ಬೆಂಗಳೂರು: ಅಮೆರಿಕ ಮತ್ತು ಇಸ್ರೇಲ್ ಜೊತೆಗೂಡಿ ಇರಾನ್ ವಿರುದ್ಧ ಸಾರಿರುವ ಸಮರವು ಇನ್ನೂ 10–15 ದಿನಗಳವರೆಗೆ ಮುಂದುವರಿದರೆ ರಾಜ್ಯದ ಉದ್ಯಮಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ ಎಂದು ಉದ್ಯಮಿಗಳು ಹಾಗೂ ಉದ್ಯಮಿಗಳ ಪ್ರಾತಿನಿಧಿಕ ಸಂಘಟನೆಗಳು ಆತಂಕ ವ್ಯಕ್ತಪಡಿಸಿವೆ.

ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ಇಲ್ಲವಾಗಿರುವುದು ಉದ್ಯಮಗಳಿಗೆ ಒಂದಿಷ್ಟು ಸಮಸ್ಯೆ ಸೃಷ್ಟಿಸಿದೆ. ಇದರ ಜೊತೆಯಲ್ಲೇ, ಸರಕು ಸಾಗಣೆ ವೆಚ್ಚದಲ್ಲಿನ ಹೆಚ್ಚಳವು ಆಮದು ಮತ್ತು ರಫ್ತು ವಹಿವಾಟಿಗೆ ಸಮಸ್ಯೆಯಾಗಿ ಪರಿಣಮಿಸಿದೆ.

ಆತಿಥ್ಯ ಉದ್ಯಮದ ಭಾಗವಾಗಿರುವ ಹೋಟೆಲ್ಗಳು ಹಲವೆಡೆ ವಹಿವಾಟು ನಿಲ್ಲಿಸಿವೆ. ಆದರೆ, ವಹಿವಾಟು ನಿಂತಿರುವ ವರದಿಗಳು ಅಥವಾ ದೂರುಗಳು ಇತರ ಉದ್ಯಮ ವಲಯಗಳಿಂದ ಈವರೆಗೆ ಬಂದಿಲ್ಲ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್ಕೆಸಿಸಿಐ) ಅಧ್ಯಕ್ಷೆ ಉಮಾ ರೆಡ್ಡಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಉದ್ಯಮಿಗಳು ಲಭ್ಯವಿರುವ ಎಲ್ಪಿಜಿ ಬಳಸಿಕೊಂಡು ಹೇಗೋ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಯುದ್ಧವು ಹೀಗೇ ಮುಂದುವರಿದಲ್ಲಿ, ಸರಕು ಸಾಗಣೆ ಮುಕ್ತವಾಗಿ ಆಗದೆ ಇದ್ದಲ್ಲಿ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಬಹುದು. ಯಾವ ರೀತಿಯ ಪರಿಸ್ಥಿತಿ ಎದುರಾಗಬಹುದು ಎಂಬುದನ್ನು ಈಗಲೇ ಊಹೆ ಮಾಡಲು ಆಗದು’ ಎಂದು ಅವರು ಹೇಳಿದರು.

ಪರಿಸ್ಥಿತಿ ಹೀಗೇ ಮುಂದುವರಿದರೆ ರಾಜ್ಯದಲ್ಲಿ ಹಲವು ಉದ್ಯಮಗಳು ವಹಿವಾಟು ನಿಲ್ಲಿಸಬೇಕಾಗಬಹುದು, ಆಗ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಸಂದರ್ಭ ಸಹಜವಾಗಿಯೇ ಎದುರಾಗುತ್ತದೆ ಎಂದರು.

ಎಲ್ಪಿಜಿ ಕೊರತೆ ಹಾಗೂ ಸರಕು ಸಾಗಣೆಯಲ್ಲಿನ ಸಮಸ್ಯೆಯಿಂದಾಗಿ ಉದ್ಯಮಗಳಿಗೆ ಬಹಳಷ್ಟು ತೊಂದರೆ ಆಗಿದೆ ಎಂದು ಎಫ್ಕೆಸಿಸಿಐ ಮಾಜಿ ಅಧ್ಯಕ್ಷ, ಉದ್ಯಮಿ ಜೆ. ಕ್ರಾಸ್ತ ಹೇಳಿದರು.

‘ಎಲ್ಪಿಜಿ ಕೊರತೆಯಿಂದಾಗಿ ಫ್ಯಾಬ್ರಿಕೇಷನ್, ರಾಸಾಯನಿಕ ಉತ್ಪಾದನೆಯ ಉದ್ಯಮಗಳಿಗೆ ಹೆಚ್ಚು ತೊಂದರೆ ಆಗಿದೆ. ಸುವಾಸನೆ ಬೀರುವ ಉತ್ಪನ್ನಗಳ ತಯಾರಿಕಾ ಉದ್ಯಮಕ್ಕೂ ತೊಂದರೆ ಆಗಿದೆ. ಬೆಂಗಳೂರಿನಲ್ಲಿ ಈವರೆಗೆ ಎಲ್ಲಿಯೂ ಉತ್ಪಾದನೆ ಪೂರ್ತಿಯಾಗಿ ನಿಂತಂತೆ ಕಾಣುತ್ತಿಲ್ಲ. ಆದರೆ ಯುದ್ಧವು ಇನ್ನೂ 15–20 ದಿನ ಮುಂದುವರಿದರೆ ಉದ್ಯಮಗಳು ಒಂದೊಂದಾಗಿ ಬಾಗಿಲು ಮುಚ್ಚಬಹುದು’ ಎಂದು ಕ್ರಾಸ್ತ ಆತಂಕ ವ್ಯಕ್ತಪಡಿಸಿದರು.

ಸಮರದ ಪರಿಣಾಮವಾಗಿ ಕೊಲ್ಲಿ ರಾಷ್ಟ್ರಗಳಿಗೆ ಆಗುವ ರಫ್ತಿಗೆ ತೊಂದರೆ ಉಂಟಾಗಿದೆ. ಯುರೋಪ್ ಹಾಗೂ ಇತರ ಮಾರುಕಟ್ಟೆಗಳಿಗೆ ರಫ್ತಿಗೆ ಸಮಸ್ಯೆ ಆಗಿಲ್ಲ ಎಂದು ತಿಳಿಸಿದರು.

ಎಲ್ಪಿಜಿ ಮೇಲೆ ಹೆಚ್ಚು ಅವಲಂಬಿತರಾಗಿರುವವರು ಕಾರ್ಯಾದೇಶಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಲು ಹೆಣಗಾಟ ನಡೆಸುವಂತಾಗಿದೆ ಎಂದು ಎಫ್ಕೆಸಿಸಿ ಮಾಜಿ ಅಧ್ಯಕ್ಷ ಉದ್ಯಮಿ ಜೆ.ಆರ್. ಬಂಗೇರ ಹೇಳಿದರು.

ಕೆಲವು ಉದ್ಯಮಿಗಳು ಎಲ್ಪಿಜಿಗೆ ಪರ್ಯಾಯವಾಗಿ ವಿದ್ಯುತ್ ಬಳಕೆ ಮಾಡಲು ಆರಂಭಿಸಿದ್ದಾರೆ ಎಂದು ಉಮಾ ರೆಡ್ಡಿ ಮಾಹಿತಿ ನೀಡಿದರು. ‘ಸರಕು ಸಾಗಣೆ ವೆಚ್ಚ ಹೆಚ್ಚಾಗುತ್ತಿರುವ ಕಾರಣದಿಂದಾಗಿ ಎಲ್ಲ ಉದ್ಯಮಗಳ ಹಿತಕ್ಕೆ ಧಕ್ಕೆ ಆಗಿದೆ’ ಎಂದರು.

ಎರಡು ವಾರಗಳಲ್ಲಿ ಸರಿಹೋಗಬಹುದು

ವಾಣಿಜ್ಯ ಬಳಕೆ ಎಲ್ಪಿಜಿ ಪೂರೈಕೆಯು ಇನ್ನು ಎರಡು ವಾರಗಳಲ್ಲಿ ಸರಿಹೋಗಬಹುದು ಎಂದು ಉದ್ಯಮಿ ಎಂ.ಜಿ. ಬಾಲಕೃಷ್ಣ ತಿಳಿಸಿದರು. ಬಾಲಕೃಷ್ಣ ಅವರು ವಾಣಿಜ್ಯ ಹಾಗೂ ಮನೆ ಬಳಕೆ ಎಲ್ಪಿಜಿ ಪೂರೈಕೆ ವಹಿವಾಟಿನಲ್ಲಿ ಇದ್ದಾರೆ.

ಅನಿಲ ಹೊತ್ತ ಹಡಗುಗಳು ಭಾರತದತ್ತ ಬರುತ್ತಿವೆ. ದೇಶದ ಕಚ್ಚಾ ತೈಲ ಸಂಸ್ಕರಣಾ ಘಟಕಗಳು ಕೂಡ ಎಲ್ಪಿಜಿ ಉತ್ಪಾದಿಸುತ್ತಿವೆ. ಕೊಲ್ಲಿ ರಾಷ್ಟ್ರಗಳು ಮಾತ್ರವೇ ಅಲ್ಲದೆ, ಬೇರೆ ಕಡೆಗಳಿಂದಲೂ ಅನಿಲ ಪೂರೈಕೆ ಶುರುವಾಗಿದೆ. ಹೀಗಾಗಿ ಪರಿಸ್ಥಿತಿ ಶೀಘ್ರವೇ ಸರಿಹೋಗಲಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.