ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರವು ಬಜೆಟ್‌ನಲ್ಲಿ ಹಾಕಿಕೊಂಡಿದ್ದ ತೆರಿಗೆ ಸಂಗ್ರಹ ಗುರಿಯನ್ನೂ ಮೀರಲಿದೆ!

Last Updated 21 ನವೆಂಬರ್ 2021, 20:45 IST
ಅಕ್ಷರ ಗಾತ್ರ

ಕೇಂದ್ರ ಸರ್ಕಾರವು 2021–22ರ ಬಜೆಟ್‌ನಲ್ಲಿ ಹಾಕಿಕೊಂಡಿದ್ದ ತೆರಿಗೆ ಸಂಗ್ರಹ ಗುರಿಯನ್ನೂ ಮೀರಿ ಹೆಚ್ಚಿನ ಆದಾಯವ ಸಂಗ್ರಹವಾಗಲಿದೆ ಎಂದು ಕೇಂದ್ರ ಸರ್ಕಾರದ ರೆವೆನ್ಯೂ ಕಾರ್ಯದರ್ಶಿ ಭಾನುವಾರ ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ನೇರ ಮತ್ತು ಪರೋಕ್ಷ ತೆರಿಗೆ ಆದಾಯದ ರೂಪದಲ್ಲಿ ₹22.17 ಲಕ್ಷ ಕೋಟಿಯನ್ನು ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಸರ್ಕಾರದ ಈ ತೆರಿಗೆಗಳ ಆದಾಯವು ಈ ಗುರಿಯನ್ನೂ ಮೀರುತ್ತದೆ ಎಂದು ರೆವೆನ್ಯೂ ಕಾರ್ಯದರ್ಶಿ ಹೇಳಿದ್ದಾರೆ. ಜಿಎಸ್‌ಟಿ ಸಂಗ್ರಹದಲ್ಲಿ ಆಗಿರುವ ಏರಿಕೆ ಮತ್ತು ಇಂಧನಗಳ ಮೇಲಿನ ಅಬಕಾರಿ ಸುಂಕದಲ್ಲಿನ ಏರಿಕೆಯಿಂದಾಗಿ (ನವೆಂಬರ್ ಆರಂಭದಲ್ಲಿ ಇದನ್ನು ಇಳಿಕೆ ಮಾಡಿದ್ದರೂ, ಅದು ಹಿಂದಿದ್ದ ಪ್ರಮಾಣಕ್ಕಿಂತ ಹೆಚ್ಚೇ ಇದೆ) ಸರ್ಕಾರದ ತೆರಿಗೆ ಮೂಲದ ಆದಾಯ ಏರಿಕೆಯಾಗಿದೆ

ಏಳು ತಿಂಗಳಲ್ಲೇ ಗುರಿ ದಾಟಿದ ಜಿಎಸ್‌ಟಿ(ತಿಂಗಳು; ಸಂಗ್ರಹವಾದ ಜಿಎಸ್‌ಟಿ)
ಏ.2021;₹1.40 ಲಕ್ಷ ಕೋಟಿ
ಮೇ 2021;₹0.98 ಲಕ್ಷ ಕೋಟಿ
ಜೂ.2021;₹0.93 ಲಕ್ಷ ಕೋಟಿ
ಜು.2021;₹1.16 ಲಕ್ಷ ಕೋಟಿ
ಆ.2021;₹1.12 ಲಕ್ಷ ಕೋಟಿ
ಸೆ.2021;₹1.17 ಲಕ್ಷ ಕೋಟಿ
ಅ.2021;₹1.30 ಲಕ್ಷ ಕೋಟಿ

ಜಿಎಸ್‌ಟಿ
ಜಿಎಸ್‌ಟಿ

ಜಿಎಸ್‌ಟಿ ಒಂದು ಪಟ್ಟು ಹೆಚ್ಚಾಗುವ ನಿರೀಕ್ಷೆ

ಕೇಂದ್ರ ಸರ್ಕಾರವು ಜಿಎಸ್‌ಟಿ ಮೂಲಕ ಈ ಆರ್ಥಿಕ ವರ್ಷದಲ್ಲಿ ₹6.3 ಲಕ್ಷ ಕೋಟಿ ಆದಾಯವನ್ನು ಸಂಗ್ರಹಿಸುವ ಗುರಿ ಹಾಕಿಕೊಂಡಿತ್ತು. ಆದರೆ ಈ ಆರ್ಥಿಕ ವರ್ಷದ ಮೊದಲ ಆರು ತಿಂಗಳಲ್ಲೇ ಈ ಗುರಿಯನ್ನೂ ಮೀರಿ ಹೆಚ್ಚಿನ ಆದಾಯವನ್ನು ಕೇಂದ್ರ ಸರ್ಕಾರವು ಸಂಗ್ರಹಿಸಿದೆ. ಅಕ್ಟೋಬರ್‌ ವರೆಗಿನ ತೆರಿಗೆ ಸಂಗ್ರಹ ₹8 ಲಕ್ಷ ಕೋಟಿಗೂ ಹೆಚ್ಚು. ನವೆಂಬರ್‌ನಿಂದ ಮಾರ್ಚ್‌ವರೆಗೆ ಪ್ರತೀ ತಿಂಗಳು ಕನಿಷ್ಠ ₹1.15 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗುವ ನಿರೀಕ್ಷೆ ಇದೆ. ಸರ್ಕಾರದ ನಿರೀಕ್ಷೆ ಕೈಗೂಡಿದರೆ, ಈ ಆರ್ಥಿಕ ವರ್ಷದ ಅಂತ್ಯಕ್ಕೆ ಜಿಎಸ್‌ಟಿ ಸಂಗ್ರಹದ ಮೊತ್ತವು ₹13.8 ಲಕ್ಷ ಕೋಟಿಯಷ್ಟಾಗಲಿದೆ. ಇದು ಜಿಎಸ್‌ಟಿ ಮೂಲದ ಆದಾಯದ ಗುರಿಗಿಂತ ಶೇ 120ರಷ್ಟು ಹೆಚ್ಚು


ಪರೋಕ್ಷ ತೆರಿಗೆಯೂ ಹೆಚ್ಚಳ

ಕೇಂದ್ರ ಸರ್ಕಾರವು ಈ ಆರ್ಥಿಕ ವರ್ಷದ ಅಂತ್ಯಕ್ಕೆ ಎಕ್ಸೈಸ್‌ ಸುಂಕ ಮತ್ತು ಕಸ್ಟಮ್ಸ್‌ಸುಂಕದ ರೂಪದಲ್ಲಿ ಒಟ್ಟು ₹4.71 ಲಕ್ಷ ಕೋಟಿ ಆದಾಯ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿತ್ತು. ಆದರೆ ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಈ ಗುರಿಯ ಶೇ 30.36ರಷ್ಟು ಆದಾಯವನ್ನು ಸಂಗ್ರಹಿಸಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಈ ಆದಾಯದ ಮೊತ್ತವು ₹ 6 ಲಕ್ಷ ಕೋಟಿಯನ್ನು ದಾಟುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

‘ಇದೇ ಏಪ್ರಿಲ್‌ನಿಂದ ಅಕ್ಟೋಬರ್‌ ಅಂತ್ಯದವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೇಂದ್ರ ಸರ್ಕಾರವು ₹3.36 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿದೆ’ ಎಂದು ವಿರೋಧ ಪಕ್ಷಗಳು ಹೇಳಿವೆ. ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದರು. ಆದರೆ, ಎಷ್ಟು ಸಂಗ್ರಹ ಆಗಿದೆ ಎಂಬುದನ್ನು ಸರ್ಕಾರವು ದೃಢಪಡಿಸಿಲ್ಲ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವಿಧಿಸಲಾಗುತ್ತಿರುವ ಕೇಂದ್ರ ಸಬಕಾರಿ ಸುಂಕವನ್ನು ಕೇಂದ್ರ ಸರ್ಕಾರವು ಇದೇ ತಿಂಗಳ ಆರಂಭದಲ್ಲಿ ಇಳಿಕೆ ಮಾಡಿತ್ತು. ಇದರಿಂದ ಆರ್ಥಿಕ ವರ್ಷದ ಅಂತ್ಯದ ವೇಳೆಗೆ ಒಟ್ಟು ಆದಾಯದಲ್ಲಿ ₹75,000 ಕೋಟಿಯಿಂದ ₹80,000 ಕೋಟಿ ಖೋತಾ ಆಗಲಿದೆ ಎಂದು ಸರ್ಕಾರ ಹೇಳಿದೆ.

ವಿರೋಧ ಪಕ್ಷಗಳು ಹೇಳುತ್ತಿರುವಂತೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್‌ ಸುಂಕವು ಈಗಾಗಲೇ ₹3.36 ಲಕ್ಷ ಕೋಟಿಯಷ್ಟು ಸಂಗ್ರಹವಾಗಿದ್ದರೆ, ಈ ವರ್ಷಾಂತ್ಯದ ವೇಳೆಗೆ ಸಂಗ್ರಹಿಸಲು ಹಾಕಿಕೊಂಡಿದ್ದ ಗುರಿಯನ್ನು ಸರ್ಕಾರವು ಈಗಾಗಲೇ ತಲುಪಿದಂತಾಗುತ್ತದೆ. ಹೀಗಾಗಿ ಸರ್ಕಾರವು ಬಜೆಟ್‌ನಲ್ಲಿ ನಿರೀಕ್ಷಿಸಿದ್ದ ಆದಾಯದಲ್ಲಿ ಯಾವುದೇ ಖೋತಾ ಆಗುವುದಿಲ್ಲ.

ವಿವರ;ಬಜೆಟ್‌ ಗುರಿ;ಮೊದಲ ತ್ರೈಮಾಸಿಕದಲ್ಲಿ ಸಂಗ್ರಹವಾದ ಮೊತ್ತ

ಅಬಕಾರಿ ಸುಂಕ;₹3.35 ಲಕ್ಷ ಕೋಟಿ;₹1.01 ಲಕ್ಷ ಕೋಟಿ
ಆಮದು ಸುಂಕ;₹1.36 ಲಕ್ಷ ಕೋಟಿ;₹41,831 ಕೋಟಿ
ಒಟ್ಟು;₹4.71 ಲಕ್ಷ ಕೋಟಿ;₹1.43 ಲಕ್ಷ ಕೋಟಿ


ಆಧಾರ: ಪಿಟಿಐ, ಕೇಂದ್ರ ರೆವೆನ್ಯೂ ಇಲಾಖೆ, ಆದಾಯ ತೆರಿಗೆ ಇಲಾಖೆ, ಜಿಎಸ್‌ಟಿ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT