ಶುಕ್ರವಾರ, ಫೆಬ್ರವರಿ 26, 2021
19 °C

ಹಳ್ಳಿಗರಿಗೆ ಗ್ರಾಮೋದ್ಧಾರ ಕೇಂದ್ರ

ಸುಬ್ರಮಣ್ಯ ಎಚ್.ಎಂ. Updated:

ಅಕ್ಷರ ಗಾತ್ರ : | |

Prajavani

ಗ್ರಾ ಮೀಣ ಜನರು ಆರ್ಥಿಕ ಸಬಲೀಕರಣ ಸಾಧಿಸಬೇಕೆಂಬ ತುಡಿತವೇ ಇವರ ಮಹೋನ್ನತ್ತ ಗುರಿಗೆ ಪ್ರೇರಣೆ. ಸಾಗುವ ಹಾದಿ ಹೂವಿನ ಹಾಸಿಗೆ ಅಲ್ಲ ಎಂಬ ಅರಿವಿದೆ. ಹಾದಿಗುಂಟ ಎದುರಾಗುವ ಕಲ್ಲು – ಮುಳ್ಳು ತುಳಿದು ಗಮ್ಯ ತಲುಪುವ ಆದಮ್ಯ ಕನಸು ಇವರದ್ದು.

ಈ ಹಾದಿಯಲ್ಲಿ ಸಾಗಿರುವ ಕೌಶಿಕ್‌ ಎಸ್‌.ಎಸ್‌ (33) ಮತ್ತು ಕಾವ್ಯ‌ ವೇಣು (32), ಈ ಹಿಂದೆ ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದವರು. ಉತ್ತಮ ಅದಾಯದ ಕೆಲಸ ಬಿಟ್ಟು ಹೊಸ ಆರ್ಥಿಕ ಮನ್ವಂತರ ಸೃಷ್ಟಿಸಲು ಹೆಜ್ಜೆ ಇಟ್ಟಿದ್ದಾರೆ. ಗ್ರಾಮೀಣ ಆರ್ಥಿಕತೆ ಬೇರು ಮಟ್ಟದಿಂದ ಪುಷ್ಟೀಕರಿಸುವ ಧ್ಯೇಯ ಇವರದ್ದು. ಇದಕ್ಕಾಗಿಯೇ ‘ದೇಸಿ ಸ್ಕಿಲ್ಸ್‌’ ಎನ್ನುವ ನೋಂದಾಯಿತ ಸರ್ಕಾರೇತರ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಆರೋಗ್ಯ, ಶಿಕ್ಷಣ, ಆರ್ಥಿಕತೆ ಮತ್ತು ಮಾಹಿತಿ ತಂತ್ರಜ್ಞಾನ ಸೇವೆ ಗ್ರಾಮೀಣ ಜನರಿಗೆ ತಲುಪಿಸುವ ಹಂಬಲ ಹೊಂದಿದ್ದಾರೆ.

‌ರಾಜ್ಯದಾದ್ಯಂತ 6,024 ಗ್ರಾಮ ಪಂಚಾಯ್ತಿಗಳಲ್ಲಿ ದೇಸಿ ಸ್ಕಿಲ್ಸ್ ಸಂಸ್ಥೆಯಡಿ, ‘ಗ್ರಾಮೋದ್ಧಾರ ಕೇಂದ್ರ’ಗಳನ್ನು ಆರಂಭಿಸುವ ಗುರಿ ಹೊಂದಿದ್ದಾರೆ. ಈಗಾಗಲೇ 500 ಕೇಂದ್ರಗಳು ಬೀದರ್, ಹುಬ್ಬಳ್ಳಿ – ಧಾರವಾಡ, ಮೈಸೂರು, ಮಂಡ್ಯ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರಂಭಿಸಿದ್ದಾರೆ.

‘ವೃದ್ಧಾಪ್ಯ ಹಾಗೂ ಅಂಗವಿಕಲರ ವೇತನ ಸೇರಿದಂತೆ ಸರ್ಕಾರದ ಕೆಲ ಸೌಲಭ್ಯ ಪಡೆಯಲು ಫಲಾನುಭವಿಗಳು ಬ್ಯಾಂಕ್‌ಗಳಿಗೆ ಎಡತಾಕಬೇಕಾಗುತ್ತದೆ. ಗ್ರಾಮೀಣ ಭಾಗದ ಬ್ಯಾಂಕ್‌ಗಳಲ್ಲಿ ಅತಿಯಾದ ಜನದಟ್ಟಣೆಯಿಂದ ಸಕಾಲದಲ್ಲಿ ಸೌಲಭ್ಯ ‍ಪಡೆಯಲು ಸಾಧ್ಯವಾಗುವುದಿಲ್ಲ. ಫಲಾನುಭವಿಗಳ ಬಯೊಮೆಟ್ರಿಕ್ ಪಡೆದು ಮನೆ ಬಾಗಿಲಿಗೆ ಹಣ ಮತ್ತಿತರ ಸೌಲಭ್ಯ ಒದಗಿಸುವ ವ್ಯವಸ್ಥೆಯನ್ನು ಗ್ರಾಮೋದ್ಧಾರ ಕೇಂದ್ರಗಳು ಮಾಡಲಿವೆ’ ಎಂದು ಸಂಸ್ಥೆ ಸ್ಥಾಪಕ ಪ್ರಧಾನ ಕಾರ್ಯದರ್ಶಿ ಕೌಶಿಕ್ ಹೇಳುತ್ತಾರೆ. 

ಪಿಯುಸಿ ಪಾಸಾದ ಗ್ರಾಮೀಣ ಭಾಗದ ಕ್ರಿಯಾಶೀಲ ಯುವಕ –ಯುವತಿಯರಿಗೆ ಈ ಕೇಂದ್ರಗಳ ಪ್ರಾಂಚೈಸಿ ನೀಡಲಾಗುವುದು. ಕೇಂದ್ರ ಸ್ಥಾಪನೆ, ಬೇಕಾದ ಉಪಕರಣಗಳ ಖರೀದಿಗೆ ದೇಸಿ ಸ್ಕಿಲ್ಸ್‌ನ ‘ಸುಗ್ರಾಮ ಯೋಜನೆ’ಯಡಿ ₹ 1ಲಕ್ಷ ಸಾಲ ಸೌಲಭ್ಯವೂ ಸಿಗಲಿದೆ. ಗ್ರಾಮೀಣ ಮಟ್ಟದಲ್ಲಿ ಕೆಲ ಗುಡಿ ಕೈಗಾರಿಕೆಗಳಿದ್ದು ಸರಿಯಾದ ಮಾರ್ಗದರ್ಶನ ಇಲ್ಲದೆ ಸೊರಗುತ್ತಿವೆ. ಸಂಸ್ಥೆ ಮಾರ್ಗದರ್ಶನದಡಿ ಉನ್ನತೀಕರಣಗೊಳಿಸಿ ಆರ್ಥಿಕ ಸಹಾಯ ನೀಡಲಾಗುವುದು. ಸ್ತ್ರೀಶಕ್ತಿ ಸಂಘಗಳು ಮಹಿಳಾ ಆರ್ಥಿಕ ಸಬಲೀಕರಣ ದೃಷ್ಟಿಯಿಂದ ಮುಂಚೂಣಿಯಲ್ಲಿವೆ. ಉತ್ತಮ ಸಂಘಗಳಿಗೆ ಆರ್ಥಿಕ ಬೆಂಬಲ ನೀಡುವ ಉದ್ದೇಶವಿದೆ ಎಂದು ಸಂಸ್ಥೆ ಸ್ಥಾಪಕ ಕಾರ್ಯದರ್ಶಿ ಕಾವ್ಯ ವೇಣು ಮಾಹಿತಿ ಹಂಚಿಕೊಳ್ಳುತ್ತಾರೆ.

ಬ್ಯಾಂಕಿಂಗ್ ಹಾಗೂ ನಾಗರಿಕ ಸೇವಾ ಪಾವತಿ
ಗ್ರಾಮೋದ್ಧಾರ ಕೇಂದ್ರ ಮೂಲಕ ಹಣ ಜಮಾವಣೆ, ಹಿಂದೆಪಡೆಯುವುದು, ಖಾತೆ ತೆರೆಯುವ ಸೇವೆಗಳು ಲಭ್ಯ ಇವೆ. ನಾಗರಿಕ ಸೇವಾ ಪಾವತಿಯಲ್ಲಿ ಬಸ್, ರೈಲು ಟಿಕೆಟ್ ಹಾಗೂ ಹೋಟೆಲ್ ಕಾಯ್ದಿರಿಸುವಿಕೆ, ವಿದ್ಯುತ್, ನೀರಿನ ಬಿಲ್ ಪಾವತಿ, ಪರೀಕ್ಷಾ ಶುಲ್ಕ, ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಜ್‌ ಸೇವೆ ಸಿಗಲಿದೆ.

ವಿಮೆ ಮತ್ತು ಆರ್ಥಿಕ ಸೇವೆ
ಆರೋಗ್ಯ, ಅಪಘಾತ, ಕೃಷಿ, ಆಸ್ತಿ, ಗುಂಪು ಮತ್ತು ವ್ಯಾವಹಾರಿಕ ವಿಮೆ ಮಾಡಿ ಕೊಡಲಾಗುವುದು. ಪ್ಯಾನ್ ಕಾರ್ಡ್, ಜಿಎಸ್‍ಟಿ ನೋಂದಣಿ, ಆದಾಯ ತೆರಿಗೆ ರಿಟನ್ಸ್‌, ಡಿಜಿಟಲ್ ಸಹಿ ಪ್ರಮಾಣಪತ್ರ, ಸರ್ಕಾರಿ ಟೆಂಡರ್ ಅನ್ನು ಈ ಕೇಂದ್ರಗಳ ಮೂಲಕ ಸಲ್ಲಿಸಬಹುದು.

ಇ-ಕಾಮರ್ಸ್: ಗ್ರಾಮೀಣ ಭಾಗಕ್ಕೂ ಇ– ಕಾಮರ್ಸ್ ಸೇವೆ ಒದಗಿಸುವ ಗುರಿ ಇದೆ. ವಿದ್ಯುನ್ಮಾನ, ವಿದ್ಯುತ್ ಹಾಗೂ ಇತರ ಉಪಕರಣಗಳನ್ನು ಕಾಯ್ದಿರಿಸಿ ಗ್ರಾಮೋದ್ಧಾರ ಕೇಂದ್ರಗಳ ಮೂಲಕ ಪಡೆಯಬಹುದು. ಇತರ ಆನ್‌ಲೈನ್ ಪೋರ್ಟಲ್‌ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಈ ಸೇವೆಗಳು ಸಿಗಲಿವೆ.‌

ಸೋಲಾರ್ ಉತ್ಪನ್ನ
ಬೀದಿ ದೀಪ, ಮನೆ ಬಳಕೆ ದೀಪ, ಪ್ಯಾನಲ್‍ ಸೇರಿದಂತೆ ಸೋಲಾರ್ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯೂ ಇಲ್ಲಿದೆ. ಪತಂಜಲಿ ಸೇರಿದಂತೆ ಹಲವು ರೀತಿಯ ಉತ್ಪನ್ನಗಳ ಮಾರಾಟಕ್ಕೂ ಇಲ್ಲಿ ವ್ಯವಸ್ಥೆ ಇದೆ. ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ, ಇಪ್ಕೊ ಟೋಕಿಯೊ ಸಂಸ್ಥೆ ಮಾನ್ಯತೆಯನ್ನು ಈ ಕೇಂದ್ರಗಳು ಪಡೆದಿವೆ. 

ಉದ್ಯೋಗ ಸಂಜೀವಿನಿ
ಗ್ರಾಮೋದ್ಧಾರ ಕೇಂದ್ರವು ‌‘ಉದ್ಯೋಗ ಸಂಜೀವಿನಿ’ ಎನ್ನುವ ಆನ್‍ಲೈನ್ ಪೋರ್ಟಲ್ ಹೊಂದಿದೆ. ಉದ್ಯೋಗಾಕಾಂಕ್ಷಿಗಳು ನೋಂದಣಿಯಾಗುವುದರ ಮೂಲಕ ಜೀವಿತಾವಧಿ ಸದಸ್ಯತ್ವ ಪಡೆಯಬಹುದು. ಇದರಲ್ಲಿ ಎಲ್ಲಾ ವರ್ಗದ ಉದ್ಯೋಗಾಕಾಂಕ್ಷಿಗಳಿಗೂ ಒತ್ತು ನೀಡಲಾಗಿದೆ.

ಹೈನುಗಾರಿಕೆಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗಲಿದೆ. ಗ್ರಾಮೀಣ ಮಟ್ಟದಲ್ಲಿ ಉತ್ಪತಿಯಾಗುವ ತ್ಯಾಜ್ಯಗಳನ್ನು ವೈಜ್ಞಾನಿಕ ರೀತಿಯಲ್ಲಿ ಸಂಸ್ಕರಿಸಿ ವಿದ್ಯುತ್‌ ಉತ್ಪಾದನೆ ಮಾಡಲು ಸಣ್ಣ ಘಟಕಗಳ ಸ್ಥಾಪನೆಗೆ ಸಹಾಯ, ಸ್ಥಳೀಯವಾಗಿ ಪಿಗ್ಮಿ ಹಣದ ಬಗ್ಗೆ ಸೂಕ್ತ ಮಾಹಿತಿಯನ್ನೂ ಈ ಕೇಂದ್ರಗಳು ಒದಗಿಸಲಿವೆ.

ಈ ಎಲ್ಲಾ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಒದಗಿಸಲು ಬೆಂಗಳೂರಿನ ಉತ್ತರಹಳ್ಳಿಯಲ್ಲಿ ಸುಸಜ್ಜಿತ ಕೇಂದ್ರ ಕಚೇರಿ ಹೊಂದಿದೆ. ನಾಗರಿಕರು ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಿಸಲು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ‘ಸ್ನೇಹವಾಣಿ’ ಕೇಂದ್ರ ಸ್ಥಾಪಿಸಿದೆ. ಸಂಸ್ಥೆಯು ನುರಿತ ತಾಂತ್ರಿಕ ವರ್ಗ, ಉನ್ನತ ವಿನ್ಯಾಸಕಾರರು, ಕಾನೂನು ಹಾಗೂ ದಾಖಲಾತಿ ವಿಭಾಗ ಹೊಂದಿದೆ. ಲೆಕ್ಕಪತ್ರಗಳ ನಿರ್ವಹಣೆಗಾಗಿ ಆರ್ಥಿಕ ವಿಭಾಗ ಇದೆ. ಮಾನವ ಸಂಪನ್ಮೂಲ, ಮಾರುಕಟ್ಟೆ ವಿಸ್ತರಣೆಗಾಗಿ ಮುಖ್ಯಸ್ಥರು, ಬ್ಯಾಂಕಿಂಗ್ ನಿರ್ವಹಣೆಗಾಗಿ ವಿಶೇಷ ವಿಭಾಗ, ಪ್ಯಾನ್ ಕಾರ್ಡ್‍ಗೆ ಸಂಬಂಧಿಸಿದಂತೆ ಪ್ರತ್ಯೇಕ ವಿಭಾಗ ಕೆಲಸ ಮಾಡುತ್ತಿದೆ. ನೇರ ಸಂಪರ್ಕ ಜಾಲ, ಎಲ್ಲಾ ರೀತಿಯ ದತ್ತಾಂಶ (ವಿವರ) ಒಂದೇ ವೇದಿಕೆಯಲ್ಲಿ ಸಿಗುವ ವ್ಯವಸ್ಥೆಯೂ ಇದೆ ಎನ್ನುತ್ತಾರೆ ಸಂಸ್ಥೆ ತಾಂತ್ರಿಕ ನಿರ್ದೇಶಕ ಮನೋಹರ್‌.

ಮುಂದಿನ ದಿನಗಳಲ್ಲಿ ಈ ಕೇಂದ್ರಗಳ ಮುಖೇನ 15 ಸಾವಿರ ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಇದೆ. ಗ್ರಾಮೋದ್ಧಾರ ಕೇಂದ್ರವನ್ನು ಮಂಜೂರು ಮಾಡುವ ಪರಮಾಧಿಕಾರ ಆಡಳಿತ ಮಂಡಳಿಯ ನಿರ್ಣಯವೇ ಅಂತಿಮ ಎನ್ನುತ್ತಾರೆ ಸಂಸ್ಥೆ ಉಪಾಧ್ಯಕ್ಷ ಮುರಳೀಧರ, ನಿರ್ದೇಶಕರಾದ ರಾಮಣ್ಣ ಮತ್ತು ಕುಮಾರ್.

ಸೇವೆಗಳು
ಬ್ಯಾಂಕಿಂಗ್ ಹಾಗೂ ನಾಗರಿಕ ಸೇವಾ ಪಾವತಿ
ವಿಮೆ ಮತ್ತು ಆರ್ಥಿಕ ಸೇವೆ
ಅಗ್ಗದ ಇ-ಕಾಮರ್ಸ್ ಸೇವೆ
ಸೋಲಾರ್ ಉತ್ಪನ್ನ ಮತ್ತು ಇತರ ವಸ್ತುಗಳ ಮಾರಾಟ
‌ಉದ್ಯೋಗ ಸಂಜೀವಿನಿ

ಮಾಹಿತಿಗೆ: 90086 66686 ಸಂಪರ್ಕಿಸಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು