ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಡೇರದ ಷೇರು ವಿಕ್ರಯದ ಗುರಿ

Last Updated 18 ಜನವರಿ 2019, 18:07 IST
ಅಕ್ಷರ ಗಾತ್ರ

ಮುಂಬೈ: ಪ್ರಸಕ್ತ ಹಣಕಾಸು ಸಾಲಿನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ್ದ ₹ 80 ಸಾವಿರ ಕೋಟಿ ಷೇರು ವಿಕ್ರಯದ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ವರದಿಯೊಂದು ತಿಳಿಸಿದೆ.

ಗುರಿ ಸಾಧನೆಯಲ್ಲಿ ₹ 20 ಸಾವಿರ ಕೋಟಿಗಳ ಕೊರತೆ ಬೀಳುತ್ತಿದೆ. ಸರಕು ಮತ್ತು ಸೇವಾ ತೆರಿಗೆ ಸಂಗ್ರಹದಲ್ಲಿಯೂ ಕುಸಿತ ಉಂಟಾಗಿದೆ. ಹೀಗಾಗಿ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಶೇ 3.5ರ ಬದಲಿಗೆ ಶೇ 3.3ಕ್ಕೆ ಇಳಿಸುವ ಸರ್ಕಾರದ ಉದ್ದೇಶ ಈಡೇರುವ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ದೇಶಿ ರೇಟಿಂಗ್ ಸಂಸ್ಥೆ, ‘ಕೇರ್‌ ರೇಟಿಂಗ್ಸ್‌’ನ ವರದಿಯಲ್ಲಿ ತಿಳಿಸಲಾಗಿದೆ.

ಹಣಕಾಸು ಮಾರುಕಟ್ಟೆಯಲ್ಲಿನ ಏರಿಳಿತದ ಕಾರಣಕ್ಕೆ ಷೇರು ವಿಕ್ರಯದ ಗುರಿ ತಲುಪುವುದು ಸಾಧ್ಯವಾಗುತ್ತಿಲ್ಲ. ಈ ಹಣಕಾಸು ವರ್ಷದಲ್ಲಿ ಷೇರು ವಿಕ್ರಯದಿಂದ ₹ 60 ಸಾವಿರ ಕೋಟಿ ಸಂಗ್ರಹಗೊಳ್ಳಲಿದೆ. 2017–18ನೇ ಹಣಕಾಸು ವರ್ಷ ಹೊರತುಪಡಿಸಿದರೆ ಹಿಂದಿನ ನಾಲ್ಕು ವರ್ಷಗಳಲ್ಲಿ ಷೇರು ವಿಕ್ರಯದ ಗುರಿ ತಲುಪಲು ಸಾಧ್ಯವಾಗಿಲ್ಲ.

ಹಣಕಾಸು ವರ್ಷ 2014 ರಿಂದ 2017ರವರೆಗಿನ ಅವಧಿಯಲ್ಲಿ ಬಜೆಟ್‌ನಲ್ಲಿ ಅಂದಾಜಿಸಿರುವ ಮೊತ್ತದಲ್ಲಿ ಸರಾಸರಿ ಶೇ 60ರಷ್ಟು ಮಾತ್ರ ಷೇರು ವಿಕ್ರಯ ಸಾಧ್ಯವಾಗಿದೆ. 2014ರಲ್ಲಿನ ಷೇರು ವಿಕ್ರಯದ ಒಟ್ಟಾರೆ ಸಂಗ್ರಹವು ಬಜೆಟ್‌ನಲ್ಲಿ ನಿಗದಿಪಡಿಸಿದ ಗುರಿಯ ಶೇ 53ರಷ್ಟು ಮಾತ್ರ ಇತ್ತು. 2018ರಲ್ಲಿ ಷೇರು ವಿಕ್ರಯದ ಮೂಲಕ ₹ 1 ಲಕ್ಷ ಕೋಟಿ ಸಂಗ್ರಹವಾಗಿತ್ತು. ಇದು ಬಜೆಟ್‌ ಅಂದಾಜಿಗಿಂತ (₹ 72,500 ಕೋಟಿ) ಹೆಚ್ಚಿಗೆ ಇತ್ತು.

ಪ್ರಸಕ್ತ ಹಣಕಾಸು ವರ್ಷ ಕೊನೆಗೊಳ್ಳಲು ಎರಡು ತಿಂಗಳು ಬಾಕಿ ಇದೆ. ಇದುವರೆಗೆ ಸರ್ಕಾರ ₹ 32,142 ಕೋಟಿ (ಶೇ 43) ಸಂಗ್ರಹಿಸಿದೆ. ಸರ್ಕಾರದ ಪಾಲು ಬಂಡವಾಳ ಮಾರಾಟಕ್ಕೆ ಅವಕಾಶ ನೀಡುವ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಷೇರುಪೇಟೆ ಹೂಡಿಕೆ ನಿಧಿ ಮೂಲಕ ₹ 25,325 ಕೋಟಿ ಸಂಗ್ರಹಿಸಲಾಗಿದೆ.

ಗುರಿ ಸಾಧಿಸಲು ಹಿಂದೆ ಬಿದ್ದಿರುವ ಸರ್ಕಾರ, ‘ಭಾರತ್‌–22’ ಇಟಿಎಫ್‌ನ ಷೇರು ಕೊಡುಗೆ ಮತ್ತು ಗ್ರಾಮೀಣ ವಿದ್ಯುದ್ದೀಕರಣ ನಿಗಮದಲ್ಲಿನ (ಆರ್‌ಇಸಿ) ಶೇ 52.63 ಪಾಲು ಬಂಡವಾಳವನ್ನು ಮಾರಾಟ ಮಾಡಿ ಬಂಡವಾಳ ಸಂಗ್ರಹಿಸಲಿದೆ.

ಕೇಂದ್ರೋದ್ಯಮಗಳ ಷೇರು ಮರು ಖರೀದಿ ಮೂಲಕ ₹ 12 ಸಾವಿರ ಕೋಟಿ ಸಂಗ್ರಹಿಸಬಹುದಾಗಿದೆ. ಏರಿಳಿತದಿಂದ ಕೂಡಿದ ಷೇರುಪೇಟೆಯಲ್ಲಿ ಈ ಎಲ್ಲ ಪರ್ಯಾಯ ಕ್ರಮಗಳು ಎಷ್ಟರಮಟ್ಟಿಗೆ ಫಲ ನೀಡಲಿವೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ‘ಕೇರ್‌ ರೇಟಿಂಗ್ಸ್‌’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT