ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧಿ ದರ ಶೇ 5.8ಕ್ಕೆ ಕುಸಿತ

ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ ಅಂದಾಜು
Last Updated 4 ನವೆಂಬರ್ 2019, 19:46 IST
ಅಕ್ಷರ ಗಾತ್ರ

ಮುಂಬೈ: ದೀಪಾವಳಿ ಹಬ್ಬದ ಸಂದರ್ಭದಲ್ಲಿನ ಗ್ರಾಹಕರ ಖರೀದಿಯು ಹೆಚ್ಚು ಉತ್ತೇಜಕರವಾಗಿರದ ಕಾರಣಕ್ಕೆ ಪ್ರಸಕ್ತ ಸಾಲಿನ ಆರ್ಥಿಕ ವೃದ್ಧಿ ದರದ (ಜಿಡಿಪಿ) ಬೆಳವಣಿಗೆಯಲ್ಲಿ ಇನ್ನಷ್ಟು ಕಡಿತ ಕಂಡುಬರಲಿದೆ.

ಹಬ್ಬದ ಸಂದರ್ಭದಲ್ಲಿ ಖರೀದಿ ಭರಾಟೆಯು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದರಿಂದ ಜಿಡಿಪಿ ಬೆಳವಣಿಗೆಯಲ್ಲಿ ಶೇ 0.30ರಷ್ಟು ಕಡಿತವಾಗಲಿದೆ. ಹಣಕಾಸು ವರ್ಷದ ವೃದ್ಧಿ ದರವು ಶೇ 5.8ರಷ್ಟು ಇರಲಿದೆ ಎಂದು ಷೇರು ದಲ್ಲಾಳಿ ಸಂಸ್ಥೆ ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್‌ ಲಿಂಚ್‌ನ ವಿಶ್ಲೇಷಕರು ಅಂದಾಜಿಸಿದ್ದಾರೆ.

ಸಾಲಗಳ ಮೇಲಿನ ಬಡ್ಡಿ ದರಗಳನ್ನು ಕಡಿತ ಮಾಡುವುದೊಂದೇ ಮಂದಗತಿಯ ಆರ್ಥಿಕ ಬೆಳವಣಿಗೆಯಿಂದ ಹೊರ ಬರಲು ಇರುವ ಏಕೈಕ ಮಾರ್ಗೋಪಾಯವಾಗಿದೆ ಎಂದೂ ಅವರು ಸಲಹೆ ನೀಡಿದ್ದಾರೆ.

ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಆರ್‌ಬಿಐನ ಮಧ್ಯಪ್ರವೇಶದಿಂದ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿರುವುದೊಂದೇ ಸದ್ಯದ ಒಳ್ಳೆಯ ಬೆಳವಣಿಗೆಯಾಗಿದೆ. ಜಿಡಿಪಿ ದರವು ಶೇ 6.1ರಷ್ಟು ಇರಲಿದೆ ಎಂದು ಆರ್‌ಬಿಐ ಕೂಡ ಈಗಾಗಲೇ ಅಂದಾಜಿಸಿದೆ.

ರೆಪೊ ದರ ಕಡಿತ?: ಆರ್ಥಿಕ ಉತ್ತೇಜನಕ್ಕೆ ಕೇಂದ್ರ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಜಿಡಿಪಿಯಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತಿಲ್ಲ. ಈ ಕಾರಣಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಡಿಸೆಂಬರ್‌ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ರೆಪೊ ದರಗಳನ್ನು ಶೇ 0.25 ಮತ್ತು ಫೆಬ್ರುವರಿಯಲ್ಲಿ ಶೇ 0.15ರಷ್ಟು ಕಡಿಮೆ ಮಾಡಲಿದೆ ಎಂದೂ ಅಂದಾಜಿಸಿದೆ.

ಜೂನ್‌ ತ್ರೈಮಾಸಿಕದಲ್ಲಿ ಆರ್ಥಿಕ ಬೆಳವಣಿಗೆ ದರವು 6 ವರ್ಷಗಳ ಕನಿಷ್ಠ ಮಟ್ಟವಾದ ಶೇ 5ಕ್ಕೆ ಕುಸಿದಿದೆ. ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಇದು ಶೇ 5ಕ್ಕಿಂತ ಕಡಿಮೆ ಇರಲಿದೆ. ಸರಕುಗಳ ಬಳಕೆ ಪ್ರಮಾಣ ಕಡಿಮೆಯಾಗಿರುವುದೇ ವೃದ್ಧಿ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ.

ಚೇತರಿಕೆ ಪರಿಹಾರ
* ವಿತ್ತೀಯ ಕೊರತೆ ಎದುರಿಸಲುಖಾಸಗೀಕರಣಕ್ಕೆ ಆದ್ಯತೆ
* ಆರ್‌ಬಿಐನಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಾಂಡ್‌ಗಳ ಮರು ಖರೀದಿ
* ಜಲನ್‌ ಸಮಿತಿ ಗುರುತಿಸಿರುವಂತೆ ಕೇಂದ್ರೀಯ ಬ್ಯಾಂಕ್‌ ಬಳಿ ಇರುವ ₹ 53 ಸಾವಿರ ಕೋಟಿ ಹೆಚ್ಚುವರಿ ಮೊತ್ತದ ಬಳಕೆ
* ನಗದು ಪೂರೈಕೆ ಹೆಚ್ಚಿಸಲು ಬ್ಯಾಂಕ್‌ಗಳು ಆರ್‌ಬಿಐನಲ್ಲಿ ಠೇವಣಿ ಇರಿಸುವ ಮೊತ್ತದಲ್ಲಿ (ನಗದು ಮೀಸಲು ಅನುಪಾತ) ಇಳಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT