ಶನಿವಾರ, ಜುಲೈ 24, 2021
26 °C

ಕೋವಿಡ್‌ ಮೇಲೆ ನಿರ್ಧಾರವಾಗಲಿದೆ ಷೇರುಪೇಟೆ ಮುನ್ನೋಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಈ ವಾರದ ಷೇರುಪೇಟೆಯ ವಹಿವಾಟು ಜಾಗತಿಕ ವಿದ್ಯಮಾನ ಮತ್ತು ಕೋವಿಡ್‌ ಮೇಲೆ ನಿರ್ಧಾರವಾಗಲಿದೆ ಎನ್ನುವುದು ತಜ್ಞರ ವಿಶ್ಲೇಷಣೆಯಾಗಿದೆ.

ದೇಶದಲ್ಲಿ ಕೋವಿಡ್‌ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಇದು ಷೇರುಪೇಟೆಗಳಲ್ಲಿ ಹೂಡಿಕೆ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲಿದೆ. ಇನ್ನು ಆರ್ಥಿಕತೆಗೆ ಸಂಬಂಧಿಸಿದಂತೆ ಸಗಟು ದರ ಹಣದುಬ್ಬರದ ಅಂಕಿ–ಅಂಶ ಸೋಮವಾರ ಹೊರಬೀಳಲಿದ್ದು, ಇದು ಸಹ ಸೂಚ್ಯಂಕದ ದಿಕ್ಕನ್ನು ನಿರ್ಧರಿಸಲಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಈ ವಾರವೂ ಚಂಚಲ ವಹಿವಾಟು ಮುಂದುವರಿಯಲಿದೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ. 

‘ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಆರ್ಥಿಕತೆಯು ಚೇತರಿಸಿಕೊಳ್ಳುತ್ತಿದೆಯೇ ಎನ್ನುವುದರ ಬಗ್ಗೆ ಸ್ಪಷ್ಟನೆ ದೊರೆತ ಬಳಿಕ ವಹಿವಾಟು ಏರುಮುಖ ಹಾದಿ ಹಿಡಿಯಬಹುದು’ ಎಂದು ಮೋತಿಲಾಲ್‌ ಓಸ್ವಾಲ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ಸಿದ್ದಾರ್ಥ ಖೇಮ್ಕಾ ಹೇಳಿದ್ದಾರೆ.

ತ್ರೈಮಾಸಿಕ ಫಲಿತಾಂಶ: ಈ ವಾರ ಟಾಟಾ ಮೋಟರ್ಸ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಸಿಟಿ ಯೂನಿಯನ್‌ ಬ್ಯಾಂಕ್‌, ಎಲ್ಐಸಿ ಹೌಸಿಂಗ್‌ ಫೈನಾನ್ಸ್‌ ಮತ್ತು ಆಯಿಲ್‌ ಇಂಡಿಯಾ ಲಿಮಿಟೆಡ್‌ ಕಂಪನಿಗಳು ತಮ್ಮ ತ್ರೈಮಾಸಿಕದ ಆರ್ಥಿಕ ಸಾಧನೆಗಳನ್ನು ಪ್ರಕಟಿಸಲಿವೆ.

‘ಸರ್ಕಾರಿ ಸ್ವಾಮ್ಯದ ಪ್ರಮುಖ ಕಂಪನಿಗಳ ಹಣಕಾಸು ಸಾಧನೆಯ ಬಗ್ಗೆ ನಿರೀಕ್ಷೆ ಇದೆ. ಷೇರುಪೇಟೆಯ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ’ ಎಂದು ಸ್ಯಾಮ್ಕೊ ಸೆಕ್ಯುರಿಟೀಸ್‌ ಆ್ಯಂಡ್‌ ಸ್ಟಾಕ್‌ ನೋಟ್‌ನ  ಜಮೀತ್‌ ಮೋದಿ ಅಭಿಪ್ರಾಯಪಟ್ಟಿದ್ದಾರೆ.

‘ಷೇರುಪೇಟೆಗಳು ಗರಿಷ್ಠ ಮಟ್ಟಕ್ಕೆ ಏರುವ ಮುನ್ನ ಈ ವಾರ ಸ್ಥಿರತೆಗೆ ಬರುವ ಸಾಧ್ಯತೆ ಇದೆ’ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಸಂಶೋಧನಾ ಮುಖ್ಯಸ್ಥ ದೀಪ್‌ ಜಸಾನಿ ಹೇಳಿದ್ದಾರೆ.

ಅಮೆರಿಕದಲ್ಲಿ ಎರಡನೇ ಹಂತದ ಕೋವಿಡ್‌ ಪ್ರಕರಣಗಳು ಆರಂಭವಾಗುವ ಆತಂಕದಿಂದಾಗಿ ಜಾಗತಿಕ ಷೇರುಪೇಟೆಗಳು ಶುಕ್ರವಾರದ ವಹಿವಾಟಿನಲ್ಲಿ ಕುಸಿತ ಕಂಡಿದ್ದವು. ಬೀಜಿಂಗ್‌ನಲ್ಲಿ ಹೊಸ ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿದ್ದು, ಮತ್ತೊಂದು ಹಂತದ ಸೋಂಕು ವ್ಯಾಪಿಸುವ ಆತಂಕ ಕಾಡುತ್ತಿದೆ.

ಪ್ರಭಾವ ಬೀರಲಿರುವ ಅಂಶಗಳು

* ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ

* ಕಂಪನಿಗಳ ತ್ರೈಮಾಸಿಕ ಫಲಿತಾಂಶ

* ಡಾಲರ್‌ ಎದುರು ರೂಪಾಯಿ ಮೌಲ್ಯದ ಏರಿಳಿತ

* ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರದಲ್ಲಿ ಆಗಲಿರುವ ವ್ಯತ್ಯಾಸ

ವಾರದ ವಹಿವಾಟು

1.47%: ಹಿಂದಿನ ವಾರ ಬಿಎಸ್‌ಇ ಇಳಿಕೆ

1.66%: ಹಿಂದಿನ ವಾರ ನಿಫ್ಟಿ ಇಳಿಕೆ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು