ಶನಿವಾರ, ಮೇ 15, 2021
28 °C

ಹಠಾತ್ ನಿರ್ಬಂಧಕ್ಕೆ ಎಫ್‌ಕೆಸಿಸಿಐ ಅಧ್ಯಕ್ಷ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ನಗರಗಳಲ್ಲಿ ವ್ಯಾಪಾರ ಮಳಿಗೆಗಳನ್ನು ಪೊಲೀಸರು ಗುರುವಾರ ಹಠಾತ್‌ ಆಗಿ ಬಂದ್ ಮಾಡಿಸಿದ ಕ್ರಮಕ್ಕೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಕೈಗಾರಿಕಾ ಚಟುವಟಿಕೆಗಳಿಗೆ ಯಾವುದೇ ಅಡ್ಡಿ ಇಲ್ಲ ಎಂದು ಸರ್ಕಾರ ಹೇಳಿದೆ. ಜನರ ಆರೋಗ್ಯದ ಹಿತದೃಷ್ಟಿಯಿಂದ ತೆಗೆದುಕೊಳ್ಳುವ ತೀರ್ಮಾನಗಳಿಗೆ ವಿರೋಧವಿಲ್ಲ. ಆದರೆ, ಪೊಲೀಸರು ಹಠಾತ್ತನೆ ಬಾಗಿಲು ಮುಚ್ಚಿಸಿದ ಕ್ರಮವನ್ನು ಒಪ್ಪಲಾಗದು’ ಎಂದು ಸುಂದರ್ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ವ್ಯಾಪಾರಸ್ಥರು ತಿಂಗಳ ಅಂತ್ಯದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿವರ ಸಲ್ಲಿಸಬೇಕಿರುತ್ತದೆ. ಕೆಲಸಗಾರರ ಸಂಬಳ ಸೇರಿದಂತೆ ಹಲವು ಪಾವತಿಗಳನ್ನು ಮಾಡಬೇಕಿರುತ್ತದೆ. ಸಾಲದ ಕಂತುಗಳನ್ನು ಕಟ್ಟಬೇಕಿರುತ್ತದೆ. ಹೀಗೆ ಬಂದ್ ಮಾಡಲಾಗುತ್ತದೆ ಎಂಬುದನ್ನು ಮೊದಲೇ ತಿಳಿಸಿದ್ದರೆ ಸೂಕ್ತವಾಗುತ್ತಿತ್ತು. ಕೆಲಸಗಾರರನ್ನು ಅವರ ಊರುಗಳಿಗೆ ಕಳುಹಿಸಲು ಸಾಧ್ಯವಾಗುತ್ತಿತ್ತು ಎಂದು ಸುಂದರ್ ಹೇಳಿದರು.

‘ಸಂಬಂಧಪಟ್ಟ ಎಲ್ಲರಿಗೂ ಸೂಚನೆ ನೀಡಿಯೇ ಯಾವುದೇ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ನಮಗೆ ಭರವಸೆ ನೀಡಿದ್ದರು’ ಎಂದು ಸುಂದರ್ ಅವರು ನೆನಪಿಸಿಕೊಂಡರು.

ಪೊಲೀಸರ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಉದ್ಯಮಿ, ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಸಂಪತ್ ರಾಮನ್, ‘ಕಟ್ಟಡ ನಿರ್ಮಾಣ ಕಾರ್ಯಗಳಿಗೆ ನಿರ್ಬಂಧವಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಆದರೆ ಕಟ್ಟಡ ನಿರ್ಮಾಣಕ್ಕೆ ಜನರೇಟರ್ ಸೆಟ್ ಬಾಡಿಗೆಗೆ ಬೇಕು ಎಂದರೆ, ಅದು ಸಿಗದಂತೆ ಮಾಡಿದೆ’ ಎಂದು ಸಮಸ್ಯೆ ವಿವರಿಸಿದರು.

‘ತಯಾರಿಕಾ ವಲಯದ ಉದ್ಯಮಗಳು ತಮ್ಮ ಚಟುವಟಿಕೆ ಮುಂದುವರಿಸಬಹುದು ಎಂದು ಹೇಳಲಾಗಿದೆ. ಆದರೆ ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲು ಇರುವ ಮಾರುಕಟ್ಟೆಗಳನ್ನು ಬಂದ್ ಮಾಡಲಾಗಿದೆ. ಹೀಗೆ ಮಾಡಲಾಗುತ್ತದೆ ಎಂದು ಮುಂಚಿತವಾಗಿಯೇ ತಿಳಿಸಬಹುದಿತ್ತು. ಏಕಾಏಕಿ ಈ ರೀತಿ ಮಾಡಿದ್ದೇಕೆ ಎಂಬುದು ಗೊತ್ತಾಗುತ್ತಿಲ್ಲ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು