ಗುರುವಾರ , ಮಾರ್ಚ್ 4, 2021
23 °C
ಕೇಂದ್ರ ಹಣಕಾಸು ಸಚಿವಾಲಯದ ನಿರೀಕ್ಷೆ

ಐ.ಟಿ: ಹೊಸ ವ್ಯವಸ್ಥೆಗೆ ಹೆಚ್ಚಿನವರ ಒಲವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವೈಯಕ್ತಿಕ ಆದಾಯ ತೆರಿಗೆದಾರರಲ್ಲಿ ಶೇ 80ರಷ್ಟು ಜನರು ಹೊಸ ತೆರಿಗೆ ವ್ಯವಸ್ಥೆಗೆ ವರ್ಗಾವಣೆಗೊಳ್ಳಲಿದ್ದಾರೆ ಎಂದು ಹಣಕಾಸು ಸಚಿವಾಲಯ ನಿರೀಕ್ಷಿಸಿದೆ.

‘ಶೇ 80ರಷ್ಟು ಆದಾಯ ತೆರಿಗೆದಾರರು ಹೊಸ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವುದು ನಮ್ಮ ಅಂದಾಜು ಆಗಿದೆ’ ಎಂದು ರೆವಿನ್ಯೂ ಕಾರ್ಯದರ್ಶಿ ಅಜಯ್‌ ಭೂಷಣ್‌ ಪಾಂಡೆ ಹೇಳಿದ್ದಾರೆ.

’ಬಜೆಟ್‌ ಮಂಡನೆ ಮುಂಚೆ ಸರ್ಕಾರವು 5.78 ಕೋಟಿ ತೆರಿಗೆದಾರರ ಬಗ್ಗೆ ವಿಶ್ಲೇಷಣೆ ನಡೆಸಿತ್ತು. ಹೊಸ ವ್ಯವಸ್ಥೆಯಡಿ ಶೇ 69ರಷ್ಟು ತೆರಿಗೆದಾರರಿಗೆ ತೆರಿಗೆ ಪಾವತಿಯಲ್ಲಿ ಉಳಿತಾಯ ಆಗಲಿದೆ. ಶೇ 11ರಷ್ಟು ಜನರು ಹಳೆಯ ತೆರಿಗೆ ವ್ಯವಸ್ಥೆ ಬಗ್ಗೆಯೇ ಒಲವು ತೋರಿಸಬಹುದು. ಉಳಿದ ಶೇ 20ರಷ್ಟು ತೆರಿಗೆದಾರರು ತೆರಿಗೆ ಪಾವತಿಗೆ ಸಂಬಂಧಿಸಿದ ವಿವರಗಳನ್ನು ದಾಖಲಿಸುವ ತಲೆನೋವು ಬೇಡವೆಂದು ಹೊಸ ವ್ಯವಸ್ಥೆಗೆ ಬದಲಾಗಲಿದ್ದಾರೆ’ ಎಂದು ಹೇಳಿದ್ದಾರೆ.

‘ಸೆಪ್ಟೆಂಬರ್‌ನಲ್ಲಿ ಕಾರ್ಪೊರೇಟ್‌ ತೆರಿಗೆಗಳನ್ನು ಪ್ರಕಟಿಸಿದಾಗಲೂ ಕಂಪನಿಗಳಿಗೆ ಇದೇ ಬಗೆಯ ಆಯ್ಕೆ ಅವಕಾಶ ಕಲ್ಪಿಸಲಾಗಿತ್ತು. ಶೇ 90ರಷ್ಟು ಕಾರ್ಪೊರೇಟ್‌ಗಳು ವಿನಾಯ್ತಿ ಮುಕ್ತ ಕಡಿಮೆ ದರದ ತೆರಿಗೆ ವ್ಯವಸ್ಥೆಯನ್ನೇ ಆಯ್ಕೆ ಮಾಡಿಕೊಂಡಿದ್ದವು. ವೈಯಕ್ತಿಕ ಆದಾಯ ತೆರಿಗೆಗೆ ಸಂಬಂಧಿಸಿದ ಹೊಸ ವ್ಯವಸ್ಥೆಯು ಹೆಚ್ಚು ಪ್ರಯೋಜನಕಾರಿ ಆಗಲಿರುವುದು ಬಹುತೇಕರ ಅನುಭವಕ್ಕೆ ಬರಲಿದೆ’ ಎಂದು ತಿಳಿಸಿದ್ದಾರೆ.

ಬಜೆಟ್‌ನಲ್ಲಿ ಪರಿಚಯಿಸಿರುವ ಹೊಸ ತೆರಿಗೆ ಹಂತ ಮತ್ತು ಕಡಿಮೆ ತೆರಿಗೆ ದರಗಳನ್ನು ಆಯ್ಕೆ ಮಾಡಿಕೊಳ್ಳುವವರು ಸದ್ಯಕ್ಕೆ ಜಾರಿಯಲ್ಲಿ ಇರುವ ತೆರಿಗೆ ಉಳಿತಾಯದ ಹೂಡಿಕೆಯೂ ಒಳಗೊಂಡ ವಿನಾಯ್ತಿ ಮತ್ತು ಇತರ ಕಡಿತದ ಸೌಲಭ್ಯಗಳನ್ನು ಬಿಟ್ಟುಕೊಡಬೇಕಾಗುತ್ತದೆ.

₹ 15 ಲಕ್ಷದವರೆಗಿನ ಆದಾಯ ಹೊಂದಿದವರಿಗೆ ಹೊಸ ತೆರಿಗೆ ಹಂತ ಮತ್ತು ಕಡಿಮೆ ತೆರಿಗೆ ದರಗಳನ್ನು ಸರ್ಕಾರ ಪರಿಚಯಿಸಿದೆ. ₹ 5 ಲಕ್ಷದವರೆಗೆ ಆದಾಯ ಹೊಂದಿದವರು ಹಳೆಯ ಇಲ್ಲವೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಯಾವುದೇ ತೆರಿಗೆ ಪಾವತಿಸುವ ಅಗತ್ಯ ಇಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು