
ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾಗುತ್ತಿರುವುದೇಕೆ?
ಎಲ್ಲ ಕರೆನ್ಸಿಗಳ ಎದುರು ಅಮೆರಿಕದ ಡಾಲರ್ ಮೌಲ್ಯದಲ್ಲಿ ಏರಿಕೆಯಾಗಿದೆ. ಡಾಲರ್ ಇಂಡೆಕ್ಸ್ ಏರಿಕೆಯಾಗಿರುವುದರಿಂದ 43 ವರ್ಷಗಳಲ್ಲೇ ಪ್ರಪ್ರಥಮ ಬಾರಿಗೆ ವಾರ ಅಥವಾ 15 ದಿನದೊಳಗೆ ಬೆಳ್ಳಿ ಮತ್ತು ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ₹4.20 ಲಕ್ಷಕ್ಕೆ ಹೋಗಿದ್ದಂತ ಬೆಳ್ಳಿ ಬೆಲೆ ₹2.20 ಲಕ್ಷದ ಆಸುಪಾಸಿಗೆ ಇಳಿದಿದೆ. ಅಂದಾಜು ಕೆ.ಜಿಗೆ ₹2 ಲಕ್ಷ ಇಳಿಕೆ ಕಂಡಿದೆ. ಅಂದರೆ ಶೇ 40ರಷ್ಟು ಇಳಿಕೆಯಾಗಿದೆ. ಒಂದೇ ವಾರದಲ್ಲಿ ಭಾರಿ ಪ್ರಮಾಣದ ಇಳಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆಗಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ ₹1.80 ಲಕ್ಷದವರೆಗೆ ಹೋಗಿತ್ತು. ಈಗ ₹1.40 ಲಕ್ಷದ ಆಸುಪಾಸಿನಲ್ಲಿದೆ. 10 ಗ್ರಾಂಗೆ ಅದು ಹತ್ತಿರತ್ತಿರ ₹40 ಸಾವಿರದಷ್ಟು ಇಳಿಕೆ ಕಂಡಿದೆ.
ಯುದ್ಧ ನಡೆಯುತ್ತಿರುವಾಗ ಚಿನ್ನ, ಬೆಳ್ಳಿ ಇಳಿಕೆ ಏಕೆ?
ಯುದ್ಧ ನಡೆಯುವಾಗ ಷೇರುಪೇಟೆ ಬೀಳುತ್ತದೆ. ಆಗ ಸುರಕ್ಷಿತ ಹೂಡಿಕೆಯಾದ ಚಿನ್ನದ ಬೆಲೆ ಏರಿಕೆಯಾಗಬೇಕು. ಯಾವಾಗೆಲ್ಲ ಷೇರುಪೇಟೆ ಬಿದ್ದಿದೆ ಹಾಗೂ ಯುದ್ಧ ನಡೆದಿದೆ. ಆಗೆಲ್ಲ ಚಿನ್ನದ ಬೆಲೆ ಏರಿಕೆಯಾಗಿದೆ. ಆದರೆ, ಈಗ ಉಲ್ಟಾ ಏಕಾಗುತ್ತಿದೆ ಎಂದರೆ ಡಾಲರ್ ಸೂಚ್ಯಂಕ ಏರಿಕೆಯಾಗುತ್ತಿದೆ. ಅಮೆರಿಕದಲ್ಲಿ ಬಡ್ಡಿದರಗಳು ಏರಿಕೆಯಾಗುತ್ತಿದೆ. ಈ ವರ್ಷ ಎರಡು ಅಥವಾ ಮೂರು ಸಲ ಫೆಡರಲ್ ರಿಸರ್ವ್ ಬಡ್ಡಿ ದರ ಕಡಿತ ಮಾಡುವ ನಿರೀಕ್ಷೆ ಇತ್ತು. . ಯುದ್ಧ ಆರಂಭವಾದ ಬಳಿಕ ಅಮೆರಿಕದಲ್ಲೂ ಹಣದುಬ್ಬರ ಹೆಚ್ಚಾಗುತ್ತಿರುವುದರಿಂದ ಬಡ್ಡಿದರಗಳು ಇಳಿಕೆ ಬದಲಿಗೆ ಏರಿಕೆಯಾಗುತ್ತಿವೆ. ಬಡ್ಡಿದರ ಏರಿಕೆಯಾದಾಗ ಜನರು ಅಥವಾ ದೊಡ್ಡ ದೊಡ್ಡ ಹೂಡಿಕೆದಾರರು ಚಿನ್ನ, ಬೆಳ್ಳಿಯನ್ನು ಮಾರಾಟ ಮಾಡಿ ಬಾಂಡ್‌ಗಳಿಗೆ ಹೂಡಿಕೆ ಮಾಡುತ್ತಾರೆ. ಚಿನ್ನ ಮತ್ತು ಬೆಳ್ಳಿ ಹೂಡಿಕೆಯಲ್ಲಿ ಬಡ್ಡಿ ಸಿಗುವುದಿಲ್ಲ. ಬಾಂಡ್ ಅಥವಾ ಬ್ಯಾಂಕ್ ಎಫ್‌ಡಿಯಲ್ಲಿ ಹಣವಿಟ್ಟರೆ ಬಡ್ಡಿ ಬರುತ್ತದೆ. ಅಮೆರಿಕದಲ್ಲಿ ಬಡ್ಡಿದರ ಏರಿಕೆಯಾಗಿರುವುದರಿಂದ ಹೂಡಿಕೆದಾರರು ಚಿನ್ನ, ಬೆಳ್ಳಿಯನ್ನು ಮಾರಿ ಬಾಂಡ್‌ಗಳಿಗೆ ಹೂಡಿಕೆ ಮಾಡುತ್ತಿದ್ದಾರೆ.
ಯುದ್ಧದ ಪರಿಣಾಮ ಎಷ್ಟರಮಟ್ಟಿಗೆ ಇದೆ?
ಈ ಹಿಂದೆಲ್ಲ ಚಿನ್ನವನ್ನು ಖರೀದಿ ಮಾಡುತ್ತಿದ್ದ ಸರ್ಕಾರಗಳು ಮತ್ತು ಕೇಂದ್ರೀಯ ಬ್ಯಾಂಕ್‌ಗಳು ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗ ಚಿನ್ನ, ಬೆಳ್ಳಿಯನ್ನು ಮಾರಾಟ ಮಾಡುತ್ತಿದ್ದಾರೆ. ಈಗ ದೇಶ ಕಾಪಾಡಿಕೊಳ್ಳಬೇಕು. ಬೀಳುತ್ತಿರುವ ಆರ್ಥಿಕತೆ ಸುಧಾರಿಸಬೇಕು. ದೇಶದ ರಕ್ಷಣಾ ವೆಚ್ಚ, ಆರ್ಥಿಕ ಹಿಂಜರಿತ ಸರಿದೂಗಿಸುವ ಸವಾಲು ಇರುವುದರಿಂದ ಚಿನ್ನವನ್ನು ಮಾರಾಟ ಮಾಡುತ್ತಿದ್ದಾರೆ. ಕಷ್ಟಕಾಲದಲ್ಲಿ ಹೇಗೆ ಜನರು ಚಿನ್ನವನ್ನು ಮಾರಾಟ ಮಾಡುತ್ತಾರೋ ಅದೇ ರೀತಿ ದೇಶಗಳು ಸಹ ಯುದ್ಧದಂತಹ ಸಂಕಷ್ಟದ ಸಮಯದಲ್ಲಿ ಚಿನ್ನವನ್ನು ಮಾರಾಟ ಮಾಡಿ ಆರ್ಥಿಕತೆಯ ಒತ್ತಡ ತಗ್ಗಿಸಲು ಪ್ರಯತ್ನಿಸುತ್ತವೆ. ಹೀಗಾಗಿ, ಚಿನ್ನದ ಬೆಲೆ ಕುಸಿಯುತ್ತಿದೆ.
ಇರಾನ್, ಇಸ್ರೇಲ್ ಮತ್ತು ಅಮೆರಿಕ ನೇರವಾಗಿ ಯುದ್ಧದಲ್ಲಿ ಭಾಗವಹಿಸಿರುವುದರಿಂದ ಅವರು ಚಿನ್ನವನ್ನು ಮಾರುತ್ತಿದ್ದಾರೆ. ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚುತ್ತಿರುವುದರಿಂದ ಕಚ್ಚಾ ತೈಲ, ಎಲ್‌ಪಿಜಿ ಗಗನಕ್ಕೇರುವ ತಾತ್ಕಾಲಿಕ ಸಮಸ್ಯೆ ಸೃಷ್ಟಿಸಿದೆ. ಟ್ರಂಪ್ ಏನೇ ಹೇಳಿದರೂ ಇಸ್ರೇಲ್ ದಾಳಿ ಮುಂದುವರಿಸಿದೆ. ಯುದ್ಧ ಮುಂದುವರಿದಂತೆ ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ
ಚಿನ್ನ, ಬೆಳ್ಳಿ ಮೇಲೆ ಹೂಡಿಕೆಗೆ ಸೂಕ್ತ ಸಮಯವೇ?
ಹೌದು, ಚಿನ್ನ, ಬೆಳ್ಳಿ ಬೆಲೆಯೂ ಇನ್ನೂ ಶೇ 5 ರಿಂದ ಶೇ10ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಅದಕ್ಕಿಂತ ಕುಸಿತ ಆಗುವ ಸಾಧ್ಯತೆ ಇಲ್ಲ. ಆದರೂ ಚಿನ್ನ ಖರೀದಿಗೆ ಇದು ಗೋಲ್ಡನ್ ಸಮಯವಾಗಿದೆ. ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತೇನೆ ಎಂಬುದು ಸಾಧ್ಯವಿಲ್ಲ. ಹೂಡಿಕೆಯನ್ನು 4 ಭಾಗಗಳಾಗಿ ವಿಂಗಡಣೆ ಮಾಡಿಕೊಳ್ಳಿ. ಈ ಬೆಲೆಯಲ್ಲಿ ಖಂಡಿತವಾಗಿ ಖರೀದಿ ಮಾಡಬಹುದು. ಈಗಿರುವ ಬೆಲೆ ಇಳಿಕೆಯಾಗದೆ ಮತ್ತೆ ಬೆಲೆ ಹೆಚ್ಚಾದರೆ ನಿಮ್ಮ ಹೂಡಿಕೆಗೆ ಲಾಭ ಸಿಗಲಿದೆ. ಮದುವೆ ಋತು, ಅಕ್ಷಯ ತೃತೀಯ ಕಾರಣದಿಂದ ಚಿನ್ನದ ಬೆಲೆ ಏರಿಕೆಯಾಗುತ್ತದೆ ಎಂಬುದು ಸುಳ್ಳು .
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.