ಶನಿವಾರ, ಜನವರಿ 28, 2023
18 °C
ತೈಲ ಬಾಂಡ್‌: ಈ ವರ್ಷ ಪಾವತಿಸಬೇಕಿರುವ ಮೊತ್ತ ₹ 10 ಸಾವಿರ ಕೋಟಿ

ಕೊಡಬೇಕಾದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ಸುಂಕ ಸಂಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಎಕ್ಸೈಸ್ ಸುಂಕದಿಂದ ಕೇಂದ್ರ ಸರ್ಕಾರ ಸಂಗ್ರಹಿಸಿದ ಮೊತ್ತವು ಪ್ರಸಕ್ತ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳುಗಳಲ್ಲಿ ಶೇಕಡ 48ರಷ್ಟು ಹೆಚ್ಚಳ ಆಗಿದೆ. ನಾಲ್ಕು ತಿಂಗಳಲ್ಲಿ ಸಂಗ್ರಹವಾಗಿರುವ ಮೊತ್ತವು ಕೇಂದ್ರ ಸರ್ಕಾರವು ತೈಲ ಬಾಂಡ್‌ಗಳಿಗೆ ಪ್ರತಿಯಾಗಿ ಈ ಇಡೀ ವರ್ಷದಲ್ಲಿ ಕೊಡಬೇಕಿರುವುದಕ್ಕಿಂತ ಮೂರು ಪಟ್ಟು ಹೆಚ್ಚು!

ಕೇಂದ್ರ ಹಣಕಾಸು ಸಚಿವಾಲಯದ ಲೆಕ್ಕಪತ್ರಗಳ ಮಹಾ ನಿಯಂತ್ರಕರ ಬಳಿ ಇರುವ ಅಂಕಿ–ಅಂಶಗಳ ಪ್ರಕಾರ, ಈ ವರ್ಷದ ಏಪ್ರಿಲ್‌ನಿಂದ ಜುಲೈವರೆಗೆ ಸಂಗ್ರಹ ಆಗಿರುವ ಎಕ್ಸೈಸ್ ಸುಂಕದ ಮೊತ್ತವು ₹ 1 ಲಕ್ಷ ಕೋಟಿಯನ್ನು ದಾಟಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹ 67,895 ಕೋಟಿ ಸಂಗ್ರಹ ಆಗಿತ್ತು. ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ನಂತರದಲ್ಲಿ, ಪೆಟ್ರೋಲ್, ಡೀಸೆಲ್, ವಿಮಾನ ಇಂಧನ ಮತ್ತು ನೈಸರ್ಗಿಕ ಅನಿಲದ ಮೇಲೆ ಮಾತ್ರ ಎಕ್ಸೈಸ್ ಸುಂಕ ವಿಧಿಸಲಾಗುತ್ತಿದೆ.

ಏಪ್ರಿಲ್‌–ಜುಲೈ ಅವಧಿಯಲ್ಲಿ ಆಗಿರುವ ₹ 32,492 ಕೋಟಿಯಷ್ಟು ಹೆಚ್ಚುವರಿ ಎಕ್ಸೈಸ್ ಸುಂಕ ಸಂಗ್ರಹವು, ಹಾಲಿ ಹಣಕಾಸು ವರ್ಷದಲ್ಲಿ ತೈಲ ಬಾಂಡ್‌ಗಳಿಗೆ ಪ್ರತಿಯಾಗಿ ಪಾವತಿ ಮಾಡಬೇಕಿರುವ ₹ 10 ಸಾವಿರ ಕೋಟಿಗಿಂತ ಮೂರು ಪಟ್ಟು ಜಾಸ್ತಿ. ಯುಪಿಎ ಸರ್ಕಾರದ ಅವಧಿಯಲ್ಲಿ ಸಬ್ಸಿಡಿ ದರದಲ್ಲಿ ಇಂಧನ ಒದಗಿಸುವ ಉದ್ದೇಶಕ್ಕೆ ತೈಲ ಬಾಂಡ್ ನೀಡಲಾಗಿತ್ತು.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಎಕ್ಸೈಸ್ ಸುಂಕದಿಂದಲೇ ಹೆಚ್ಚಿನ ಪ್ರಮಾಣದ ಎಕ್ಸೈಸ್ ಸುಂಕ ಸಂಗ್ರಹ ಆಗಿದೆ. ಎಲ್‌ಪಿಜಿ, ಸೀಮೆಎಣ್ಣೆ ಹಾಗೂ ಡೀಸೆಲ್‌ಅನ್ನು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲು, ಯುಪಿಎ ಸರ್ಕಾರವು ಒಟ್ಟು ₹ 1.34 ಲಕ್ಷ ಕೋಟಿ ಮೌಲ್ಯದ ತೈಲ ಬಾಂಡ್‌ಅನ್ನು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ ನೀಡಿದೆ. ಈ ಮೊತ್ತದಲ್ಲಿ ₹ 10 ಸಾವಿರ ಕೋಟಿಯನ್ನು ಕೇಂದ್ರ ಸರ್ಕಾರವು ಕಂಪನಿಗಳಿಗೆ ಈ ವರ್ಷ ಪಾವತಿಸಬೇಕಿದೆ.

ಇಂಧನ ಬೆಲೆಯು ದೇಶಿ ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ್ದರೂ, ಅವುಗಳ ಬೆಲೆ ತಗ್ಗಿಸಿ ಜನಸಾಮಾನ್ಯರ ಮೇಲಿನ ಹೊರೆಯನ್ನು ತಗ್ಗಿಸಲು ಸಾಧ್ಯವಾಗುತ್ತಿಲ್ಲದಿರುವುದಕ್ಕೆ ಕಾರಣ ತೈಲ ಬಾಂಡ್‌ಗಳು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಇಂಧನ ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದರು.

ಈ ಹಿಂದೆ ಇಂಧನವನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗಿತ್ತು. ಅದರ ಪರಿಣಾಮವಾಗಿ ಈಗ ಪಾವತಿ ಮಾಡಬೇಕಿರುವ ತೈಲ ಬಾಂಡ್‌ ಹಣವು, ಈಗ ಇಂಧನ ದರ ತಗ್ಗಿಸಲು ಅವಕಾಶ ಕೊಡುತ್ತಿಲ್ಲ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕ ತಗ್ಗಿಸಲು ಆಗದು ಎಂದು ನಿರ್ಮಲಾ ಅವರು ಈಚೆಗೆ ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು