ಶನಿವಾರ, ಸೆಪ್ಟೆಂಬರ್ 18, 2021
28 °C

ಫ್ಯೂಚರ್‌–ರಿಯಲ್ಸ್‌ ಒಪ್ಪಂದ: ದೆಹಲಿ ಹೈಕೋರ್ಟ್‌ ವಿಚಾರಣೆಗೆ ‘ಸುಪ್ರೀಂ’ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಫ್ಯೂಚರ್‌ ರಿಟೇಲ್ ಲಿಮಿಟೆಡ್‌ (ಎಫ್‌ಆರ್‌ಎಲ್‌) ಮತ್ತು ರಿಲಯನ್ಸ್‌ ರಿಟೇಲ್‌ ಒಪ್ಪಂದದ ಕುರಿತಂತೆ ದೆಹಲಿ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಎಲ್ಲಾ ವಿಚಾರಣೆಗಳನ್ನು ನಾಲ್ಕು ವಾರಗಳವರೆಗೆ ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ.

ಎಫ್‌ಆರ್‌ಎಲ್‌ ಕಂಪನಿಯನ್ನು ರಿಲಯನ್ಸ್ ರಿಟೇಲ್‌ ಜೊತೆ ವಿಲೀನ ಮಾಡುವಂತಿಲ್ಲ ಎಂದು ಸಿಂಗಪುರದ ತುರ್ತು ಮಧ್ಯಸ್ಥಿಕೆ ಕೇಂದ್ರ ನೀಡಿದ್ದ ಆದೇಶದ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ವಿಲೀನ ಒಪ್ಪಂದದ ಕುರಿತಾಗಿ ನಾಲ್ಕು ವಾರಗಳವರೆಗೆ ಅಂತಿಮ ಆದೇಶ ಹೊರಡಿಸದಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (ಎನ್‌ಸಿಎಲ್‌ಟಿ), ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಹಾಗೂ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೂ (ಸೆಬಿ) ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರ ನೇತೃತ್ವದ ಪೀಠವು ನಿರ್ದೇಶನ ನೀಡಿದೆ.

ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ ಮಧ್ಯಸ್ಥಿಕೆ ಕೇಂದ್ರವು ಪ್ರಕರಣದ ಅಂತಿಮ ತೀರ್ಪನ್ನು ಕಾಯ್ದಿರಿಸಿದೆ ಎಂದು ಎಫ್‌ಆರ್‌ಎಲ್ ಮತ್ತು ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್‌ನ (ಎಫ್‌ಸಿಪಿಎಲ್) ಪರ, ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ಮುಕುಲ್ ರೋಹಟಗಿ ಅವರ ಹೇಳಿಕೆಗಳನ್ನು ಪರಿಗಣಿಸಿ ಕೋರ್ಟ್‌ ಈ ಆದೇಶ ನೀಡಿದೆ.

ಎಫ್‌ಆರ್‌ಎಲ್, ಎಫ್‌ಸಿಪಿಎಲ್ ಮತ್ತು ನಿರ್ದೇಶಕರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮಕ್ಕೆ ಕಂಪನಿಯು ಆಸಕ್ತಿ ಹೊಂದಿಲ್ಲ ಎಂದು ಅಮೆಜಾನ್ ಪರ ಹಾಜರಾದ ಹಿರಿಯ ವಕೀಲ ಗೋಪಾಲ್ ಸುಬ್ರಮಣಿಯನ್ ಹೇಳಿದರು. ದೆಹಲಿ ಹೈಕೋರ್ಟ್‌ನಲ್ಲಿ ವಿಚಾರಣೆಯನ್ನು ತಡೆಹಿಡಿಯಲು ಅವರು ಒಪ್ಪಿದರು.

ಫ್ಯೂಚರ್‌ ರಿಟೇಲ್ ಲಿಮಿಟೆಡ್‌ (ಎಫ್‌ಆರ್‌ಎಲ್‌) ಕಂಪನಿಯನ್ನು ರಿಲಯನ್ಸ್ ರಿಟೇಲ್‌ ಜೊತೆ ವಿಲೀನ ಮಾಡುವಂತಿಲ್ಲ ಎಂದು ಸಿಂಗಪುರದ ತುರ್ತು ಮಧ್ಯಸ್ಥಿಕೆ ಕೇಂದ್ರ ನೀಡಿದ್ದ ಆದೇಶಕ್ಕೆ ಭಾರತದಲ್ಲಿಯೂ ಸಿಂಧುತ್ವ ಇದೆ ಎಂದು ಸುಪ್ರೀಂ ಕೋರ್ಟ್‌ ಆಗಸ್ಟ್‌ 6ರಂದು ಹೇಳಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.