ಗುರುವಾರ , ಮಾರ್ಚ್ 23, 2023
23 °C
ನಾನೂ ಗುಜರಾತಿನವ ಎನ್ನುವ ಕಾರಣಕ್ಕೆ ವೃಥಾ ಆರೋಪ ಮಾಡಲಾಗುತ್ತಿದೆ.

ರಾಜೀವ್‌ ಗಾಂಧಿ ಕಾಲದಲ್ಲಿ ಉದ್ಯಮ ಆರಂಭಿಸಿದೆ, ಮೋದಿಗೆ ಸಂಬಂಧ ಇಲ್ಲ: ಅದಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ತನ್ನ ಉದ್ಯಮ ಸಾಮ್ರಾಜ್ಯ ಯಾವುದೇ ರಾಜಕೀಯ ವ್ಯಕ್ತಿ ಜತೆ ನಂಟು ಹೊಂದಿಲ್ಲ ಎಂದು ಏಷ್ಯಾದ ನಂಬರ್‌ 1 ಶ್ರೀಮಂತ ಗೌತಮ್‌ ಅದಾನಿ ಹೇಳಿದ್ದಾರೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ತನಗೆ ಲಾಭವಾಗುತ್ತದೆ ಎನ್ನುವ ಆರೋಪವನ್ನು ಅವರು ತಳ್ಳಿ ಹಾಕಿದ್ದಾರೆ.

ಬುಧವಾರ ಖಾಸಗಿ ವಾಹಿನಿಯ ಜತೆ ಮಾತನಾಡಿದ ಅವರು, ‌‘ರಾಜೀವ್‌ ಗಾಂಧಿ ಕಾಲದಲ್ಲಿ ಅದಾನಿ ಗ್ರೂಪ್‌ ಪ್ರಾರಂಭವಾಗಿತ್ತು. ನಾನು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ಒಂದೇ ರಾಜ್ಯಕ್ಕೆ ಸೇರಿದವರು. ಹೀಗಾಗಿ ಅವರಿಂದ ನನ್ನ ಉದ್ಯಮಕ್ಕೆ ಲಾಭವಾಗುತ್ತಿದೆ ಎಂದು ವೃಥಾ ಆರೋಪ ಮಾಡಲಾಗುತ್ತಿದೆ. ಇಂಥ ಆರೋಪಗಳು ನನ್ನ ಮೇಲೆ ಮಾಡುತ್ತಿರುವುದು ದುರದೃಷ್ಠಕರ‘ ಎಂದು ಅವರು ಹೇಳಿದರು.

ಇದನ್ನೂ ಓದಿ: 

‘ನಮ್ಮ ಸಮೂಹ ಉದ್ಯಮಗಳು ಯಶಸ್ಸನ್ನು ಕಡಿಮೆ ಅವಧಿಯಲ್ಲಿ ವೀಕ್ಷಿಸಿ, ನಮ್ಮ ಮೇಲೆ ಪಕ್ಷಪಾತದ ಆರೋಪಗಳನ್ನು ಮಾಡಲಾಗುತ್ತಿದೆ. ನನ್ನ ಉದ್ಯಮ ಯಶಸ್ಸು ಯಾವುದೇ ವ್ಯಕ್ತಿಯಿಂದಾಗಿಲ್ಲ. ಮೂರು ದಶಕಗಳಲ್ಲಿ ಹಲವು ನಾಯಕರು ಮತ್ತ ಸರ್ಕಾರಗಳು ಮಾಡಿದ ನೀತಿ, ಸಾಂಸ್ಥಿಕ ಸುಧಾರಣೆಗಳಿಂದ ಎನ್ನುವುದು ವಾಸ್ತವ‘ ಎಂದು ಅವರು ಹೇಳಿದರು.

‘ಇದೆಲ್ಲಾ ರಾಜೀವ್‌ ಗಾಂಧಿ ಅವರ ಕಾಲದಲ್ಲಿ ಆರಂಭವಾಯ್ತು ಎನ್ನುವುದನ್ನು ತಿಳಿದರೆ ಹಲವರಿಗೆ ಆಶ್ಚರ್ಯವಾಗುತ್ತದೆ. ಅವರು ಆಮದು–ರಫ್ತು ನೀತಿ ಸಡಿಲಗೊಳಿಸಿದಾಗ ಉದ್ಯಮ ಆರಂಭವಾಯ್ತು. ಆದರೆ ರಾಜೀವ್‌ ಗಾಂಧಿಗಾಗಿ ನನ್ನ ಉದ್ಯಮ ಪಯಣ ಆರಂಭವಾಗಿದ್ದಲ್ಲ‘ ಎಂದು ಅವರು ನುಡಿದರು.

‘ನನ್ನ ಉದ್ಯಮಕ್ಕೆ ಎರಡನೇ ಅತೀ ದೊಡ್ಡ ಬೆಂಬಲ ಸಿಕ್ಕಿದ್ದು, 1991ರಲ್ಲಿ ನರಸಿಂಹ ರಾವ್ ಸರ್ಕಾರ ಮಾಡಿದ ಆರ್ಥಿಕ ಸುಧಾರಣೆಗಳಿಂದ. ಇತರ ಉದ್ಯಮಿಗಳಂತೆ ನಾನೂ ಅದರ ಫಲಾನುಭವಿ‘ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘1995ರಲ್ಲಿ ಗುಜರಾತ್‌ನಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಕೇಶು ಭಾಯ್‌ ಪಟೇಲ್‌ ಮುಖ್ಯಮಂತ್ರಿಯಾದರು. ಅವರು ಬಂದರು ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಟ್ಟರು. ಹೀಗಾಗಿ ನನಗೆ ಮುಂದ್ರಾ ಬಂದರು ನಿರ್ಮಾಣ ಮಾಡಲು ಸಾಧ್ಯವಾಯ್ತು. ಇದು ನನ್ನ ಉದ್ಯಮದ ಮೂರನೇ ದೊಡ್ದ ತಿರುವು‘ ಎಂದು ಅವರು ಹೇಳಿದರು.

ಇದನ್ನೂ ಓದಿ: 

‘2001ರಲ್ಲಿ ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾದಾಗ ಗುಜರಾತ್‌ ಭಾರಿ ಪ್ರಮಾಣದಲ್ಲಿ ಅಭಿವೃದ್ಧಿಗೆ ಸಾಕ್ಷಿಯಾಯ್ತು. ಅವರ ಯೋಜನೆಗಳು ಹಾಗೂ ಅವುಗಳ ಕಾರ್ಯಗತಗೊಳಿಸುವಿಕೆ ಇಡೀ ಗುಜರಾತ್‌ನ ಆರ್ಥಿಕ ಚಹರೆಯನ್ನು ಬದಲಾಯಿಸಿತಲ್ಲದೇ, ಉದ್ದಿಮೆ ಹಾಗೂ ಉದ್ಯೋಗ ಎಂದಿಗಿಂತಲೂ ಹೆಚ್ಚು ಪುಟಿದೇಳಲು ಕಾರಣವಾಯ್ತು. ಇದು ನನ್ನ ಉದ್ಯಮದ ನಾಲ್ಕನೇ ದೊಡ್ಡ ತಿರುವು‘ ಎಂದು ಅವರು ಬಣ್ಣಿಸಿದರು.

‘ಇಂದು ಭಾರತ ಅವರ ಸಮರ್ಥ ನಾಯಕತ್ವದಡಿ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಪುನರುತ್ಥಾನ ಕಾಣುತ್ತಿದೆ. ಅಲ್ಲಿ ಹೊಸ ಭಾರತ ಇದೀಗ ತನ್ನನ್ನು ತಾನು ಪ್ರತಿಪಾದಿಸುತ್ತಿದೆ‘ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು