ಜಿಡಿಪಿ ಲೆಕ್ಕ: ಕೇಂದ್ರ–ಕಾಂಗ್ರೆಸ್‌ ನಡುವೆ ವಾಕ್ಸಮರ

7

ಜಿಡಿಪಿ ಲೆಕ್ಕ: ಕೇಂದ್ರ–ಕಾಂಗ್ರೆಸ್‌ ನಡುವೆ ವಾಕ್ಸಮರ

Published:
Updated:

ನವದೆಹಲಿ: ಹಿಂದಿನ ವರ್ಷಗಳ ಜಿಡಿಪಿ (ಒಟ್ಟು ದೇಶಿ ಉತ್ಪನ್ನ) ಲೆಕ್ಕಾಚಾರಕ್ಕಾಗಿ ರೂಪಿಸಿರುವ ಹೊಸ ವಿಧಾನವು ಕೇಂದ್ರ ಸರ್ಕಾರ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ವಾಕ್ಸಮರಕ್ಕೆ ವೇದಿಕೆ ಸೃಷ್ಟಿಸಿದೆ. 

ಈ ವಿಧಾನದ ಲೆಕ್ಕಾಚಾರ ಪ್ರಕಾರ, 2004ರಿಂದ 2014ರ ಯುಪಿಎ ಅಧಿಕಾರಾವಧಿಯಲ್ಲಿ ಜಿಡಿಪಿ ಉತ್ತಮವಾಗಿತ್ತು ಎಂಬ ಅಂದಾಜು ಬಹಿರಂಗವಾಗಿದೆ. ಆದರೆ, ‘ಇವು ಅಧಿಕೃತ ಅಂಕಿ ಅಂಶಗಳು ಅಥವಾ ಅಂದಾಜು ಅಲ್ಲ. ಅಧಿಕೃತ ಅಂಕಿ ಅಂಶಗಳನ್ನು ಮುಂದೆ ಬಿಡುಗಡೆ ಮಾಡಲಾಗುವುದು’ ಎಂದು ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹೇಳಿದೆ.

ಸುದೀಪ್ತೊ ಮಂಡಲ್‌ ಮತ್ತು ಎನ್‌.ಆರ್‌. ಭಾನುಮೂರ್ತಿ ಅವರು ಹೊಸ ಲೆಕ್ಕಚಾರ ವಿಧಾನವನ್ನು ರೂಪಿಸಿದ್ದಾರೆ. ಇದರ ಪ್ರಕಾರ, 2006–07ನೇ ವರ್ಷದಲ್ಲಿ ದೇಶದ ಜಿಡಿಪಿ ಶೇ 10.08ರಷ್ಟು ಇತ್ತು. ಇದು 1991ರ ಆರ್ಥಿಕ ಉದಾರೀಕರಣ ಜಾರಿಯ ನಂತರ ದಾಖಲಾದ ಅತ್ಯಂತ ಹೆಚ್ಚಿನ ಪ್ರಗತಿಯಾಗಿದೆ. 

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಈ ಅಂಕಿ ಅಂಶವನ್ನು ಆಧಾರವಾಗಿಟ್ಟುಕೊಂಡು ಮಾತನಾಡಿದ್ದಾರೆ. ‘ಯುಪಿಎ ಆಡಳಿತದ ಅವಧಿಯು ಅತಿ ಹೆಚ್ಚು ಬೆಳವಣಿಗೆಯ ದಶಕವಾಗಿತ್ತು. ಈ ಅವಧಿಯಲ್ಲಿ 14 ಕೋಟಿ ಜನರು ಬಡತನ ರೇಖೆಯಿಂದ ಮೇಲೆ ಬಂದಿದ್ದಾರೆ. ಕೊನೆಗೂ ಸತ್ಯಕ್ಕೆ ಜಯವಾಗಿದೆ. ಯುಪಿಎ ಆಳ್ವಿಕೆಯ ಅವಧಿಯು ಪ್ರಗತಿಯ ಅತ್ಯುತ್ತಮ ವರ್ಷಗಳು’ ಎಂದು ಅವರು ಟ್ವೀಟ್‌ ಮಾಡಿದ್ದಾರೆ. 

ಹಿಂದಿನ ವರ್ಷಗಳ ಜಿಡಿಪಿ ಲೆಕ್ಕಾಚಾರದ ವಿಧಾನವು ಇನ್ನಷ್ಟೇ ಅಂತಿಮಗೊಳ್ಳಬೇಕಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಆಯೋಗ (ಎನ್‌ಎಸ್‌ಸಿ) ಹೇಳಿದೆ. ಹೊಸ ವಿಧಾನ ರೂಪಿಸುವುದಕ್ಕಾಗಿ ಸುದೀಪ್ತೊ ನೇತೃತ್ವದಲ್ಲಿ ಎನ್‌ಎಸ್‌ಸಿ ಸಮಿತಿ ರಚಿಸಿತ್ತು. 

ಎನ್‌ಎಸ್‌ಸಿ ಸಮಿತಿಯು ನೀಡಿದ ಶಿಫಾರಸನ್ನು ಸಾಂಖ್ಯಿಕ ಸಚಿವಾಲಯವು ಪರಿಶೀಲನೆಗೆ ಒಳಪಡಿಸಲಿದೆ. ಹಿಂದಿನ ವರ್ಷಗಳಲ್ಲಿ ಒಂದೊಂದು ಕ್ಷೇತ್ರದ ಪ್ರಗತಿಯನ್ನು ಯಾವ ವಿಧಾನದಲ್ಲಿ ಲೆಕ್ಕ ಹಾಕಬಹುದು ಎಂಬುದನ್ನು ನಿರ್ಧರಿಸಲಿದೆ ಎಂದು ಸಚಿವಾಲಯವು ತಿಳಿಸಿದೆ. 

ಯುಪಿಎ ಅವಧಿಯಲ್ಲಿ ಹೆಚ್ಚಿನ ಪ್ರಗತಿ ದಾಖಲಾಗಲು ಅತಿಯಾದ ಆರ್ಥಿಕ ಕೊರತೆ ಮತ್ತು ಬ್ಯಾಂಕ್‌ ಸಾಲದ ಬೇಜವಾಬ್ದಾರಿಯುತ ವಿಸ್ತರಣೆಯೇ ಕಾರಣ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್‌ ಕುಮಾರ್‌ ಶನಿವಾರ ಹೇಳಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !