ಟಿಡಿಎಸ್‌: ಕಾನೂನು ಕ್ರಮದ ಭಯ ಬೇಡ

7
ಪ್ರತಿ ವರ್ಷವೂ ವಿಳಂಬ ಮಾಡಿದರೆ ಮಾತ್ರ ಕ್ರಮ

ಟಿಡಿಎಸ್‌: ಕಾನೂನು ಕ್ರಮದ ಭಯ ಬೇಡ

Published:
Updated:
Deccan Herald

ಬೆಂಗಳೂರು: ‘ಮೂಲದಲ್ಲೇ ಕಡಿತ ಮಾಡಿದ ತೆರಿಗೆಯನ್ನು ಸರ್ಕಾರಕ್ಕೆ ಜಮಾ ಮಾಡದೇ ಇದ್ದರೆ ಮಾತ್ರ  ಕ್ರಮ ಜರುಗಿಸಲಾಗುವುದು’ ಎಂದು ಆದಾಯ ತೆರಿಗೆ ಆಯುಕ್ತ (ಟಿಡಿಎಸ್‌)  ಸಂಜಯ್‌ ಕುಮಾರ್‌ ಸ್ಪಷ್ಟಪಡಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಶುಕ್ರವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ, ಮೂಲದಲ್ಲೇ ತೆರಿಗೆ ಕಡಿತ (ಟಿಡಿಎಸ್‌) ಮತ್ತು ಮೂಲದಲ್ಲೇ ತೆರಿಗೆ ಸಂಗ್ರಹ (ಟಿಸಿಎಸ್‌) ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು. 

‘ಮೂಲದಲ್ಲೇ ತೆರಿಗೆ ಕಡಿತದ (ಡಿಟಿಎಸ್‌) ಬಗ್ಗೆ ಸಾಕ್ಷರತೆ ಮೂಡಿಸುವ ಅಗತ್ಯವಿದೆ. ಈ ವರ್ಷ ಬೆಂಗಳೂರಿ ನಾಚೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ಟಿಡಿಎಸ್‌ ಮತ್ತು ಟಿಸಿಎಸ್‌ ಕುರಿತಾಗಿ ವಾಣಿಜ್ಯೋದ್ಯಮಿಗಳು, ವರ್ತಕರಿಗೆ ಇರುವ ಗೊಂದಲ, ಆಕ್ಷೇಪ, ಬೇಡಿಕೆ, ಮನವಿಗಳನ್ನು ‘ಎಫ್‌ಕೆಸಿಸಿಐ’ನ ಕೇಂದ್ರ ತೆರಿಗೆ, ಕಾರ್ಪೊರೇಟ್‌ ಮತ್ತು ಜಿಎಸ್‌ಟಿ ಸಮಿತಿ ಅಧ್ಯಕ್ಷ ಸಿ.ಎ. ನಿತ್ಯಾನಂದ ಅವರು ಆಯುಕ್ತರ ಗಮನಕ್ಕೆ ತಂದರು.

ಇದಕ್ಕೆ ಸ್ಪಂದಿಸಿದ ಅವರು ‘ಟಿಡಿಎಸ್‌ ಮಾಡುವಲ್ಲಿ ವಿಳಂಬವಾದರೆ, ಟಿಡಿಎಸ್‌ ರಿಟರ್ನ್‌ ಸಲ್ಲಿಕೆಯಲ್ಲಿ ತಡವಾದರೆ ಅದಕ್ಕೆಲ್ಲಾ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎನ್ನುವ ಭಾವನೆ ಬೇಡ. ಪದೇ ಪದೇ ತಪ್ಪು ಮಾಡುವವರು ಅಥವಾ ಪ್ರತಿ ವರ್ಷವೂ ವಿಳಂಬ ಮಾಡುವವರ ವಿರುದ್ಧ ಮಾತ್ರ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ (ಐಸಿಎಸಿ), ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ (ಎಸ್‌ಐಆರ್‌ಸಿ) ಬೆಂಗಳೂರು ಶಾಖೆಯ ಸಹಯೋಗದೊಂದಿಗೆ  ಈ ವಿಚಾರ ಸಂಕಿರಣ ಆಯೋಜಿಸಲಾಗಿತ್ತು. 

‘2017–18ರಲ್ಲಿ ಒಟ್ಟಾರೆ ತೆರಿಗೆ ಸಂಗ್ರಹ ₹ 10 ಲಕ್ಷ ಕೋಟಿ ಇದ್ದು, ಅದರಲ್ಲಿ ₹ 1 ಲಕ್ಷ ಕೋಟಿ ಕರ್ನಾಟಕ ಮತ್ತು ಗೋವಾದಿಂದ ಬಂದಿದೆ. ಇದಕ್ಕೆ ಕಾರಣವಾಗಿರುವ ಪ್ರತಿಯೊಬ್ಬರೂ ಪ್ರಶಂಸೆಗೆ ಅರ್ಹರು’ ಎಂದು ಅವರು ಹೇಳಿದರು.

‘ದೇಶದಲ್ಲಿ ಅತಿ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, ಶೇ 10ರಷ್ಟು ಕೊಡುಗೆ ನೀಡುತ್ತಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !