ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಪ್ರಜಾಪ್ರಭುತ್ವದ ರಕ್ಷಣೆಗೆ ಮುಂದಾಗಿ: ಖರ್ಗೆ

ತಾಲ್ಲೂಕು ಉದ್ಘಾಟನಾ ಸಮಾರಂಭದಲ್ಲಿ ಹೇಳಿಕೆ
Last Updated 1 ಮಾರ್ಚ್ 2018, 12:20 IST
ಅಕ್ಷರ ಗಾತ್ರ

ಗುರುಮಠಕಲ್: ‘ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯು ಆತಂಕದಲ್ಲಿದ್ದು, ಅದನ್ನು ರಕ್ಷಿಸಲು ಕಾಂಗ್ರೆಸ್‌ ಬಲಪಡಿಸುವ ಮೂಲಕ ಎಲ್ಲರೂ ದೇಶದ ರಕ್ಷಣೆಗೆ ಮುಂದಾಗಬೇಕು’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಪಟ್ಟಣದ ಗಾಂಧಿ ಮೈದಾನದಲ್ಲಿ ಬುಧವಾರ ನೂತನ ಗುರುಮಠಕಲ್ ತಾಲ್ಲೂಕು ಉದ್ಘಾಟಿಸಿ ಮಾತನಾಡಿದ ಅವರು,‘ಕಾಂಗ್ರೆಸ್ ಪಕ್ಷವು 70 ವರ್ಷಗಳಿಂದ ಏನು ಮಾಡಿದೆ ಎಂದು ಪ್ರಧಾನಿ ಕೇಳುತ್ತಿದ್ದಾರೆ. ಆದರೆ, ಅಭಿವೃದ್ಧಿ ಕುರಿತು ಮಾತನಾಡುವುದು ತುಂಬ ಸುಲಭ, ಕಾಂಗ್ರೆಸ್ ಮಾತ್ರ ಅಧಿಕಾರದಲ್ಲಿರಲಿಲ್ಲ. ಮೊರಾರ್ಜಿ ದೇಸಾಯಿ, ವಾಜಪೇಯಿ ಅವರೂ ಈ ದೇಶದ ಸರ್ಕಾರವನ್ನು ನಡೆಸಿದ್ದಾರೆ ಎಂಬುದನ್ನು ಮೋದಿ ಮರೆತಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಸಂವಿಧಾನ ಇರುವುದರಿಂದಲೇ ಅಂದು ಕ್ಯಾಂಟೀನ್ ನಡೆಸುತ್ತಿದ್ದ ನರೇಂದ್ರ ಮೋದಿ ಈ ದೇಶದ ಪ್ರಧಾನಿಯಾಗಿದ್ದಾರೆ. ಒಬ್ಬ ಸಾಮಾನ್ಯ ಕಾರ್ಮಿಕನ ಮಗನಾದ ನಾನು ಲೋಕಸಭೆಯ ವಿರೋಧ ಪಕ್ಷದ ನಾಯಕನಾಗಿದ್ದೇನೆ ಎನ್ನುವುದು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ರೀತಿಯಾಗಿ ಯುವ ಸಮುದಾಯವನ್ನು ದಾರಿತಪ್ಪಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು ಯುವಕರು ಎಚ್ಚರದಿಂದ ಇರಬೇಕು’ ಎಂದು ಸಲಹೆ ನೀಡಿದರು.
‘ಕಾಂಗ್ರೆಸ್ಸಿಗರು ಈ ದೇಶಕ್ಕಾಗಿ ಏಟುಗಳನ್ನು, ಒದೆಗಳನ್ನು, ಗುಂಡೇಟು ತಿಂದು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಬಿಜೆಪಿಯ ಯಾರಾದರೂ ಈ ದೇಶಕ್ಕಾಗಿ ಏಟು ತಿಂದಿದ್ದಾರೆಯೇ’ ಎಂದು ಪ್ರಶ್ನಿಸಿದರು.
‘11 ಬಾರಿ ನೀವು ಹೇಗೆ ಗೆದ್ದಿರಿ ಎಂದು ಮೋದಿ ನನ್ನನ್ನು ಪ್ರಶ್ನಿಸಿದ್ದಾರೆ. ನನ್ನನ್ನು ಜನರು ಪ್ರೀತಿಸಿ ಆಶೀರ್ವದಿಸಿದ್ದಾರೆ. ನಾನು ಅವರ ವಿಶ್ವಾಸವನ್ನು ಉಳಿಸಿಕೊಳ್ಳಲು ನನ್ನ ಶಕ್ತಿ ಮೀರಿ ದುಡಿದಿದ್ದೇನೆ. ಅದಕ್ಕೆ ಜನ ನನ್ನನ್ನು ಸತತ 8 ಬಾರಿ ಶಾಸಕನನ್ನಾಗಿ, ಈಗ ಲೋಕಸಭೆಯ ವಿರೋಧ ಪಕ್ಷದ ನಾಯಕನನ್ನಾಗಿ ಬೆಳೆಸಿದ್ದಾರೆ. ಅವರನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಮೋದಿಗೆ ಹೇಳಿದ್ದೇನೆ’ ಎಂದರು.

‘ಈ ಭಾಗದ ಬಹುದಿನಗಳ ತಾಲ್ಲೂಕು ಕೇಂದ್ರದ ಕನಸು ಈಗ ನನಸಾಗಿದೆ. ತಾಲ್ಲೂಕು ವ್ಯಾಪ್ತಿಗೆ ಎಷ್ಟು ಗ್ರಾಮಗಳಿವೆ ಎನ್ನುವುದು ಮುಖ್ಯವಲ್ಲ. ಈಗ ನಮ್ಮ ಕೆಲಸಗಳಿಗೆ ಅನುಕೂಲವಾಗಿದ್ದು, ತಮ್ಮ ಕೆಲಸಗಳಿಗೆ 40 ಕಿ.ಮೀ ದೂರದ ಯಾದಗಿರಿಗೆ ಅಲೆದಾಡುವುದು ತಪ್ಪಿದೆ. ಈ ಭಾಗದ ಜನರು ಇದರ ಸದುಪಯೋಗ ಪಡೆಯಬೇಕು’ ಎಂದು ನುಡಿದರು.

ಗುರುಮಠಕಲ್ ಶಾಸಕ ಹಾಗೂ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಮಾತನಾಡಿ, ‘ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದದಿಂದ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ’ ಎಂದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಅವಿನಾಶ ಮೆನನ್, ಜಿ.ಪಂ ಅಧ್ಯಕ್ಷ ಬಸರೆಡ್ಡಿಗೌಡ ಪಾಟೀಲ್ ಅನಪೂರ, ವಿಧಾನಪರಿಷತ್‌ ಮಾಜಿ ಸದಸ್ಯ ಚೆನ್ನಾರೆಡ್ಡಿ ಪಾಟೀಲ ತುನ್ನೂರ್, ತಾ.ಪಂ ಅಧ್ಯಕ್ಷ ಭಾಷು ರಾಠೋಡ್, ಮರಿಗೌಡ ಹುಲಕಲ್, ರವೀಂದ್ರರೆಡ್ಡಿ ಪಾಟೀಲ, ರಾಜಶ್ರೀ ರಘುನಾಥರೆಡ್ಡಿ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT