ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಪಿಐ: ಆಗಸ್ಟ್‌ನಲ್ಲಿ ₹51,204 ಕೋಟಿ ಹೂಡಿಕೆ

2020ರ ಡಿಸೆಂಬರ್ ಬಳಿಕ ಗರಿಷ್ಠ ಮೊತ್ತದ ಹೂಡಿಕೆ
Last Updated 4 ಸೆಪ್ಟೆಂಬರ್ 2022, 11:07 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಿ ಹೂಡಿಕೆದಾರರು (ಎಫ್‌ಪಿಐ) ಆಗಸ್ಟ್‌ನಲ್ಲಿ ಭಾರತದ ಷೇರುಪೇಟೆಗಳಲ್ಲಿ ₹ 51,204 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. 2020ರ ಡಿಸೆಂಬರ್‌ ತಿಂಗಳಿನ ಬಳಿಕ ಆಗಿರುವ ಗರಿಷ್ಠ ಮೊತ್ತದ ಹೂಡಿಕೆ ಇದಾಗಿದೆ. 2020ರ ಡಿಸೆಂಬರ್‌ನಲ್ಲಿ ₹62,016 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.

ನ್ಯಾಷನಲ್‌ ಸೆಕ್ಯುರಿಟೀಸ್‌ ಡೆಪಾಸಿಟರಿ ಲಿಮಿಟೆಡ್‌ನಲ್ಲಿ (ಎನ್‌ಎಸ್‌ಡಿಎಲ್‌) ಇರುವ ಮಾಹಿತಿಯ ಪ್ರಕಾರ, ವಿದೇಶಿ ಹೂಡಿಕೆದಾರರು ಜುಲೈನಲ್ಲಿ ₹ 5 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು.

ಸತತವಾಗಿ ಒಂಬತ್ತು ತಿಂಗಳುಗಳವರೆಗೆ ಬಂಡವಾಳ ಹಿಂತೆಗೆತಕ್ಕೆ ಗಮನ ಹರಿಸಿದ್ದ ಹೂಡಿಕೆದಾರರು ಜುಲೈನಲ್ಲಿ ಹೂಡಿಕೆ ಮಾಡಲು ಮುಂದಾದರು. 2021ರ ಅಕ್ಟೋಬರ್‌ನಿಂದ 2022ರ ಜೂನ್‌ ಅವಧಿಯಲ್ಲಿ ₹ 2.46 ಲಕ್ಷ ಕೋಟಿ ಮೊತ್ತವನ್ನು ಭಾರತದ ಷೇರುಪೇಟೆಗಳಿಂದ ಹಿಂದಕ್ಕೆ ಪಡೆದಿದ್ದಾರೆ.

‘ಸೆಪ್ಟೆಂಬರ್‌ನಲ್ಲಿಯೂ ಭಾರತದ ಷೇರುಪೇಟೆಗಳು ವಿದೇಶಿ ಬಂಡವಾಳ ಆಕರ್ಷಿಸಲಿವೆ. ಆದರೆ, ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರ ಹೆಚ್ಚಳವನ್ನು ಮುಂದುವರಿಸುವುದಾಗಿ ಹೇಳಿರುವುದರಿಂದ ಆಗಸ್ಟ್‌ಗೆ ಹೋಲಿಸಿದರೆ ಹೂಡಿಕೆಯು ತುಸು ಕಡಿಮೆ ಆಗಬಹುದು’ ಎಂದು ಸ್ಯಾಂಕ್ಟಂ ವೆಲ್ತ್‌ನ ಉತ್ಪನ್ನಗಳ ಸಹ ಮುಖ್ಯಸ್ಥ ಮನೀಷ್‌ ಜೆಲೋಕಾ ಹೇಳಿದ್ದಾರೆ.

‘ವಿದೇಶಿ ಬಂಡವಾಳ ಹೂಡಿಕೆದಾರರು ಎಫ್‌ಎಂಸಿಜಿ, ಬಂಡವಾಳ ಸರಕುಗಳು, ಹಣಕಾಸು ಮತ್ತು ದೂರಸಂಪರ್ಕ ಕಂಪನಿಗಳ ಷೇರುಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

‘ಹಣದುಬ್ಬರ, ಡಾಲರ್‌ ಮೌಲ್ಯ ಮತ್ತು ಬಡ್ಡಿದರವು ಎಫ್‌ಪಿಐ ಒಳಹರಿವನ್ನು ನಿರ್ಧರಿಸಲಿವೆ’ ಎಂದು ಅರಿಹಂತ್‌ ಕ್ಯಾಪಿಟಲ್‌ ಮಾರ್ಕೇಟ್ಸ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅರ್ಪಿತ್‌ ಜೈನ್‌ ಹೇಳಿದ್ದಾರೆ

ಸಾಲಪತ್ರ ಮಾರುಕಟ್ಟೆಯಲ್ಲಿ ಆಗಸ್ಟ್‌ನಲ್ಲಿ ₹3,844 ಕೋಟಿ ಮೊತ್ತ ಹೂಡಿಕೆ ಮಾಡಿದ್ದಾರೆ. ಭಾರತದ ಜೊತೆಗೆ, ಇಂಡೊನೇಷ್ಯಾ, ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್‌ ಷೇರುಪೇಟೆಗಳು ಸಹ ಆಗಸ್ಟ್‌ನಲ್ಲಿ ವಿದೇಶಿ ಹೂಡಿಕೆಯನ್ನು ಆಕರ್ಷಿಸಿವೆ. ಪಿಲಿಪ್ಪೀನ್ಸ್ ಮತ್ತು ತೈವಾನ್‌ ದೇಶಗಳಿಂದ ವಿದೇಶಿ ಬಂಡವಾಳ ಹೊರಹೋಗಿದೆ.

ಬಂಡವಾಳ ಒಳಹರಿವಿಗೆ ಕಾರಣಗಳು
*
ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು
*ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತಗ್ಗಿದ ಕಚ್ಚಾ ತೈಲ ದರ
*ಉಕ್ಕು, ಅಲ್ಯುಮಿನಿಯಂ ಬೆಲೆ ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT