ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಸಾಮರ್ಥ್ಯ ಮೆರೆದ ಮಹಿಳೆಯರು

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟ
Last Updated 7 ಮಾರ್ಚ್ 2018, 10:40 IST
ಅಕ್ಷರ ಗಾತ್ರ

ಹಾವೇರಿ: ನಿತ್ಯದ ಮನೆಕೆಲಸಗಳು, ಕುಟುಂಬ– ಸಂಬಂಧಿಕರ ವಿಚಾರಗಳು, ಮಕ್ಕಳ ಪಾಲನೆ –ಪೋಷಣೆ, ಟಿ.ವಿ. ಕಾರ್ಯಕ್ರಮಗಳು, ಕಚೇರಿ ಕಾರ್ಯಗಳನ್ನು ಬದಿಗೊತ್ತಿದ ಮಹಿಳೆಯರು ಮಂಗಳವಾರ ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ‘ಮಹಿಳಾ ಕ್ರೀಡಾಕೂಟ’ದಲ್ಲಿ ಹುರುಪಿನಿಂದ ಪಾಲ್ಗೊಂಡರು.

‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ರಕ್ಷಣಾ ಘಟಕದ ಸಹಯೋಗದಲ್ಲಿ ಆಯೋಜಿಸಿದ ‘ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟ’ದಲ್ಲಿ  ಪಾಲ್ಗೊಂಡರು.

‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಮಹಿಳೆಯರಿಗಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ಇದು ಗಂಡ, ಸಂಸಾರ, ಮಕ್ಕಳು ಎಂದು ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ ಎಷ್ಟೋ ಮಹಿಳೆಯರಿಗೆ ಸಂತೋಷ ತಂದಿದೆ’ ಎಂದು ಸವಣೂರ ತಾಲ್ಲೂಕು ಯಲವಿಗಿ ಗ್ರಾಮದ ವಾಣಿಶ್ರೀ ರಾಠೋಡ ತಿಳಿಸಿದರು.

ಮಹಿಳಾ ಕ್ರೀಡಾಕೂಟವು ಅವಕಾಶ  ವಂಚಿತ ಮಹಿಳಾ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸಿತು ಎಂದು 100 ಹಾಗೂ 200 ಮೀಟರ್ಸ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಲಕ್ಷ್ಮಿ ಕುರುವತ್ತೇರ ತಿಳಿಸಿದರು.

ಕ್ರೀಡೆಗಳು: 18 ರಿಂದ 30 ವರ್ಷದೊಳಗಿನ ಮಹಿಳೆಯರಿಗೆ 100 ಮತ್ತು 200 ಮೀಟರ್ಸ್ ಓಟ , 4x100 ಮೀಟರ್‌ ರಿಲೇ ಹಾಗೂ ಲಾಂಗ್‌ ಜಂಪ್‌, ಶಾಟ್‌ಪಟ್‌, 31ರಿಂದ 45 ವರ್ಷದ ವಿಭಾಗದಲ್ಲಿ 100, 200 ಮೀಟರ್ಸ್ ಓಟ , 4X100 ಮೀಟರ್ಸ್ ರಿಲೇ ಹಾಗೂ ಲಾಂಗ್‌ ಜಂಪ್‌, ಶಾಟ್‌ ಪಟ್, ಸಂಗೀತ ಕುರ್ಚಿ , 45ರಿಂದ 60 ವರ್ಷದೊಳಗಿನ ವಿಭಾಗದಲ್ಲಿ 100 ನಡಿಗೆ, ಲೆಮನ್‌ ಇನ್‌ ಸ್ಪೂನ್‌, ಟೆನಿಸ್‌ ಬಾಲ್‌ ಎಸೆಯುವುದು, ಸಂಗೀತ ಕುರ್ಚಿ, ಜ್ಞಾಪಕ ಶಕ್ತಿ ಸ್ಪರ್ಧೆಗಳು ಹಾಗೂ ಮುಕ್ತ ವಿಭಾಗದಲ್ಲಿ ಗುಂಪು ಆಟಗಳಾದ ಥ್ರೋಬಾಲ್‌, ಹಗ್ಗ ಜಗ್ಗಾಟ, ಕವಿಗೋಷ್ಠಿ, ಪೌಷ್ಟಿಕ ಆಹಾರ ತಯಾರಿಸುವುದು ಹಾಗೂ 10 ಓವರ್‌ಗಳ ಕ್ರಿಕೆಟ್‌ ಪಂದ್ಯ ನಡೆಯಿತು.

ಉದ್ಘಾಟನೆ: ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಶಾಂತಾ ಹುಲ್ಮನಿ ಮಾತನಾಡಿ, ‘ಪ್ರತಿ ಮಹಿಳೆ ಬದುಕಿನಲ್ಲಿ ಕ್ರೀಡಾ ಮನೋಭಾವ ಬೆಳೆಸಿಕೊಂಡರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಕ್ರೀಡೆಯ ಅನುಭವವು ಬದುಕಿನಲ್ಲಿ ಸವಾಲನ್ನು ಎದುರಿಸಲು ನೆರವಾಗಲಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಎಂ.ಎನ್‌.ಮಾಳಿಗೇರ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಮಠದ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಪಿ.ವೈ.ಶೆಟ್ಟೆಪ್ಪನವರ, ಜಿಲ್ಲಾ ಸಮಾಲೊಚಕ ಎಂ.ಎಂ.ಬಾರ್ಕಿ, ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕ ಎಸ್‌.ಎಂ.ಗಾಳಿಗೌಡ್ರ ಹಾಗೂ ಮುತ್ತುರಾಜ ಮಾದರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT