ಶುಕ್ರವಾರ, ಫೆಬ್ರವರಿ 21, 2020
25 °C
ಇದೇ 15 ರಿಂದ ಜಾರಿ; ರೆವಿನ್ಯೂ ಇಲಾಖೆ ಸುತ್ತೋಲೆ

ಜಿಎಸ್‌ಟಿ: ತೆರಿಗೆ ತಪ್ಪಿಸುವ ಪ್ರವೃತ್ತಿ ಕಡಿವಾಣಕ್ಕೆ ಕ್ರಮ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವರಮಾನದಲ್ಲಿನ ಸೋರಿಕೆ ತಡೆಗಟ್ಟಲು ಮತ್ತು ವಹಿವಾಟುದಾರರ ತೆರಿಗೆ ತಪ್ಪಿಸುವ ವಂಚನೆ ಪ್ರವೃತ್ತಿಗೆ ಕಡಿವಾಣ ಹಾಕಲು ಆಮದು ಮತ್ತು ರಫ್ತು ವಹಿವಾಟುದಾರರು ‘ಜಿಎಸ್‌ಟಿಐಎನ್‌’ ನಮೂದಿಸುವುದನ್ನು ಇದೇ 15 ರಿಂದ ಕಡ್ಡಾಯ ಮಾಡಲಾಗುತ್ತಿದೆ.

ತೆರಿಗೆ ತಪ್ಪಿಸುವ ಅತಿರೇಕದ ಪ್ರವೃತ್ತಿ ಮಟ್ಟಹಾಕಲು ರೆವಿನ್ಯೂ ಇಲಾಖೆಯು ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ‘ಜಿಎಸ್‌ಟಿಐಎನ್‌’ ಎನ್ನುವುದು ಜಿಎಸ್‌ಟಿ ನೋಂದಾಯಿತ ವಹಿವಾಟುದಾರರಿಗೆ ‘ಪ್ಯಾನ್‌’ ಆಧಾರಿತ 15 ಅಂಕಿಗಳ ವಿಶಿಷ್ಟ ಸಂಖ್ಯೆಯಾಗಿದೆ. ಕೆಲವರು ತಮ್ಮ ವಹಿವಾಟಿನ ಬಿಲ್‌ಗಳಲ್ಲಿ ಈ ಸಂಖ್ಯೆ ನಮೂದಿಸದೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ವಂಚನೆ ಎಸಗಲಾಗುತ್ತಿದೆ.

ಸರಕುಗಳ ಆಮದುದಾರರು ಮತ್ತು ರಫ್ತುದಾರರು ಕ್ರಮವಾಗಿ ತಮ್ಮ ಎಂಟ್ರಿ ಮತ್ತು ಶಿಪ್ಪಿಂಗ್‌ ಬಿಲ್‌ಗಳಲ್ಲಿ ‘ಜಿಎಸ್‌ಟಿಐಎನ್‌’ ಉಲ್ಲೇಖಿಸದಿರುವುದು ಗಮನಕ್ಕೆ ಬಂದಿದೆ. ಈ ಮೂಲಕ ತೆರಿಗೆ ತಪ್ಪಿಸುವ ವಂಚನೆ ನಿಲ್ಲಿಸುವ ಕ್ರಮದ ಅಂಗವಾಗಿ ಇನ್ನು ಮುಂದೆ ಈ ವಿಶಿಷ್ಟ ಸಂಖ್ಯೆಯನ್ನು ಬಿಲ್‌ಗಳಲ್ಲಿ ಕಡ್ಡಾಯವಾಗಿ ನಮೂದಿಸಬೇಕು ಎಂದು ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಸುತ್ತೋಲೆಯಲ್ಲಿ ತಿಳಿಸಿದೆ.

ಆಮದು ಮಾಡಿಕೊಂಡ ಸರಕನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಮತ್ತು ಆಮದು ಸರಕಿನ ಮೊತ್ತವನ್ನು ಕಡಿಮೆ ಪ್ರಮಾಣದಲ್ಲಿ ನಮೂದಿಸುವುದರ ಮೂಲಕ ತೆರಿಗೆ ತಪ್ಪಿಸಲಾಗುತ್ತಿದೆ. ಆಮದುದಾರರು ಬಿಲ್‌ ಇಲ್ಲದೇ ಸರಕು ಪೂರೈಸಿ ತೆರಿಗೆ ಪಾವತಿಸುವುದನ್ನು ತಪ್ಪಿಸುವ ಪ್ರವೃತ್ತಿ ಕಂಡುಬರುತ್ತಿದೆ.

₹350 ಲಕ್ಷ ಕೋಟಿ ಆರ್ಥಿಕತೆಗೆ ಬುನಾದಿ: ನಿರ್ಮಲಾ

‘ಮುಂದಿನ ನಾಲ್ಕೈದು ವರ್ಷಗಳಲ್ಲಿ ಭಾರತವನ್ನು ₹350 ಲಕ್ಷ ಕೋಟಿ ಮೊತ್ತದ ಆರ್ಥಿಕತೆಯನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ 2020–21ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಭದ್ರ ಬುನಾದಿ ಹಾಕಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪ್ರತಿಪಾದಿಸಿದ್ದಾರೆ.

‘ಸರಕು ಮತ್ತು ಸೇವೆಗಳ ಬೇಡಿಕೆ ಹೆಚ್ಚಳಕ್ಕೆ ಕ್ರಮ, ಮೂಲ ಸೌಕರ್ಯ ವಲಯದಲ್ಲಿನ ಸರ್ಕಾರಿ ಬಂಡವಾಳ ಹೂಡಿಕೆ ಏರಿಕೆ ಮತ್ತು ಗ್ರಾಮೀಣ ಪ್ರದೇಶದ ಸಂಕಷ್ಟ ನಿವಾರಿಸಲು ಕೃಷಿ ವಲಯ ಕೇಂದ್ರೀತ 16 ಅಂಶಗಳ ಕ್ರಿಯಾ ಯೋಜನೆಗಳು ಉದ್ದೇಶಿತ ಗುರಿ ಸಾಧನೆಗೆ ನೆರವಾಗಲಿವೆ. ಮೂಲ ಸೌಕರ್ಯ ವಲಯದಲ್ಲಿನ ಸರ್ಕಾರಿ ವೆಚ್ಚವು ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ಅಪೇಕ್ಷಿತ ಪರಿಣಾಮ ಬೀರಲಿದೆ’ ಎಂದರು. ಭಾನುವಾರ ಕೋಲ್ಕತ್ತದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಸರಕು ಮತ್ತು ಸೇವಾ ತೆರಿಗೆಗಳನ್ನು (ಜಿಎಸ್‌ಟಿ) ವರ್ಷಕ್ಕೊಂದು ಬಾರಿ ಮಾತ್ರ ಬದಲಿಸುವ ಅಗತ್ಯ ಇದೆ’ ಎಂದೂ ಅವರು ಹೇಳಿದ್ದಾರೆ. ಸದ್ಯಕ್ಕೆ ಸರಾಸರಿ ಪ್ರತಿ ಮೂರು ತಿಂಗಳಿಗೊಮ್ಮೆ ಜಿಎಸ್‌ಟಿ ದರಗಳನ್ನು ಬದಲಾಯಿಸಲಾಗುತ್ತಿದೆ. 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು