ಮಂಗಳವಾರ, ಜೂನ್ 22, 2021
22 °C

ಕೋವಿಡ್: ನೆರವಿನ ಹೆಗಲು ನೀಡುತ್ತಿರುವ ಕಂಪನಿಗಳು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್–19 ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ದೇಶ, ವಿದೇಶಗಳ ಕಂಪನಿಗಳು ಹೆಗಲು ನೀಡಿವೆ. ವೈದ್ಯಕೀಯ ಉಪಕರಣಗಳನ್ನು ವಿದೇಶಗಳಿಂದ ವಿಮಾನದ ಮೂಲಕ ತರಿಸುವುದು, ವೈದ್ಯಕೀಯ ಆಮ್ಲಜನಕ ಸಿದ್ಧಪಡಿಸುವುದು ಸೇರಿದಂತೆ ಹಲವು ಬಗೆಗಳಲ್ಲಿ ಅವು ನೆರವು ನೀಡುತ್ತಿವೆ.

ವಿದೇಶಿ ಕಂಪನಿಗಳಾದ ಅಮೆಜಾನ್, ಗೂಗಲ್, ಭಾರತದ ಕಂಪನಿಗಳಾದ ಟಾಟಾ ಸನ್ಸ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಅದಾನಿ ಸಮೂಹ ಕೋವಿಡ್ ರೋಗಿಗಳ ಆರೈಕೆಗಾಗಿ ಆಸ್ಪತ್ರೆಗಳನ್ನು ಕೂಡ ಆರಂಭಿಸಿವೆ.

ಗೂಗಲ್‌ ಸಿಇಒ ಸುಂದರ್ ಪಿಚೈ ಅವರು ಭಾರತಕ್ಕೆ ನೆರವು ನೀಡುವುದಾಗಿ ಹಿಂದಿನ ತಿಂಗಳು ಪ್ರಕಟಿಸಿದ್ದಾರೆ. ಅಮೆಜಾನ್‌ ಕಡೆಯಿಂದ ಒಂದು ಸಾವಿರ ವೆಂಟಿಲೇಟರ್‌ಗಳು ಭಾರತಕ್ಕೆ ಬರಲಿವೆ. ತಾನು ಕೂಡ ಒಂದು ಸಾವಿರ ವೆಂಟಿಲೇಟರ್‌ಗಳನ್ನು, 25 ಸಾವಿರ ಆಮ್ಲಜನಕದ ಕಾನ್ಸನ್‌ಟ್ರೇಟರ್‌ಗಳನ್ನು ನೀಡುವುದಾಗಿ ಮೈಕ್ರೊಸಾಫ್ಟ್‌ ಹೇಳಿದೆ.

ರಿಲಯನ್ಸ್ ಕಂಪನಿಯು ಪ್ರತಿದಿನ ಒಂದು ಸಾವಿರ ಟನ್ ವೈದ್ಯಕೀಯ ಆಮ್ಲಜನಕ ತಯಾರಿಸುವಂತೆ ತನ್ನ ಸಾಮರ್ಥ್ಯ ಹೆಚ್ಚಿಸಿಕೊಂಡಿದೆ. ಗುಜರಾತ್‌ ಮತ್ತು ಮುಂಬೈನಲ್ಲಿ ಕಂಪನಿಯು ಒಟ್ಟು 1,875 ಹಾಸಿಗೆಗಳ ಸೌಲಭ್ಯ ಇರುವ ಆಸ್ಪತ್ರೆ ನಿರ್ಮಿಸಿದೆ. ವಿಪ್ರೊ ಕಂಪನಿಯು ಪುಣೆಯಲ್ಲಿನ ಒಂದು ಘಟಕವನ್ನು 430 ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರವಾಗಿ ಪರಿವರ್ತಿಸಿದೆ. ಇನ್ಫೊಸಿಸ್‌ ಬೆಂಗಳೂರಿನಲ್ಲಿ ಆರೈಕೆ ಕೇಂದ್ರ ತೆರೆದಿದೆ.

ಸಿಪ್ಲಾ ಕಂಪನಿ ಮಹಾರಾಷ್ಟ್ರ ಸರ್ಕಾರಕ್ಕೆ ನೆರವಾಗಿದೆ, ವೇದಾಂತ ಕಂಪನಿಯು ದೆಹಲಿಯಲ್ಲಿ ಆಸ್ಪತ್ರೆ ನಿರ್ಮಿಸುತ್ತಿದೆ. ಅದಾನಿ ಪ್ರತಿಷ್ಠಾನವು ಗುಜರಾತ್‌ನಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿದೆ. ಟಾಟಾ ಸಮೂಹವು ಬೇರೆ ಬೇರೆ ಕಡೆ ಒಟ್ಟು ಐದು ಸಾವಿರ ಬೆಡ್‌ಗಳನ್ನು ಕೋವಿಡ್ ರೋಗಿಗಳಿಗೆ ಲಭ್ಯವಾಗಿಸಿದೆ. ಐಟಿಸಿ ಕಂಪನಿಯು ಪಶ್ಚಿಮ ಬಂಗಾಳದಲ್ಲಿ ದಾಖಲೆಯ 72 ಗಂಟೆಗಳಲ್ಲಿ 200 ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆ ಸಿದ್ಧಪಡಿಸಿದೆ.

ಎಸ್‌ಬಿಐ ಕಡೆಯಿಂದ ದೇಶದ ಬೇರೆ ಬೇರೆ ಕಡೆ 1000 ಬೆಡ್‌ಗಳ ತಾತ್ಕಾಲಿಕ ಆಸ್ಪತ್ರೆಗಳು ಸಿದ್ಧವಾಗಿವೆ. ಟೆಕ್ ಮಹೀಂದ್ರ ಕಂಪನಿಯು ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡಿದೆ. ಎಲ್‌ಆ್ಯಂಡ್‌ಟಿ ಸಮೂಹವು 22 ಆಮ್ಲಜನಕ ಉತ್ಪಾದನಾ ಯಂತ್ರಗಳನ್ನು ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು