ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2023ರಲ್ಲಿ ಚಿನ್ನದ ಬೆಲೆ ₹ 60 ಸಾವಿರಕ್ಕೆ?

ಹಣದುಬ್ಬರ, ಜಾಗತಿಕ ರಾಜಕೀಯ ಬಿಕ್ಕಟ್ಟು: ತಜ್ಞರ ನಿರೀಕ್ಷೆ
Last Updated 30 ಡಿಸೆಂಬರ್ 2022, 14:07 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದಾಗಿ 2023ರಲ್ಲಿ ಹೂಡಿಕೆದಾರರು ಹಣವನ್ನು ಹೆಚ್ಚು ಸುರಕ್ಷಿತವಾದ ಕಡೆಗಳಲ್ಲಿ ತೊಡಗಿಸಲು ಮುಂದಾಗಲಿದ್ದಾರೆ. ಇದರಿಂದಾಗಿ ಚಿನ್ನದ ಧಾರಣೆ 2023ರಲ್ಲಿ 10 ಗ್ರಾಂಗೆ ₹ 60 ಸಾವಿರವನ್ನು ತಲುಪುವ ಸಾಧ್ಯತೆ ಇದೆ.

ಚಿನ್ನದ ಮಾರುಕಟ್ಟೆಯ ಪಾಲಿಗೆ 2022ನೇ ಇಸವಿಯು ನಿರೀಕ್ಷೆಗಿಂತಲೂ ಹೆಚ್ಚು ಅಸ್ಥಿರವಾಗಿತ್ತು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರ್ಚ್‌ನಲ್ಲಿ ಒಂದು ಔನ್ಸ್‌ಗೆ (28.34 ಗ್ರಾಂ) 2,070 ಡಾಲರ್‌ಗೆ ತಲುಪಿದ್ದ ಚಿನ್ನದ ದರವು ನವೆಂಬರ್ ವೇಳೆಗೆ ಒಂದು ಔನ್ಸ್‌ಗೆ 1,616 ಡಾಲರ್‌ಗೆ ಇಳಿಕೆ ಕಂಡಿತು. ಆ ಬಳಿಕ ಚಿನ್ನದ ಬೆಲೆ ಚೇತರಿಕೆ ಹಾದಿಯಲ್ಲಿಯೇ ಸಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

2022ರ ಆರಂಭದಲ್ಲಿ ಚಿನ್ನದ ದರ ಒಂದು ಔನ್ಸ್‌ಗೆ 1,800 ಡಾಲರ್‌ ಇತ್ತು. ಸದ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್‌ಗೆ 1,803 ಡಾಲರ್‌ನಷ್ಟು ಇದೆ. ಅಮೆರಿಕದ ಡಾಲರ್‌ ಎದುರು ರೂಪಾಯಿ ಮೌಲ್ಯ ₹ 83ರ ಮಟ್ಟದಲ್ಲಿ ಇದ್ದಂತಹ ಸಂದರ್ಭದಲ್ಲಿ ಕಮಾಡಿಟಿ ಸ್ಟಾಕ್‌ ಎಕ್ಸ್‌ಚೇಂಜ್‌ ಎಂಸಿಎಕ್ಸ್‌ನಲ್ಲಿ ಚಿನ್ನದ ದರ 10 ಗ್ರಾಂಗೆ ₹ 54,790 ಆಗಿತ್ತು.

2023ರಲ್ಲಿ ಚಿನ್ನದ ದರವು ಎಂಸಿಎಕ್ಸ್‌ನಲ್ಲಿ 10 ಗ್ರಾಂಗೆ ₹ 48,500 ರಿಂದ ₹ 60 ಸಾವಿರದ ಮಟ್ಟದಲ್ಲಿ ವಹಿವಾಟು ನಡೆಸಬಹುದು ಎಂದು ಕೋಟಕ್‌ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ರವೀಂದ್ರ ವಿ. ರಾವ್ ಹೇಳಿದ್ದಾರೆ.

ಅಮೆರಿಕದ ಕೇಂದ್ರೀಯ ಬ್ಯಾಂಕ್‌ ಬಡ್ಡಿದರ ಹೆಚ್ಚಿಸುವುದನ್ನು ಮುಂದುವರಿಸಲಿದೆ. ಹೀಗಾಗಿ 2023ರ ಮೊದಲ ತ್ರೈಮಾಸಿಕದಲ್ಲಿ ಚಿನ್ನದ ಬೆಲೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದೂ ಅವರು ತಿಳಿಸಿದ್ದಾರೆ.

ಹಣದುಬ್ಬರ, ಹಣಕಾಸು ಮಾರುಕಟ್ಟೆಯಲ್ಲಿ ಇರುವ ಅಪಾಯಗಳಿಂದಾಗಿ ಚಿನ್ನದ ಗಟ್ಟಿ ಮತ್ತು ನಾಣ್ಯಗಳಿಗೆ ಹೆಚ್ಚು ಬೇಡಿಕೆ ಇರಲಿದೆ. ಚಿನ್ನದ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಮತ್ತೆ ಚೇತರಿಕೆ ಕಂಡುಕೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

ರೂಪಾಯಿ ಮೌಲ್ಯ ಇಳಿಕೆಯು ದೇಶಿ ಮಾರುಕಟ್ಟೆಯಲ್ಲಿ ಚಿನ್ನದ ದರವನ್ನು 10 ಗ್ರಾಂಗೆ ದಾಖಲೆಯ ₹ 56,370ಕ್ಕಿಂತ ಹೆಚ್ಚಿನ ಮಟ್ಟ ತಲುಪುವಂತೆ ಮಾಡಬಹುದು ಎಂದು ಕಾಮ್‌ಟ್ರೆಂಡ್ಸ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಸರ್ವೀಸಸ್‌ನ ಸಿಇಒ ಜ್ಞಾನಶೇಖರ ತಿಗರಾಜನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT