ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ನಿರ್ಮಾಣಕ್ಕೆ ಸುಮಾರು ₹ 40 ಲಕ್ಷ ಸಾಲ ಬೇಕಾಗಿದೆ, ಸಲಹೆ ನೀಡಿ

ಹಣಕಾಸು
Last Updated 10 ಜುಲೈ 2018, 19:46 IST
ಅಕ್ಷರ ಗಾತ್ರ

ಹೆಸರು ಬೇಡ, ಬೆಂಗಳೂರು
ನನ್ನ ಹೆಸರಿನಲ್ಲಿ ಸ್ವಂತ ಮನೆ ಬೆಂಗಳೂರಿನಲ್ಲಿದೆ. ಇಬ್ಬರು ಗಂಡು ಮಕ್ಕಳು. ಅವರಿಗೆ ಮದುವೆ ಆಗಿದೆ. ನನ್ನ ಈ ಸ್ವಯಾರ್ಜಿತ ಆಸ್ತಿ ನನ್ನ ಸೊಸೆಗೆ ದಾನ ಪತ್ರ ಮುಖಾಂತರ ವರ್ಗಾಯಿಸಬೇಕೆಂದಿದ್ದೇನೆ. ಇದು ಕಾನೂನು ಬಾಹಿರವೇ ತಿಳಿಸಿ. ಇಲ್ಲವಾದರೆ ಯಾವ ರೀತಿಯಲ್ಲಿ ನನ್ನ ಹಕ್ಕು ಸೊಸೆಗೆ ವರ್ಗಾಹಿಸಬಹುದು? ಇದರಿಂದ ಬೇರೆಯವರಿಗೆ ಹಕ್ಕು ಬರುವುದಿಲ್ಲವೇ?

ಉತ್ತರ: ಯಾವುದೇ ವ್ಯಕ್ತಿ ಹೊಂದಿರುವ ಸ್ಥಿರ ಆಸ್ತಿ, ಸ್ವಯಾರ್ಜಿತವಾದಲ್ಲಿ ಮಾತ್ರ ಅಂದರೆ ಅವರೇ ಖರೀದಿಸಿದ ಆಸ್ತಿಯಲ್ಲಿ ಅಂತಹ ಆಸ್ತಿಯನ್ನು, ಅವರ ಜೀವಿತ ಕಾಲದಲ್ಲಿ ಉಯಿಲು (Will), ದಾನಪತ್ರ, (Gift deed) ಅಥವಾ ಕ್ರಯಪತ್ರ (Sale deed) ಮುಖಾಂತರ ತಾವು ಇಷ್ಟಪಟ್ಟವರ ಹೆಸರಿಗೆ ವರ್ಗಾಯಿಸುವ ಅಧಿಕೃತ ಹಕ್ಕು ಅವರಿಗೆ ಇರುತ್ತದೆ. ನೀವು ನಿಮ್ಮ ಸೊಸೆಗೆ ದಾನಪತ್ರ ಮುಖಾಂತರ, ದಾನ ಪತ್ರ ಸಬ್‌ರಿಜಿಸ್ಟಾರ್ ಆಫೀಸಿನಲ್ಲಿ ನೋಂದಾಯಿಸಿ, ವರ್ಗಾಯಿಸಲು ಕಾನೂನಿನಲ್ಲಿ ಯಾವುದೇ ತೊಡಕು ಇರುವುದಿಲ್ಲ. ಓರ್ವ ವ್ಯಕ್ತಿ ತನ್ನ ರಕ್ತ ಸಂಬಂಧಿಗೆ ದಾನಪತ್ರ ಮಾಡಿಕೊಟ್ಟಲ್ಲಿ Gift Tax ಕೂಡಾ ದಾನಪಡೆದ ವ್ಯಕ್ತಿಗೆ ಬರುವುದಿಲ್ಲ. ಇದೇ ವೇಳೆ ದಾನ ಪಡೆದ ವ್ಯಕ್ತಿ ರಕ್ತ ಸಂಬಂಧಿ ಅಲ್ಲವಾದಲ್ಲಿ, ತೆರಿಗೆ ಕೊಡಬೇಕಾಗುತ್ತದೆ. ಈ ರೀತಿ ಮಾಡುವಲ್ಲಿ ಯಾವ ಸಂಬಂಧಿಗಳೂ ಹಕ್ಕು ಸ್ಥಾಪಿಸುವಂತಿಲ್ಲ.

ಎಂ.ಎಸ್. ಸುರಾಜ್, ಬೆಂಗಳೂರು
ನಾನು ಅಮೆರಿಕದಲ್ಲಿ ಮಾಸ್ಟರ್ ಡಿಗ್ರಿ ಮಾಡಲು ಬ್ಯಾಂಕ್ ಆಫ್ ಮಹಾರಾಷ್ಟ್ರದಿಂದ₹ 50 ಲಕ್ಷ ಶಿಕ್ಷಣ ಸಾಲ ಪಡೆದಿದ್ದೇನೆ. ನನಗೆ Term Insurance ಮಾಡಲು ಮಾರ್ಗದರ್ಶನ ಮಾಡಿ

ಉತ್ತರ: ನಿಮಗೆTerm Insurance ಎಂದರೆ ಏನು ಎಂಬುದು ತಿಳಿದಿರಬೇಕು. ಇದೊಂದು ಜೀವವಿಮೆಯಾದರೂ, ಇಲ್ಲಿ ಕಟ್ಟುವ ಹಣ ಅವಧಿ ಮುಗಿಯುತ್ತಲೇ, ಪಾಲಸಿದಾರ ಬದುಕಿದರೂ ಸಿಗುವುದಿಲ್ಲ. ಹೆಚ್ಚಿನ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಓರ್ವ ವ್ಯಕ್ತಿ ಹೆಚ್ಚಿನ ಸಾಲ ಪಡೆದಾಗ ಹಾಗೂ ಮುಖ್ಯವಾಗಿ ದೀರ್ಘಾವಧಿ ಸಾಲಗಳಾದ ಗೃಹಸಾಲ ಮತ್ತು ಶಿಕ್ಷಣ ಸಾಲ ಪಡೆದಾಗ, ಅಂತಹ ವ್ಯಕ್ತಿ ಸಾಲ ತೀರಿಸುವ ಮುನ್ನ ಮರಣ ಹೊಂದಿದಲ್ಲಿ ಇನ್ಶುರನ್ಸ್ ಕಂಪನಿ ಪಡೆದಿರುವ ವಿಮಾ ಮೊತ್ತ ಸಾಲ ನೀಡಿದ ಬ್ಯಾಂಕಿಗೆ ನೀಡಲುTerm Insurance ಮಾಡಿಸುತ್ತಾರೆ.Term Insurance ಎಲ್ಲಾ ವಿಮಾ ಕಂಪೆನಿಗಳೂ ಮಾಡಿಸುತ್ತವೆ. ನೀವು ಎಲ್.ಐ.ಸಿ.ಯನ್ನು ಸಂಪರ್ಕಿಸಿರಿ.

ಸುನೀಲ್‌ಕುಮಾರ್, ಮೈಸೂರು
ಸದ್ಯ ಎಸ್‌ಬಿಐನಲ್ಲಿ₹ 3 ಲಕ್ಷ ಉಳಿತಾಯ ಖಾತೆಯಲ್ಲಿದೆ.₹ 5000 ಆರ್.ಡಿ. 1–6–2017ರಲ್ಲಿ ಪ್ರಾರಂಭಿಸಿದ್ದೇನೆ. ನನಗೆ ಬಡ್ಡಿ ವಿಚಾರದಲ್ಲಿ ತಿಳಿಸಿ.

ಉತ್ತರ: ನೀವು ಆರ್.ಡಿ. ಖಾತೆ ಎಂದಿನಂತೆ ಮುಂದುವರಿಸಿರಿ.ಎಸ್.ಬಿ.ಐ.ನಲ್ಲಿ ಉಳಿತಾಯ ಖಾತೆಯಲ್ಲಿ ಇರಿಸಿದ₹ 3 ಲಕ್ಷ ಅದೇ ಬ್ಯಾಂಕಿನ ಅವಧಿ ಠೇವಣಿಗೆ ವರ್ಗಾಯಿಸಿರಿ. ಹೀಗೆ ವರ್ಗಾಹಿಸುವಾಗ, ನಿಮಗೆ ಈ ಠೇವಣಿಯಿಂದ ಬರುವ ಬಡ್ಡಿ ಖರ್ಚಿಗೆ ಬೇಕಾದಲ್ಲಿ FD ಮಾಡಿರಿ. ಬೇಡವಾದಲ್ಲಿ ಒಮ್ಮೆಲೇ ಬಡ್ಡಿ ಬರುವ Re-investment Deposit (RID) ನಲ್ಲಿ ಇರಿಸಿರಿ. ಉಳಿತಾಯ ಖಾತೆಯಲ್ಲಿ ಅತೀ ಕಡಿಮೆ ಬಡ್ಡಿ ಬರುತ್ತಿದ್ದು, ಅವಧಿ ಠೇವಣಿಯಲ್ಲಿ ಹೆಚ್ಚಿಗೆ ಬಡ್ಡಿ ಬರುವುದರಿಂದ ಖರ್ಚಿಗೆ ಬೇಡವಾದ ಹಣ ಅವಧಿ ಠೇವಣಿಗೆ ವರ್ಗಾಯಿಸುವುದೇ ಲೇಸು. ಅವಧಿ ಠೇವಣಿ ಶೇ 6 ರಿಂದ 7 ಇರಬಹುದು. ಇದು ಬದಲಾಗುತ್ತಿರುತ್ತದೆ. ಉಳಿತಾಯ ಖಾತೆಯಲ್ಲಿ ಶೇ 3 ರಿಂದ 4 ಇರಬಹುದು. ಬ್ಯಾಂಕಿನಲ್ಲಿ ವಿಚಾರಿಸಿರಿ.

ಸುನೀಲ್‌ಕಾಂತ, ಊರುಬೇಡ
ನಾನು ಜಮೀನು ಮಾರಾಟ ಮಾಡಿದ ಹಣದಿಂದ ಒಂದು ನಿವೇಶನ ಕೊಂಡಿದ್ದೇನೆ. ಈಗ ನನಗೆ₹ 16,000 ಬಾಡಿಗೆ ಬರುತ್ತದೆ. ವಯಸ್ಸು 63. ನಾನು₹ 12 ಲಕ್ಷFD ಮಾಡಿದ್ದೇನೆ. ವಾರ್ಷಿಕ₹ 85,000 ಬಡ್ಡಿ ಬರುತ್ತದೆ.₹ 50,000 ತನಕ ಬಡ್ಡಿ ರಿಯಾಯಿತಿ ಇದೆಯೇ, 15H ಕೊಟ್ಟಿದ್ದೇನೆ. ನನಗೆ ತೆರಿಗೆ ಇದೆಯೇ?

ಉತ್ತರ: ನೀವು ಮಾರಾಟ ಮಾಡಿದ ಜಮೀನು ಕೃಷಿ ಜಮೀನಾದಲ್ಲಿ ನಿಮಗೆ Capital Gain Tax (See 48) ನಿಮ್ಮ ಮನೆ ಬಾಡಿಗೆಯಲ್ಲಿ ಸೆಕ್ಷನ್ 24 (a) ಆಧಾರದ ಮೇಲೆ ಶೇ 30 ರಿಯಾಯಿತಿ ಇದೆ. ನೀವು ಪಡೆಯುವ ವಾರ್ಷಿಕ ಬ್ಯಾಂಕ್ ಬಡ್ಡಿಯಲ್ಲಿ ತಾ. 1–4–2018 ರಿಂದ ಹಿರಿಯ ನಾಗರಿಕರಿಗೆ ಸೆಕ್ಷನ್ 80TTB ಆಧಾರದ ಮೇಲೆ₹ 50,000 ತನಕ ರಿಯಾಯಿತಿ ಇದೆ. ಇವೆಲ್ಲವನ್ನೂ ಪರಿಗಣಿಸುವಾಗ ನಿಮ್ಮ ವಾರ್ಷಿಕ ಒಟ್ಟು ಆದಾಯ₹ 1,69,400.(ಬಾಡಿಗೆ₹ 1,92,000 – ₹ 57,000 (ವಿನಾಯ್ತಿ)=1,34,400, ಠೇವಣಿ ಬಡ್ಡಿ₹ 5,000–₹50,000=35,000=1,69,400. ನಿಮಗೆ ತೆರಿಗೆ ಬರುವುದಿಲ್ಲ.

ಲಕ್ಷ್ಮಣಯ್ಯ, ರಾಮನಗರ
ನಾನು ಅಂಚೆ ಇಲಾಖೆಯಲ್ಲಿ 7 ವರ್ಷಗಳಿಂದ ಅಂಚೆ ಸಹಾಯಕನಾಗಿ ಕೆಲಸ ಮಾಡುತ್ತಿದ್ದೇವೆ. ನನ್ನ ಹೆಂಡತಿ, 5 ವರ್ಷಗಳಿಂದ ಮುರಾರ್ಜಿ ವಸತಿ ಶಾಲೆಯಲ್ಲಿ ಕೆಲಸ ಮಾಡುತ್ತಾಳೆ. ನಾವೀಬ್ಬರೂ ಎಲ್ಲಾ ಕಡಿತದ ನಂತರ ಕ್ರಮವಾಗಿ₹ 20,000 ತಲಾ ಪಡೆಯುತ್ತೇವೆ. ನನ್ನ ತಂದೆ ರೇಷ್ಮೆ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದು, ನಿವೃತ್ತಿಯಿಂದ ಬಂದ ಹಣ ಹಾಗೂ ನಮ್ಮ ಉಳಿತಾಯದಿಂದ ರಾಮನಗರ ಪಟ್ಟಣದಲ್ಲಿ 35X50 ನಿವೇಶನ₹ 10 ಲಕ್ಷಕ್ಕೆ ಕೊಂಡುಕೊಂಡೆವು. ಈಗ ಮನೆ ನಿರ್ಮಾಣಕ್ಕೆ ಸುಮಾರು₹ 40 ಲಕ್ಷ ಸಾಲ ಬೇಕಾಗಿದೆ. ಸಾಲದ ಅರ್ಹತೆ, ಸಾಲದ ಮೂಲ, ಸಾಲ ಮರುಪಾವತಿ ಹಾಗೂ ಮನೆಯ ನಿರ್ವಹಣೆ ಮತ್ತು ಮುಂದಿನ ಉಳಿತಾಯದ ವಿಚಾರದಲ್ಲಿ ನಮಗೆ ಸರಿಯಾದ ಮಾರ್ಗದರ್ಶನ ನೀಡಿರಿ.

ಉತ್ತರ: ನೀವು ಗಂಡ ಹೆಂಡತಿ ಈರ್ವರಿಂದ ಪಡೆಯುವ ಮಾಸಿಕ ಹಣ₹ 40 ಸಾವಿರ ಆದರೂ ಇಲ್ಲಿ ಮನೆ ಖರ್ಚು, ಮನೆ ಬಾಡಿಗೆ, ನಿಮ್ಮೀರ್ವರ ಖರ್ಚು ಕಳೆಯಬೇಕಾಗುತ್ತದೆ. ಒಟ್ಟಿನಲ್ಲಿ ನೀವು ಇಬ್ಬರೂ ಸೇರಿ ಕನಿಷ್ಠ₹ 20,000 ತಿಂಗಳಿಗೆ ಉಳಿಸಬಹುದು. ನೀವು₹ 40 ಲಕ್ಷ ಗೃಹಸಾಲ ಪಡೆಯಬೇಕಾದರೆ ತಿಂಗಳಿಗೆ₹ 40000 ಕಂತು ಕಟ್ಟಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ನಿಮಗೆ ಎಟುಕದ ವಿಚಾರ. ರಾಮನಗರದಲ್ಲಿ ‘ಪ್ರಧಾನ ಮಂತ್ರಿ ಆವಾಸ್ ಯೋಜನಾ ಗೃಹಸಾಲ (Pradhan mantri Awas yojana home loan)ದ ಅಡಿಯಲ್ಲಿ₹ 20 ಲಕ್ಷ ಸಾಲ ಪಡೆಯಿರಿ. ರಾಮನಗರದಲ್ಲಿ ಎಲ್ಲಾ ಬ್ಯಾಂಕುಗಳಲ್ಲಿ₹ 9 ಲಕ್ಷ ಗೃಹಸಾಲದ ತನಕ ಈ ಯೋಜನೆಯಲ್ಲಿ ಬ್ಯಾಂಕ್ ವಿಧಿಸುವ ಗೃಹಸಾಲದ ಬಡ್ಡಿಯಲ್ಲಿ ಶೇ 4 ಬಡ್ಡಿ ಅನುದಾನಿತ (Subsidy) ರೂಪದಲ್ಲಿ ಪಡೆಯಬಹುದು.

ಹೆಸರು, ಊರು ಬೇಡ
ನಾನು ಗ್ರಾಮೀಣ ಬ್ಯಾಂಕಿನಲ್ಲಿ ಗುಮಾಸ್ತನಾಗಿ 2016 ಜುಲೈದಲ್ಲಿ ನಿವೃತ್ತನಾದೆ. ಈಗ ಗ್ರಾಚ್ಯುಟಿ ಮೊತ್ತ₹ 10 ಲಕ್ಷದಿಂದ 20 ಲಕ್ಷಕ್ಕೆ ಏರಿದ್ದು, ಈ ಅಂತರದ ಮೊತ್ತ ನನಗೂ ಸಿಗಬಹುದೇ ಹಾಗೂ ನಮಗೆ ಪಿಂಚಣಿ ಸೌಲತ್ತು
ಬರಬಹುದೇ ತಿಳಿಸಿರಿ.

ಉತ್ತರ: ಬ್ಯಾಂಕ್ ನೌಕರರಿಗೆ ಹೆಚ್ಚಿನ ಗ್ರಾಚ್ಯುಟಿ ಅಂದರೆ₹ 20 ಲಕ್ಷಗಳ ತನಕ ಬರುವ ವಿಚಾರ ಮಾರ್ಚ್‌ 2018ರ ನಂತರ ನಿವೃತ್ತರಾಗುವವರಿಗೆ ಮಾತ್ರ ಅನ್ವಯವಾಗುತ್ತದೆ. ನಿಮ್ಮ ಪ್ರಶ್ನೆಯಿಂದ ಹಲವರಿಗೆ ಉತ್ತರ ದೊರಕಿದಂತಾಗುತ್ತದೆ. ದೇಶದ ಉಚ್ಚನ್ಯಾಯಾಲಯ ಗ್ರಾಮೀಣ ಬ್ಯಾಂಕ್ ನೌಕರರಿಗೂ ಪಿಂಚಣಿ ಸೌಲತ್ತು ನೀಡಲು ಅದೇಶಿಸಿದ್ದು, ಈ ಸೌಲತ್ತು ನಿಮಗೂ ಅನ್ವಯವಾಗುತ್ತದೆ. ಆದರೆ ನಿಮ್ಮ ಕೈಗೆ ಹಣ ಸೇರಲು ಸ್ವಲ್ಪ ಸಮಯ ಬೇಕಾದೀತು.

ವೆಂಕಟಸ್ವಾಮಿ, ಬಳ್ಳಾರಿ
ಓರ್ವ NRE ವ್ಯಕ್ತಿ ಭಾರತದಲ್ಲಿ I.T. Return ಸಲ್ಲಿಸಬೇಕೇ ತಿಳಿಸಿರಿ.

ಉತ್ತರ: Non Resident Indians (ಅನಿವಾಸಿ ಭಾರತೀಯರು) ಭಾರತದಲ್ಲಿ ಬ್ಯಾಂಕುಗಳಲ್ಲಿ ಠೇವಣಿಯಾಗಿ ಇರಿಸುವ ಹಣದಿಂದ ಯಾವುದೇ ಮಿತಿ ಇಲ್ಲದೇ ಎಷ್ಟೇ ಬಡ್ಡಿ ಪಡೆದರೂ, ಅಂತಹ ಬಡ್ಡಿ ಆದಾಯಕ್ಕೆ ಆದಾಯ ತೆರಿಗೆ ಸಂಪೂರ್ಣ ವಿನಾಯಿತಿ ಇದೆ ಹಾಗೂ ಇವರು I.T. Return ತುಂಬುವ ಅವಶ್ಯವಿಲ್ಲ. ತೆರಿಗೆಯೇ ಇಲ್ಲದಾಗI.T. Return ತುಂಬುವ ಪ್ರಮೇಯ ಬರುವುದಿಲ್ಲ. ಇದೇ ವೇಳೆ ಬಾಡಿಗೆ (Rental Income) ಅಥವಾ ಬೇರೆ ಆದಾಯ ಇರುವಲ್ಲಿI.T. Return ಸಲ್ಲಿಸಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT