ಸೋಮವಾರ, ಆಗಸ್ಟ್ 8, 2022
21 °C

ವೇತನ ಸಂಹಿತೆ ಜಾರಿ ಸದ್ಯಕ್ಕಿಲ್ಲ, ಪಿ.ಎಫ್‌. ಕೊಡುಗೆಯಲ್ಲಿ ಬದಲಾವಣೆ ಇಲ್ಲ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಾಲ್ಕು ಕಾರ್ಮಿಕ ಸಂಹಿತೆಗಳು ಗುರುವಾರದಿಂದ (ಏಪ್ರಿಲ್‌ 1) ಜಾರಿಗೆ ಬರುವುದಿಲ್ಲ. ಈ ಸಂಹಿತೆಗಳಿಗೆ ಸಂಬಂಧಿಸಿದಂತೆ ಅಗತ್ಯ ನಿಯಮಾವಳಿಗಳನ್ನು ರಾಜ್ಯ ಸರ್ಕಾರಗಳು ಅಂತಿಮಗೊಳಿಸದೆ ಇರುವ ಕಾರಣ, ಸಂಹಿತೆಗಳನ್ನು ಜಾರಿಗೊಳಿಸದಿರುವ ತೀರ್ಮಾನಕ್ಕೆ ಬರಲಾಗಿದೆ.

ಇದರ ಪರಿಣಾಮವಾಗಿ, ನೌಕರರಿಗೆ ಎಲ್ಲ ಕಡಿತಗಳ ನಂತರ ಕೈಗೆ ಸಿಗುವ ವೇತನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಉದ್ಯೋಗ ನೀಡಿದ ಕಂಪನಿಗಳು ನೌಕರರ ಭವಿಷ್ಯ ನಿಧಿ (ಪಿ.ಎಫ್‌) ಖಾತೆಗಳಿಗೆ ಹೆಚ್ಚುವರಿ ಕೊಡುಗೆ ನೀಡುವ ಅಗತ್ಯ ಸದ್ಯಕ್ಕೆ ಇಲ್ಲ.

ಓದಿ: 

ಕಾರ್ಮಿಕ ಸಂಹಿತೆಗಳ ಭಾಗವಾಗಿರುವ ವೇತನ ಸಂಹಿತೆ ಜಾರಿಗೆ ಬಂದರೆ, ಕಾರ್ಮಿಕರ ಮೂಲ ವೇತನ ಹಾಗೂ ಪಿ.ಎಫ್‌. ಕೊಡುಗೆಯನ್ನು ಲೆಕ್ಕ ಹಾಕುವ ವಿಧಾನದಲ್ಲಿ ಬದಲಾವಣೆ ಆಗುತ್ತದೆ. ಕೈಗಾರಿಕಾ ಸಂಬಂಧಗಳು, ವೇತನ, ಸಾಮಾಜಿಕ ಭದ್ರತೆ ಹಾಗೂ ಉದ್ಯೋಗ ಸ್ಥಳಗಳಲ್ಲಿ ಆರೋಗ್ಯ ರಕ್ಷಣೆಗೆ ಸಂಬಂಧಿಸಿದ ಸಂಹಿತೆಗಳನ್ನು ಏಪ್ರಿಲ್‌ 1ರಿಂದ ಜಾರಿಗೆ ತರಬೇಕು ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಉದ್ದೇಶಿಸಿತ್ತು.

ನಾಲ್ಕು ಸಂಹಿತೆಗಳಿಗೆ ಸಂಬಂಧಿಸಿದ ನಿಯಮಗಳನ್ನು ಸಚಿವಾಲಯವು ಅಂತಿಮಗೊಳಿಸಿತ್ತು. ‘ಆದರೆ, ರಾಜ್ಯಗಳು ನಿಯಮಗಳನ್ನು ಅಂತಿಮಗೊಳಿಸಿಲ್ಲವಾದ ಕಾರಣ, ಈ ಹಂತದಲ್ಲಿ ಸಂಹಿತೆಗಳನ್ನು ಅನುಷ್ಠಾನಕ್ಕೆ ತರುವುದಿಲ್ಲ’ ಎಂದು ಮೂಲವೊಂದು ತಿಳಿಸಿದೆ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ, ಹರಿಯಾಣ ಮತ್ತು ಉತ್ತರಾಖಂಡ ರಾಜ್ಯಗಳು ಕರಡು ನಿಯಮಗಳನ್ನು ಸಿದ್ಧಪಡಿಸಿದ್ದವು ಎನ್ನಲಾಗಿದೆ.

ಏನಿದೆ ಸಂಹಿತೆಯಲ್ಲಿ?

ನೌಕರರ ವೇತನಕ್ಕೆ ಸಂಬಂಧಿಸಿದ ಕೆಲವು ನಿಯಮಗಳ ಬಗ್ಗೆ ಉದ್ಯಮಗಳು ವಿರೋಧ ವ್ಯಕ್ತಪಡಿಸಿದ್ದವು. ನೌಕರರ ಒಟ್ಟು ವೇತನದಲ್ಲಿ ವಿವಿಧ ಭತ್ಯೆಗಳ ಪ್ರಮಾಣವು ಶೇಕಡ 50ರಷ್ಟನ್ನು ಮೀರುವಂತೆ ಇಲ್ಲ ಎಂದು ಸಂಹಿತೆಯು ಹೇಳುತ್ತದೆ. ಅಂದರೆ, ಉದ್ಯೋಗಿಯ ಮೂಲವೇತನವು ಒಟ್ಟು ವೇತನದ ಕನಿಷ್ಠ ಶೇ 50ರಷ್ಟು ಇರಬೇಕಾಗುತ್ತದೆ.

ಹೀಗ ಆದಾಗ, ನೌಕರನ ಕಡೆಯಿಂದ ಭವಿಷ್ಯ ನಿಧಿಗೆ (ಪಿ.ಎಫ್) ಜಮಾ ಆಗಬೇಕಿರುವ ಮೊತ್ತ ಹೆಚ್ಚಳವಾಗುತ್ತದೆ, ನೌಕರನ ಕೈಗೆ ಸಿಗುವ ವೇತನದ ಮೊತ್ತ ಕಡಿಮೆ ಆಗುತ್ತದೆ. ಕಂಪನಿಗಳ ಕಡೆಯಿಂದ ಪಿ.ಎಫ್‌.ಗೆ ಜಮಾ ಆಗಬೇಕಿರುವ ಮೊತ್ತ ಕೂಡ ಹೆಚ್ಚಾಗುತ್ತದೆ. ‘ಕೋವಿಡ್–19 ಸಂಕಷ್ಟದಿಂದ ಉದ್ಯಮಗಳು ಈಗಷ್ಟೇ ಚೇತರಿಸಿಕೊಳ್ಳುತ್ತಿವೆ. ಇಂತಹ ಸಂದರ್ಭದಲ್ಲಿ, ಉದ್ಯಮಗಳ ವೆಚ್ಚ ಹೆಚ್ಚಿಸುವ ಈ ನಿಯಮಗಳನ್ನು ಜಾರಿಗೆ ತರುವುದು ಬೇಡ’ ಎಂದು ಹಲವು ಉದ್ಯಮಗಳು ಸರ್ಕಾರವನ್ನು ಆಗ್ರಹಿಸಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು