ಸೋಮವಾರ, ಆಗಸ್ಟ್ 8, 2022
21 °C

ಕಾರ್ಮಿಕರಿಗೆ ಬಸ್‌ ವ್ಯವಸ್ಥೆ ಕಲ್ಪಿಸಿ: ಎಫ್‌ಕೆಸಿಸಿಐ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಕಾರ್ಮಿಕರು ಕೈಗಾರಿಕಾ ಪ್ರದೇಶಗಳಿಗೆ ಬರಲು ಅನುಕೂಲ ಆಗುವಂತೆ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆ ಬಸ್‌ ವ್ಯವಸ್ಥೆ ಕಲ್ಪಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.

ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಸಾರ್ವಜನಿಕ ಸಾರಿಗೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ. ಬಸ್‌ ವ್ಯವಸ್ಥೆ ಇಲ್ಲದಿದ್ದರೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಹೀಗಾದರೆ ‌ಕೈಗಾರಿಕೆಗಳೂ ನಡೆಯುವುದಿಲ್ಲ ಎಂದು ಅದು ಹೇಳಿದೆ.

‘ಕೋವಿಡ್‌ ಎರಡನೇ ಅಲೆಯು ಜನರ ಸಮಸ್ಯೆಗಳನ್ನು ಹೆಚ್ಚಿಸಿದೆ. ಚೇತರಿಕೆ ಹಾದಿಗೆ ಮರಳುತ್ತಿದ್ದ ವ್ಯಾಪಾರ ಮತ್ತು ಕೈಗಾರಿಕೆಗಳಿಗೆ ಇನ್ನಷ್ಟು ಸಂಕಷ್ಟ ತಂದೊಡ್ಡಿದೆ. ರಾತ್ರಿ ಕರ್ಫ್ಯೂ ಮತ್ತು ಸರಿಸುಮಾರು 20 ದಿನಗಳ ಲಾಕ್‌ಡೌನ್‌ನಿಂದ ಆರ್ಥಿಕ ಚೇತರಿಕೆಗೆ ದೊಡ್ಡ ಹೊಡೆತ ಬೀಳಲಿದೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರ್‌ ಹೇಳಿದ್ದಾರೆ.

ಸದ್ಯದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಎಲ್ಲಾ ವಿಧಗಳ ತೆರಿಗೆ ಪಾವತಿ, ರಿಟರ್ನ್ಸ್‌ ಸಲ್ಲಿಕೆ ಅವಧಿಯನ್ನು ಮುಂದೂಡುವಂತೆ ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕೂಡ ಅವರು ಮನವಿ ಮಾಡಿದ್ದಾರೆ. ಬ್ಯಾಂಕ್‌ ಇಎಂಐ ಪಾವತಿ ಮತ್ತು ಇತರೆ ಪಾವತಿಗಳನ್ನು ಆರು ತಿಂಗಳ ಕಾಲ ಮುಂದೂಡಬೇಕು. ಕಳೆದ ವರ್ಷ ಘೋಷಿಸಿದಂತೆ ಈ ವರ್ಷವೂ ಆತ್ಮನಿರ್ಭರ ಪ್ಯಾಕೇಜ್‌ ಘೋಷಿಸಬೇಕು ಎಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ.

ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ದಿನಸಿ, ಬೇಕರಿ, ಕಾಫಿ ಪುಡಿ ಅಂಗಡಿಗಳನ್ನು ಬೆಳಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ತೆರೆಯಲು ಅವಕಾಶ ನೀಡಬೇಕು. ಇದರಿಂದ ಎಲ್ಲರಿಗೂ ಅನುಕೂಲ ಆಗುತ್ತದೆ. ದಿನಸಿ ಅಂಗಡಿಗಳಿಗೆ ಪೂರೈಕೆಯಲ್ಲಿ ಕೊರತೆ ಆಗದಂತೆ ನೋಡಿಕೊಳ್ಳಲು ಎಪಿಎಂಸಿಗಳನ್ನು ಮಧ್ಯಾಹ್ನ 2ರವರೆಗೆ ಅಥವಾ ದಿನಬಿಟ್ಟು ದಿನ ತೆರೆಯುವ ಅಗತ್ಯ ಇದೆ ಎಂದು ಸುಂದರ್ ಅವರು ರಾಜ್ಯ ಸರ್ಕಾರಕ್ಕೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು