ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಳಕ ತಂದ ಮೋಡ ಸೃಷ್ಟಿ

ವಿಜ್ಞಾನಕ್ಕೆ ಸಂಬಂಧಿಸಿದ 48 ಉಪಕರಣಗಳ ಆವಿಷ್ಕಾರ
Last Updated 22 ಏಪ್ರಿಲ್ 2018, 18:59 IST
ಅಕ್ಷರ ಗಾತ್ರ

ಬೆಂಗಳೂರು: ಮೋಡ ಸೃಷ್ಟಿಯಾಗುವ ಪ್ರಕ್ರಿಯೆಯನ್ನು ಕಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು, ಅದರ ಸ್ಪರ್ಶವನ್ನೂ ಮಾಡಿ ಪುಳಕಿತಗೊಂಡರು. ಶಬ್ದ ತರಂಗಗಳು ಹೇಗೆ ಚಲಿಸುತ್ತವೆ ಎಂಬುದನ್ನು ಕಣ್ಣಾರೆ ಕಂಡರು. ಎಲ್‌ಇಡಿ ಪರದೆಯ ಕಾರ್ಯನಿರ್ವಹಣೆ ಬಗ್ಗೆಯೂ ಮಾಹಿತಿ ಪಡೆದರು.

ಹ್ಯಾಂಡ್ಸ್‌ ಆನ್‌ ಲರ್ನಿಂಗ್‌ ಲ್ಯಾಬ್ಸ್‌ ಸಂಸ್ಥೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಹ್ಯಾಂಡ್ಸ್‌ ಆನ್‌ ಸೈನ್ಸ್‌ ಪ್ರಾಡಕ್ಟ್‌’ ಬಿಡುಗಡೆ ಕಾರ್ಯಕ್ರಮದಲ್ಲಿ ಕಂಡ ದೃಶ್ಯಗಳಿವು.

6ರಿಂದ 10ನೇ ತರಗತಿಯವರೆಗೆ ವಿಜ್ಞಾನದ (ಭೌತವಿಜ್ಞಾನ, ರಾಸಾಯನಿಕ ವಿಜ್ಞಾನ ಹಾಗೂ ಜೀವವಿಜ್ಞಾನ) ಪಠ್ಯಕ್ರಮದಲ್ಲಿ ಬರುವ ವಿಷಯಗಳನ್ನು ಪ್ರಾಯೋಗಿಕವಾಗಿ ತೋರಿಸುವ ಉದ್ದೇಶದಿಂದ ಸಂಸ್ಥೆಯು 48 ಉಪಕರಣಗಳನ್ನು ತಯಾರಿಸಿದೆ. ಮೋಡ ಸೃಷ್ಟಿಯಾಗುವ ಪ್ರಕ್ರಿಯೆ ಕುರಿತು ಶಿಕ್ಷಕರು ಪಾಠ ಮಾಡುತ್ತಾರೆ. ಆದರೆ, ವಿದ್ಯಾರ್ಥಿಗಳಿಗೆ ಅದರ ನೈಜ ಅನುಭವ ‌ಆಗುವುದಿಲ್ಲ. ಇದನ್ನು ಮನಗಂಡ ಸಂಸ್ಥೆಯು ‘ಕ್ಲೌಡ್‌ ಮೇಕರ್‌’ ಎಂಬ ಉಪಕರಣವನ್ನು ಅಭಿವೃದ್ಧಿಪಡಿಸಿದೆ.‌

ಶಬ್ದವನ್ನು ಕೇಳುತ್ತಾರೆ. ಆದರೆ, ನೋಡುವುದಿಲ್ಲ. ಶಬ್ದ ತರಂಗಗಳು ಚಲಿಸುವುದನ್ನು ನೋಡುವುದಕ್ಕಾಗಿ ‘ಮೆಲ್ಡೆಸ್‌’ ಎಂಬ ಉಪಕರಣವನ್ನು ಅಭಿವೃದ್ಧಿಪಡಿಸಲಾಗಿದೆ. ತಂತಿರಹಿತ ಚಾರ್ಜಿಂಗ್‌ ಮಾಡುವುದು ಹಾಗೂ ಅದರ ಕಾರ್ಯನಿರ್ವಹಣೆ ಕುರಿತು ತಿಳಿಯಲು ‘ವಯರ್‌ಲೆಸ್‌ ಚಾರ್ಜರ್‌’ ಇದೆ.

ಪ್ರಾಥಮಿಕ ಬಣ್ಣಗಳ ಅಧ್ಯಯನಕ್ಕಾಗಿ
‘ಕಲರ್‌ ಶ್ಯಾಡೊ’ ಉಪಕರಣವಿದೆ. ವಿವಿಧ ಬಣ್ಣಗಳನ್ನು ಪ್ರತ್ಯೇಕವಾಗಿ ಬಳಸಿದಾಗ ವ್ಯಕ್ತಿಯ ನೆರಳು ಕಪ್ಪುಬಣ್ಣದಿಂದಲೇ ಇರುತ್ತದೆ. ಆದರೆ, ಕೆಂಪು, ಹಸಿರು, ನೀಲಿ ಬಣ್ಣಗಳನ್ನು ಒಟ್ಟಿಗೆ ಬಳಸಿದಾಗ ಮಾತ್ರ ನೆರಳು ಆಯಾ ಬಣ್ಣಗಳಲ್ಲೇ ಗೋಚರಿಸುತ್ತದೆ. ಈ ಬಣ್ಣಗಳ ಸಂಯೋಜನೆಯ ಪರಿಕಲ್ಪನೆ ಆಧರಿಸಿ ಎಲ್‌ಇಡಿ ಪರದೆ ಕಾರ್ಯನಿರ್ವಹಿಸುತ್ತದೆ ಎಂದು ಲ್ಯಾಬ್ಸ್‌ನ ಮಾರುಕಟ್ಟೆ ವಿಭಾಗದ ನಿರ್ದೇಶಕ ಶಿವಕುಮಾರ್‌ ತಿಳಿಸಿದರು.

ಟೈಚ್‌ ಸ್ಕಿಲ್‌ ವರ್ಡ್‌ ಸಂಸ್ಥೆಯ ಮುಖ್ಯಸ್ಥ ಅಸ್ಗರ್‌, ‘ಶಿಕ್ಷಣದ ಕಲಿಕಾ ವಿಧಾನದಲ್ಲಿ ಬದಲಾವಣೆ ಅಗತ್ಯವಿದೆ. ಸ್ವತಂತ್ರವಾಗಿ ಚಿಂತಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಬೇಕು. ಅವರಲ್ಲಿ ಕುತೂಹಲ ಹೆಚ್ಚಿರುತ್ತದೆ. ಇದಕ್ಕಾಗಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಕುತೂಹಲವನ್ನು ಕಡೆಗಣಿಸಬಾರದು’ ಎಂದು ಸಲಹೆ ನೀಡಿದರು.

ಜಂಬೊ ಪೊದಾರ್‌ ಕಿಡ್ಸ್‌ನ ಪ್ರೀತಿ ವಿಕ್ರಂ, ‘ಕೃತಕ ಬುದ್ಧಿಮತ್ತೆ ಹೊಂದಿರುವ ರೊಬೋಟ್‌ಗಳ ಬಳಕೆಯಿಂದಾಗಿ ಭವಿಷ್ಯದಲ್ಲಿ ಉದ್ಯೋಗಗಳ ಕೊರತೆ ಉಂಟಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಕ್ಕಳಿಗೆ ಶಿಕ್ಷಣ ನೀಡುವ ಅಗತ್ಯವಿದೆ’ ಎಂದರು.
**
‘ಉಪಕರಣಗಳ ಬೆಲೆ ₹6.5 ಲಕ್ಷ’ 
ಮಕ್ಕಳಿಗೆ ಪ್ರಾಯೋಗಿಕ ಶಿಕ್ಷಣ ನೀಡುವ ಉದ್ದೇಶದಿಂದ ಅಪ್ಲಿಕೇಷನ್‌ ಆಧಾರಿತ ಉಪಕರಣಗಳನ್ನು ಆವಿಷ್ಕರಿಸಲಾಗಿದೆ. ಇವುಗಳನ್ನು ಯಲಹಂಕ ನ್ಯೂಟೌನ್‌ನ ಜ್ಞಾನ ಜ್ಯೋತಿ ಶಾಲೆಯಲ್ಲಿ ಅಳವಡಿಸಲಾಗಿದೆ. ಎಲ್ಲ ಉಪಕರಣಗಳ ಬೆಲೆ ₹6.5 ಲಕ್ಷ. ಇವುಗಳನ್ನು ಖರೀದಿಸಲು ಸುಮಾರು 200 ಶಾಲೆಗಳು ಆಸಕ್ತಿ ತೋರಿವೆ. ಸರ್ಕಾರಿ ಶಾಲೆಗಳಿಗೆ ಪೂರೈಸುವ ಸಂಬಂಧ ಶಿಕ್ಷಣ ಇಲಾಖೆಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಇದಕ್ಕೆ ಅನುಮತಿ ಸಿಕ್ಕರೆ ಉಪಕರಣಗಳ ಉತ್ಪಾದನಾ ವೆಚ್ಚವನ್ನು ಮಾತ್ರ ಪಡೆಯಲಾಗುತ್ತದೆ ಎಂದು ಹ್ಯಾಂಡ್ಸ್‌ ಆನ್‌ ಲರ್ನಿಂಗ್‌ ಲ್ಯಾಬ್ಸ್‌ನ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಮಾಧವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT