ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಊಟಕ್ಕೆ ‘ಫೂಡಿಬಡ್ಡಿ’

Last Updated 2 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ನೆರೆಹೊರೆಯಲ್ಲಿ ಇರುವ ಪಾಕ ಪ್ರವೀಣರು / ಪ್ರವೀಣೆಯರು ರುಚಿಕರ ತಿಂಡಿ ತಿನಿಸು, ಬಗೆ, ಬಗೆಯ ಮೃಷ್ಟಾನ್ನ ತಯಾರಿಸುವಾಗ ಅದರ ಪರಿಮಳ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬಿದಾಗ ಕೆಲವರಿಗೆ ಹೊಟ್ಟೆ ಹಸಿವು ಹೆಚ್ಚುತ್ತದೆ. ಇನ್ನೂ ಕೆಲವರು ಅಂತಹ ಅಡುಗೆ ಮಾಡುವವರ ಪರಿಣತಿಗೆ ಹೊಟ್ಟೆಕಿಚ್ಚುಪಡುತ್ತಾರೆ. ಜಿಹ್ವಾ ಚಾಪಲ್ಯದವರಂತೂ, ‘ಆಹಾ ಇಂತಹ ರುಚಿಕರ ಅಡುಗೆ ಸವಿಯುವ, ಖರೀದಿಸುವ ಅವಕಾಶ ಇದ್ದಿದ್ದರೆ ನಾವೂ ಬಾಯಿ ಚಪ್ಪರಿಸಿ ತಿನ್ನಬಹುದಿತ್ತಲ್ಲ’ ಅಂತ ಮನಸ್ಸಿನಲ್ಲಿಯೇ ಮಂಡಿಗೆ ಸವಿಯುತ್ತಾರೆ. ಅಂತಹ ಕನಸು ಈಗ ನನಸಾಗಿದೆ. ಖಾದ್ಯ ತಯಾರಕರಿಗೆ ಸ್ಥಳೀಯವಾಗಿ ಮಾರುಕಟ್ಟೆ ಒದಗಿಸುವ, ಮನೆ ಸಮೀಪದಲ್ಲಿಯೇ ರುಚಿಕರ ಖಾದ್ಯಗಳನ್ನು ಖರೀದಿಸಿ ಸವಿಯುವ ಅವಕಾಶವನ್ನು ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ನವೋದ್ಯಮವೊಂದು ಒದಗಿಸಿ ಕೊಡುತ್ತಿದೆ.

ಮನೆಯ ಸದಸ್ಯರಿಗಾಗಿ ಬಗೆಯ ಬಗೆಯ ಅಡುಗೆ ತಯಾರಿಸುವ ಗೃಹಿಣಿಯರು ತಮ್ಮ ರುಚಿಕರ ಅಡುಗೆಯನ್ನು ನೆರೆಹೊರೆಯಲ್ಲಿ ಇರುವವರಿಗೆ ಮಾರಾಟ ಮಾಡಲು ಇಷ್ಟಪಟ್ಟಿದ್ದರೆ, ಅಕ್ಕಪಕ್ಕದ ಮನೆಯವರು ತಯಾರಿಸುವ ರುಚಿಕರ ತಿನಿಸು, ಆಹಾರ ಪದಾರ್ಥವನ್ನು ಖರೀದಿಸಲು ಬಯಸುವವರಿಗಾಗಿಯೇ ಅಸ್ತಿತ್ವಕ್ಕೆ ಬಂದಿರುವ ‘ಫೂಡಿಬಡ್ಡಿ’ (FoodyBuddy) ನವೋದ್ಯಮವು ಅದೇ ಹೆಸರಿನ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಿದೆ. ಎಂಬಿಎ ಪದವೀಧರರಾಗಿರುವ ಅಕಿಲ್‌ ಸೇತುರಾಮನ್‌ (ಸಿಇಒ), ಅವರ ಪತ್ನಿ ರಚನಾ ರಾವ್‌ ಮತ್ತು ಅನೂಪ್‌ ಗೋಪಿನಾಥ ಜತೆಯಾಗಿ ತಮ್ಮ ಉಳಿತಾಯದ ಹಣ ತೊಡಗಿಸಿ ಈ ನವೋದ್ಯಮ ಆರಂಭಿಸಿದ್ದಾರೆ. ಆನಂತರ ಪ್ರೈಂ ವೆಂಚರ್ಸ್‌ ಹಣ ತೊಡಗಿಸಿದೆ.

ಅಪಾರ್ಟಮೆಂಟ್‌ ನಿವಾಸಿಗಳು ಮತ್ತು ನಿರ್ದಿಷ್ಟ ಪ್ರದೇಶದಲ್ಲಿನ ಪರಿಚಿತರಿಗೆ ಮನೆಯಲ್ಲಿಯೇ ತಯಾರಿಸುವ ತಿನಿಸು, ಆಹಾರ ಪದಾರ್ಥಗಳನ್ನು ಸೀಮಿತ ಪ್ರಮಾಣದಲ್ಲಿ ಪೂರೈಸುವ ಗೃಹಿಣಿಯರು ಮತ್ತು ಹೋಟೆಲ್‌ ಊಟದಿಂದ ಬೇಸತ್ತು ಮನೆಯಲ್ಲಿಯೇ ತಯಾರಿಸುವ ಆಹಾರ ಇಷ್ಟಪಡುವವರಿಗಾಗಿ ಈ ನವೋದ್ಯಮ ಕಾರ್ಯನಿರ್ವಹಿಸುತ್ತಿದೆ.

ಈ ಆ್ಯಪ್‌ ಕಾರ್ಯನಿರ್ವಹಣೆ ಹೇಗೆ?:ಸ್ವಿಗ್ಗಿ ಮತ್ತು ಜೊಮಟೊದಂತಹ ಆಹಾರ ಪೂರೈಸುವ ಆನ್‌ಲೈನ್‌ ತಾಣಗಳಿಂದ ಗ್ರಾಹಕರು ತಮಗೆ ಅಗತ್ಯ ಇದ್ದಾಗಲೆಲ್ಲ ಬೇಡಿಕೆ ಸಲ್ಲಿಸಿ ಬಿಸಿ ಬಿಸಿ ಆಹಾರವನ್ನು ಮನೆ ಬಾಗಿಲಿಗೆ ತರಿಸುವ ವ್ಯವಸ್ಥೆ ಇಲ್ಲಿ ಇಲ್ಲ. ಇಲ್ಲಿ ಎಲ್ಲವೂ ಪೂರ್ವಯೋಜಿತ.

ಕುಟುಂಬದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಅಡುಗೆ ತಯಾರಿಸಿ ಅದನ್ನು ನೆರೆಹೊರೆಯಲ್ಲಿ ಮಾರಾಟ ಮಾಡಲು ಇಷ್ಟಪಡುವವರು ಮೊದಲು ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಆ್ಯಪ್‌ನಲ್ಲಿ ನೋಂದಾಯಿಸಿಕೊಂಡವರು ತಾವು ಸಿದ್ಧಪಡಿಸಲಿರುವ ಆಹಾರ ಪದಾರ್ಥದ ಹೆಸರು, ಎಷ್ಟು ಪ್ರಮಾಣದಲ್ಲಿ ಲಭ್ಯ ಇರಲಿದೆ, ಎಷ್ಟು ಜನರಿಗೆ ಪೂರೈಸಬಹುದು ಎನ್ನುವ ವಿವರಗಳನ್ನು ದಾಖಲಿಸಬೇಕಾಗುತ್ತದೆ. ಖರೀದಿದಾರರೂ ಅಷ್ಟೆ. ಅವರು ಕೂಡ ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ತಮಗಿಷ್ಟದ ತಿನಿಸು ಲಭ್ಯ ಇದ್ದರೆ ಅದನ್ನು ಖರೀದಿಸುವ ಆಸಕ್ತಿ ದಾಖಲಿಸಬೇಕಾಗುತ್ತದೆ. ಆಹಾರ ಪದಾರ್ಥದ ಮಾರಾಟ ಮತ್ತು ಖರೀದಿ ವಹಿವಾಟು ಅಡುಗೆ ತಯಾರಕರು ಮತ್ತು ಖರೀದಿಸುವವರ ಮಧ್ಯೆ ನಡೆಯುತ್ತದೆ. ಈ ಸ್ಟಾರ್ಟ್‌ಅಪ್‌ ಅವರಿಬ್ಬರ ಮಧ್ಯೆ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ.

ಕುಟುಂಬದ ಸದಸ್ಯರಿಗೆ ನಿರ್ದಿಷ್ಟ ತಿಂಡಿ ತಿನಿಸು ತಯಾರಿಸಲು ಹಿಂದಿನ ದಿನವೇ ನಿರ್ಧರಿಸುವ ಗೃಹಿಣಿಯರು ಕುಟುಂಬದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ತಿಂಡಿ ತಯಾರಿಸಿ ಆಸಕ್ತರಿಗೆ ಪೂರೈಸಲು ಇಷ್ಟಪಟ್ಟಿದ್ದರೆ ಅದನ್ನು ಈ ಆ್ಯಪ್‌ನಲ್ಲಿ ದಾಖಲಿಸಬಹುದು. ಆ ವಿವರಗಳನ್ನು ನೋಡಿ ಆಸಕ್ತರು ಅವುಗಳನ್ನು ಖರೀದಿಸಲು ಬೇಡಿಕೆ ಮಂಡಿಸಬಹುದು.

ವಿವಿಧ ರಾಜ್ಯಗಳಿಂದ ನಗರಕ್ಕೆ ಬಂದಿರುವವರು ವೈವಿಧ್ಯಮಯ ಪಾಕ ವಿಧಾನ ಮೈಗೂಡಿಸಿಕೊಂಡಿರುತ್ತಾರೆ. ಎಲ್ಲರೂ ಎಲ್ಲ ಬಗೆಯ ಪಾಕ ವಿಧಾನಗಳನ್ನು ಕರಗತ ಮಾಡಿಕೊಳ್ಳಲು ಸಾಧ್ಯ ಇರುವುದಿಲ್ಲ. ವಿವಿಧ ಬಗೆಯ ತಿನಿಸುಗಳನ್ನು ಇಷ್ಟಪಡುವವರು ಅವುಗಳನ್ನು ಹುಡುಕಿಕೊಂಡು ನಗರದ ಬೇರೆ ಬೇರೆ ಪ್ರದೇಶಗಳಿಗೆ ಅಲೆಯಬೇಕಾಗುತ್ತದೆ. ನೆರೆಹೊರೆಯಲ್ಲಿಯೇ ಇವೆಲ್ಲವೂ ದೊರೆಯುವಂತಿದ್ದರೆ ಅಲೆದಾಟ ತಪ್ಪುತ್ತದೆ. ಸಮಯ, ಹಣ ಉಳಿಯುತ್ತದೆ. ಗೃಹಿಣಿಯರಿಗೂ ತಮ್ಮ ಅಡುಗೆ ಕೌಶಲವನ್ನು ಪರಿಚಿತರಿಗೆ ಪರಿಚಯಿಸಲೂ ಸಾಧ್ಯವಾಗುತ್ತದೆ ಎನ್ನುವ ತತ್ವ ಆಧರಿಸಿ ಈ ನವೋದ್ಯಮಕ್ಕೆ ಚಾಲನೆ ನೀಡಲಾಗಿದೆ.

ರೆಸ್ಟೊರೆಂಟ್ಸ್‌ಗಳಲ್ಲಿ ಬಗೆಯ ಬಗೆಯ ಭಕ್ಷ್ಯ ಭೋಜನಗಳು ಲಭ್ಯ ಇದ್ದರೂ ಅವುಗಳಿಗೆ ಮನೆ ರುಚಿ ಇರುವುದಿಲ್ಲ. ವೈವಿಧ್ಯಮಯ ಪಾಕ ವಿಧಾನಗಳನ್ನು ಕರಗತ ಮಾಡಿಕೊಂಡಿರುವವರಲ್ಲಿ ಅನೇಕರು ತಮ್ಮ ಅಡುಗೆ ತಯಾರಿಕೆಯ ಕೌಶಲ್ಯವನ್ನು ನೆರೆಹೊರೆಯವರ ಜತೆ ಹಂಚಿಕೊಳ್ಳಲು ಇಷ್ಟಪಟ್ಟಿರುತ್ತಾರೆ. ಪರಿಚಿತರು ತಯಾರಿಸುವ ರುಚಿಕರ ಖಾದ್ಯಗಳನ್ನು ಸೇವಿಸಿದವರು ಆಹಾರ ಪದಾರ್ಥಗಳ ಗುಣಮಟ್ಟ, ರುಚಿಗೆ ಮಾರು ಹೋಗಿರುತ್ತಾರೆ. ಪದೇ ಪದೇ ಕೇಳಿ ಪಡೆಯುವುದು ಶಿಷ್ಟಾಚಾರ ಎನಿಸುವುದಿಲ್ಲ. ಎಲ್ಲ ಕಾಲಕ್ಕೂ ಉಚಿತವಾಗಿ ಉಣಬಡಿಸುವುದೂ ಸಾಧ್ಯವಾಗುವುದಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಈ ನವೋದ್ಯಮವು ಪರಿಹಾರ ಒದಗಿಸಿದೆ.

‘ಅಡುಗೆ ಮಾಡುವವರ ಆಧಾರ್‌, ಪ್ಯಾನ್‌ ಮತ್ತಿತರ ದಾಖಲೆಗಳನ್ನು ದೃಢೀಕರಣ ಮಾಡಿದ ನಂತರವೇ ನೋಂದಾಯಿಸಿಕೊಳ್ಳಲಾಗುವುದು. ನೆರೆಹೊರೆಯವರಿಗೆ ಉತ್ತಮ ಖಾದ್ಯ ಪೂರೈಸದಿದ್ದರೆ ಕೆಟ್ಟ ಹೆಸರು ಬರುವ ಕಾರಣಕ್ಕೆ ಯಾರೊಬ್ಬರೂ ಗುಣಮಟ್ಟದ ಜತೆ ರಾಜಿ ಆಗುವುದಿಲ್ಲ. ಗ್ರಾಹಕರಿಂದ ನಿರಂತರವಾಗಿ ರೇಟಿಂಗ್‌ ಕಡಿಮೆ ಇದ್ದರೆ ಅಂತಹ ಅಡುಗೆ ತಯಾರಕರನ್ನು ಆ್ಯಪ್‌ನಿಂದ ಕೈಬಿಡಲಾಗುವುದು’ ಎಂದು ನವೋದ್ಯಮದ ಸಹ ಸ್ಥಾಪಕರಲ್ಲಿ ಒಬ್ಬರಾಗಿರುವ ಮೈಸೂರಿನವರಾದ ಅನುಪ್‌ ಗೋಪಿನಾಥ ಹೇಳುತ್ತಾರೆ.

‘ತಮ್ಮ ಅಡುಗೆ ಕೌಶಲವನ್ನು ಪರಿಚಿತರ ಜತೆ ಹಂಚಿಕೊಳ್ಳಲು ಹೇಗೆ ಮುಂದುವರೆಯಬೇಕು ಎನ್ನುವುದು ಅನೇಕರಿಗೆ ಗೊತ್ತಿರುವುದಿಲ್ಲ. ಅಂತಹವರಿಗೆ ಈ ಆ್ಯಪ್‌ ನೆರವಿಗೆ ಬರುತ್ತದೆ. ಇದರಿಂದ ಬಿಡುವಿನ ವೇಳೆಯ ಸದುಪಯೋಗವೂ ಆಗುತ್ತದೆ. ತಕ್ಕಮಟ್ಟಿಗೆ ಆರ್ಥಿಕವಾಗಿ ಸಬಲರಾಗಲೂ ನೆರವಾಗುತ್ತದೆ. ಆಹಾರ ಪದಾರ್ಥದ ಗುಣಮಟ್ಟ, ಪ್ರಮಾಣ ಮತ್ತು ಬೆಲೆ ನಿಗದಿ ಮಾಡುವ ಸ್ವಾತಂತ್ರ್ಯ ಗೃಹಿಣಿಯರಿಗೆ ಇರುತ್ತದೆ. ಬೆಲೆ ಮಟ್ಟದ ಸಂಸ್ಥೆಯ ವತಿಯಿಂದ ಸೂಕ್ತ ಸಲಹೆ ನೀಡಲಾಗುವುದು. ತಾವು ಸಿದ್ಧಪಡಿಸಿದ ಆಹಾರವನ್ನು ಯಾರಿಗೆ ಕೊಡಬೇಕು ಅಥವಾ ಕೊಡಬಾರದು ಎಂದು ನಿರ್ಧರಿಸುವ ಹಕ್ಕು ಅಡುಗೆ ತಯಾರಕರಿಗೆ ಸೇರಿರುತ್ತದೆ. ಹೀಗಾಗಿ ಇಲ್ಲಿ ದುರ್ಬಳಕೆಗೆ ಅವಕಾಶ ಇಲ್ಲ. ಅಡುಗೆ ತಯಾರಕರಲ್ಲಿ ಶೇ 1 ರಿಂದ 2ರಷ್ಟು ಪುರುಷರೂ ಇದ್ದಾರೆ.

‘2015ರಲ್ಲಿ ಆರಂಭಗೊಂಡಿರುವ ಈ ನವೋದ್ಯಮವು ಈಗ ಬೆಂಗಳೂರಿನಲ್ಲಿ ಗಟ್ಟಿಯಾಗಿ ನೆಲೆವೂರಿದೆ. ಹೈದರಾಬಾದ್‌ನಲ್ಲಿಯೂ ತನ್ನ ಸೇವೆ ವಿಸ್ತರಿಸಿದೆ. ಈ ಹಣಕಾಸು ವರ್ಷದಲ್ಲಿ ದೇಶದ ಐದಾರು ನಗರಗಳಿಗೆ ಸೇವೆ ವಿಸ್ತರಿಸಲು ಉದ್ದೇಶಿಸಿದೆ’ ಎಂದು ಅನೂಪ್‌ ಹೇಳುತ್ತಾರೆ.

ಆ್ಯಪ್‌
ಆ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT