ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ಬೆಲೆ ಇಳಿಕೆ ಅನುಮಾನ

Last Updated 18 ಸೆಪ್ಟೆಂಬರ್ 2022, 20:17 IST
ಅಕ್ಷರ ಗಾತ್ರ

ನವದೆಹಲಿ: ಭತ್ತ ಬಿತ್ತನೆಯ ಪ್ರದೇಶ ಕಡಿಮೆ ಆಗಿರುವ ಕಾರಣದಿಂದಾಗಿ ಅಕ್ಕಿ ಉತ್ಪಾದನೆಯು ಗರಿಷ್ಠ 70 ಲಕ್ಷ ಟನ್‌ನಷ್ಟು ಕಡಿಮೆ ಆಗಲಿದ್ದು, ಅಕ್ಕಿಯ ಬೆಲೆಯು ಹೆಚ್ಚಿನ ಮಟ್ಟದಲ್ಲಿಯೇ ಉಳಿಯುವ ಸಾಧ್ಯತೆ ಇದೆ. ಇದು ಹಣದುಬ್ಬರವನ್ನು ಹೆಚ್ಚಿನ ಮಟ್ಟದಲ್ಲಿ ಇರಿಸಬಹುದು ಎಂದು ಅಂದಾಜಿಸಲಾಗಿದೆ.

ಆಹಾರ ವಸ್ತುಗಳ ಬೆಲೆ ಏರಿಕೆ ಪರಿಣಾಮವಾಗಿ ಆಗಸ್ಟ್‌ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇಕಡ 7ಕ್ಕೆ ಏರಿಕೆ ಆಗಿದೆ.

ಜೂನ್‌ಗೆ ಕೊನೆಗೊಂಡ 2021–22ನೇ ಬೆಳೆ ವರ್ಷದಲ್ಲಿ ದೇಶದಲ್ಲಿ ದೇಶದಲ್ಲಿ ಅಕ್ಕಿಯ ಉತ್ಪಾದನೆಯು ದಾಖಲೆಯ 13.02 ಕೋಟಿ ಟನ್ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಅಕ್ಕಿ ಉತ್ಪಾದನೆ 12.43 ಟನ್ ಮಾತ್ರ ಆಗಿತ್ತು. ಕೇಂದ್ರ ಆಹಾರ ಸಚಿವಾಲಯದ ಅಂದಾಜಿನ ಪ್ರಕಾರ, ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಅಕ್ಕಿಯ ಉತ್ಪಾದನೆಯು 60 ಲಕ್ಷ ಟನ್‌ನಿಂದ 70 ಲಕ್ಷ ಟನ್‌ವರೆಗೆ ಕಡಿಮೆ ಆಗಬಹುದು. ದೇಶದ ಒಟ್ಟು ಅಕ್ಕಿ ಉತ್ಪಾದನೆಯಲ್ಲಿ ಶೇಕಡ 85ರಷ್ಟು ಮುಂಗಾರು ಹಂಗಾಮಿನಲ್ಲಿ ಆಗುತ್ತದೆ.

ಈಗಿನ ಹಂತದಲ್ಲಿ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ದೇಶದಲ್ಲಿ ಇರುವ ಅಕ್ಕಿಯ ಹೆಚ್ಚುವರಿ ದಾಸ್ತಾನು ಸಾರ್ವಜನಿಕ ಪಡಿತರ ವ್ಯವಸ್ಥೆಯ (ಪಿಡಿಎಸ್) ಅಡಿ ಪೂರೈಕೆಗೆ ಸಾಕಾಗುವಷ್ಟಿದೆ ಎಂಬುದು ಕೆಲವರ ಅಭಿಪ್ರಾಯ. ನುಚ್ಚಕ್ಕಿ ರಫ್ತು ನಿಷೇಧ ಹಾಗೂ ಇತರ ಅಕ್ಕಿ ರಫ್ತಿಗೆ (ಬಾಸ್ಮತಿ ಹೊರತುಪಡಿಸಿ) ಶೇಕಡ 20ರಷ್ಟು ತೆರಿಗೆ ವಿಧಿಸಿರುವ ಪರಿಣಾಮವಾಗಿ ಬೆಲೆ ನಿಯಂತ್ರಣದಲ್ಲಿ ಇರುತ್ತದೆ ಎಂಬ ಅಭಿಪ್ರಾಯವಿದೆ.

ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ನೀಡಿರುವ ಅಂಕಿ–ಅಂಶಗಳ ಅನ್ವಯ ಅಕ್ಕಿಯ ಸಗಟು ಬೆಲೆಯು ಒಂದು ವರ್ಷದಲ್ಲಿ ಶೇ 10.7ರಷ್ಟು ಹೆಚ್ಚಾಗಿದೆ. ಚಿಲ್ಲರೆ ಮಾರಾಟ ಬೆಲೆಯು ಕೆ.ಜಿ.ಗೆ ಶೇ 9.47ರಷ್ಟು ಜಾಸ್ತಿ ಆಗಿದೆ.

ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುವ ರೀತಿಯಲ್ಲಿ ಈಚೆಗೆ ಕೆಲವು ಕ್ರಮ ಕೈಗೊಂಡಿರುವ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ಸರ್ಕಾರದ ಅಧಿಕಾರಿಗಳು ಹೇಳಿದ್ದಾರೆ. ‘ದೇಶಿ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಭಾರಿ ಪ್ರಮಾಣದಲ್ಲಿ ಏರುವಂತೆ ಕಾಣುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಹಾಗೂ ರಸಗೊಬ್ಬರ, ಇಂಧನ ಬೆಲೆ ಏರಿಕೆಯ ಕಾರಣದಿಂದಾಗಿ ಅಕ್ಕಿ ಬೆಲೆ ಒಂದಿಷ್ಟು ಹೆಚ್ಚಾಗಿದೆ. ಇತರ ಎಲ್ಲ ಸರಕುಗಳ ಬೆಲೆ ಹೆಚ್ಚಾಗುತ್ತಿರುವಾಗ ಇದರ ಬೆಲೆಯೂ ಒಂದಿಷ್ಟು ಹೆಚ್ಚಾಗುತ್ತದೆ’ ಎಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಹೇಳಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಅಕ್ಕಿ ಉತ್ಪಾದನೆ 1.2 ಕೋಟಿ ಟನ್ ಕಡಿಮೆ ಆದರೂ ದೇಶಿ ಮಾರುಕಟ್ಟೆಯಲ್ಲಿ ಲಭ್ಯತೆಗೆ ದೊಡ್ಡ ಅಪಾಯ ಉಂಟಾಗದು ಎಂದು ಅವರು ಹೇಳಿದ್ದಾರೆ. ಗ್ರಾಹಕ ಬೆಲೆ ಸೂಚ್ಯಂಕದ ಈಚೆಗಿನ ಅಂಕಿ–ಅಂಶಗಳ ಪ್ರಕಾರ ಅಕ್ಕಿ ಬೆಲೆಯು ಆಗಸ್ಟ್‌ ತಿಂಗಳೊಂದರಲ್ಲಿ ಶೇ 6.94ರಷ್ಟು ಹೆಚ್ಚಾಗಿದೆ. ಹಿಂದಿನ ವರ್ಷದ ಆಗಸ್ಟ್‌ನಲ್ಲಿ ಅಕ್ಕಿಯ ಹಣದುಬ್ಬರ ಪ್ರಮಾಣವು ಶೇ (–)1.2ರಷ್ಟು ಇತ್ತು.

ಅಂಕಿ–ಅಂಶ

10.7%

ಒಂದು ವರ್ಷದಲ್ಲಿ ಅಕ್ಕಿಯ ಸಗಟು ಬೆಲೆ ಏರಿಕೆ

9.47%

ಒಂದು ವರ್ಷದಲ್ಲಿ ಅಕ್ಕಿಯ ಚಿಲ್ಲರೆ ಮಾರಾಟ ಬೆಲೆ ಹೆಚ್ಚಳ

6.94%

ಆಗಸ್ಟ್‌ನಲ್ಲಿ ಅಕ್ಕಿಯ ಹಣದುಬ್ಬರ ಪ್ರಮಾಣ

70 ಲಕ್ಷ ಟನ್

ಮುಂಗಾರು ಹಂಗಾಮಿನಲ್ಲಿ ಅಕ್ಕಿ ಉತ್ಪಾದನೆ ಕುಸಿತದ ಅಂದಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT