ಗುರುವಾರ , ಸೆಪ್ಟೆಂಬರ್ 23, 2021
22 °C

ತೆರಿಗೆ ಪ್ರಕರಣಗಳ ಇತ್ಯರ್ಥಕ್ಕೆ 'ವಿವಾದ್‌ ಸೇ ವಿಶ್ವಾಸ್'; ಲೋಕಸಭೆಯಲ್ಲಿ ಮಂಡನೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬುಧವಾರ ಲೋಕಸಭೆಯಲ್ಲಿ 'ವಿವಾದ್‌ ಸೆ ವಿಶ್ವಾಸ್ ಮಸೂದೆ, 2020' ಮಂಡಿಸಿದರು. ₹ 9.32 ಲಕ್ಷ ಕೋಟಿ ಮೊತ್ತದ ತೆರಿಗೆ ಪ್ರಕರಣಗಳ ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ಹೊಸ ಮಸೂದೆ ಮಂಡಿಸಲಾಗಿದೆ. 

ಹಲವು ನ್ಯಾಯಾಲಯಗಳಲ್ಲಿ ನೇರ ತೆರಿಗೆಗೆ ಸಂಬಂಧಿಸಿದ 4,83,000 ಪ್ರಕರಣಗಳು ಬಾಕಿ ಉಳಿದಿವೆ. ವಿವಾದ್‌ ಸೇ ವಿಶ್ವಾಸ್ ಯೋಜನೆ ಮೂಲಕ ಪ್ರಕರಣಗಳನ್ನು ಬಗೆ ಹರಿಸಲು ಸರ್ಕಾರ ಮುಂದಾಗಿದೆ. ತೆರಿಗೆ ಸಂಬಂಧಿತ ಪ್ರಕರಣಗಳಲ್ಲಿ ಸಿಲುಕಿರುವವರು 2020ರ ಮಾರ್ಚ್‌ 31ರೊಳಗೆ ಬಾಕಿ ತೆರಿಗೆಯನ್ನು ಪಾವತಿಸಿ, ದಂಡ ಮತ್ತು ಬಡ್ಡಿಯಿಂದ ಮುಕ್ತಿ ಪಡೆಯುವ ಅವಕಾಶವನ್ನು ಈ ಯೋಜನೆ ನೀಡಲಿದೆ.  

ಬಜೆಟ್‌ ಭಾಷಣದಲ್ಲಿ ಪ್ರಸ್ತಾಪಿಸಿದಂತೆ ನೇರ ತೆರಿಗೆ ಸಂಗ್ರಹದಲ್ಲಿ ನಂಬಿಕೆ ಗಳಿಸುವ ಪ್ರಯತ್ನವಾಗಿ ವಿವಾದ್‌ ಸೇ ವಿಶ್ವಾಸ್ ಮಸೂದೆ ಮಂಡಿಸಲಾಗಿದೆ. ಯೋಜನೆಯ ಅವಕಾಶವು ಸೀಮಿತ ಅವಧಿಗೆ ಮಾತ್ರ ಲಭ್ಯವಿರಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. 

ಮಾರ್ಚ್‌ 31ರೊಳಗೆ ತೆರಿಗೆ ಪಾವತಿಸಲಿದ್ದರೆ, ಹೆಚ್ಚುವರಿ ಮೊತ್ತದೊಂದಿಗೆ ತೆರಿಗೆ ಬಾಕಿ ಪೂರ್ಣಗೊಳಿಸಿ ಜೂನ್‌ 30ರ ವರೆಗೂ ಸುಲಭವಾಗಿ ಪ್ರಕರಣ ಇತ್ಯರ್ಥಗೊಳಿಸಿಕೊಳ್ಳಲು ಅವಕಾಶ ಸಿಗಲಿದೆ. 

ತಾರತಮ್ಯವಿಲ್ಲದ ಸೂತ್ರ ನಿರ್ಧರಿತ ಪರಿಹಾರವನ್ನು ಮಸೂದೆ ನೀಡಲಿದೆ. ಸರ್ಕಾರಕ್ಕೆ ವ್ಯಾಜ್ಯ ಪರಿಹಾರಕ್ಕೆ ತಗುಲುವ ವೆಚ್ಚ ಉಳಿಯಲಿದೆ ಹಾಗೂ ಆದಾಯ ಸಂಗ್ರಹವೂ ಆಗಲಿದೆ ಎಂದಿದ್ದಾರೆ. 

ಮಸೂದೆಗೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್‌ ಮುಖಂಡ ಅಧೀರ್‌ ರಂಜನ್‌ ಚೌಧರಿ, 'ಮಸೂದೆಗೆ ಹಿಂದಿಯಲ್ಲಿ ಹೆಸರು ನೀಡಲಾಗಿದೆ ಹಾಗೂ ಸರ್ಕಾರವು ದೇಶದಲ್ಲಿ ಒಂದು ಭಾಷೆಯನ್ನು ಹೇರಲು ಪ್ರಯತ್ನಿಸುತ್ತಿದೆ' ಎಂದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು