ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೇಷ್ಮೆ ಗೂಡಿನೊಳು ಬಂದಿಯಾದ ಬದುಕು

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಾಮನಗರದ ನಫೀಸಾ ಬೇಗಂ, ಮಗಳ ಮದುವೆಗೆಂದು ತಂದಿರುವ ರೇಷ್ಮೆ ಸೀರೆಯನ್ನು ಮುಟ್ಟಿ, ಮುಟ್ಟಿ ನೋಡುತ್ತಾರೆ. ಮಗಳು ‘ಎಷ್ಟು ಮೆತ್ತಗಿದೆ ನೋಡು’ ಎನ್ನುತ್ತಿರುವುದು ಅವರ ಬೆರಳುಗಳ ಅನುಭವಕ್ಕೆ ಬರುತ್ತಿಲ್ಲ. ಹಾಗೆಂದು ನಫೀಸಾ ಎಂದೂ ರೇಷ್ಮೆಯನ್ನು ಕಂಡವರಲ್ಲ ಎಂದುಕೊಳ್ಳಬೇಡಿ. ಅವರ ಬೆರಳುಗಳು ರೇಷ್ಮೆ  ಎಳೆಗಳೊಂದಿಗೆ ಒಡನಾಡುತ್ತ ಸರಿಸುಮಾರು ಮೂವತ್ತು ವರ್ಷಗಳ ಮೇಲಾಗಿದೆ. ಮತ್ತೇಕೆ ಹೀಗೆ ಎಂದು ಪ್ರಶ್ನಿಸುವ ಮೊದಲು ನಫೀಸಾರ ಅಂಗೈಯನ್ನು, ಬೆರಳುಗಳನ್ನು ನೋಡಿ. ಪ್ರತೀದಿನ ಎಳೆ ತೆಗೆಯುವ ಆ ಬೆರಳುಗಳು, ಆ ಅಂಗೈ ಕೆಂಪಗಾಗಿ ಮೇಲಿನ ಚರ್ಮವೆಲ್ಲ ಕಿತ್ತುಹೋಗಿ ಎಷ್ಟು ದೊರಗಾಗಿದೆ ಎಂದರೆ ಅವೇ ಎಳೆಗಳಿಂದ ನೇಯ್ದ ಸೀರೆಯ ನವಿರುತನ, ಮೃದುತ್ವ ಈಗ ಬೆರಳುಗಳ ಸ್ಪರ್ಶಕ್ಕೆ ನಿಲುಕದಂತೆ ಆಗಿದೆ. ಇದು ನಫೀಸಾ ಕಥೆ ಮಾತ್ರವಲ್ಲ, ಫಿಲೇಚರ್ ಅಥವಾ ರೀಲಿಂಗ್ ಘಟಕಗಳಲ್ಲಿ ರೇಷ್ಮೆ  ಎಳೆ ತೆಗೆಯುವ ಎಲ್ಲ ಕೆಲಸಗಾರರದು ಕೂಡ.

ಚಿಟ್ಟೆಯಾಗಲೆಂದು ಕಟ್ಟಿಕೊಂಡ ಗೂಡಿನ ಒಳಗೇ ಹುಳವನ್ನು ಸಾಯಿಸಿ ತೆಗೆದ ಎಳೆಯಿಂದ ನೇಯ್ದ ಬಟ್ಟೆಯು ಶತಮಾನಗಳಿಂದ ಮದುವೆ, ಪೂಜೆ... ಇತ್ಯಾದಿ ಶುಭಸಂದರ್ಭಗಳಲ್ಲಿ ಧರಿಸುವ ವಿಶೇಷ ವಸ್ತ್ರವಾಗಿ ಮತ್ತು ದೇವರಿಗೂ ಏರಿಸುವ ಪವಿತ್ರ ವಸ್ತ್ರವಾಗಿರುವುದೇ ಒಂದು ಕ್ರೂರ ವ್ಯಂಗ್ಯ. ಸಾವಿರ ರೂಪಾಯಿಯಿಂದ ಹಿಡಿದು ಲಕ್ಷಗಟ್ಟಲೆ ಬೆಲೆಬಾಳುವ, ವರ್ಣ ವೈವಿಧ್ಯದಿಂದ ಹೊಳೆಯುವ ನವಿರು ರೇಷ್ಮೆ ಬಟ್ಟೆಯ ಹಿಂದೆ ಹುಳಗಳನ್ನು ಸಾಯಿಸುವ ಕ್ರೌರ್ಯ ಮಾತ್ರವಲ್ಲ, ಎಳೆ ತೆಗೆಯುವ ಕೈಗಳ ಸಂಕಟವೂ ಅಡಗಿದೆ. ಮೃದು ರೇಷ್ಮೆ ಎಳೆಗಳಿಗೆ ವ್ರಣಭರಿತ ಕೈಗಳ ಒಡಲ ದಳ್ಳುರಿಯೂ ಅಂಟಿದೆ. ಜಾಣ ಕುರುಡು ಮೆರೆಯುವ ನಮಗೆ ಕಂಡೀತು ಹೇಗೆ!

ಗೂಡಿನಿಂದ ಎಳೆಎಳೆಯಾಗಿ... : ‘ರೇಷ್ಮೆ ಗೂಡುಗಳನ್ನು ಸ್ಟೈಫ್ಲಿಂಗ್ ಮಾಡುತ್ತಾರೆ. ಹುಳ ಒಳಗೆ ಸತ್ತ ನಂತರ ನೀರಿನಲ್ಲಿ ಕುದಿಸುತ್ತಾರೆ. ಹೀಗೆ ಕುದಿಸುವಾಗ ಮೇಲಿನ ಫ್ಲಾಸ್ ತೆಗೆದು ಬ್ರಶಿಂಗ್ ಮಾಡಿದರೆ ಸಿಂಗಲ್ ಫಿಲಮೆಂಟ್ ಎಳೆ ಬರುತ್ತದೆ. ಆಮೇಲೆ ರೀಲಿಂಗ್ ಬೇಸಿನ್‍ನಲ್ಲಿ ಹಾಕಿ ಎಳೆ ತೆಗೆಯುತ್ತಾರೆ. ಈ ಚಿಕ್ಕ ಗಾತ್ರದ ರೀಲ್‍ಗಳನ್ನು ಒಂದು ಸ್ಟ್ಯಾಂಡರ್ಡ್ ಸೈಜ್‍ನ ರೀಲ್‍ಗಳಲ್ಲಿ ಸುತ್ತುವಾಗ ಅದನ್ನು ಬಿಸಿಉಗಿ ಹಾಯಿಸಿ ಅಥವಾ ಕೆಂಡವನ್ನು ಬಳಸಿಕೊಂಡು ಒಣಗಿಸಿ ಎಳೆಗಳು ಒಂದಕ್ಕೊಂದು ಅಂಟಿಕೊಳ್ಳದಂತೆ ಬೇರ್ಪಡಿಸುತ್ತಾರೆ. ಇವಿಷ್ಟು ಒಂದು ಘಟಕದ ಒಳಗೆ ಆಗುವ ಕೆಲಸಗಳು. ಆನಂತರ ಎರಡು ಹಂತಗಳ
ಟ್ವಿಸ್ಟಿಂಗ್‍ಅನ್ನು ಇನ್ನೊಂದು ಕಡೆ ಮಾಡುತ್ತಾರೆ. ಈ ಹಲವು ಪ್ರಕ್ರಿಯೆಗಳು ಸೇರಿ ನೂಲು ಬಿಚ್ಚಾಣಿಕೆ ಅಥವಾ ಫಿಲೇಚರ್ ಉದ್ಯಮ’ ಎಂದು ವಿವರಿಸುತ್ತಾರೆ ಕೇಂದ್ರೀಯ ರೇಷ್ಮೆ ಮಂಡಳಿಯ ರಾಮನಗರದಲ್ಲಿರುವ ರೇಷ್ಮೆ ಗೂಡು ಪರೀಕ್ಷಾ ಕೇಂದ್ರದ ತಾಂತ್ರಿಕ ಸಹಾಯಕ ದೇವಣ್ಣ ಕರ್ಲಿ.

ಗೂಡು ಕುದಿಸುವವರ ಕೈಗಳು 90-95 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಗೆ ಒಡ್ಡಿಕೊಂಡಿದ್ದರೆ ಬೇಸಿನ್‍ನಲ್ಲಿ ಕೆಲಸ ಮಾಡುವವರ ಕೈಗಳು ಗಲೀಜು ಬಿಸಿ ನೀರಿನಲ್ಲಿ ನಿರಂತರವಾಗಿ ಮುಳುಗಿರುತ್ತವೆ. ಬೇಸಿನ್ ಮುಂದೆ ಚಿಕ್ಕ ಸ್ಟೂಲಿನಲ್ಲಿ ಕೂತವರು ಅದಕ್ಕೆ ಎಳೆಯನ್ನು ಬಲಗೈಯಿಂದ ಕೊಡುತ್ತ ಇರಬೇಕಾಗುತ್ತದೆ. ಕೈ ಮತ್ತು ಕಾಲುಗಳಲ್ಲಿ ವ್ರಣ ಅಥವಾ ಚರ್ಮರೋಗ; ಬೆನ್ನಿಗೆ ಯಾವುದೇ ಆಧಾರವಿಲ್ಲದೆ ಏಳೆಂಟು ಗಂಟೆ ಕೂರುವುದರಿಂದ ಬೆನ್ನುನೋವು; ವಾಸನೆ ಮತ್ತು ಹಬೆಗೆ ನಿರಂತರ ಒಡ್ಡಿಕೊಳ್ಳುವುದರಿಂದ ಶ್ವಾಸಕೋಶದ ಅನಾರೋಗ್ಯ... ಇವು ಸಾಮಾನ್ಯವಾಗಿ ಕಂಡುಬರುವ ಆರೋಗ್ಯದ ಸಮಸ್ಯೆಗಳು.

ಅಯಾಜ್ ಹುಸೇನ್ ಅವರಿಗೆ ಬಾಲ್ಯದಲ್ಲಿ ಆಡಿದ ನೆನಪುಗಳಿಗಿಂತ ಫಿಲೇಚರ್ ಘಟಕದಲ್ಲಿ ಕೆಲಸ ಮಾಡಿದ ನೆನಪುಗಳೇ ತುಂಬಿವೆ. ಮನೆಯಲ್ಲಿಯೇ ಇದ್ದ ಚರಕದಲ್ಲಿ ಇಡೀ ದಿನ ದುಡಿಮೆಗೆ ತೊಡಗಿಸಿಕೊಂಡಾಗ ಅಯಾಜ್‍ರಿಗೆ ಬರೀ ಹನ್ನೆರಡು ವರ್ಷ. ನಂತರ ಅಣ್ಣತಮ್ಣಂದಿರ ಮದುವೆ, ತಮ್ಮ ಮದುವೆ... ಇತ್ಯಾದಿ ಖರ್ಚುವೆಚ್ಚ ಹೆಚ್ಚಾಗಿ, ಚರಕವನ್ನು ನಿಭಾಯಿಸಲು ಆಗದೇ, ಬೇರೆಯವರ ಫಿಲೇಚರ್‌ನಲ್ಲಿ ಕೆಲಸ ಮಾಡಲು ಶುರು ಮಾಡಿ ಮತ್ತೆ ಎರಡೂವರೆ ದಶಕಗಳೇ ಕಳೆದಿವೆ. ದಿನಕ್ಕೆ 8 ಗಂಟೆಯಂತೆ ಲೆಕ್ಕ ಹಾಕಿ. ಕಡಿಮೆಯೆಂದರೂ 7,500 ದಿನ ಅಥವಾ 60 ಸಾವಿರ ಗಂಟೆಗಳ ಕಾಲ ಅವರ ಕೈಗಳು ಹುಳ, ಗೂಡು, ಎಳೆಗಳಿಂದ ಗಲೀಜಾದ ಬಿಸಿನೀರಿನಲ್ಲಿ ಇವೆ. ಅಂದರೆ ಕೈಗಳ ಬೊಕ್ಕೆಯ ಪ್ರಮಾಣ ಮತ್ತು ತೀವ್ರತೆ ಎಷ್ಟಿದ್ದೀತು! ‘ಏನು ಮಾಡೋದು, ರಾತ್ರಿ ಉರಿಯುತ್ತೆ, ದಿನಾ ಔಷಧಿ ಹಾಕಿಕೊಂಡು ಮಲಗೋದು, ಮತ್ತೆ ಬೆಳಗ್ಗೆ ಎದ್ದು ಬರೋದು. ಇದನ್ನು ಬಿಟ್ಟರೆ ಹೊಟ್ಟೆಪಾಡಿಗೆ ಬೇರೆ ಯಾವ ಕೆಲಸವೂ ಗೊತ್ತಿಲ್ಲ’ ಎನ್ನುತ್ತಾರೆ ಅಯಾಜ್.

ಉದ್ಯೋಗದ ಕಾರಣಕ್ಕಾಗಿ ಉಂಟಾಗುವ ಅನಾರೋಗ್ಯ, ಕೆಲಸದ ಅಭದ್ರತೆ, ವಿಮೆಯ ಸೌಲಭ್ಯದ ಅಲಭ್ಯತೆ...
ಅಸಂಘಟಿತ ವಲಯದ ಈ ಲಕ್ಷಣಗಳ ಜತೆ ಬಾಲಕಾರ್ಮಿಕ ಪದ್ಧತಿಯ ಎಲ್ಲ ಸಮಸ್ಯೆಗಳು ಫಿಲೇಚರ್ ಉದ್ಯಮದಲ್ಲಿಯೂ ಹಾಸುಹೊಕ್ಕಾಗಿವೆ. ಹಿಂದೆ ಎರಡು ಬಾರಿ ಫಿಲೇಚರ್ ಘಟಕಗಳು ಹೆಚ್ಚು ಇರುವ ಟಿಪ್ಪುನಗರ ಇನ್ನಿತರ ಪ್ರದೇಶದಲ್ಲಿ ಓಡಾಡಿದಾಗ ಹನ್ನೆರಡು-ಹದಿಮೂರು ವರ್ಷದ ಮಕ್ಕಳು ಗೂಡು ಬೇಯಿಸುವ ಕೆಲಸದಲ್ಲಿ ತೊಡಗಿದ್ದನ್ನು ಗಮನಿಸಿದ್ದೆ. ಆದರೆ ಈ ಬಾರಿ ಓಡಾಡಿದಾಗ ಎಲ್ಲಿಯೂ ಮಕ್ಕಳು ಕೆಲಸದಲ್ಲಿ ತೊಡಗಿದ್ದು ಕಂಡುಬರಲಿಲ್ಲ. ‘ಮಕ್ಕಳು ನಮ್ಮಂತೆ ಇಲ್ಲಿ ಕೆಲಸ ಮಾಡುವುದು ಬೇಡ’ ಎಂದು ಅಪ್ಪ, ಅಮ್ಮಂದಿರು ಮಕ್ಕಳನ್ನು ಶಾಲೆಗೆ ಕಳಿಸುವುದರಿಂದ ತುಸು ಮಟ್ಟಿಗೆ ಬಾಲಕಾರ್ಮಿಕ ಪದ್ಧತಿ ಕಡಿಮೆಯಾಗಿದೆ, ಆದರೂ ಸಂಪೂರ್ಣವಾಗಿ ನಿಂತಿದೆ ಎನ್ನಲಾಗದು.

ಆರೋಗ್ಯಕರ ಕೆಲಸದ ಪರಿಸರ ಎನ್ನುವುದಕ್ಕೆ ಫಿಲೇಚರ್ ಘಟಕಗಳಲ್ಲಿ ಯಾವುದೇ ಅರ್ಥವಿಲ್ಲ. ಹುಳು ಸತ್ತ ವಾಸನೆ, ಕಿವಿಗಡಚಿಕ್ಕುವ ಯಂತ್ರದ ಸದ್ದು, ಬಿಸಿನೀರು, ನೆಲದ ಮೇಲೆ ಗಲೀಜು ನೀರು... ಕ್ರಮೇಣ ಎಲ್ಲದಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ. ಕೈಗೆ ಗವಸು... ಕೇಳಲೇಬೇಡಿ! ಬೇಸಿನ್‍ನಲ್ಲಿ ಸತತವಾಗಿ ಕೈ ಅದ್ದಿಟ್ಟು, ರೇಷ್ಮೆ ಎಳೆಯನ್ನು ಕೊಡಲು ಅಥವಾ ರೇಷ್ಮೆ ಎಳೆಯಾಗುವ ಹಂತಕ್ಕೆ ಬಂದಿದೆಯೇ ಎಂದು ಪರೀಕ್ಷಿಸಲು ಸಾಧ್ಯಗೊಳಿಸುವಂತಹ ಕೈಗವಸುಗಳನ್ನು ಇನ್ನೂ ಯಾರೂ ಆವಿಷ್ಕಾರ ಮಾಡಿಲ್ಲ.

ರಾಮನಗರದ ರೇಷ್ಮೆ ನಂಟು: ರಾಮನಗರದ ರೇಷ್ಮೆ ಗೂಡು ಮಾರಾಟ ಕೇಂದ್ರ ಏಷ್ಯಾದಲ್ಲಿಯೇ ದೊಡ್ಡದು. ನಮ್ಮ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಮಾತ್ರವಲ್ಲದೇ ಮಹಾರಾಷ್ಟ್ರ, ಕೇರಳ, ತಮಿಳುನಾಡಿನಿಂದಲೂ ಇಲ್ಲಿಗೆ ಗೂಡು ತೆಗೆದುಕೊಂಡು ಬರುತ್ತಾರೆ. ಕರ್ನಾಟಕದಲ್ಲಿ ಅತಿಹೆಚ್ಚು ಫಿಲೇಚರ್ ಘಟಕಗಳು ಇರುವುದು ಕೂಡ ರಾಮನಗರದಲ್ಲಿಯೇ.

‘ಈ ಜಿಲ್ಲೆ ಒಂದರಲ್ಲಿಯೇ 927 ನೋಂದಾಯಿತ ಸಕ್ರಿಯ ರೀಲರ್‌ಗಳು ಇದ್ದಾರೆ. ಇವರಲ್ಲಿ 760 ಕಾಟೇಜ್ ಬೇಸಿನ್, 83 ಮಲ್ಟಿ ಎಂಡ್ ಬೇಸಿನ್ ಮತ್ತು 7 ಸ್ವಯಂಚಾಲಿತ ರೀಲಿಂಗ್ ಯಂತ್ರದ ಘಟಕಗಳು. ಇನ್ನುಳಿದವು ಒಂದು– ಎರಡು ಚರಕ ಇರುವ ಚಿಕ್ಕ ಘಟಕಗಳು. ಈ ಎಲ್ಲ ಘಟಕಗಳೂ ಸೇರಿದರೆ ಈ ಉದ್ಯಮ ಸುಮಾರು ಇಪ್ಪತ್ತು ಸಾವಿರ ಜನರಿಗೆ ಜೀವನೋಪಾಯ ಕಲ್ಪಿಸಿದೆ’ ಎನ್ನುತ್ತಾರೆ ರಾಮನಗರದಲ್ಲಿರುವ ಕೇಂದ್ರೀಯ ರೇಷ್ಮೆ ಮಂಡಳಿಯ ಗೂಡು ಪರೀಕ್ಷಾ ಕೇಂದ್ರದ ಎಸ್.ಎ. ಹಿರೇಮಠ.

‘ಕಾಟೇಜ್ ಬೇಸಿನ್, ಮಲ್ಟಿಎಂಡ್ ಬೇಸಿನ್ ಅಥವಾ ಚರಕ... ಈ ಮೂರಕ್ಕೆ ಹೋಲಿಸಿದರೆ ಸ್ವಯಂಚಾಲಿತ ರೀಲಿಂಗ್ ಯಂತ್ರ ಅಥವಾ ಎಆರ್‍ಎಂ ಘಟಕಗಳಲ್ಲಿ ಕೆಲಸಗಾರರು ಬಹಳ ಹೊತ್ತು ಬಿಸಿನೀರಿನಲ್ಲಿ ಕೈಯಿಟ್ಟು ಕೆಲಸ ಮಾಡುವುದು ಬೇಕಿಲ್ಲ. ಹೆಚ್ಚು ಕೆಲಸಗಾರರೂ ಬೇಡ. ಆದರೆ ಬಂಡವಾಳ ತುಂಬ ಬೇಕು. ಹಾಗಾಗಿ ಚಿಕ್ಕಪುಟ್ಟ ಫಿಲೇಚರ್ ಘಟಕಗಳ ಮಾಲೀಕರಿಗೆ ಬೇಸಿನ್ ಘಟಕ ಬಿಟ್ಟು ಇದನ್ನು ಶುರು ಮಾಡುವುದು ಕಷ್ಟ’ ಎನ್ನುವುದು ಅವರ ಅಭಿಪ್ರಾಯ.

ಫಿಲೇಚರ್ ಘಟಕಗಳನ್ನು ಪೂರ್ಣ ಸ್ವಯಂಚಾಲಿತ ಮಾಡಿದರೆ ಬಹುತೇಕರ ಜೀವನೋಪಾಯವನ್ನು ಕಸಿದುಕೊಂಡಂತೆಯೇ ಸರಿ. ಈಗ ರಾಮನಗರದಲ್ಲಿ ಏಳು ಮತ್ತು ಚನ್ನಪಟ್ಟಣದಲ್ಲಿ 2 ಸ್ವಯಂಚಾಲಿತ ರೀಲಿಂಗ್ ಘಟಕಗಳಿವೆ. ಇವುಗಳ ಯಂತ್ರೋಪಕರಣಗಳು ಚೀನಾದವು. ಕೇಂದ್ರೀಯ ರೇಷ್ಮೆ ಮಂಡಳಿಯು ಶೇ 50ರಷ್ಟು, ರಾಜ್ಯ ರೇಷ್ಮೆ ಇಲಾಖೆ ಶೇ 25ರಷ್ಟು ಸಬ್ಸಿಡಿ ಕೊಡುತ್ತವೆ. ಉಳಿದ ಶೇ 25ರಷ್ಟನ್ನು ಫಿಲೇಚರ್ ಘಟಕದ ಮಾಲೀಕರು ಭರಿಸಬೇಕು. ಒಂದೊಂದು ಯುನಿಟ್ ಹಾಕಲು ಸುಮಾರು  ಒಂದೂವರೆ ಕೋಟಿ ರೂಪಾಯಿ ಖರ್ಚಾಗುತ್ತದೆ.

ಕೆಲಸಗಾರರ ಕೈಗಳಿಗೆ ಹೆಚ್ಚು ಹಾನಿಕರವಲ್ಲದ, ಆಧುನಿಕ ತಂತ್ರಜ್ಞಾನದ ಸ್ವಯಂಚಾಲಿತ ಘಟಕವನ್ನು ಹಾಕಲು ಫಿಲೇಚರ್ ಘಟಕಗಳ ಮಾಲೀಕರು ಹಿಂಜರಿಯುವುದಕ್ಕೆ  ಬಂಡವಾಳದ ಸಮಸ್ಯೆ ಮಾತ್ರವಲ್ಲ, ಬೇರೆ ಸಮಸ್ಯೆಯೂ ಇದೆ.

‘ನಾನು ಆರು ತಿಂಗಳ ಹಿಂದೆ ಆರಂಭಿಸಿರುವ ಸ್ವಯಂಚಾಲಿತ ಘಟಕದಲ್ಲಿ ಎಲ್ಲಾ ಕೆಲಸವನ್ನು 10 ಜನರು ನಿಭಾಯಿಸುತ್ತಾರೆ. ಇಷ್ಟೇ ಎಳೆ ತೆಗೆಯುವ ಸಾಮರ್ಥ್ಯದ ಕಾಟೇಜ್ ಬೇಸಿನ್ ಘಟಕಕ್ಕಾದರೆ 45 ಜನ ಬೇಕು. ಹೀಗಾಗಿ ಸ್ವಯಂಚಾಲಿತ ಘಟಕ ಸ್ಥಾಪಿಸುವುದು ಒಳ್ಳೆಯದು ಅನ್ನಿಸುತ್ತದೆ. ಆದರೆ ಏನಾದರೂ ರಿಪೇರಿಗೆ ಬಂತೆಂದರೆ ಬಿಡಿಭಾಗಗಳು ಇಲ್ಲಿ ಸಿಕ್ಕೋದಿಲ್ಲ, ಚೀನಾದಿಂದ ತರಿಸಿಕೊಳ್ಳಬೇಕು, ಅಲ್ಲದೇ ವಿಪರೀತ ದುಬಾರಿ. ಕಾಟೇಜ್ ಬೇಸಿನ್‍ಗಳಾದರೆ ಹೆಚ್ಚು ಖರ್ಚಿಲ್ಲದೆ ರಾಮನಗರದಲ್ಲಿಯೇ ರಿಪೇರಿ ಮಾಡಿಸಿಕೊಳ್ಳಬಹುದು, ಎಲ್ಲ ಬಿಡಿಭಾಗಗಳು ದೊರೆಯುತ್ತವೆ’ ಎನ್ನುತ್ತಾರೆ ರೀಲರ್‌ ಅಸ್ಲಂ ಪಾಷಾ.

‘ನಮ್ಮ ತಾತನ ಕಾಲದಲ್ಲಿ ಕರೆಂಟಿರಲಿಲ್ಲ, ಎರಡು ಮೂರು ಜನ ಕೈಯಿಂದ ತಿರುಗಿಸಿ ಎಳೆ ತೆಗೀತಿದ್ದರು. ಆಮೇಲೆ ಕರೆಂಟಿನ ಕಾಟೇಜ್ ಬೇಸಿನ್ ಹಾಕಿದ್ವಿ. ನಮ್ಮ ತಂದೆಯೂ ಅದನ್ನೇ ಮುಂದುವರೆಸಿಕೊಂಡು ಬಂದರು. ಚಿಕ್ಕವನಿದ್ದಾಗಲೂ ಇಸ್ಕೂಲು ಮುಗಿಸ್ಕಂಡು ಮನೆಗೆ ಬಂದ್ರೆ ಒಂದಲ್ಲ ಒಂದು ಕೆಲಸ ಮಾಡ್ತಿದ್ದೆ. ಹಂಗೇ ನೋಡ್ತಾ ಕಲಿತುಬಿಟ್ಟೆ. ಐದನೇ ಕ್ಲಾಸಿನ ನಂತರ ಇದೇ ಕೆಲಸ’ ಎನ್ನುತ್ತಾರೆ ಪಾಷಾ.

ಇದು ಅವರೊಬ್ಬರ ಅನುಭವ ಮಾತ್ರವಲ್ಲ, ಹೆಚ್ಚಿನ ಫಿಲೇಚರ್ ಘಟಕಗಳ ಮಾಲೀಕರಿಗೆ ಇದು ಮನೆತನದ ವೃತ್ತಿಯಾಗಿ ಮುಂದುವರೆದಿದೆ. ತಮ್ಮ ತಂದೆ ಹಾಕಿದ್ದ ಕಾಟೇಜ್ ಬೇಸಿನ್ ಘಟಕದ ವಿಸ್ತರಣೆಯಾಗಿ ಪಾಷಾ ಆರೇಳು ವರ್ಷಗಳ ಹಿಂದೆ ಟ್ವಿಸ್ಟಿಂಗ್ ಘಟಕವನ್ನು ಆರಂಭಿಸಿದ್ದಾರೆ. 14-16 ಲೀನಿಯರ್ ಇರುವ ರೇಷ್ಮೆ ತುಂಬಾ ಒಳ್ಳೆಯ ಗುಣಮಟ್ಟದ್ದು. ರಾಮನಗರದಲ್ಲಿ ನಾಲ್ಕೈದು ರೀಲರ್‌ಗಳು ಮಾತ್ರವೇ ಇದನ್ನು ತಯಾರಿಸುತ್ತಿದ್ದು, ಅವರಲ್ಲಿ ಪಾಷಾ ಒಬ್ಬರು.

ಶೇಕಡ 90ರಿಂದ 95ರಷ್ಟು ಫಿಲೇಚರ್ ಘಟಕಗಳ ಮಾಲೀಕರು ಮುಸ್ಲಿಂ ಸಮುದಾಯದವರು. ಆದರೆ ಹಿಂದೂ
ಮತ್ತು ಮುಸ್ಲಿಂ ಎರಡೂ ಸಮುದಾಯಗಳ ಹೆಂಗಸರು, ಗಂಡಸರು ಕೂಡಿಯೇ ಇಲ್ಲಿ ಕೆಲಸ ಮಾಡುತ್ತಾರೆ.

ಹಾಗೆಂದು ಫಿಲೇಚರ್ ಘಟಕಗಳ ಮಾಲೀಕರು ಕೂಡ ಚಿನ್ನದ ಚಮಚೆ ಬಾಯಲ್ಲಿಟ್ಟುಕೊಂಡು ಹುಟ್ಟಿದವರು ಎಂದೇನಿಲ್ಲ. ಅವರಲ್ಲಿ ಹೆಚ್ಚಿನವರು ಕಷ್ಟಪಟ್ಟು ಮೇಲೆ ಬಂದವರು. ತಂದೆಯ ಕಾಲದ ಚಿಕ್ಕ ಘಟಕವನ್ನು ಸ್ವಲ್ಪ ವಿಸ್ತರಿಸಿಕೊಂಡವರು. ಮನ್ಸೂರ್ ಅಲಿ ಖಾನ್ 35-40 ವರ್ಷದಿಂದ ಇದರಲ್ಲಿಯೇ ಕೆಲಸ ಮಾಡುತ್ತಿದಾರೆ. ಎಸ್‍ಎಸ್‍ಎಲ್‍ಸಿ  ಮುಗಿಸಿದ ನಂತರ ತಂದೆಯ ಫಿಲೇಚರ್‌ನಲ್ಲಿ ಕೆಲಸ ಮಾಡುತ್ತಲೇ, ಉದ್ಯಮವನ್ನು ವಿಸ್ತರಿಸಿ, ಮಲ್ಟಿ ಎಂಡ್ ಫಿಲೇಚರ್ ಘಟಕ ಹಾಕಿದ್ದಾರೆ. ಅಲ್ಲದೆ ಸತ್ತಿರುವ ಹುಳಗಳನ್ನು ಬೇರೆ ಬೇರೆ ಫಿಲೇಚರ್ ಘಟಕಗಳಿಂದ ಸಂಗ್ರಹಿಸಿ, ಅವುಗಳನ್ನು ಒಣಗಿಸಿ, ಪಶ್ಚಿಮ ಬಂಗಾಳಕ್ಕೆ ಕಳಿಸುವ ಉಪಉದ್ಯಮವೂ ಇದೆ.

ಇತ್ತೀಚಿನ ವರ್ಷಗಳಲ್ಲಿ ಫಿಲೇಚರ್ ಮಾಲೀಕರ ಒಂದು ಗೊಣಗಾಟ ಎಂದರೆ ‘ಕೆಲಸಗಾರರು ಸಿಗೋದಿಲ್ಲ’ ಅಂತ. ಗೂಡು ಬೇಯಿಸುವಾಗ ಬೆಂದಿರುವ ಹದ ಗಮನಿಸುವುದು, ಬ್ರಶಿಂಗ್ ಮತ್ತು ಬಿಸಿನೀರು ತುಂಬಿರುವ ಬೇಸಿನ್‍ನಲ್ಲಿರುವ ಗೂಡನ್ನು ರೀಲರ್‌ಗೆ ಕೊಡುವುದು... ಇದಕ್ಕೆಲ್ಲ ವರ್ಷಗಟ್ಟಲೆ ಕೆಲಸ ಮಾಡಿದ ಅನುಭವದ ಜೊತೆಗೆ ಚಕಚಕನೆ  ಎಳೆಕೊಡುವ ಕುಶಲತೆಯೂ ಬೇಕಾಗುತ್ತದೆ. ಹೀಗಾಗಿ ನುರಿತ ಕೆಲಸಗಾರರಿಗೆ ಬೇಡಿಕೆ ಇದ್ದೇ ಇರುತ್ತದೆ. ಇಷ್ಟಿದ್ದರೂ ಒಳ್ಳೆಯ ಸಂಬಳ, ಅಷ್ಟೇ ಮುಖ್ಯವಾಗಿ ಉತ್ತಮ ಕೆಲಸದ ಪರಿಸರವನ್ನು ಒದಗಿಸಲು ಫಿಲೇಚರ್ ಮಾಲೀಕರು ಮುಂದಾಗುವುದಿಲ್ಲ ಎಂಬ ಕಹಿ ವಾಸ್ತವವೂ ಇದೆ.

ಮೊದಲು ರೇಷ್ಮೆ ವ್ಯಾಪಾರಿಯಾಗಿದ್ದ ಮಹಮ್ಮದ್ ನೌಶಾದ್‍ಗೆ ಆರೋಗ್ಯ ಕೈಕೊಟ್ಟು ಮನೆಯಿಂದ ಹೊರಗೆ ಹೋಗಲಾರದ ಸ್ಥಿತಿ. ಪತ್ನಿಯೊಂದಿಗೆ ಜೀವನೋಪಾಯಕ್ಕೆ ನೆಚ್ಚಿಕೊಂಡಿದ್ದು ಹಳೆಯ ಎರಡು ಚರಕಗಳನ್ನು ಸರಿಪಡಿಸಿ, ಡ್ಯುಪಿಯನ್ ಅಥವಾ ಕಚ್ಚಾರೇಷ್ಮೆ ಎಳೆ ತೆಗೆಯುವ ಕೆಲಸ. ಇದನ್ನು ಅಣಿಗೊಳಿಸುವ ವೆಚ್ಚ ಕಡಿಮೆ. ಇದಕ್ಕೆ ಬಳಸುವ ಗೂಡೂ ಸ್ವಲ್ಪ ಕಳಪೆ ಗುಣಮಟ್ಟದ್ದು. ಗೂಡನ್ನು ಬೇಯಿಸುತ್ತಲೇ ಅದನ್ನು ಎಳೆ ತೆಗೆಯುವ ರೀಲರ್‌ಗೆ ಕೊಡುವ ಈ ಘಟಕಗಳಿಗೂ ಗಾಂಧಿಯವರ ಚರಕಕ್ಕೂ ಅಜಗಜಾಂತರವಿದೆ. ಅತ್ಯಂತ ಕೆಟ್ಟ ಕೆಲಸದ ಪರಿಸರ ಇರುವುದು ಈ ಚಿಕ್ಕ ಚಿಕ್ಕ ಚರಕದ ಘಟಕಗಳಲ್ಲಿ. ಇಲ್ಲಿ ಕೆಲಸ
ಗಾರರು ಮಾತ್ರವಲ್ಲ, ಮಾಲೀಕರು ಕೂಡ ಸ್ವಲ್ಪಮಟ್ಟಿಗೆ ಅನಾರೋಗ್ಯಕರ ಪರಿಸರದಲ್ಲಿಯೇ ಕೆಲಸ ಮಾಡುತ್ತಾರೆ.

ದಿನಬೆಳಗಾದರೆ ಮನೆಮಂದಿಯ ಹೊಟ್ಟೆ ತುಂಬಿಸುವ ಸವಾಲಿನ ಮುಂದೆ ಆರೋಗ್ಯದ ಸಮಸ್ಯೆ, ಗಲೀಜು ವಾತಾವರಣದಲ್ಲಿ ಕೆಲಸ ಮಾಡುವುದು, ವಾಸನೆ... ಈ ಎಲ್ಲವೂ ಗೌಣ. 20 ವರ್ಷದಿಂದ ಕಾಟೇಜ್ ಬೇಸಿನ್‍ನಲ್ಲಿ ಕೆಲಸ ಮಾಡುವ ಅಲಮಾಜ್ ಬೇಗಂಗೆ ಮೂವರು ಮಕ್ಕಳು. ಪ್ಲಾಸ್ಟಿಕ್ ವ್ಯಾಪಾರದಲ್ಲಿ ಕೈಸುಟ್ಟುಕೊಂಡ ಗಂಡನನ್ನು ಆರ್ಥಿಕವಾಗಿ ಹಿಡಿದಿದ್ದು ಪ್ರತೀದಿನ ಕೈಸುಟ್ಟುಕೊಳ್ಳುವ ಗೂಡು ಬೇಯಿಸುವ ಕೆಲಸ. ‘ನಾವು ಗೆಯ್ದರೆ ತಾನೆ ಮಕ್ಕಳನ್ನು ಸಾಕೋದು, ಓದಿಸಾದು. ಮಗಳು ಈಗ ಪಿಯುಸಿ, ಒಬ್ಬ ಮಗ ಎಸ್‍ಎಸ್‍ಎಲ್‍ಸಿ, ಇನ್ನೊಬ್ಬ ಎಂಟನೇ ಕ್ಲಾಸು. ಮೂರೂ ಮಕ್ಕಳು ಓದಿದರೆ ಸಾಕು...’ ಎನ್ನುವ ಬೇಗಂಗೆ ಮಕ್ಕಳ ಓದು ಮತ್ತು ಹೊಟ್ಟೆಪಾಡನ್ನು ನಿಭಾಯಿಸುವ ಸವಾಲೊಂದೇ ಕಣ್ಣ ಮುಂದೆ.

‘ಮದುವೆಯಾಗಿ ರಾಮನಗರಕ್ಕೆ ಬಂದು ಇಪ್ಪತ್ತು ವರ್ಷ ಆಯ್ತು, ಆವಾಗಿಂದ ಇದೇ ಕೆಲಸ’ ಎನ್ನುವ ಪುಷ್ಪಾ ಅವರ ಬಲಗೈ ಪೂರ್ಣ ವ್ರಣವಾಗಿದೆ. ಬಿಸಿನೀರಿನಲ್ಲಿ ನಿರಂತರವಾಗಿ ಕೈಯಿಟ್ಟ ಕಾರಣಕ್ಕೆ. ‘ಮನೆಗೆ ಹೋಗಿ ಲಿಂಬೆಹಣ್ಣು ಹಾಕಿ ತಿಕ್ಕಿಕೊಂಡು, ತೊಳೆದುಕೊಂಡರೆ ಆಯಿತು. ಆಮೇಲೆ ಅಡುಗೆ ಮಾಡಲು, ಊಟ ಮಾಡಲು ಉರಿಯುವುದಿಲ್ಲ. ರೂಢಿಯಾಗಿಬಿಟ್ಟಿದೆ’ ಎನ್ನುತ್ತಾರೆ ಪುಷ್ಪಾ. ‘ಇಲ್ಲಿ ದುಡಿಯದಿದ್ದರೆ ಮನೇಲಿ ಒಲೆ ಹಚ್ಚುವುದು ಹೇಗೆ’ ಎಂದು ಅವರು ಕೇಳುವ ಪ್ರಶ್ನೆ ಫಿಲೇಚರ್‌ನಲ್ಲಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿರುವ ಎಲ್ಲರ ಪ್ರಶ್ನೆ ಕೂಡ. ಬದುಕಿನ ಕಟು, ಕಹಿ ವಾಸ್ತವಗಳು ಎಲ್ಲವನ್ನೂ ರೂಢಿ ಮಾಡಿಸುತ್ತವೆ.

ಹನುಮಕ್ಕ ಅವರು ಐದು ದಶಕಗಳಿಂದ ಇದೇ ಕೆಲಸ ಮಾಡುತ್ತಿದ್ದಾರೆ. ಗಂಡ ಮತ್ತು ಹರೆಯದ ಮೂರು ಮಕ್ಕಳನ್ನು ಕಳೆದುಕೊಂಡು, ಇಬ್ಬರು ಮಕ್ಕಳ ಜೊತೆಗೆ ಇರುವ ಅವರಿಗೆ ಎಳೆ ತೆಗೆಯುವ ಕೆಲಸ ಹೊಟ್ಟೆಪಾಡಿನ ಅನಿವಾರ್ಯ. ‘ಮಕ್ಕಳು ಯಾರೂ ಓದಲಿಲ್ಲ. ಹುಳ ಕಾಸೋದೇ ಕೆಲಸವಾತು. ನಮಗೂ ರೇಷ್ಮೆ ಸೀರೆ ತಗಳ್ಳಕೆ ಆಸೆ, ಆದ್ರೆ ಉಟ್ಕಾಳಾಕೆ ಅದೃಷ್ಟ ಬೇಕಲ್ಲ’ ಎಂದು ನಿಡುಸುಯ್ಯುತಾರೆ. ನಿಜ, ರೇಷ್ಮೆ ಬಟ್ಟೆ ಉಡುವವರಿಗೆ ಇರುವ ಅದೃಷ್ಟವು ಎಳೆ ತೆಗೆಯುವವರಿಗೆ ಇಲ್ಲ. ಇವರ ವಿಚಾರದಲ್ಲಿ ಮಾತ್ರ ಬದುಕು, ಸಮಾಜ, ಜಗತ್ತು ಎಲ್ಲವೂ ಕ್ರೂರವಾಗಿಯೇ ನಡೆದುಕೊಂಡಿವೆ ಮತ್ತು ಅದು ಮುಂದುವರೆದೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT