ಮುಂಬೈ: ಫಿನ್‌ಟೆಕ್ ವಲಯವು ಕಳೆದ 10 ವರ್ಷಗಳಲ್ಲಿ ₹2.59 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆಯನ್ನು ಆಕರ್ಷಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಫಿನ್‌ಟೆಕ್ ವಲಯದ ಬೆಳವಣಿಗೆಗೆ ಉತ್ತೇಜನ ನೀಡಲು, ಏಂಜೆಲ್ ತೆರಿಗೆ ರದ್ದು ಮಾಡುವುದು ಸೇರಿದಂತೆ ವಿವಿಧ ಕ್ರಮಗಳನ್ನು ಸರ್ಕಾರವು ಕೈಗೊಂಡಿದೆ ಎಂದು ಶುಕ್ರವಾರ ನಡೆದ ಜಾಗತಿಕ ಫಿನ್‌ಟೆಕ್ ಫೆಸ್ಟ್ ಕಾರ್ಯಕ್ರಮದಲ್ಲಿ ಹೇಳಿದರು.
ಸೈಬರ್ ವಂಚನೆ ತಡೆಗಟ್ಟಲು ಮತ್ತು ಜನರಲ್ಲಿ ಡಿಜಿಟಲ್ ಸಾಕ್ಷರತೆ ಹೆಚ್ಚಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ನಿಯಂತ್ರಕರಿಗೆ ಸೂಚಿಸಿದರು. ಭಾರತೀಯರು ಜಗತ್ತಿನಲ್ಲೇ ಅತಿ ತ್ವರಿತವಾಗಿ ಫಿನ್‌ಟೆಕ್ ಅನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಹಣಕಾಸು ಸೇವೆಗಳಿಂದಾಗಿ ಹಳ್ಳಿಗಳು ಮತ್ತು ನಗರಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿದೆ ಎಂದರು.
ವಿಶ್ವದ ಅತಿ ದೊಡ್ಡ ಕಿರುಸಾಲ ಯೋಜನೆಯಾದ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ₹27 ಲಕ್ಷ ಕೋಟಿಗೂ ಹೆಚ್ಚು ಸಾಲವನ್ನು ವಿತರಿಸಲಾಗಿದೆ ಎಂದು ತಿಳಿಸಿದರು.