ರೂಪಾಯಿ ಕುಸಿತ; ಅವಸರದ ಕ್ರಮ ಇಲ್ಲ

7

ರೂಪಾಯಿ ಕುಸಿತ; ಅವಸರದ ಕ್ರಮ ಇಲ್ಲ

Published:
Updated:
ಪೀಯೂಷ್‌ ಗೋಯಲ್‌

ನವದೆಹಲಿ (ಪಿಟಿಐ): ಡಾಲರ್‌ ಎದುರು ರೂಪಾಯಿ ಮೌಲ್ಯ ದಾಖಲೆ ಪ್ರಮಾಣದಲ್ಲಿ ಕುಸಿದಿರುವ ಪರಿಸ್ಥಿತಿ ಎದುರಿಸಲು ಅವಸರದಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕರೆನ್ಸಿ ವಿನಿಮಯ ಮಾರುಕಟ್ಟೆಯ ಗುರುವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 69ರ ಗಡಿ ದಾಟಿತ್ತು. ‘ಈ ಪರಿಸ್ಥಿತಿ ಎದುರಿಸಲು ತಕ್ಷಣಕ್ಕೆ ಯಾವುದೇ ಕ್ರಮ ಕೈಗೊಳ್ಳುವ ಅಗತ್ಯ ಉದ್ಭವಿಸಿಲ್ಲ’ ಎಂದು ಕೇಂದ್ರ ಹಣಕಾಸು ಸಚಿವ ಪೀಯೂಷ್ ಗೋಯಲ್‌ ಹೇಳಿದ್ದಾರೆ.

‘ವಿದೇಶಿ ವಿನಿಮಯ ಮತ್ತು ವಿನಿಮಯ ದರ ನಿರ್ವಹಿಸುವ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರ ಈ ಬಗ್ಗೆ ಚರ್ಚೆ ನಡೆಸಲಿವೆ. ಜಾಗತಿಕ ಪರಿಸ್ಥಿತಿ ಪರಿಗಣನೆಗೆ ತೆಗೆದುಕೊಂಡು ಅಗತ್ಯ ಕ್ರಮ ಕೈಗೊಳ್ಳಲಿವೆ. ಅವಸರದ ನಿರ್ಧಾರಕ್ಕೆ ಬರುವ ಅಗತ್ಯ ಈಗ ಉದ್ಭವಿಸಿಲ್ಲ.

‘2013ರಲ್ಲಿ ರೂಪಾಯಿ ವಿನಿಮಯ ದರ 68ಕ್ಕೆ ತಲುಪಿದಾಗ, ಆರ್‌ಬಿಐನ ಅಂದಿನ ಗವರ್ನರ್‌ ರಘುರಾಂ ರಾಜನ್‌ ಅವರು, ವಿದೇಶಿ ಕರೆನ್ಸಿ ಅನಿವಾಸಿ ಭಾರತೀಯರ ಬ್ಯಾಂಕ್‌ ಠೇವಣಿ (ಎಫ್‌ಸಿಎನ್‌ಆರ್‌–ಬಿ) ಯೋಜನೆ ಕಾರ್ಯಗತಗೊಳಿಸಿದ್ದರು. ಈ ಯೋಜನೆಯಡಿ ಮೂರು ವರ್ಷಗಳವರೆಗೆ ₹ 2.14 ಲಕ್ಷ ಕೋಟಿ ಹರಿದು ಬಂದಿತ್ತು. ಇದರ ಫಲವಾಗಿ ರೂಪಾಯಿ ದರ ಸ್ಥಿರಗೊಂಡಿತ್ತು. ಆ ಹಣವನ್ನೆಲ್ಲ ನಾವು ಮರಳಿಸಿದ್ದೇವೆ.

‘2012–13ರಲ್ಲಿ ಶೇ 4.8ರಷ್ಟಿದ್ದ ಚಾಲ್ತಿ ಖಾತೆ ಕೊರತೆಯು ಹಿಂದಿನ ಹಣಕಾಸು ವರ್ಷದಲ್ಲಿ ಶೇ 1.9ಕ್ಕೆ ಇಳಿದಿದೆ. ಶೇ 4.5ರಷ್ಟಿದ್ದ ವಿತ್ತೀಯ ಕೊರತೆಯು ಈಗ ಶೇ 3.5ಕ್ಕೆ ಇಳಿದಿದೆ. ಎಲ್ಲ ಮಾನದಂಡಗಳಿಂದ ನೋಡಿದರೂ ದೇಶಿ ಆರ್ಥಿಕತೆಯ ಪರಿಸ್ಥಿತಿ ಈಗ ಉತ್ತಮವಾಗಿದೆ. ಕಚ್ಚಾ ತೈಲ, ಅಮೆರಿಕದಲ್ಲಿ ಬಡ್ಡಿ ದರ ಹೆಚ್ಚಳ ಮತ್ತಿತರ ಕಾರಣಕ್ಕೆ ಡಾಲರ್‌ಗೆ ಬೇಡಿಕೆ ಹೆಚ್ಚುತ್ತಿದೆ’ ಎಂದು ಗೋಯಲ್‌ ಹೇಳಿದರು.

ಹಲವಾರು ಪ್ರತಿಕೂಲ ವಿದ್ಯಮಾನಗಳ ಕಾರಣಕ್ಕೆ ರೂಪಾಯಿ ದರ ಗುರುವಾರದ ವಹಿವಾಟಿನ ಅಂತ್ಯಕ್ಕೆ 68.79ರಲ್ಲಿ ಕೊನೆಗೊಂಡಿತ್ತು. ಶುಕ್ರವಾರದ ವಹಿವಾಟಿನಲ್ಲಿ ರೂಪಾಯಿ ಬೆಲೆ ಕೆಲಮಟ್ಟಿಗೆ ಚೇತರಿಕೆ ಕಂಡಿದೆ.

ಚಿದಂಬರಂ ಟೀಕೆ: ಒಂದು ಡಾಲರ್‌ಗೆ ರೂಪಾಯಿ ದರ 40ಕ್ಕೆ ಏರುವ ‘ಒಳ್ಳೆಯ ದಿನಗಳನ್ನು ತಾವು ಎದುರು ನೋಡುತ್ತಿರುವುದಾಗಿ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ ಅಧಿಕಾರಕ್ಕೆ ಬಂದರೆ ‘ಒಳ್ಳೆಯ ದಿನ’ಗಳು (ಅಚ್ಛೆ ದಿನ್‌) ಬರಲಿವೆ ಎಂದು ಪ್ರಚಾರ ಮಾಡಿದ್ದನ್ನು ಚಿದಂಬರಂ ಅವರು ಈಗ ರೂಪಾಯಿಯ ದಾಖಲೆ ಕುಸಿತದ ಸಂದರ್ಭದಲ್ಲಿ ಲೇವಡಿ ಮಾಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !