ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಅವ್ಯವಹಾರಕ್ಕೆ ಅಧಿಕಾರಿಗಳೆ ಹೊಣೆ

ಶಾಸಕ ರಾಜಶೇಖರ ಪಾಟೀಲ ಎಚ್ಚರಿಕೆ
Last Updated 22 ಮಾರ್ಚ್ 2018, 8:20 IST
ಅಕ್ಷರ ಗಾತ್ರ

ಹುಮನಾಬಾದ್: ‘ವಿವಿಧ ವಸತಿ ಯೋಜನೆ ಮತ್ತು ವೈಯಕ್ತಿಕ ಶೌಚಾಲಯ ನಿರ್ಮಾಣ ವಿಷಯದಲ್ಲಿ ಯಾವುದೇ ಅವ್ಯವಹಾರ ನಡೆದಿರುವುದು ಸಾಬೀತಾದರೆ, ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದು ಶಾಸಕ ರಾಜಶೇಖರ ಬಿ.ಪಾಟೀಲ ಎಚ್ಚರಿಕೆ ನೀಡಿದರು.

ಇಲ್ಲಿ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಿವಿಧ ವಸತಿ ಯೋಜನೆಗಳ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ, ಮಾತನಾಡಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವು ಎಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಿದೆ. ರಾಜ್ಯದ ಕುಗ್ರಾಮಗಳ ಸಮೀಕ್ಷೆ ಕೈಗೊಂಡು ಅತ್ಯಂತ ಪಾರದರ್ಶಕವಾಗಿ ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಹುಮನಾಬಾದ್ ತಾಲ್ಲೂಕಿನಲ್ಲಿ 4039 ಬಸವಾ, 8914 ಅಂಬೇಡ್ಕರ ಸೇರಿ ಒಟ್ಟು 12,953 ಮನೆ ಒದಗಿಸಲಾಗಿದೆ’ ಎಂದು ವಿವರಿಸಿದರು.

‘ಮನೆ ನಿರ್ಮಿಸಿಕೊಳ್ಳಲು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ₹1.80 ಲಕ್ಷ ಮತ್ತು ಸಾಮಾನ್ಯ ಗುಂಪಿನವರಿಗೆ ₹1.50 ಲಕ್ಷ ಹಣವನ್ನು ನಿರ್ಮಾಣದ 4ಹಂತಗಳಲ್ಲಿ ನೇರವಾಗಿ ಫಲಾನುಭವಿ ಖಾತೆಗೆ ಹಣ ಹಾಕಲಾಗುವುದು. ಮನೆ ಹಂಚಿಕೆ ಹಾಗೂ ಶೌಚಾಲಯದ ಹಣ ಬಿಡುಗಡೆಗಾಗಿ ಬಡ ಫಲಾನುಭವಿಗಳಿಂದ ಲಂಚ ಪಡೆದರೆ, ಅವರ ಶಾಪ ತಟ್ಟದೇ ಇರುವುದಿಲ್ಲ. ನಾನು ಗ್ರಾಮ ಪಂಚಾಯಿತಿಗಳಿಗೆ ಸೌಲಭ್ಯ ಕಲ್ಪಿಸುವುದು ಬಿಟ್ಟರೆ ಬೇರೆ ವಿಷಯದಲ್ಲಿ ಶಿಪಾರಸು ಮಾಡುವ ಗೋಜಿಗೆ ಹೋಗಿಲ್ಲ’ ಎಂದರು. ತಾಲ್ಲೂಕಿನ ಮಾಣಿಕನಗರ, ಉಡುಮನಳ್ಳಿ, ಕಲ್ಲೂರ ಗ್ರಾಮ ಪಂಚಾಯಿತಿ ಪಿಡಿಒಗಳ ಕಾರ್ಯವನ್ನು ಶಾಸಕರು ಶ್ಲಾಘಿಸಿದರು.

‘ಬೇಡಿಕೆ ಆಧರಿಸಿ, ಶೀಘ್ರದಲ್ಲೇ ಸರ್ಕಾರ ಹುಮನಾಬಾದ್‌ ತಾಲ್ಲೂಕಿಗೆ ಹೊಸದಾಗಿ 7ಸಾವಿರ ಮನೆ ಮಂಜೂರು ಮಾಡಿರುವುದು ತಾಲ್ಲೂಕು ಪಂಚಾಯಿತಿ ಇಒ ಅವರಿಂದ ತಿಳಿದು ಬಂದಿದೆ. ಆ ಮನೆ ಅರ್ಹ ಫಲಾನುಭವಿಗಳಿಗೆ ಶೀಘ್ರ ವಿತರಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ರಾಜ್ಯ ಸರ್ಕಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 10,000 ಗ್ಯಾಸ್ ಸಿಲೆಂಡರ್‌ ಕಿಟ್‌ ಮಂಜೂರು ಮಾಡಿದ್ದು, ಶೀಘ್ರದಲ್ಲೇ ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತೀಬಾಯಿ ಶೇರಿಕಾರ, ಸದಸ್ಯ ಲಕ್ಷ್ಮಣರಾವ ಬುಳ್ಳಾ, ರಾಜೀವಗಾಂಧಿ ವಸತಿ ಯೋಜನೆ ನಿರ್ದೇಶಕ ಮಲ್ಲಿಕಾ ರ್ಜುನ ಮಹೀಂದ್ರಕರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಉಪಾಧ್ಯಕ್ಷೆ ಸುಗಂಧಾ ಅಣ್ಯಪ್ಪ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಪ್ಸರಮಿಯ್ಯ, ರಾಜಪ್ಪ ಇಟಗಿ ಇದ್ದರು.

ನೋಡಲ್‌ ಅಧಿಕಾರಿ ನೀಲೇಶ ಪಾಟೀಲ ಸ್ವಾಗತಿಸಿದರು. ತಾಪಂ ಇಒ ಡಾ.ಗೋವಿಂದ ಮಾತನಾಡಿದರು. ಮಾಣಿಕಪ್ಪ ಬಕ್ಕನ್ ನಿರೂಪಿಸಿದರು.
**
ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾಣಿಕನಗರ, ಕಲ್ಲೂರ ಮತ್ತು ಉಡುಮನಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉತ್ತಮ ಕೆಲಸ ಮಾಡಿದ್ದಾರೆ.
–ರಾಜಶೇಖರ ಬಿ.ಪಾಟೀಲ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT