ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಉತ್ತೇಜನಕ್ಕೆ ಮತ್ತೊಂದು ಪ್ಯಾಕೇಜ್: ಚೇತರಿಕೆಗೆ ₹2.65 ಲಕ್ಷ ಕೋಟಿ

ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರದಿಂದ ಮತ್ತೊಂದು ಸುತ್ತಿನ ಪ್ಯಾಕೇಜ್‌
Last Updated 12 ನವೆಂಬರ್ 2020, 20:09 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಗುರುವಾರ ₹ 2.65 ಲಕ್ಷ ಕೋಟಿ ಮೊತ್ತದ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ ಪ್ರಕಟಿಸಿದೆ. ರಸಗೊಬ್ಬರಕ್ಕೆ ಸಬ್ಸಿಡಿನೀಡಲು ಹೊಸದಾಗಿ ₹ 65 ಸಾವಿರ ಕೋಟಿ, ಪ್ರಧಾನ ಮಂತ್ರಿ ವಸತಿ ಯೋಜನೆಗೆ ₹ 18 ಸಾವಿರ ಕೋಟಿ, ಗರೀಬ್ ಕಲ್ಯಾಣ್ ಯೋಜನೆಗೆ ₹ 10 ಸಾವಿರ ಕೋಟಿ ನೀಡುವುದು ಈ ಪ್ಯಾಕೇಜ್‌ನಲ್ಲಿ ಸೇರಿವೆ.

ದೇಶದ ಅರ್ಥ ವ್ಯವಸ್ಥೆಯು ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹಿಂಜರಿಕೆಯ ಸ್ಥಿತಿಗೆ ಹೊರಳಿದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಅಧಿಕಾರಿಯೊಬ್ಬರು ಹೇಳಿರುವ ಸಂದರ್ಭದಲ್ಲೇ ಈ ಪ್ಯಾಕೇಜ್‌ ಘೋಷಣೆಯಾಗಿದೆ.

ಮನೆ ಖರೀದಿಸುವವರಿಗೆ ಮತ್ತು ಡೆವಲಪರ್‌ಗಳಿಗೆ ಆದಾಯ ತೆರಿಗೆಯಲ್ಲಿ ವಿನಾಯಿತಿ, ಉದ್ಯೋಗ ಅವಕಾಶ ಸೃಷ್ಟಿ
ಸುವವರಿಗೆ ಉತ್ತೇಜನ ನೀಡುವ ಯೋಜನೆಯನ್ನು ಕೂಡ ಗುರುವಾರದ ಪ್ಯಾಕೇಜ್‌ ಒಳಗೊಂಡಿದೆ. ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ಮೂಲಕ ಇದುವರೆಗೆ ಪ್ರಕಟವಾಗಿರುವ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ನ ಮೊತ್ತವು ಸರಿ ಸುಮಾರು ₹ 30 ಲಕ್ಷ ಕೋಟಿಯನ್ನು ತಲುಪಿದೆ. ಇದು ದೇಶದ ಅರ್ಥ ವ್ಯವಸ್ಥೆಯ ಗಾತ್ರದ ಶೇಕಡ 15ರಷ್ಟಕ್ಕೆ ಸಮ.

ಗುರುವಾರ ಪ್ರಕಟವಾದ ಪ್ಯಾಕೇಜ್‌ನಲ್ಲಿ ದೊಡ್ಡ ಮೊತ್ತವು, ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿರುವ 10 ಉದ್ಯಮ ವಲಯಗಳಿಗೆ ಅನುಕೂಲ ಕಲ್ಪಿಸುವ ಉತ್ಪಾದನೆ ಆಧಾರಿತ ಉತ್ತೇಜನಾ ಕೊಡುಗೆಗಳಿಗೆ (ಪಿಎಲ್‌ಐ) ಸಂಬಂಧಿಸಿದೆ. ‍ಪಿಎಲ್‌ಐ ಯೋಜನೆಯ ಮೊತ್ತವು ₹ 1.46 ಲಕ್ಷ ಕೋಟಿ. ‘ಸರ್ಕಾರ ಘೋಷಿಸಿರುವ ಉತ್ತೇಜನಾ ಪ್ಯಾಕೇಜ್‌ನ ಮೊತ್ತವೇ ಒಟ್ಟು ಆಂತರಿಕ ಉತ್ಪನ್ನದ ಶೇಕಡ 9ರಷ್ಟಾಗುತ್ತದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಯೋಜನೆ ವಿಸ್ತರಣೆ: ಹೋಟೆಲ್‌, ಪ್ರವಾಸೋದ್ಯಮ, ಸಾರಿಗೆ, ಜವಳಿ ಸೇರಿದಂತೆ ತೊಂದರೆಗೆ ಸಿಲುಕಿರುವ ಒಟ್ಟು 26 ವಲಯಗಳಿಗೆ ಪ್ರಕಟಿಸಿರುವ, ₹ 3 ಲಕ್ಷ ಕೋಟಿ ಮೊತ್ತದ ತುರ್ತು ಸಾಲ ಖಾತರಿ ಯೋಜನೆಯನ್ನು ಕೇಂದ್ರ ವಿಸ್ತರಿಸಿದೆ. ಈ ಯೋಜನೆಯು ನವೆಂಬರ್ 30ಕ್ಕೆ ಕೊನೆಗೊಳ್ಳಬೇಕಿತ್ತು. ಅದನ್ನು ಈಗ 2021ರ ಮಾರ್ಚ್‌ 31ರವರೆಗೆ ವಿಸ್ತರಿಸಲಾಗಿದೆ.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಹೆಚ್ಚುವರಿಯಾಗಿ ₹ 10 ಸಾವಿರ ಕೋಟಿ ನೀಡಲಾಗುವುದು ಎಂದೂ ನಿರ್ಮಲಾ ಪ್ರಕಟಿಸಿದರು. ಈ ಮೊತ್ತವನ್ನು ನರೇಗಾ ಅಥವಾ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ ಬಳಸಿಕೊಳ್ಳಬೇಕು. ಇದು 2020–21ನೇ ಸಾಲಿನ ಬಜೆಟ್‌ನಲ್ಲಿ ನರೇಗಾ ಯೋಜನೆಗೆ ನಿಗದಿ ಮಾಡಿರುವ ₹ 61 ಸಾವಿರ ಕೋಟಿ ಹಾಗೂ ಮೊದಲ ಸುತ್ತಿನ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ನಲ್ಲಿ ಪ್ರಕಟಿಸಿದ್ದ ₹ 40 ಸಾವಿರ ಕೋಟಿಗೆ ಹೆಚ್ಚುವರಿಯಾಗಿ ಸೇರಿಕೊಳ್ಳಲಿದೆ. ಕೋವಿಡ್ ಲಸಿಕೆ ಸಂಶೋಧನೆಗೆ ₹ 900 ಕೋಟಿ ಒದಗಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT