ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಚುನಾವಣಾ ಪ್ರಚಾರಕ್ಕೆ ಲೋಕಸಭೆಯಿಂದಲೇ ಚಾಲನೆ

Last Updated 20 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ತೆಲುಗುದೇಶಂ ಮತ್ತು ವೈಎಸ್‍ಆರ್ ಕಾಂಗ್ರೆಸ್‍ ಪಕ್ಷಗಳು ಮಂಡಿಸಿದ ಅವಿಶ್ವಾಸ ಗೊತ್ತುವಳಿ ನೋಟಿಸನ್ನು ಲೋಕಸಭೆಯು ಮಂಗಳವಾರವೂ ಚರ್ಚೆಗೆ ಎತ್ತಿಕೊಳ್ಳಲಿಲ್ಲ. ನೋಟಿಸ್‌ ಮಂಡನೆಯಾದ ಮೂರನೇ ದಿನವೂ ಲೋಕಸಭೆ ಗದ್ದಲದಲ್ಲಿ ಮುಳುಗಿ ಹೋದದ್ದರಿಂದ ಚರ್ಚೆಗೆ ಎತ್ತಿಕೊಳ್ಳುವುದು ಸಾಧ್ಯವಾಗಲಿಲ್ಲ. ಪ್ರಾದೇಶಿಕ ಬೇಡಿಕೆಗಳ ಈಡೇರಿಕೆಗಾಗಿ ತಮಿಳುನಾಡಿನ ಎಐಎಡಿಎಂಕೆ ಮತ್ತು ತೆಲಂಗಾಣದ ಟಿಆರ್‌ಎಸ್‌ ನಡೆಸಿದ ಕೋಲಾಹಲ ಲೋಕಸಭೆಯ ಕಲಾಪವನ್ನು ಅಸ್ತವ್ಯಸ್ತಗೊಳಿಸಿತು.

ರಾಷ್ಟ್ರ ಮಟ್ಟದಲ್ಲಿ ಈಗ ಪ್ರದರ್ಶನಗೊಳ್ಳುತ್ತಿರುವುದು ಉಗ್ರ ಮತ್ತು ತೀಕ್ಷ್ಣವಾದ ಆಂಧ್ರ ಸ್ಪರ್ಧಾತ್ಮಕ ರಾಜಕಾರಣ. ಅವಿಶ್ವಾಸ ನಿರ್ಣಯ ಮಂಡನೆ ತೆಲುಗುದೇಶಂನ ಉದ್ದೇಶ ಆಗಿರಲಿಲ್ಲ; ವಿರೋಧ ಪಕ್ಷ ವೈಎಸ್‍ಆರ್ ಕಾಂಗ್ರೆಸ್‍ ಮತ್ತು ನಟ-ರಾಜಕಾರಣಿ ಪವನ್‍ ಕಲ್ಯಾಣ್‍ ನಡೆಗಳಿಂದಾಗಿ ಅವಿಶ್ವಾಸ ನಿರ್ಣಯ ಮಂಡಿಸುವುದು ತೆಲುಗುದೇಶಂಗೆ ಅನಿವಾರ್ಯವಾಯಿತು. ಚುನಾವಣೆ ಹತ್ತಿರ ಬಂದಾಗ ಎನ್‍ಡಿಎಯಿಂದ ಹೊರಗೆ ಬರುವ ಕಾರ್ಯತಂತ್ರವನ್ನು ಚಂದ್ರಬಾಬು ನಾಯ್ಡು ಹೊಂದಿದ್ದರು; ಆದರೆ ಏಪ್ರಿಲ್‍ 6ರೊಳಗೆ ತಮ್ಮ ಪಕ್ಷದ ಸಂಸದರು ರಾಜೀನಾಮೆ ನೀಡಲಿದ್ದಾರೆ ಎಂದು ಜಗನ್‍ಮೋಹನ್‍ ರೆಡ್ಡಿ ಘೋಷಿಸಿದ್ದರಿಂದಾಗಿ ಅವಿಶ್ವಾಸ ನಿರ್ಣಯ ಮಂಡನೆಯಲ್ಲದೆ ನಾಯ್ಡುಗೆ ಬೇರೆ ದಾರಿ ಇಲ್ಲದಂತೆ ಆಯಿತು. ಜಗನ್‍ ತಂತ್ರದಿಂದಾಗಿ ನಾಯ್ಡು ದಿಕ್ಕೆಟ್ಟರು. ಆಂಧ್ರದ ಹಿತಾಸಕ್ತಿಯ ಪ್ರಧಾನ ರಕ್ಷಕ ತಾನೇ ಎಂಬುದನ್ನು ತೋರಿಸಿಕೊಳ್ಳಲು ಅವಿಶ್ವಾಸ ನಿರ್ಣಯ ಮಾತ್ರ ಅವರ ಮುಂದೆ ಇದ್ದ ಒಂದೇ ಅವಕಾಶ.

ಆಂಧ್ರದಲ್ಲಿ ಟಿಡಿಪಿ-ಬಿಜೆಪಿ ನಡುವಣ ನಂಟು ಒಲ್ಲದ್ದೇ ಆಗಿತ್ತು; ಇಬ್ಬರು ಪಾಲುದಾರರಿಗೂ ಒಂದೇ ಸೂರಿನಡಿ ಬದುಕುವುದಕ್ಕೆ ಇಷ್ಟ ಇರಲಿಲ್ಲ. ವೈಎಸ್‍ಆರ್ ಕಾಂಗ್ರೆಸ್‍ ಜತೆಗೆ ಬಿಜೆಪಿ ಮೈತ್ರಿಯೇತರ ಸಂಬಂಧ ಹೊಂದಿದೆ ಎಂಬ ಅನುಮಾನ ಟಿಡಿಪಿಗೆ ಸದಾ ಇತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಪಡೆಯಲು 2017ರ ಇಡೀ ಒಂದು ವರ್ಷ ನಾಯ್ಡುಗೆ ಸಾಧ್ಯವಾಗಲಿಲ್ಲ. ಆದರೆ ಜಗನ್‍ ಮತ್ತು ಅವರ ಪಕ್ಷದ ಸಂಸದ ವಿಜಯ ಸಾಯಿ ರೆಡ್ಡಿ ಅವರ ಅಹವಾಲನ್ನು ಮೋದಿ ಕೇಳಿದರು. ತನ್ನ ವಿರುದ್ಧದ ಜಿದ್ದಿಗಾಗಿಯೇ ಬಿಜೆಪಿ ಹೀಗೆ ಮಾಡುತ್ತಿದೆ ಎಂಬುದು ಟಿಡಿಪಿಯ ಭಾವನೆಯಾಗಿತ್ತು. ಬಿಜೆಪಿ ಜತೆಗೆ ವೈಎಸ್‍ಆರ್ ಕಾಂಗ್ರೆಸ್‍ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಟಿಡಿಪಿ ಪ್ರಚಾರಕ್ಕೆ ಪ್ರತಿಯಾಗಿ ಜಗನ್‍ ಅವಿಶ್ವಾಸ ನಿರ್ಣಯ ಮಂಡಿಸಿದರು.

ದೆಹಲಿಯಲ್ಲಿ ದೊಡ್ಡಣ್ಣನಂತೆ ವರ್ತಿಸುವ ಬಿಜೆಪಿ, ಆಂಧ‍್ರಪ್ರದೇಶಕ್ಕೆ ಅನುದಾನ ನೀಡುವಲ್ಲಿ ಜಿಪುಣತನ ತೋರುತ್ತಿದೆ ಎಂಬ ಟಿಡಿಪಿ ಆರೋಪಕ್ಕೆ, ನಾಯ್ಡು ಪಕ್ಷವು ಆಂಧ್ರದಲ್ಲಿ ತನ್ನ ಮೇಲೆ ದಬ್ಬಾಳಿಕೆ ನಡೆಸುತ್ತಿದೆ ಎಂಬುದು ಬಿಜೆಪಿಯ ಪ್ರತಿ ಆರೋಪವಾಗಿತ್ತು.

ಕೇಂದ್ರದ ಯೋಜನೆಗಳನ್ನು ಟಿಡಿಪಿ ತನ್ನದೆಂಬಂತೆ ಬಿಂಬಿಸುತ್ತಿದೆ ಮತ್ತು ಬಿಜೆಪಿಯ ಕೇಂದ್ರ ನಾಯಕರಿಗೆ ಯಾವ ಕಿಮ್ಮತ್ತೂ ಕೊಡುತ್ತಿಲ್ಲ ಎಂದು ಆಂಧ್ರದ ಬಿಜೆಪಿ ಮುಖಂಡರು ಹಲವು ಬಾರಿ ಹೇಳಿದ್ದಾರೆ. ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರಧಾನಿ ಮೋದಿ ಅವರಿಗಿಂತ ನಾಯ್ಡು ಮತ್ತು ರಾಜ್ಯದ ಸಚಿವರಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ ಎಂಬ ಬಿಜೆಪಿ ಮುಖಂಡರ ಆರೋಪ ಇದಕ್ಕೆ ಒಂದು ನಿದರ್ಶನ.

ಆಂಧ್ರಪ್ರದೇಶ ರಾಜಕಾರಣವನ್ನು ಹತ್ತಿರದಿಂದ ನೋಡುತ್ತಿದ್ದವರಿಗೆ ಇವೆಲ್ಲವೂ ಹಗಲಿನಷ್ಟೇ ನಿಚ್ಚಳವಾಗಿತ್ತು. 2015ರ ಅಕ್ಟೋಬರ್ ಬಳಿಕವಂತೂ ಇದು ಇನ್ನೂ ಸ್ಪಷ್ಟವಾಯಿತು. ಆಂಧ್ರಪ್ರದೇಶದ ಹೊಸ ರಾಜಧಾನಿ ಅಮರಾವತಿಯ ಶಂಕುಸ್ಥಾಪನೆಗೆ ಬರುವಾಗ ಪ್ರಧಾನಿ ಮೋದಿ ಅವರು ಯಮುನಾ ನದಿಯ ನೀರು ಮತ್ತು ಸಂಸತ್ತಿನ ಆವರಣದ ಮಣ್ಣು ತಂದಿದ್ದರು. ಪ್ರಧಾನಿಯ ಈ ಕ್ರಮ ಒಳ್ಳೆಯದು ಎಂಬಂತೆ ಕಂಡರೂ ಟಿಡಿಪಿ ಮುಖಂಡರಿಗೆ ಅಸಮಾಧಾನ ಉಂಟಾಗಿತ್ತು. ರಾಜ್ಯದ ರಾಜಧಾನಿ ನಿರ್ಮಾಣಕ್ಕೆ ಅವರು ಪ್ರಧಾನಿಯಿಂದ ಉಡುಗೊರೆಯಾಗಿ ಚೆಕ್‍ ನಿರೀಕ್ಷಿಸಿದ್ದೇ ಈ ಅತೃಪ್ತಿಗೆ ಕಾರಣ.

ಆಂಧ್ರಕ್ಕೆ ವಿಶೇಷ ಸ್ಥಾನ ನೀಡುವುದು ಸಾಧ್ಯವಿಲ್ಲ ಎಂಬ ಕೇಂದ್ರದ ನಿರ್ಧಾರವು ಗಾಯಕ್ಕೆ ಉಪ್ಪು ಸವರಿದಂತಾಯಿತು. ಕೇಂದ್ರದ ಎಲ್ಲ ಯೋಜನೆಗಳಿಗೆ ಕೇಂದ್ರವೇ ಶೇ 90ರಷ್ಟು ಅನುದಾನ ನೀಡುವ ವಿಶೇಷ ಪ್ಯಾಕೇಜ್‍ ಒಪ್ಪಂದಕ್ಕೆ ಟಿಡಿಪಿ ಒಪ್ಪಿಕೊಂಡಿತ್ತು. ರಾಜ್ಯದ ₹16 ಸಾವಿರ ಕೋಟಿ ವರಮಾನ ಕೊರತೆಯನ್ನು ತುಂಬಿಕೊಡಲು ಕೇಂದ್ರ ನಿರಾಕರಿಸಿದ್ದು, ಅದರ ಬದಲಿಗೆ ₹4,100 ಕೋಟಿ ಮಾತ್ರ ನೀಡಲು ಸಾಧ್ಯ ಎಂದದ್ದು ಮತ್ತೆ ಸಮಸ್ಯೆ ಸೃಷ್ಟಿಸಿತು. ವಿಶಾಖಪಟ್ಟಣ ರೈಲ್ವೆ ವಲಯ ನಿರ್ಮಾಣ ಪ್ರಸ್ತಾವವನ್ನೂ ಕೇಂದ್ರ ತಳ್ಳಿಹಾಕಿತು.

ತಮ್ಮ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಂದ ನುಣುಚಿಕೊಳ್ಳುವುದಕ್ಕಾಗಿ ಆಂಧ್ರದ ಹಿತಾಸಕ್ತಿಯನ್ನು ನಾಯ್ಡು ಒತ್ತೆ ಇಟ್ಟಿದ್ದಾರೆ. ಅದಕ್ಕಾಗಿ ವಿಶೇಷ ಸ್ಥಾನ ಪಡೆಯುವ ಅವಕಾಶವನ್ನು ಬಲಿಕೊಟ್ಟಿದ್ದಾರೆ ಎಂದು ಜಗನ್‍ ಹೇಳತೊಡಗಿದ್ದು ನಾಯ್ಡು ಸ್ಥಿತಿಯನ್ನು ಇನ್ನಷ್ಟು ಸಂಕಷ್ಟಕ್ಕೆ ತಳ್ಳಿತು.

ವಿಶೇಷ ಸ್ಥಾನ ದೊರೆಯುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೂ ಖಾಸಗಿಯಾಗಿ ಮಾತನಾಡುವಾಗ ಹೇಳುತ್ತಾರೆ. ಹಾಗಾಗಿ ವಿಶೇಷ ಸ್ಥಾನದ ಬೇಡಿಕೆಯು ಭಾವನೆಗಳನ್ನು ಕೆರಳಿಸುವ ಅಸ್ತ್ರ ಮಾತ್ರ. ಬಿಜೆಪಿಯನ್ನು ಖಳನಾಗಿಸಲು ಟಿಡಿಪಿ ಬಯಸುತ್ತಿದೆ. ಒಂದು ವೇಳೆ ಮೋದಿ ತಮ್ಮಮಾತು ಉಳಿಸಿಕೊಂಡಿದ್ದರೆ 2014ರಲ್ಲಿ ನಾಯ್ಡು ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುತ್ತಿದ್ದರು ಎಂಬುದನ್ನು ಜನರಿಗೆ ತಿಳಿಸುವುದು ಟಿಡಿಪಿಯ ಉದ್ದೇಶ. ಇನ್ನೊಂದೆಡೆ, ನಾಲ್ಕು ವರ್ಷ ಅಧಿಕಾರ ಹಂಚಿಕೊಂಡು ಚುನಾವಣೆ ವರ್ಷದಲ್ಲಿ ಅನ್ಯಾಯವಾಗಿದೆ ಎಂದು ಟಿಡಿಪಿ ಕೂಗುತ್ತಿದೆ ಎಂದು ಹೇಳುವ ಮೂಲಕ ನಾಯ್ಡು ಮೇಲೆಯೇ ದೋಷ ಹೊರಿಸುವುದು ಜಗನ್‍ ಗುರಿ.

ಆಂಧ್ರದಲ್ಲಿ ತ್ರಿಪುರಾ ಫಲಿತಾಂಶ ಪುನರಾವರ್ತನೆಯಾಗಲಿದೆ ಎಂದು ದೊಡ್ಡದಾಗಿ ಹೇಳಿಕೊಳ್ಳುತ್ತಿದ್ದರೂ ಆಂಧ್ರದ ಗುದ್ದಾಟದಲ್ಲಿ ಬಿಜೆಪಿಗೆ ನಷ್ಟವಾಗುವ ಸಾಧ್ಯತೆ ಹೆಚ್ಚು. ಬಿಜೆಪಿ ತನ್ನ ಮಾತನ್ನು ಉಳಿಸಿಕೊಂಡಿಲ್ಲ ಎಂದು ತಳಮಟ್ಟದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ರಚಿಸಿದ ಕಾಂಗ್ರೆಸ್‍ ಪಕ್ಷವನ್ನು ನಾಲ್ಕು ವರ್ಷ ಹಿಂದೆ ಇಲ್ಲಿನ ಜನ ಕಠಿಣವಾಗಿ ಶಿಕ್ಷಿಸಿದ್ದರು. 2004 ರಿಂದ 2014ರವರೆಗೆ ಈ ರಾಜ್ಯವನ್ನು ಆಳಿದ ಕಾಂಗ್ರೆಸ್‍ಗೆ ಕಳೆದ ಚುನಾವಣೆಯಲ್ಲಿ ಒಂದೇ ಒಂದು ಶಾಸಕ ಅಥವಾ ಸಂಸದ ಸ್ಥಾನ ಗೆಲ್ಲಲು ಸಾಧ್ಯವಾಗಿರಲಿಲ್ಲ. ಬಿಜೆಪಿಗೆ ಅದೇ ಗತಿ ಬರಬಹುದು. ಇಡೀ ಆಂಧ್ರದಲ್ಲಿ ಪ್ರಭಾವ ಇರುವ ಒಬ್ಬ ನಾಯಕನೂ ಇಲ್ಲದ ಬಿಜೆಪಿ ಸ್ಥಿತಿ ಇನ್ನೂ ಶೋಚನೀಯವಾಗಬಹುದು.

ಆಂಧ್ರದಲ್ಲಿ ತನ್ನ ಸ್ಥಿತಿಯ ಬಗ್ಗೆ ಬಿಜೆಪಿ ನಿಜಕ್ಕೂ ಚಿಂತಿತವಾಗಿದೆಯೇ? ಹಾಗೇನೂ ಇಲ್ಲ. ಮೈತ್ರಿಕೂಟದಿಂದ ಟಿಡಿಪಿ ಹೊರಗೆ ಹೋಗಿರುವುದರ ಬಗ್ಗೆ ಬಿಜೆಪಿಗೆ ದೊಡ್ಡ ಚಿಂತೆ ಇಲ್ಲ. 2019ರ ಚುನಾವಣೆ ಬಳಿಕ ಬಿಜೆಪಿಗೆ ಸಂಖ್ಯಾಬಲದ ಕೊರತೆ ಉಂಟಾದರೆ ಅದು ವೈಎಸ್ಆರ್ ಕಾಂಗ್ರೆಸ್‍ನತ್ತ ತಿರುಗುವ ಸಾಧ್ಯತೆ ಇದೆ. ಇಬ್ಬರು ಸಂಸದರು ಮತ್ತು ನಾಲ್ವರು ಶಾಸಕರನ್ನು ಹೊಂದಿರುವ ಬಿಜೆಪಿಗೆ ಆಂಧ್ರದಲ್ಲಿ ದೊಡ್ಡ ನಿರೀಕ್ಷೆಯೇನೂ ಇಲ್ಲ. ಹಾಗಾಗಿ ನಂಟು ಮುರಿದುಕೊಂಡು ನಾಯ್ಡು ಹೊರ ಹೋಗಿರುವುದರ ಬಗ್ಗೆ ಬಿಜೆಪಿ ನಿದ್ದೆ ಕಳೆದುಕೊಳ್ಳುವುದಕ್ಕೆ ಕಾರಣ ಇಲ್ಲ.

ಆಂಧ್ರದ ಜನರಿಗೆ ಏನನ್ನು ತೋರಿಸಬೇಕೋ ಅದು ದೆಹಲಿಯಲ್ಲಿ ನಡೆಯುತ್ತಿದೆ. ಆಂಧ್ರದ ಚುನಾವಣಾ ಪ್ರಚಾರ ಲೋಕಸಭೆಯಿಂದಲೇ ಆರಂಭವಾಗಿದೆ.

ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಎಡರಂಗ, ಮಮತಾರಿಂದ ಹಿಡಿದು ಅಸಾದುದ್ದೀನ್‍ ಒವೈಸಿವರೆಗೆ ಎಲ್ಲರೂ ಮೋದಿ ವಿರುದ್ಧ ಒಂದಾಗಿದ್ದಾರೆ ಎಂಬುದನ್ನು ಬಿಜೆಪಿ ರಾಷ್ಟ್ರಮಟ್ಟದಲ್ಲಿ ಬಿಂಬಿಸಲಿದೆ. ಅವಿಶ್ವಾಸ ನಿರ್ಣಯ ಚರ್ಚೆಗೆ ಬರುವುದೇ ಆದರೆ, ಬಿಜೆಪಿಯನ್ನು ಮುಜುಗರಕ್ಕೆ ಈಡು ಮಾಡುವ ಅವಕಾಶವನ್ನು ವಿರೋಧ ಪಕ್ಷಗಳು ಎದುರು ನೋಡುತ್ತಿವೆ; ವಿರೋಧ ಪಕ್ಷಗಳ ಒಗ್ಗಟ್ಟಿನ ಅಂತಿಮ ತಾಲೀಮಿಗೂ ಇದು ಅವಕಾಶ ನೀಡುತ್ತದೆ. ಬಿಜೆಪಿ ಈ ಸಂದರ್ಭವನ್ನು ಅರ್ಧ ತುಂಬಿದ ಲೋಟದ ರೀತಿಯಲ್ಲಿ ನೋಡಲು ಬಯಸುತ್ತಿದೆ. 2019ರ ಲೋಕಸಭಾ ಚುನಾವಣೆಯನ್ನು ಅಧ್ಯಕ್ಷೀಯ ಮಾದರಿಯಲ್ಲಿಯೇ ನಡೆಸಲು ಬಿಜೆಪಿ ಯತ್ನಿಸಲಿದೆ. ವಿರೋಧ ಪಕ್ಷಗಳ ಒಗ್ಗಟ್ಟನ್ನು ಪ್ರಧಾನಿ ಹುದ್ದೆಯ ಹಲವು ಆಕಾಂಕ್ಷಿಗಳಿರುವ ಹರಕುಮುರುಕು ಒಕ್ಕೂಟ ಎಂದು ಬಿಂಬಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT