ಭಾನುವಾರ, ಆಗಸ್ಟ್ 25, 2019
21 °C
ಜಿಎಸ್‌ಟಿ ದರ ಕಡಿತ ಪ್ರಸ್ತಾವ ಇಲ್ಲದ ಕೊಡುಗೆ?

ಆರ್ಥಿಕ ಚೇತರಿಕೆ: ಶೀಘ್ರವೇಅಡೆತಡೆ ನಿವಾರಣೆ ಭರವಸೆ

Published:
Updated:

ನವದೆಹಲಿ (ಪಿಟಿಐ): ಆರ್ಥಿಕ ಚಟುವಟಿಕೆಗಳಿಗೆ ಅಡಚಣೆ ಒಡ್ಡಿರುವ ಸಂಗತಿಗಳನ್ನು ನಿವಾರಿಸಿ, ತಯಾರಿಕಾ ವಲಯಕ್ಕೆ ಸುಲಭ ರೀತಿಯಲ್ಲಿ ಸಾಲ ಒದಗಿಸುವ ಮತ್ತು ಒಟ್ಟಾರೆ ಆರ್ಥಿಕತೆಗೆ ಉತ್ತೇಜನ ನೀಡುವ ಹಲವು ಉತ್ತೇಜನಾ ಕ್ರಮಗಳನ್ನು ಕೇಂದ್ರ ಸರ್ಕಾರ ಶೀಘ್ರವೇ ಪ್ರಕಟಿಸಲಿದೆ.

ಈ ಹೊಸ ಉತ್ತೇಜನಾ ಕೊಡುಗೆಗಳಲ್ಲಿ ಜಿಎಸ್‌ಟಿ ದರ ಕಡಿತದ ಪ್ರಸ್ತಾವ ಇರುವುದಿಲ್ಲ. ಸರಕು ಮತ್ತು ಸೇವಾ ತೆರಿಗೆ ದರಗಳು ಈಗಾಗಲೇ ಸಾಕಷ್ಟು ಕಡಿಮೆಯಾಗಿವೆ ಎನ್ನುವುದು ಸರ್ಕಾರದ ನಿಲುವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಒಂದು ವಾರದಿಂದ ವಾಣಿಜ್ಯೋದ್ಯಮ ಸಂಘಟನೆಗಳು, ಬ್ಯಾಂಕ್‌ ಪ್ರಮುಖರು, ದೇಶಿ ಮತ್ತು ವಿದೇಶಿ ಹೂಡಿಕೆದಾರರ ಜತೆ ನಡೆಸಿರುವ ಸಭೆಯಲ್ಲಿ ವ್ಯಕ್ತವಾದ ಸಲಹೆ – ಸೂಚನೆಗಳನ್ನು ಆಧರಿಸಿ ಉತ್ತೇಜನಾ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ.

ಬ್ಯಾಂಕಿಂಗ್‌, ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್‌ಎಂಇ), ವಾಹನ ತಯಾರಿಕೆ ಸೇರಿದಂತೆ ವಿವಿಧ ವಲಯಗಳ ಪ್ರತಿನಿಧಿಗಳ ಜತೆ ನಡೆದ ಸಭೆಯಲ್ಲಿ ಕುಂಠಿತ ಆರ್ಥಿಕತೆಗೆ ಕಾರಣವಾಗಿರುವ ಅಡೆತಡೆಗಳನ್ನು ನಿವಾರಿಸುವ ಸಲಹೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ.

ಮಂದಗತಿಯ ಆರ್ಥಿಕತೆಗೆ ಅಡ್ಡಿಯಾಗಿರುವ ಕಾರಣಗಳನ್ನು ನಿವಾರಿಸಿ, ಆರ್ಥಿಕ ಚೇತರಿಕೆಗೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಕಡಿಮೆ ಬಡ್ಡಿ ದರದಲ್ಲಿ ಸುಲಭ ಸಾಲ ಲಭ್ಯತೆ, ಆರ್ಥಿಕ ಬೆಳವಣಿಗೆಗೆ ಅಡ್ಡಿಯಾಗಿರುವ ನಿಯಮಗಳ ಸರಳೀಕರಣ ಮತ್ತಿತರ ಬೇಡಿಕೆಗಳನ್ನು ಕೈಗಾರಿಕಾ ರಂಗವು ಸರ್ಕಾರದ ಮುಂದಿಟ್ಟಿದೆ.

ತೆರಿಗೆ ಸಂಗ್ರಹದಲ್ಲಿ ಹೆಚ್ಚಳ: ಹಿಂದಿನ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಎಸ್‌ಟಿ ಮತ್ತು ನೇರ ತೆರಿಗೆ ಸಂಗ್ರಹವು ಹೆಚ್ಚಳಗೊಂಡಿದೆ. ಕೈಗಾರಿಕಾ ಚಟುವಟಿಕೆಗಳು ಕುಂಠಿತ
ಗೊಂಡಿದ್ದರೂ ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿನ ಸರಾಸರಿ ಜಿಎಸ್‌ಟಿ ಸಂಗ್ರಹವು ₹ 1 ಲಕ್ಷ ಕೋಟಿಗಳಷ್ಟಿದೆ.

ರಿಯಲ್‌ ಎಸ್ಟೇಟ್‌ಗೆ ನಿರ್ಮಲಾ ಅಭಯ

ರಿಯಲ್‌ ಎಸ್ಟೇಟ್‌ ವಲಯ ಎದುರಿಸುತ್ತಿರುವ ಸಮಸ್ಯೆಗಳನ್ನು ಸದ್ಯದಲ್ಲೇ ಬಗೆಹರಿಸುವುದಾಗಿ ಸರ್ಕಾರ ಭರವಸೆ ನೀಡಿದೆ.

ರಿಯಲ್ ಎಸ್ಟೇಟ್‌ ವಲಯದ ಉನ್ನತ ಸಂಸ್ಥೆಗಳಾದ ಕಟ್ಟಡ ನಿರ್ಮಾಣಗಾರರ ಸಂಘಗಳ ಒಕ್ಕೂಟ (ಕ್ರೆಡಾಯ್‌), ರಿಯಲ್‌ ಎಸ್ಟೇಟ್‌ ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯ (ಎನ್‌ಎಆರ್‌ಇಡಿಸಿಒ)  ಪ್ರತಿನಿಧಿಗಳ ಜತೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಭಾನುವಾರ ಸಭೆ ನಡೆಸಿದರು. ಫ್ಲ್ಯಾಟ್‌ ಖರೀದಿಸುವವರ ಸಂಘಗಳ ಜತೆಗೂ ಪ್ರತ್ಯೇಕ ಸಭೆ ಏರ್ಪಡಿಸಲಾಗಿತ್ತು.

ನಗದುತನ ಕೊರತೆ ಮತ್ತು ಮಾರಾಟ ಕುಸಿತದಿಂದ ಉದ್ದಿಮೆ ಬಿಕ್ಕಟ್ಟು ಎದುರಿಸುತ್ತಿದೆ. ಯೋಜನೆಗಳಿಗೆ ಹಣಕಾಸಿನ ನೆರವು ನೀಡಲು ಬ್ಯಾಂಕ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಉತ್ತೇಜನ ನೀಡಲು ಉದ್ಯಮಿಗಳು ನಿರ್ಮಲಾ ಅವರನ್ನು ಒತ್ತಾಯಿಸಿದ್ದಾರೆ.

ಸ್ಥಗಿತಗೊಂಡಿರುವ ಯೋಜನೆಗಳ ಪುನರಾರಂಭಕ್ಕೆ ನಿಧಿ ಸ್ಥಾಪನೆ ಮತ್ತು ಫ್ಲ್ಯಾಟ್‌ ಖರೀದಿದಾರರಿಗೆ ನೆರವಾಗುವುದನ್ನು ಚರ್ಚಿಸಲು ಉನ್ನತಾಧಿಕಾರ ಸಮಿತಿಯು ಸದ್ಯದಲ್ಲೇ ಸಭೆ ಸೇರಿ ಚರ್ಚಿಸಲಿದೆ.

Post Comments (+)