ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಸ್ತಕಾಭಿಷೇಕ ನೆಪದಲ್ಲಿ ಜೇನು, ಹಾಲು ವ್ಯರ್ಥ ಸಲ್ಲ’

Last Updated 24 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಶ್ರವಣಬೆಳಗೊಳದಲ್ಲಿ ಬಾಹುಬಲಿಯ ಮಹಾಮಸ್ತಕಾಭಿಷೇಕದ ನೆಪದಲ್ಲಿ ಜೇನು ತುಪ್ಪ, ಹಾಲು, ಕಬ್ಬಿನ ಹಾಲು ಹಾಗೂ ನೀರನ್ನು ವ್ಯರ್ಥ ಮಾಡಿದ್ದನ್ನು ಖಂಡಿಸುವೆ’ ಎಂದು ಲೇಖಕಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.

ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಸಾಧಕರೊಡನೆ ಸಂವಾದ’ದಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಸಾಕಷ್ಟು ಮಕ್ಕಳು ಹಾಗೂ ಮಹಿಳೆಯರು ಪೌಷ್ಟಿಕ ಆಹಾರವಿಲ್ಲದೆ ನರಳುತ್ತಿದ್ದಾರೆ. ಅಂಥವರಿಗೆ ನೀಡಬೇಕಾದ ಆಹಾರ ಪದಾರ್ಥಗಳನ್ನು, ಸರ್ವಸ್ವವನ್ನು ತ್ಯಾಗ ಮಾಡಿದ್ದ ಬಾಹುಬಲಿಯ ಕಲ್ಲಿನಮೂರ್ತಿ ಮೇಲೆ ಟನ್‌ಗಟ್ಟಲೆ ಸುರಿಯಲಾಗಿದೆ. ದೇವರ ಹಾಗೂ ಧರ್ಮದ ಹೆಸರಿನಲ್ಲಿ ಈ ರೀತಿ ವ್ಯರ್ಥ ಮಾಡದೆ ಅಗತ್ಯವುಳ್ಳವರಿಗೆ ಅವುಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

‘ನಮ್ಮದು ಅಲೆಮಾರಿ ತಾಂಡಾ. ನಮ್ಮನ್ನು ವನಸಂಚಾರಿಗಳು ಎಂದೂ ಕರೆಯುತ್ತಾರೆ. ಜಗಮಗಿಸುವ ಬಟ್ಟೆಗಳನ್ನು ಧರಿಸುತ್ತಿದ್ದೆವು. ಜನಾಂಗದ ಮಹಿಳೆಯರು ಕಾಡಿನಲ್ಲಿ ಹೆಚ್ಚಾಗಿ ಸುತ್ತಾಡುತ್ತಾರೆ. ಹೀಗಾಗಿ, ಮೃಗಗಳು ಹಾಗೂ ಮೃಗೀಯ ಮನುಷ್ಯರಿಂದ ರಕ್ಷಿಸಿಕೊಳ್ಳಲು ಆಯುಧಗಳನ್ನೇ ಒಡವೆಗಳನ್ನಾಗಿ ಮಾಡಿ ಹಾಕಿಕೊಳ್ಳುತ್ತಿದ್ದರು’ ಎಂದು ಹೇಳಿದರು.

‘ನಮ್ಮ ಜನಾಂಗ ಧರಿಸುತ್ತಿದ್ದ ಬಟ್ಟೆ ಹಾಗೂ ಒಡವೆಗಳನ್ನು ಹಾಕಿಕೊಳ್ಳಬೇಕು ಎಂಬ ಆಸೆಯಿತ್ತು. ಆಗ ನನ್ನ ತಂದೆ ‘ನೀನು ಓದಿ, ವಿದ್ಯಾವಂತಳಾಗು. ಈ ರೀತಿಯ ಬಟ್ಟೆ ತೊಡಬೇಡ’ ಎಂದಿದ್ದರು. ಆದರೂ ಹಠ ಮಾಡಿ ಹಾಕಿಕೊಂಡಿದ್ದೆ. ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆಯಾದ ಬಳಿಕವೂ ಅದೇ ಮಾದರಿಯ ಬಟ್ಟೆ ಧರಿಸಿ ವಿಧಾನಸೌಧಕ್ಕೆ ಬಂದಿದ್ದೆ’ ಎಂದು ಹೇಳಿದರು.

‘ಹೆಣ್ಣನ್ನು ಅತ್ಯಂತ ನಿಕೃಷ್ಟವಾಗಿ ನೋಡುವ ಪದ್ಧತಿ ನಮ್ಮಲ್ಲಿದೆ. ಗಂಡುಮಗು ಜನಿಸಿದರೆ ಕಂಚಿನ ತಟ್ಟೆಯನ್ನು ಬಾರಿಸಲಾಗುತ್ತದೆ. ಹೆಣ್ಣು ಮಗು ಹುಟ್ಟಿದರೆ ಮಣ್ಣಿನ ತಟ್ಟೆಯನ್ನು ಬಾರಿಸಲಾಗುತ್ತದೆ. ಅಂಥ ಪದ್ಧತಿ ವಿರೋಧಿಸಬೇಕು’ ಎಂದು ಹೇಳಿದರು.

***

ಸಾಹಿತ್ಯ ಹಾಗೂ ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುತ್ತಿದ್ದರು. ಈಗ ಸೂಟ್‌ಕೇಸ್‌ ತಂದವರಿಗೆ ಸದಸ್ಯತ್ವ ನೀಡುತ್ತಾರೆ
–ಬಿ.ಟಿ.ಲಲಿತಾ ನಾಯಕ್, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT