ಗುರುವಾರ , ಜೂನ್ 30, 2022
22 °C
ಉಕ್ರೇನ್‌ ಬಿಕ್ಕಟ್ಟು: ಸಣ್ಣ ಹೂಡಿಕೆದಾರರಿಗೆ ಕಿವಿಮಾತು

ಚಿನ್ನ: ಅಲ್ಪಾವಧಿಗೆ ಅಸ್ಥಿರ, ದೀರ್ಘಾವಧಿಗೆ ಸೂಕ್ತ

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಚಿನ್ನದ ಮೇಲೆ ದೀರ್ಘಾವಧಿಗೆ ಹೂಡಿಕೆ ಮಾಡುತ್ತಿರುವವರು ರಷ್ಯಾ–ಉಕ್ರೇನ್‌ ಸಂಘರ್ಷದಿಂದ ಉಂಟಾಗಿರುವ ಪರಿಸ್ಥಿತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಮಟ್ಟದ ರಾಜಕೀಯ ಬಿಕ್ಕಟ್ಟು, ಆರ್ಥಿಕ ಕುಸಿತ, ಯುದ್ಧದಂತಹ ಅನಿಶ್ಚಿತ ಸಂದರ್ಭಗಳಲ್ಲಿ ‘ಸುರಕ್ಷಿತ ಹೂಡಿಕೆ’ ಎಂದು ಪರಿಗಣಿತವಾಗಿರುವ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತದೆ. ಈಗ ಕೂಡ ಚಿನ್ನದ ಮೇಲೆ ಹೂಡಿಕೆಯು ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಫೆಬ್ರುವರಿ 1ರಿಂದ ಮಾರ್ಚ್ 12ರವರೆಗಿನ ಅವಧಿಯಲ್ಲಿ ಚಿನ್ನದ ದರವು 10 ಗ್ರಾಂಗೆ ₹4,480ರಷ್ಟು ಏರಿಕೆ ಕಂಡಿದೆ. ಫೆಬ್ರುವರಿ 1ರಂದು ಬೆಂಗಳೂರಿನಲ್ಲಿ 10 ಗ್ರಾಂ ಚಿನ್ನದ ದರ ₹49,580 ಆಗಿತ್ತು. ಈಗ ಅದು ₹54,060ಕ್ಕೆ ಏರಿದೆ. ಬೆಳ್ಳಿ ದರ ಕೆ.ಜಿಗೆ ₹8 ಸಾವಿರದಷ್ಟು ಹೆಚ್ಚಾಗಿದ್ದು, ₹63,500ರಿಂದ ₹71,500ಕ್ಕೆ ಏರಿಕೆ ಆಗಿದೆ.


ವಿದ್ಯಾಸಾಗರ್

‘ಮದುವೆ ಸಮಾರಂಭ ಹತ್ತಿರದಲ್ಲಿಯೇ ಇದೆ ಎಂದಾದರೆ ತಕ್ಷಣಕ್ಕೆ ಚಿನ್ನ ಖರೀದಿಸುವ ಆಲೋಚನೆ ಮಾಡಬಹುದು. ಇಲ್ಲವಾದರೆ ಕನಿಷ್ಠ ಒಂದು ವಾರ ಕಾದು ನೋಡುವುದು ಸೂಕ್ತ. ಸದ್ಯದ ಸ್ಥಿತಿಯಲ್ಲಿ ಬೆಲೆಯು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಕದನ ವಿರಾಮದ ಕುರಿತು ರಷ್ಯಾ–ಉಕ್ರೇನ್‌ ಮಧ್ಯೆ ಮಾತುಕತೆ ಆರಂಭ ಆಗಿರುವ ಕಾರಣ ಕೆಲವು ದಿನಗಳಿಂದ ಚಿನ್ನದ ದರ ತುಸು ಇಳಿಮುಖವಾಗಿದೆ. ಒಂದೊಮ್ಮೆ ಕದನ ವಿರಾಮ ಘೋಷಣೆ ಆದರೆ ಚಿನ್ನದ ದರವು ಇನ್ನಷ್ಟು ಇಳಿಕೆ ಆಗಲಿದೆ. ಇಲ್ಲವಾದರೆ  ಒಂದು ಗ್ರಾಂಗೆ ಕನಿಷ್ಠ ₹300ರವರೆಗೂ ಏರಿಕೆ ಆಗಬಹುದು. ದೀರ್ಘಾವಧಿ ಹೂಡಿಕೆಗೆ ಚಿನ್ನವು ಸುರಕ್ಷಿತವೇ ಆಗಿದೆ’ ಎಂದು ಬೆಂಗಳೂರು ಚಿನ್ನಾಭರಣ ವರ್ತಕರ ಸಂಘದ ಅಧ್ಯಕ್ಷ ವಿದ್ಯಾಸಾಗರ್ ಮಾಹಿತಿ ನೀಡಿದರು.

‘ಜಾಗತಿಕ ಅಸ್ಥಿರತೆಯ ಸಂದರ್ಭಗಳಲ್ಲಿ ಈಕ್ವಿಟಿಯಲ್ಲಿನ ಹೂಡಿಕೆಯಿಂದ ಒಂದಿಷ್ಟು ನಷ್ಟ ಆಗುವ ಸಾಧ್ಯತೆ ಇರುತ್ತದೆ. ಆದರೆ, ಇಂತಹ ಅಸ್ಥಿರ ಸಂದರ್ಭಗಳಲ್ಲಿ ಚಿನ್ನದ ಮೇಲಿನ ಹೂಡಿಕೆಯಿಂದ ಗಳಿಕೆ ಹೆಚ್ಚಾಗುತ್ತದೆ. ಆದರೆ, ಇಂಥದ್ದೇ ಅವಧಿಯಲ್ಲಿ ಚಿನ್ನ ಖರೀದಿಸಿ ಎಂದು ಹೇಳುವುದು ಕಷ್ಟ. ಹೀಗಾಗಿ ದೀರ್ಘಾವಧಿಯ ಹೂಡಿಕೆಯಲ್ಲಿ ಶೇ 5ರಿಂದ ಶೇ 15ರಷ್ಟು ಚಿನ್ನಕ್ಕೆ ಮೀಸಲಿಡುವುದು ಹೆಚ್ಚು ಸೂಕ್ತ’ ಎಂದು ಪ್ರೈಮ್‌ ಇನ್‌ವೆಸ್ಟರ್ಸ್‌ ಡಾಟ್‌ ಇನ್‌ ಸಂಸ್ಥೆಯ ಸಹಸ್ಥಾಪಕಿ ವಿದ್ಯಾ ಬಾಲಾ ತಿಳಿಸಿದರು.

‘ರಿಟೇಲ್‌ ಬೇಡಿಕೆ ಹೆಚ್ಚುವ ನಿರೀಕ್ಷೆ’


ಪಿ.ಆರ್. ಸೋಮಸುಂದರಂ

‘ಅಲ್ಪಾವಧಿಗೆ, ಹಣದುಬ್ಬರ ಮತ್ತು ಚಿನ್ನದ ದರದಲ್ಲಿ ಆಗುವ ಬದಲಾವಣೆಯು ಚಿನ್ನದ ಬೇಡಿಕೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ದೀರ್ಘಾವಧಿಯಲ್ಲಿ, ಜನರ ಆದಾಯ ಮಟ್ಟವು ಬೇಡಿಕೆಯ ಮೇಲೆ ಪ್ರಭಾವ ಬೀರುತ್ತದೆ. ಹಣದುಬ್ಬರದಲ್ಲಿ ಶೇಕಡ 1ರಷ್ಟು ಹೆಚ್ಚಳ ಆದರೆ ಬೇಡಿಕೆಯು ಶೇ 2.6ರಷ್ಟು ಹೆಚ್ಚಾಗುತ್ತದೆ. ಚಿನ್ನದ ಬೆಲೆ ಶೇ 1ರಷ್ಟು ಇಳಿಕೆ ಕಂಡರೆ ಬೇಡಿಕೆಯು ಶೇ 1.2ರಷ್ಟು ಹೆಚ್ಚಳ ಆಗುತ್ತದೆ’ ಎಂದು ವಿಶ್ವ ಚಿನ್ನ ಸಮಿತಿಯ (ಡಬ್ಲ್ಯುಜಿಸಿ) ಭಾರತದ ಪ್ರಾದೇಶಿಕ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪಿ.ಆರ್. ಸೋಮಸುಂದರಂ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಹಬ್ಬದ ಋತು, ಅಕ್ಷಯ ತೃತೀಯಾ ಇನ್ನಷ್ಟೇ ಬರಲಿವೆ. ಆಗ ಚಿನ್ನದ ರಿಟೇಲ್‌ ಬೇಡಿಕೆಯು ಹೆಚ್ಚಾಗುವ ನಿರೀಕ್ಷೆ ಇದೆ. ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ಹಣದುಬ್ಬರದ ಆತಂಕದಿಂದಾಗಿ ಜನ ಹೆಚ್ಚು ಚಿನ್ನ ಖರೀದಿಸುವ ಸಾಧ್ಯತೆಳು ಹೆಚ್ಚಿವೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು