ನವದೆಹಲಿ: ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಪ್ರಮಾಣವು (ಎಫ್‌ಡಿಐ) ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
2022–23ರಲ್ಲಿ ₹7,194 ಕೋಟಿ ಬಂಡವಾಳ ಹೂಡಿಕೆಯಾಗಿತ್ತು. 2023–24ರಲ್ಲಿ ₹5,037 ಕೋಟಿ ಹೂಡಿಕೆಯಾಗಿದೆ. ಒಟ್ಟಾರೆ ಶೇ 30ರಷ್ಟು ಇಳಿಕೆಯಾಗಿದೆ ಎಂದು ಲೋಕಸಭೆಗೆ ಸಲ್ಲಿಸಿರುವ ಲಿಖಿತ ಉತ್ತರದಲ್ಲಿ ತಿಳಿಸಿದೆ.
ಈ ವಲಯದಲ್ಲಿ ಶೇ 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿದೆ. ಬಂಡವಾಳ ಹೆಚ್ಚಳಕ್ಕೆ ಅನುಗುಣವಾಗಿ ಹಲವು ನಿಯಮಾವಳಿ ರೂಪಿಸಲಾಗಿದೆ ಎಂದು ತಿಳಿಸಿದೆ.
ಕೈಗಾರಿಕೆಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1951ರ ಅನ್ವಯ ಸಂಸ್ಕರಿಸಿದ ಆಹಾರ ಪದಾರ್ಥಗಳಿಗೆ ಪರವಾನಗಿ ನೀಡುವುದಕ್ಕೆ ಸಂಬಂಧಿಸಿ ಕೆಲವು ವಿನಾಯಿತಿ ನೀಡಲಾಗಿದೆ ಎಂದು ವಿವರಿಸಿದೆ.
ಸಂಸ್ಕರಿಸಿದ ಪದಾರ್ಥಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿಮೆ ವಿಧಿಸಲಾಗುತ್ತಿದೆ. ಕೆಲವು ಪದಾರ್ಥಗಳಿಗೆ ವಿನಾಯಿತಿ ನೀಡಲಾಗಿದೆ. ಶೇ 71.7ರಷ್ಟು ಪದಾರ್ಥಗಳು ಶೇ 5ರ ಜಿಎಸ್‌ಟಿ ಸ್ಲ್ಯಾಬ್‌ನಡಿ ಬರುತ್ತವೆ ಎಂದು ತಿಳಿಸಿದೆ.