ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ತಡೆಯುವ ಸಲುವಾಗಿ ಗೋಧಿ ಹಿಟ್ಟು ರಫ್ತಿಗೆ ನಿರ್ಬಂಧ ಹೇರಿದ ಸರ್ಕಾರ

Last Updated 25 ಆಗಸ್ಟ್ 2022, 14:08 IST
ಅಕ್ಷರ ಗಾತ್ರ

ನವದೆಹಲಿ: ಬೆಲೆ ಏರಿಕೆಯನ್ನು ತಡೆಯುವ ಉದ್ದೇಶದಿಂದ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ಹೇರಲು ಕೇಂದ್ರ ಸರ್ಕಾರವು ಗುರುವಾರ ತೀರ್ಮಾನಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಸಂಪುಟದ ತೀರ್ಮಾನದ ಕಾರಣದಿಂದಾಗಿ ಗೋಧಿ ಹಿಟ್ಟಿನ ರಫ್ತಿನ ಮೇಲೆ ನಿರ್ಬಂಧ ವಿಧಿಸಲು ಸಾಧ್ಯವಾಗಲಿದೆ’ ಎಂದು ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ. ಸಂಪುಟದ ತೀರ್ಮಾನದ ವಿಚಾರವಾಗಿ ವಿದೇಶ ವ್ಯವಹಾರಗಳ ಮಹಾನಿರ್ದೇಶನಾಲಯವು ಅಧಿಸೂಚನೆಯನ್ನು ಹೊರಡಿಸಬೇಕಿದೆ.

ರಷ್ಯಾ ಮತ್ತು ಉಕ್ರೇನ್, ವಿಶ್ವದ ಪ್ರಮುಖ ಗೋಧಿ ರಫ್ತುದಾರ ರಾಷ್ಟ್ರಗಳು. ಎರಡು ದೇಶಗಳ ನಡುವೆ ಯುದ್ಧ ಆರಂಭವಾದ ನಂತರದಲ್ಲಿ ಜಾಗತಿಕ ಮಟ್ಟದಲ್ಲಿ ಗೋಧಿ ಪೂರೈಕೆ ವ್ಯವಸ್ಥೆ ಹಾಳಾಗಿದೆ. ಇದರಿಂದಾಗಿ ಭಾರತದ ಗೋಧಿಗೆ ಬೇಡಿಕೆ ಹೆಚ್ಚಾಗಿದೆ.

ಇದರ ಪರಿಣಾಮವಾಗಿ ದೇಶಿ ಮಾರುಕಟ್ಟೆಯಲ್ಲಿ ಗೋಧಿಯ ಬೆಲೆಯು ಹೆಚ್ಚಾಗಿದೆ. ದೇಶದ ಆಹಾರ ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗೋಧಿಯ ರಫ್ತಿಗೆ ಮೇ ತಿಂಗಳಲ್ಲಿ ನಿರ್ಬಂಧ ಹೇರಿತು. ಆದರೆ, ಇದರಿಂದಾಗಿ ಗೋಧಿ ಹಿಟ್ಟಿಗೆ ವಿದೇಶಗಳಿಂದ ಬೇಡಿಕೆ ಬರುವುದು ಹೆಚ್ಚಾಯಿತು.

2021ಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್‌–ಜುಲೈ ಅವಧಿಯಲ್ಲಿ ದೇಶದ ಗೋಧಿ ಹಿಟ್ಟಿನ ರಫ್ತು ಪ್ರಮಾಣದಲ್ಲಿ ಶೇಕಡ 200ರಷ್ಟು ಹೆಚ್ಚಳ ಆಗಿದೆ. ಗೋಧಿ ಹಿಟ್ಟಿಗೆ ಬೇಡಿಕೆ ಹೆಚ್ಚಾದ ನಂತರದಲ್ಲಿ ಅದರ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಗಣನೀಯವಾಗಿ ಏರಿಕೆ ಕಂಡಿದೆ.

ಗೋಧಿ ಹಿಟ್ಟಿನ ರಫ್ತಿಗೆ ಯಾವುದೇ ನಿರ್ಬಂಧ ಹೇರದಿರುವ ನೀತಿ ಈ ಮೊದಲು ಇತ್ತು. ಹೀಗಾಗಿ, ದೇಶದ ಮಾರುಕಟ್ಟೆಯಲ್ಲಿ ಗೋಧಿ ಹಿಟ್ಟಿನ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ದೇಶದ ಆಹಾರ ಭದ್ರತೆಯನ್ನು ಖಾತರಿಪಡಿಸಲು ಈ ನೀತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡುವ ಅಗತ್ಯ ಎದುರಾಯಿತು ಎಂದು ಹೇಳಿಕೆಯು ತಿಳಿಸಿದೆ.

2021–22ನೆಯ ಸಾಲಿನಲ್ಲಿ ದೇಶವು ಒಟ್ಟು ₹ 1,966 ಕೋಟಿ ಮೌಲ್ಯದ ಗೋಧಿ ಹಿಟ್ಟನ್ನು ರಫ್ತು ಮಾಡಿದೆ. ಈ ಆರ್ಥಿಕ ವರ್ಷದ ಏಪ್ರಿಲ್‌–ಜೂನ್ ಅವಧಿಯಲ್ಲಿ ಒಟ್ಟು ₹ 1,023 ಕೋಟಿ ಮೌಲ್ಯದ ಗೋಧಿ ಹಿಟ್ಟು ರಫ್ತು ಮಾಡಲಾಗಿದೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT