ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲಭ ಶಿಕ್ಷಣ ಸಾಲಕ್ಕೆ ‘ಕ್ರೇಜಿಬೀ’

Last Updated 6 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಉನ್ನತ ವ್ಯಾಸಂಗಕ್ಕೆ ಬರುವ ವಿದ್ಯಾರ್ಥಿಗಳಿಗೆ ಅನೇಕ ಸಂದರ್ಭಗಳಲ್ಲಿ ಶೈಕ್ಷಣಿಕ ಉದ್ದೇಶದ ಖರ್ಚು ವೆಚ್ಚಗಳಿಗೆ ತುರ್ತಾಗಿ ಹಣಕಾಸಿನ ನೆರವು ಬೇಕಾಗಿರುತ್ತದೆ. ದೂರದ ಊರುಗಳಲ್ಲಿ ನೆಲೆಸಿರುವ ಪಾಲಕರು ಇವರಿಗೆ ಸಕಾಲದಲ್ಲಿ ಹಣ ರವಾನಿಸಲು ಸಾಧ್ಯವಾಗುವುದಿಲ್ಲ. ಮೊಬೈಲ್‌ ಬ್ಯಾಂಕಿಂಗ್‌, ಇಂಟರ್‌ನೆಟ್‌ ಬ್ಯಾಂಕಿಂಗ್ ಸೌಲಭ್ಯಗಳ ಬಳಕೆಗೆ ಹಿಂಜರಿಯುವ, ಡಿಜಿಟಲ್ ಮಾಧ್ಯಮದ ಬಗ್ಗೆ ಅಷ್ಟೇನೂ ತಿಳಿವಳಿಕೆ ಇಲ್ಲದ ಪಾಲಕರು ತಮ್ಮ ಬಳಿಯಲ್ಲಿ ಹಣವಿದ್ದರೂ ಮಕ್ಕಳಿಗೆ ಹಣ ರವಾನಿಸಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಪಾಲಕರು ಲೇವಾದೇವಿಗಾರರ ಬಳಿ ದುಬಾರಿ ಬಡ್ಡಿ ದರಕ್ಕೆ ಸಾಲ ಮಾಡಬೇಕಾಗುತ್ತದೆ. ಇಂತಹ ಅನನುಕೂಲತೆಗಳನ್ನೆಲ್ಲ ದೂರ ಮಾಡುವ, ತಕ್ಷಣಕ್ಕೆ ಶಿಕ್ಷಣ ಸಾಲ ಒದಗಿಸುವ ಸ್ಟಾರ್ಟ್‌ಅಪ್‌ ‘ಕ್ರೇಜಿಬೀ’ (KrazyBee) ಒಂದೂವರೆ ವರ್ಷದಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಬ್ಯಾಂಕ್‌ಗಳು ಶಿಕ್ಷಣ ಸಾಲ ನೀಡುತ್ತಿದ್ದರೂ, ಅದು ಮೂರ್ನಾಲ್ಕು ವರ್ಷಗಳ ದೀರ್ಘ ಅವಧಿಗೆ ಮಾತ್ರ ಲಭ್ಯ ಇರುತ್ತದೆ. ಕೆಲವರಿಗೆ ನಿರ್ದಿಷ್ಟ ಸೆಮಿಸ್ಟರ್‌ಗಳಿಗೆ ಮಾತ್ರ ಹಣದ ಅವಶ್ಯಕತೆ ಇರುತ್ತದೆ. ಕೆಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶದ ಬಳಕೆಗೆ ದಿಢೀರನೆ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಖರೀದಿಸುವ ಅನಿವಾರ್ಯತೆ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಸುಲಭವಾಗಿ ಸಾಲ ಒದಗಿಸಲು ‘ಕ್ರೇಜಿಬೀ’  ನೆರವಿಗೆ ಬರುತ್ತಿದೆ. ಇಂತಹ ಸಾಲ ಸೌಲಭ್ಯ ದೇಶದಲ್ಲಿಯೇ ಮೊದಲ ಪ್ರಯತ್ನವಾಗಿರುವುದು ಇದರ ಇನ್ನೊಂದು ಹೆಗ್ಗಳಿಕೆಯಾಗಿದೆ.

ಬೆಂಗಳೂರಿನಲ್ಲಿ ಅಸ್ತಿತ್ವಕ್ಕೆ ಬಂದಿರುವ ಈ ಹಣಕಾಸು ತಂತ್ರಜ್ಞಾನ ಕ್ಷೇತ್ರದ ನವೋದ್ಯಮವು, ಶಿಕ್ಷಣ ಕ್ಷೇತ್ರದಲ್ಲಿ ಸುಲಭ ಸಾಲ ಒದಗಿಸುವ ಮೂಲಕ ಅಲ್ಪಾವಧಿಯಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ಜನಪ್ರಿಯತೆ ಗಳಿಸಿದೆ. ಇದುವರೆಗೆ ಸಾಲ ವಿತರಿಸಿದ ಮೊತ್ತ ₹ 100 ಕೋಟಿಗೆ ತಲುಪಿರುವುದು ಈ ನವೋದ್ಯಮವು ವಿದ್ಯಾರ್ಥಿ ಸಮುದಾಯದಲ್ಲಿ ಮನ್ನಣೆ ಗಳಿಸಿರುವುದಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರಿನವರೇ ಆಗಿರುವ ಇ. ಮಧುಸೂದನ್‌ ಅವರು, ಸುರತ್ಕಲ್‌ನ ಎನ್‌ಐಟಿಯ ಕಂಪ್ಯೂಟರ್‌ ಸೈನ್ಸ್‌ ಪದವೀಧರರಾಗಿದ್ದಾರೆ. ತಂತ್ರಜ್ಞಾನ ಸಂಸ್ಥೆ ಹುವಾವೆಯಲ್ಲಿ ಕೆಲ ವರ್ಷ ಕೆಲಸ ಮಾಡಿ ತಮ್ಮ ಇಬ್ಬರು ಸಹೋದ್ಯೋಗಿಗಳ ಜತೆ ಸೇರಿ ಈ ಸ್ಟಾರ್ಟ್‌ಅಪ್‌ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಪದವಿ, ಸ್ನಾತಕೋತ್ತರ ಮತ್ತು ವೃತ್ತಿಪರ ಕೋರ್ಸ್ ಶಿಕ್ಷಣ ಪಡೆಯಲು ಮುಂದಾಗುವವರ ತುರ್ತು ಹಣಕಾಸು  ಒದಗಿಸುವುದೇ ಈ ನವೋದ್ಯಮದ ಮೂಲ ಉದ್ದೇಶವಾಗಿದೆ.

‘ನನಗೆ ಆರಂಭದಿಂದಲೂ ಉದ್ದಿಮೆ ವಹಿವಾಟು ಆರಂಭಿಸುವ ಬಗ್ಗೆ ಒಲವು ಇತ್ತು. ಹುವಾವೆಯಲ್ಲಿ ಕೆಲಸ ನಿರ್ವಹಿಸುವಾಗ ದಾವಣಗೆರೆಯಿಂದ ಬೆಂಗಳೂರಿಗೆ ಬಂದಿದ್ದ  ಸಂಬಂಧಿ ವಿದ್ಯಾರ್ಥಿಯೊಬ್ಬ ನಮ್ಮ ಮನೆಯಲ್ಲಿ ಇದ್ದುಕೊಂಡು ಉನ್ನತ ಶಿಕ್ಷಣ ಪಡೆಯುತ್ತಿದ್ದ. ಆತನಿಗೆ ಲ್ಯಾಪ್‌ಟಾಪ್‌ ಖರೀದಿಸಲು ತುರ್ತಾಗಿ ಹಣದ ಅವಶ್ಯಕತೆ ಎದುರಾಗಿತ್ತು. ಪಾಲಕರ ಬಳಿ ಹಣ ಇದ್ದರೂ, ಅದನ್ನು ಮಗನಿಗೆ ಸಕಾಲದಲ್ಲಿ ತಲುಪಿಸಲು ಸಾಧ್ಯವಾಗಿರಲಿಲ್ಲ. ಆಗ ಅವರು ಅನಿವಾರ್ಯವಾಗಿ ನನ್ನ ಬಳಿ ಮುಜುಗರದಿಂದಲೇ ಹಣದ ನೆರವಿಗೆ  ಕೋರಿಕೊಂಡಿದ್ದರು. ಇದು ನನ್ನ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಇಂತಹ ಅನೇಕ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ನೆರವಾಗಲು ಏನಾದರೂ ಹೊಸದನ್ನು ಮಾಡಬಹುದಲ್ಲ ಎನ್ನುವ ಆಲೋಚನೆ ಹೊಳೆದಿತ್ತು. ಅದನ್ನು ನನ್ನ ಇಬ್ಬರು ಸಹೋದ್ಯೋಗಿಗಳಾದ ಕಾರ್ತಿಕೇಯನ್‌ ಮತ್ತು ಗೌರಿನಾಥ್‌ ಅವರ ಬಳಿ  ಚರ್ಚಿಸಿ ಈ ಸ್ಟಾರ್ಟ್‌ಅಪ್‌ ಆರಂಭಿಸುವುದಕ್ಕೆ ಮೂರ್ತ ರೂಪ ಕೊಟ್ಟು ಅದನ್ನು ಕಾರ್ಯರೂಪಕ್ಕೆ ತರಲಾಯಿತು. ಮೂವರೂ ಹುವಾವೆ ಸಂಸ್ಥೆಯಿಂದ ಹೊರ ಬಂದು ‘ಕ್ರೇಜಿಬೀ’ ಆರಂಭಿಸಿದೆವು. ಆರಂಭದಲ್ಲಿ ಮೂವರು ಒಟ್ಟಾಗಿ ₹ 1 ಕೋಟಿ ತೊಡಗಿಸುವ ನಿರ್ಧಾರಕ್ಕೆ ಬರಲಾಗಿತ್ತು. ಆರಂಭಿಕ ಹಂತದಲ್ಲಿಯೇ ನಮ್ಮ ಈ ಸಾಹಸದಲ್ಲಿ ₹ 13 ಕೋಟಿಗಳಷ್ಟು ಹೊಸ ಬಂಡವಾಳದ ನೆರವು ನಮಗೆ ದೊರೆತಿತ್ತು. ಇದುವರೆಗೆ ₹ 76 ಕೋಟಿ ಸಂಗ್ರಹ ಮಾಡಲಾಗಿದೆ. ನವೆಂಬರ್‌ ತಿಂಗಳಿನಿಂದೀಚೆಗೆ ಸಂಸ್ಥೆ ಲಾಭದ ಹಾದಿಯಲ್ಲಿ ಸಾಗಿದೆ. ನಾವೀಗ ₹ 100 ಕೋಟಿಗಳಷ್ಟು ವಹಿವಾಟು ನಡೆಸುವ ಹಂತಕ್ಕೆ ತಲುಪಿದ್ದೇವೆ’ ಎಂದು ಮಧುಸೂದನ್‌ ಹೇಳುತ್ತಾರೆ.

ಸಂಸ್ಥೆಗೆ ಬ್ಯಾಂಕೇತರ ಹಣಕಾಸು ಸಂಸ್ಥೆಯ (ಎನ್‌ಬಿಎಫ್‌ಎಸ್‌) ವಹಿವಾಟು ನಡೆಸಲು ಭಾರತೀಯ ರಿಸರ್ವ್‌ ಬ್ಯಾಂಕ್‌ನಿಂದ ಲೈಸನ್ಸ್‌ ಸಿಕ್ಕಿದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಾದ ಇಂಡಿಯಾ ಇನ್ಫೊಲೈನ್‌ ಫೈನಾನ್ಶಿಯಲ್‌ ಸರ್ವಿಸಸ್‌ (ಐಐಎಫ್‌ಎಲ್‌) ಮತ್ತು  ಕ್ಯಾಷ್‌ ಸುವಿಧಾ, ‘ಕ್ರೇಜಿಬೀ’ನ ಪಾಲುದಾರ ಸಂಸ್ಥೆಗಳಾಗಿವೆ. ಶಿಕ್ಷಣ ಸಾಲ ಒದಗಿಸಲು ಕ್ರೇಜಿಬಿ ಒಂದು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಮೂರೂ ಸಂಸ್ಥೆಗಳು ಜತೆಯಾಗಿ (co-lending) ಸಾಲ ಮಂಜೂರು ಮಾಡುತ್ತವೆ. ಇಲ್ಲಿ ಸಾಲ ಕೊಡಿಸುವ ಜವಾಬ್ದಾರಿಯನ್ನು ಕ್ರೇಜಿಬೀ ಹೊತ್ತುಕೊಂಡಿರುತ್ತದೆ. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದು ವಿತರಿಸುವುದರಿಂದ ಬರುವ ಕಮಿಷನ್‌ ಮತ್ತು ಬಡ್ಡಿ ಲಾಭವು ‘ಕ್ರೇಜಿಬೀ’ನ ವರಮಾನದ ಮೂಲಗಳಾಗಿವೆ. ಸಾಲ ಮಂಜೂರಾತಿಗೆ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶುಲ್ಕ ವಿಧಿಸುವುದಿಲ್ಲ. ಸಾಲ ಮರು ಪಾವತಿಯ ಗರಿಷ್ಠ ಅವಧಿ  12 ತಿಂಗಳು ಮಾತ್ರ. ಈ ಅವಧಿ ಒಳಗೂ ಸಾಲ ಮರುಪಾವತಿಸಬಹುದು. ವಿದ್ಯಾರ್ಥಿಗಳ ಶೈಕ್ಷಣಿಕೆ ಅರ್ಹತೆ, ಸಾಲ ಮರುಪಾವತಿ ಪರಿಗಣಿಸಿ ಬಡ್ಡಿ ದರಗಳಲ್ಲಿ ರಿಯಾಯ್ತಿ ನೀಡುವ ಸೌಲಭ್ಯವೂ ಇದೆ.

ಸೆಮಿಸ್ಟರ್‌ ವೆಚ್ಚ ಭರಿಸುವ ಸಾಲ, ಇ–ಕಾಮರ್ಸ್‌ ತಾಣಗಳಿಂದ ಲ್ಯಾಪ್‌ಟಾಪ್, ಸ್ಮಾರ್ಟ್‌ಫೋನ್‌, ಕಂಪ್ಯೂಟರ್‌ ಬಿಡಿಭಾಗ ಸೇರಿದಂತೆ ಶೈಕ್ಷಣಿಕ ಪರಿಕರ ಖರೀದಿ ಸಾಲ, ಡಿಜಿಟಲ್‌ ಸ್ವರೂಪದ ಮಾಸ್ಟರ್‌ ಕ್ರೆಡಿಟ್‌ ಕಾರ್ಡ್‌, ಉದ್ಯೋಗಕ್ಕೆ ಸೇರಿದವರಿಗೆ ಬೈಕ್‌ ಖರೀದಿ ಸಾಲ ಸೌಲಭ್ಯಗಳನ್ನು ಸಂಸ್ಥೆ ಒದಗಿಸುತ್ತಿದೆ. ಇಲ್ಲಿ ವಿದ್ಯಾರ್ಥಿಗಳ ಕೈಗೆ ನಗದು ನೀಡಲಾಗುವುದಿಲ್ಲ. ಯಾವ ಉದ್ದೇಶಕ್ಕೆ ಸಾಲ ಪಡೆಯಲಾಗುತ್ತಿದೆ ಎನ್ನುವುದನ್ನು ಆಧರಿಸಿ ಸರಕು ಮತ್ತು ಸೇವೆ ಒದಗಿಸುವ ಸಂಸ್ಥೆಗೆ ನೇರವಾಗಿ ಸಾಲ ಪಾವತಿ ಮಾಡಲಾಗುತ್ತಿದೆ. ಇ–ಕಾಮರ್ಸ್‌ ಸಾಲ ಸೌಲಭ್ಯ ಒದಗಿಸಲು ಸಂಸ್ಥೆಯು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಜತೆ ಒಪ್ಪಂದ ಮಾಡಿಕೊಂಡಿದೆ.

ಬಸ್‌, ರೈಲು, ವಿಮಾನ ಟಿಕೆಟ್‌ ಖರೀದಿಯಂತಹ ತುರ್ತು ಸಂದರ್ಭಗಳಿಗೆ ನೆರವಾಗಲು ಡಿಜಿಟಲ್‌ ಸ್ವರೂಪದ ಕ್ರೆಡಿಟ್‌ ಕಾರ್ಡ್‌ ನೀಡಲಾಗುವುದು. ಇಂತಹ ಕಾರ್ಡ್‌ಗಳನ್ನು ಬೆಟ್ಟಿಂಗ್‌, ವಯಸ್ಕರ ಅಂತರ್ಜಾಲ ತಾಣ, ಪಬ್‌, ಬಾರ್‌ಗಳಲ್ಲಿ ಬಳಸದಂತೆ ನಿರ್ಬಂಧಿಸಲಾಗಿರುತ್ತದೆ. ಶೇ 14 ರಿಂದ ಶೇ 24ರವರೆಗೆ ಬಡ್ಡಿ ದರ ವಸೂಲಿ ಮಾಡಲಾಗುವುದು. ಆನ್‌ಲೈನ್‌ನಲ್ಲಿ ಮಾತ್ರ ಖರೀದಿಗೆ ಅವಕಾಶ ಇರುವ ಬಳಕೆ ಡಿಜಿಟಲ್‌ ಸ್ವರೂಪದ ಮಾಸ್ಟರ್‌ ಕಾರ್ಡ್‌ ನೀಡಲಾಗುವುದು. ಕ್ರೆಡಿಟ್ ಕಾರ್ಡ್‌ ಸಾಲದ ಮಿತಿ ₹ 8 ಸಾವಿರಕ್ಕೆ ಸೀಮಿತಗೊಳಿಸಲಾಗಿರುತ್ತದೆ.

‘ಸಂಸ್ಥೆ ಒದಗಿಸುವ ವಿವಿಧ ಬಗೆಯ ಹಣಕಾಸು ನೆರವು ಅಲ್ಪಾವಧಿ ಸಾಲದ ರೂಪದಲ್ಲಿ ಇರುತ್ತದೆ. ಸಾಲ ಮರುಪಾವತಿಯ ಶಿಸ್ತು ಕಾಪಾಡಿಕೊಳ್ಳಲೂ ಇದರಿಂದ ಸಾಧ್ಯವಾಗುತ್ತದೆ. ಸುಸ್ತಿದಾರರಾಗುವವರ ಮಾಹಿತಿಯನ್ನು ಸಾಲ ಮಾಹಿತಿ ಸಂಸ್ಥೆಗೆ (CIBIL)  ಸಲ್ಲಿಸಲಾಗುವುದು. ಇದರಿಂದ ಭವಿಷ್ಯದಲ್ಲಿ ಸಾಲ ಪಡೆಯುವುದು ದುಸ್ತರವಾಗಲಿದೆ ಎಂಬುದನ್ನು ಆರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಡಲಾಗಿರುತ್ತದೆ. ಹೀಗಾಗಿ ಸಾಲ ಮರುಪಾವತಿ ಸುಲಲಿತವಾಗಿರುತ್ತದೆ’ ಎಂದು ಮಧುಸೂದನ ಹೇಳುತ್ತಾರೆ.

‘ಸಾಲದ ಅರ್ಜಿಗಳನ್ನು ಸ್ವಯಂ ಚಾಲಿತವಾಗಿ ನಿರ್ವಹಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ. ವಿದ್ಯಾರ್ಥಿಗಳು ಒದಗಿಸುವ ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ ಮಾಹಿತಿ (ಇ–ಕೆವೈಸಿ) ಆಧರಿಸಿ ಸಾಲದ ಮೊತ್ತವೂ ಸ್ವಯಂಚಾಲಿತವಾಗಿ ನಿರ್ಧರಿಸುವ ವ್ಯವಸ್ಥೆಯೂ ಇಲ್ಲಿದೆ. ವಿದ್ಯಾರ್ಥಿಗಳು ಸೆಮಿಸ್ಟರ್‌ ಪರೀಕ್ಷೆಗಳಲ್ಲಿ ಉತ್ತೀರ್ಣಗೊಂಡಿದ್ದರೆ, ಸಾಲ ಮರುಪಾವತಿ ಸಾಮರ್ಥ್ಯ ಹೊಂದಿದ್ದರೆ ಮಾತ್ರ ಸಾಲ ಮಂಜೂರು ಮಾಡಲಾಗುವುದು.

‘ಶೈಕ್ಷಣಿಕ ಉದ್ದೇಶಕ್ಕೆ ಬಳಸಲು ₹  15 ಸಾವಿರವರೆಗೆ ಸಾಲ ಸೌಲಭ್ಯವನ್ನು ವಿದ್ಯಾರ್ಥಿಗಳಿಗೆ ನೇರವಾಗಿ ಮಂಜೂರು ಮಾಡಲಾಗುವುದು. ಇದಕ್ಕಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಪಾಲಕರು ಅಥವಾ ಪೋಷಕರನ್ನು ಸಹ ಸಾಲಗಾರರನ್ನಾಗಿ ಮಾಡಲಾಗುವುದು. ಪಾಲಕರ ಕುರಿತು ವಿದ್ಯಾರ್ಥಿಗಳು ಸಲ್ಲಿಸಿದ ಆಧಾರ್‌,ಪ್ಯಾನ್‌ಕಾರ್ಡ್‌ ಮಾಹಿತಿಯನ್ನು ಟ್ರೂಕಾಲರ್‌ ಮೂಲಕ ದೃಢಿಕರಿಸಲಾಗುವುದು.

‘ಇಲ್ಲಿ ವಿದ್ಯಾರ್ಥಿಗಳು ತಪ್ಪು ಮಾಹಿತಿ ನೀಡಿ ವಂಚನೆ ಎಸಗಲು ಸಾಧ್ಯವೇ ಇಲ್ಲ. ಸುಲಭವಾಗಿ ಇಕೆವೈಸಿ ಮೂಲಕ ಎಲ್ಲ ಮಾಹಿತಿ ಸಂಗ್ರಹಿಸಲಾಗಿರುತ್ತದೆ. ಆ್ಯಪ್ ಮೂಲಕವೇ  ಮಾಹಿತಿ ಹೋಲಿಸಿ ನೋಡಲಾಗುವುದು. ಬಹುಸಂಖ್ಯಾತ ವಿದ್ಯಾರ್ಥಿಗಳು (ಶೇ 85 ರಷ್ಟು) ಪ್ರಾಮಾಣಿಕವಾಗಿಯೇ ಸಾಲ ಮರುಪಾವತಿ ಮಾಡುತ್ತಾರೆ. ಶೇ 1.8 ಸುಸ್ತಿದಾರರೂ (ಎನ್‌ಪಿಎ) ಇದ್ದಾರೆ. ಈ ಮಾಹಿತಿಯನ್ನು ‘ಸಿಬಿಲ್‌’ಗೆ ಹಸ್ತಾಂತರಿಸಲಾಗುವುದು.

‘ಮೊಬೈಲ್ ಆ್ಯಪ್‌ ಮೂಲಕವೇ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ರಾಜ್ಯದಲ್ಲಿ ಬೆಂಗಳೂರು, ಮಣಿಪಾಲ್‌, ಮೈಸೂರಿನ ಶಿಕ್ಷಣ ಸಂಸ್ಥೆಗಳಲ್ಲಿ ಈ ಸಾಲ ಸೌಲಭ್ಯ ಲಭ್ಯ ಇದೆ. ಹೈದರಾಬಾದ್‌, ಚೆನ್ನೈ, ಮುಂಬೈ ಒಳಗೊಂಡಂತೆ ಒಟ್ಟು 11 ನಗರಗಳಲ್ಲಿ ‘ಕ್ರೇಜಿಬಿ’ ಅಸ್ತಿತ್ವದಲ್ಲಿ ಇದೆ.

‘ಶೈಕ್ಷಣಿಕ ಸಂಸ್ಥೆಗಳಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸುವವರ ಮಾಹಿತಿ ಸಂಗ್ರಹಿಸಲು ವಿದ್ಯಾರ್ಥಿಗಳನ್ನು ಕ್ಯಾಂಪಸ್‌ ಮ್ಯಾನೇಜರ್ ಆಗಿ ನೇಮಿಸಿಕೊಳ್ಳಲಾಗುತ್ತದೆ. ವಿದ್ಯಾರ್ಥಿನಿಯ
ರಿಂದ ಮಹಿಳಾ ಮ್ಯಾನೇಜರ್‌ಗಳಿಂದಲೇ ಮಾಹಿತಿ ಕಲೆ ಹಾಕಲಾಗುವುದು. ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಹಾಸ್ಟೆಲ್‌ ಮತ್ತಿತರ ಶುಲ್ಕಗಳು ಪಾವತಿಯಾಗುವುದರಿಂದ ಶಿಕ್ಷಣ ಸಂಸ್ಥೆಗಳೂ ಈ ನವೋದ್ಯಮ ಸ್ಥಾಪಕರ ಬೆನ್ನು ತಟ್ಟಿ ಪ್ರೋತ್ಸಾಹಿಸಿವೆ’ ಎಂದೂ ಮಧುಸೂದನ ಹೇಳುತ್ತಾರೆ.

ವಹಿವಾಟಿನ ಸ್ವರೂಪ

4 ಲಕ್ಷ ಇದುವರೆಗೆ ಸಲ್ಲಿಸಲಾದ ಸಾಲದ ಅರ್ಜಿಗಳ ಸಂಖ್ಯೆ

3 ಲಕ್ಷ ಸಾಲ ಮಂಜೂರು ಮಾಡಿದ ಅರ್ಜಿಗಳ ಸಂಖ್ಯೆ

3 ಸಾವಿರ ಪ್ರತಿ ದಿನ ಸಲ್ಲಿಕೆಯಾಗುವ ಅರ್ಜಿಗಳು


₹ 50 ರಿಂದ ₹ 70 ಲಕ್ಷ ಪ್ರತಿ ದಿನ ಮಂಜೂರು ಮಾಡುವ ಸಾಲದ ಮೊತ್ತ

11 ಸಂಸ್ಥೆಯ ವಹಿವಾಟು ಲಭ್ಯ ಇರುವ ನಗರಗಳ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT