ್ಥಿತ ಯೋಜನೆ ಪ್ರಕಾರ ಮೂಲಸೌಕರ್ಯ ವಿಭಾಗವನ್ನು ಪಡೆದುಕೊಂಡಿರುವ ಗಾಯಿತ್ರಿ ಹೈವೇಸ್ ಲಿಮಿಟೆಡ್ ನ ₹2 ಮುಖಬೆಲೆಯ ಷೇರುಗಳು ಈ ತಿಂಗಳ 28 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಮುಖಬೆಲೆ ಸೀಳಿಕೆ: ಗ್ಯಾಲಂಟ್ ಇಸ್ಪಾಟ್ ಲಿ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ನಿರ್ಧರಿಸಿದೆ.

ಒಟ್ಕೋ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿ ಷೇರಿನ ಮುಖಬೆಲೆಯನ್ನು ₹10 ರಿಂದ ₹2ಕ್ಕೆ ಸೀಳಲು ಜುಲೈ 11 ನಿಗದಿತ ದಿನ.

(ಮೊ: 9886313380, ಸಂಜೆ 4.30 ರನಂತರ)

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !