ಸೋಮವಾರ, ಅಕ್ಟೋಬರ್ 21, 2019
24 °C

ಕೈಗಾರಿಕಾ ಉತ್ಪಾದನೆ ಕುಸಿತ

Published:
Updated:
prajavani

ನವದೆಹಲಿ: ಆಗಸ್ಟ್‌ ತಿಂಗಳ ಕೈಗಾರಿಕಾ ಉತ್ಪಾದನೆಯು ಶೇ (–) 1.1ರಷ್ಟಕ್ಕೆ ಕುಸಿದಿದ್ದು, 7 ವರ್ಷಗಳಲ್ಲಿನ ಅತ್ಯಂತ ಕಳಪೆ ಸಾಧನೆ ಇದಾಗಿದೆ.

23 ಕೈಗಾರಿಕಾ ವಲಯಗಳ ಪೈಕಿ, 15 ವಲಯಗಳಲ್ಲಿನ ಪ್ರಗತಿಯು ಹಿಂದಿನ ವರ್ಷದ ಇದೇ ಅವಧಿಯಲ್ಲಿನ ಪ್ರಗತಿಗೆ ಹೋಲಿಸಿದರೆ ಋಣಾತ್ಮಕವಾಗಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಈ ಅಂಕಿ ಅಂಶಗಳು ಆರ್ಥಿಕತೆಯಲ್ಲಿನ ಹಿಂಜರಿತವು ತೀವ್ರಗೊಂಡಿರುವುದನ್ನು ದೃಢಪಡಿಸುತ್ತದೆ. ಭಾರಿ ಯಂತ್ರೋಪಕರಣ ಮತ್ತು ಗೃಹೋಪಯೋಗಿ ಸಲಕರಣೆಗಳ ತಯಾರಿಕೆಯಲ್ಲಿ ಕುಸಿತ ಆಗಿರುವುದರಿಂದ ಕೈಗಾರಿಕೆ ಉತ್ಪಾದನೆಯು ತೀವ್ರವಾಗಿ ಕುಂಠಿತಗೊಂಡಿದೆ.

2018ರ ಆಗಸ್ಟ್‌ ತಿಂಗಳಲ್ಲಿ ಕೈಗಾರಿಕಾ ಉತ್ಪಾದನಾ ಸೂಚ್ಯಂಕವು (ಐಐಪಿ) ಶೇ 4.8ರಷ್ಟು ಬೆಳವಣಿಗೆ ದಾಖಲಿಸಿತ್ತು. ಈ ಹಿಂದೆ 2012ರ ನವೆಂಬರ್‌ನಲ್ಲಿ ‘ಐಐಪಿ’ಯು ಶೇ (–) 1.7ರಷ್ಟು ದಾಖಲಾಗಿತ್ತು.

‘ಐಐಪಿ’ಯಲ್ಲಿ ಶೇ 77ರಷ್ಟು ಪಾಲು ಹೊಂದಿರುವ ತಯಾರಿಕಾ ವಲಯವು, ಆಗಸ್ಟ್‌ನಲ್ಲಿ ಶೇ 1.2ರಷ್ಟು ಕಡಿಮೆಯಾಗಿದೆ. ಇದು 5 ವರ್ಷಗಳಲ್ಲಿನ ಅತಿ ಕಡಿಮೆ ಮಟ್ಟವಾಗಿದೆ. ವರ್ಷದ ಹಿಂದೆ ಇದು ಶೇ 5.2ರಷ್ಟು ಬೆಳವಣಿಗೆ ಕಂಡಿತ್ತು.

‘ಐಐಪಿ ಅಂಕಿ ಅಂಶಗಳು ಕೈಗಾರಿಕೆ ಮತ್ತು ತಯಾರಿಕೆ ಚಟುವಟಿಕೆಗಳು ಕಡಿಮೆಯಾಗಿರುವುದನ್ನು ದೃಢಪಡಿಸುತ್ತವೆ. ಆರ್ಥಿಕ ಚೇತರಿಕೆಗೆ ವಿಳಂಬ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕಾದ ಅಗತ್ಯ ಇದೆ’ ಎಂದು ಎಂಕೆ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ಕೆ. ಜೋಸೆಫ್‌ ಥಾಮಸ್‌ ಹೇಳಿದ್ದಾರೆ.

Post Comments (+)