ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಪಿಂಚಣಿ

Last Updated 29 ಮೇ 2021, 17:06 IST
ಅಕ್ಷರ ಗಾತ್ರ

ನವದೆಹಲಿ: ಉದ್ಯೋಗದ ಸಂದರ್ಭದಲ್ಲಿ ಮೃತಪಟ್ಟವರಿಗೆ ನೀಡುವ ‘ಕಾರ್ಮಿಕರ ರಾಜ್ಯ ವಿಮೆ ನಿಗಮದ (ಇಎಸ್‌ಐಸಿ) ಪಿಂಚಣಿ’ ಯೋಜನೆಯ ಪ್ರಯೋಜನವನ್ನು ಕೋವಿಡ್‌ನಿಂದ ಮೃತಪಟ್ಟವರಿಗೂ ವಿಸ್ತರಿಸಲಾಗುವುದು ಎಂದು ಪ್ರಧಾನ ಮಂತ್ರಿಯವರ ಕಚೇರಿ (ಪಿಎಂಒ) ಶನಿವಾರ ಹೇಳಿದೆ.

ಕೋವಿಡ್‌ನಿಂದಾಗಿ ದುಡಿಯುವ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳ ಹಣಕಾಸಿನ ಸಂಕಷ್ಟಗಳನ್ನು ಕಡಿಮೆ ಮಾಡಲು ಈ ಕ್ರಮಗಳು ನೆರವಾಗುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ, ಮೃತ ಕಾರ್ಮಿಕನ ಒಂದು ದಿನದ ಸರಾಸರಿ ವೇತನದ ಶೇಕಡ 90ರಷ್ಟನ್ನು ಪಿಂಚಣಿಯ ರೂಪದಲ್ಲಿ ನೀಡಲಾಗುತ್ತದೆ. ಇದು ಹಿಂದಿನ ವರ್ಷದ ಮಾರ್ಚ್‌ 24ರಿಂದ ಅನ್ವಯ ಆಗುವಂತೆ ಜಾರಿಗೆ ಬರಲಿದೆ, 2022ರ ಮಾರ್ಚ್‌ 24ರವರೆಗಿನ ಪ್ರಕರಣಗಳಿಗೆ ಅನ್ವಯವಾಗಲಿದೆ.

ನೌಕರರ ಠೇವಣಿ ಆಧಾರಿತ ವಿಮೆ (ಇಡಿಎಲ್‌ಐ) ಯೋಜನೆಯ ಅಡಿ ಗರಿಷ್ಠ ವಿಮಾ ಮೊತ್ತವನ್ನು ₹ 7 ಲಕ್ಷಕ್ಕೆ ಹೆಚ್ಚಿಸಿರುವುದು ಕೋವಿಡ್‌ನಿಂದಾಗಿ ಮೃತ‍ಪಟ್ಟ ನೌಕರರ ಕುಟುಂಬಗಳಿಗೆ ನೆರವಾಗುತ್ತದೆ ಎಂದು ಪಿಎಂಒ ಹೇಳಿದೆ. ವಿಮಾ ಮೊತ್ತದ ಹೆಚ್ಚಳವು 2020ರ ಫೆಬ್ರುವರಿ 15ರಿಂದ ಅನ್ವಯವಾಗಿ ಮುಂದಿನ ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿ ಇರುತ್ತದೆ.

ಗುತ್ತಿಗೆ ಕಾರ್ಮಿಕರ ಕುಟುಂಬಗಳಿಗೆ ಕೂಡ ಇದರ ಪ್ರಯೋಜನ ದೊರೆಯಬೇಕು ಎಂಬ ಕಾರಣಕ್ಕೆ, ‘ಒಂದೇ ಕಡೆ ನಿರಂತರವಾಗಿ’ ಕೆಲಸ ಮಾಡಿರಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ. ಮೃತಪಡುವ 12 ತಿಂಗಳ ಅವಧಿಯಲ್ಲಿ ಉದ್ಯೋಗ ಬದಲಿಸಿದ್ದವರಿಗೂ ವಿಮೆಯ ಪ್ರಯೋಜನ ಸಿಗಲಿದೆ ಎಂದು ಪಿಎಂಒ ಪ್ರಕಟಣೆ ತಿಳಿಸಿದೆ.

ಈ ಯೋಜನೆಗಳಿಗೆ ಸಂಬಂಧಿಸಿದ ವಿಸ್ತೃತ ಮಾರ್ಗಸೂಚಿಗಳನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಹೊರಡಿಸಲಿದೆ. ‘ಇಎಸ್‌ಐಸಿ ಅಡಿ ಪಿಂಚಣಿ ಹಾಗೂ ಇಡಿಎಲ್‌ಐ ಯೋಜನೆಗಳು ದುಡಿಯುವ ಸದಸ್ಯರನ್ನು ಕೋವಿಡ್‌ನಿಂದಾಗಿ ಕಳೆದುಕೊಂಡ ಕುಟುಂಬಗಳಿಗೆ ಹಣಕಾಸಿನ ಆಸರೆ ನೀಡಲಿವೆ’ ಎಂದು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT