ನವದೆಹಲಿ: ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಈರುಳ್ಳಿ ಮಾರಾಟ ಮಾಡಲು ಆರಂಭಿಸಿದೆ. ದೆಹಲಿ-ಎನ್‌ಸಿಆರ್ ಮತ್ತು ಮುಂಬೈನಲ್ಲಿ ಪ್ರತಿ ಕೆ.ಜಿಗೆ ₹35ರಂತೆ ಈರುಳ್ಳಿಯ ಚಿಲ್ಲರೆ ಮಾರಾಟಕ್ಕೆ ಕೇಂದ್ರ ಚಾಲನೆ ನೀಡಿದೆ.
ರಾಷ್ಟ್ರೀಯ ಸಹಕಾರ ಗ್ರಾಹಕರ ಮಹಾಮಂಡಳ (ಎನ್‌ಸಿಸಿಎಫ್) ಹಾಗೂ ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟವು (ನಾಫೆಡ್) 4.7 ಲಕ್ಷ ಟನ್ ಈರುಳ್ಳಿ ದಾಸ್ತಾನು ಹೊಂದಿವೆ. ಈ ಏಜೆನ್ಸಿಗಳು ತಮ್ಮ ಸ್ವಂತ ಮಳಿಗೆಗಳು ಮತ್ತು ಸಂಚಾರಿ ಅಂಗಡಿಗಳ ಮೂಲಕ ಈರುಳ್ಳಿಯ ಚಿಲ್ಲರೆ ಮಾರಾಟ ಮಾಡುತ್ತಿವೆ. ದೆಹಲಿ-ಎನ್‌ಸಿಆರ್ ಮತ್ತು ಮುಂಬೈನ ಪರೇಲ್ ಮತ್ತು ಮಲಾಡ್‌ನಲ್ಲಿ 38 ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈರುಳ್ಳಿ ಮಾರಾಟ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.
ಕೇಂದ್ರೀಯ ಭಂಡಾರ, ಮದರ್ ಡೈರಿಯ ಸಫಲ್, ಇ-ಕಾಮರ್ಸ್ ವೇದಿಕೆಗಳಲ್ಲಿಯೂ ಈರುಳ್ಳಿಯನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಈರುಳ್ಳಿಯ ಚಿಲ್ಲರೆ ಬೆಲೆ ನವದೆಹಲಿಯಲ್ಲಿ ಪ್ರತಿ ಕೆ.ಜಿಗೆ ₹60 ಇದೆ.
ಈರುಳ್ಳಿ ಚಿಲ್ಲರೆ ಮಾರಾಟಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಆಹಾರ ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಸರ್ಕಾರದ ಆದ್ಯತೆಯಾಗಿದೆ. ಮೊದಲ ಹಂತವಾಗಿ ದೆಹಲಿ–ಎನ್‌ಸಿಆರ್ ಮತ್ತು ಮುಂಬೈನಲ್ಲಿ ಈರುಳ್ಳಿ ಮಾರಾಟಕ್ಕೆ ಚಾಲನೆ ನೀಡಲಾಗಿದೆ. ಸೆಪ್ಟೆಂಬರ್ 2ನೇ ವಾರದಿಂದ ಎರಡನೇ ಹಂತದಲ್ಲಿ ಕೋಲ್ಕತ್ತ, ಗುವಾಹಟಿ, ಹೈದರಾಬಾದ್, ಚೆನ್ನೈ, ಬೆಂಗಳೂರು, ಅಹಮದಾಬಾದ್ ಮತ್ತು ರಾಯ್‌ಪುರದಲ್ಲಿ ಮಾರಾಟ ಮಾಡಲಾಗುವುದು. ಮೂರನೇ ವಾರದಿಂದ ದೇಶದೆಲ್ಲೆಡೆ ಮಾರಾಟ ಆರಂಭಿಸಲಾಗುವುದು’ ಎಂದು ಹೇಳಿದ್ದಾರೆ.
ಎನ್‌ಸಿಸಿಎಫ್ ಮತ್ತು ನಾಫೆಡ್ ಪ್ರತಿ ಕೆ.ಜಿಗೆ ಸರಾಸರಿ ₹28ಯಂತೆ ಈರುಳ್ಳಿಯನ್ನು ರೈತರಿಂದ ಖರೀದಿಸಿವೆ. ಈ ಏಜೆನ್ಸಿಗಳು ದೇಶದಾದ್ಯಂತ ಇತರೆ ಸಹಕಾರಿ ಸಂಸ್ಥೆಗಳು ಮತ್ತು ದೊಡ್ಡ ಚಿಲ್ಲರೆ ಮಾರಾಟಗಾರರೊಂದಿಗೆ ಸಹ ಒಪ್ಪಂದ ಮಾಡಿಕೊಳ್ಳುತ್ತಿವೆ ಎಂದು ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ನಿಧಿ ಖರೆ ಹೇಳಿದ್ದಾರೆ.
ಆಗಸ್ಟ್‌ವರೆಗೆ ದೇಶದಲ್ಲಿ 2.9 ಲಕ್ಷ ಹೆಕ್ಟೇರ್‌ನಲ್ಲಿ ಈರುಳ್ಳಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1.94 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿತ್ತು. ಬಿತ್ತನೆ ಏರಿಕೆಯಾಗಿರುವುದರಿಂದ ಮುಂಬರುವ ದಿನಗಳಲ್ಲಿ ಈರುಳ್ಳಿ ಲಭ್ಯತೆ ಹೆಚ್ಚಾಗಲಿದೆ. ಇದಲ್ಲದೆ, ಸುಮಾರು 38 ಲಕ್ಷ ಟನ್ ಈರುಳ್ಳಿ ರೈತರು ಮತ್ತು ವ್ಯಾಪಾರಿಗಳ ಬಳಿ ಇದೆ. ಗ್ರಾಹಕರು ಮತ್ತು ರೈತರ ಹಿತದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಈರುಳ್ಳಿ ಲಭ್ಯತೆ ಮತ್ತು ಬೆಲೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಬೆಂಗಳೂರಲ್ಲಿ ಕೆ.ಜಿ ಈರುಳ್ಳಿ ₹60:
ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಬರುತ್ತಿರುವ ಗುಣಮಟ್ಟದ ದೊಡ್ಡ ಗಾತ್ರದ ಈರುಳ್ಳಿ ಕ್ವಿಂಟಲ್‌ಗೆ ₹4,800ಕ್ಕೆ ಮುಟ್ಟಿದೆ. ರಾಜ್ಯದ ಚಿತ್ರದುರ್ಗ ಮತ್ತು ಹಗರಿಬೊಮ್ಮನಹಳ್ಳಿಯಿಂದ ಮಾತ್ರ ಈರುಳ್ಳಿ ಪೂರೈಕೆಯಾಗುತ್ತಿದೆ. ಕಡಿಮೆ ಆವಕದಿಂದ ದರ ಏರಿಕೆಯಾಗಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ ಈರುಳ್ಳಿ ಧಾರಣೆ ₹60 ದಾಟಿದೆ ಎಂದು ಯಶವಂತಪುರ ಎಪಿಎಂಸಿಯ ಈರುಳ್ಳಿ ವರ್ತಕ ಜಿ. ಲೋಕಪ್ಪ ಹೇಳುತ್ತಾರೆ.
ಹೆಚ್ಚಿನ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಈರುಳ್ಳಿ ಬೆಳೆ ಕುಂಠಿತವಾಗಿದೆ. ಇದು ದರ ಹೆಚ್ಚಳಕ್ಕೆ ಕಾರಣವಾಗಿದೆ. ಇದರಿಂದಾಗಿ ಈ ವರ್ಷದ ಅಂತ್ಯದ ವೇಳೆಗೂ ಈರುಳ್ಳಿ ಬೆಲೆ ಕಡಿಮೆಯಾಗುವುದು ಅನುಮಾನವಾಗಿದೆ. ರಾಜಸ್ಥಾನದಿಂದ ಈರುಳ್ಳಿ ಬಂದರೆ ದರ ಕಡಿಮೆಯಾಗಬಹುದು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.