ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟಿಸಂ ಸಮಸ್ಯೆ ಮತ್ತು ಸವಾಲುಗಳು

–ಪ್ರತಿಭಾ ಕಾರಂತ್‌
Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಆಟಿಸಂ ನ್ಯೂನತೆಯುಳ್ಳ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳನ್ನು ಶೀಘ್ರವಾಗಿ ಗುರುತಿಸಿ ಸೂಕ್ತವಾದ ತರಬೇತಿ, ಮೌಲ್ಯಮಾಪನ, ಕಲಿಕಾ ತಂತ್ರಗಳನ್ನು ಅಳವಡಿಸಿ, ಕ್ರಿಯಾತ್ಮಕ ಆಲೋಚನೆ ಮತ್ತು ಪರಿಸರವನ್ನು ಒದಗಿಸುವುದರಿಂದ ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ಸಫಲತೆಯನ್ನು ಪಡೆಯಬಹುದು.

ಆಟಿಸಂ ಮಕ್ಕಳು ಮುಖ್ಯವಾಹಿನಿಗೆ ಬರುವಾಗ ಜೀವನದ ಕೆಲವು ಹಂತಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳನ್ನು ಕೆಳಕಂಡಂತೆ ವಿವರಿಸಬಹುದು:

1)  ಶೈಶವಾಸ್ಥೆ  ಅಥವಾ ಬಾಲ್ಯಾವಸ್ಥೆಯಲ್ಲಿ ಆಟಿಸಂ ನ್ಯೂನತೆಯನ್ನು ಗುರುತಿಸುವ ಕಾರ್ಯ ಶೀಘ್ರವಾಗಿ ಆಗುತ್ತಿಲ್ಲ. ನ್ಯೂನತೆಯನ್ನು ಒಪ್ಪಿಕೊಂಡರೂ ಅದಕ್ಕೆ ಸೂಕ್ತ ತರಬೇತಿ ನೀಡುವ ಮನೋಭಾವ ಪೋಷಕರಲ್ಲಿ ಶೀಘ್ರವಾಗಿ  ಮೂಡುವುದಿಲ್ಲ. ಶೀಘ್ರ ಗುರುತಿಸುವಿಕೆಯಿಂದ ಆಗಬಹುದಾದ ಲಾಭಗಳ ಬಗ್ಗೆ ಪೋಷಕರಿಗೆ ಮತ್ತು ವೃತ್ತಿಪರರಿಗೆ ಇರುವ ಉದಾಸೀನ ಭಾವವೂ ಕೂಡ, ಸಂತ್ರಸ್ತರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ತಡೆಯಾಗಿದೆ.

ಮತ್ತೊಂದು ಬಹುಮುಖ್ಯ ಸಮಸ್ಯೆಯೆಂದರೆ ಆಟಿಸಂ ನ್ಯೂನತೆಯುಳ್ಳ ವ್ಯಕ್ತಿಗಳ ಅಗತ್ಯಗಳನ್ನು ಭರಿಸಲು ಲಭ್ಯವಿರುವ ಸಂಪನ್ಮೂಲಗಳ ಬಗ್ಗೆ ಪೋಷಕರಿಗೆ ಸರಿಯಾದ ಮಾರ್ಗದರ್ಶನದ ಕೊರತೆಯೂ ಒಂದು ಕಾರಣ.

2) ಶಾಲಾ ಹಂತ ಮತ್ತು ವಯಸ್ಕ ಹಂತ: ಇನ್ನು ಶಾಲಾಹಂತ ಮತ್ತು ವಯಸ್ ಹಂತದಲ್ಲಿ ಮಗು ಇನ್ನಷ್ಟು ಸಮಸ್ಯೆಗಳನ್ನು ಎದುರಿಸುತ್ತದೆ.

* ಶಾಲೆಗೆ ದಾಖಲಾತಿ ಪಡೆಯುವಾಗ ತಿರಸ್ಕರಿಸಲ್ಪಡುತ್ತದೆ

* ಶಿಕ್ಷಕರಿಗೆ ಆಟಿಸಂ ನ್ಯೂನತೆಯ ಬಗ್ಗೆ ಮತ್ತು ಇತರ ವಿಕಲತೆಗಳ ಬಗ್ಗೆ ಅರಿವು ಇಲ್ಲದಿರುವುದು.

* ಶಿಕ್ಷಕರಿಗೆ ಮಗುವಿನ ವಸ್ತುಸ್ಥಿತಿಯ ಬಗ್ಗೆ ಒಪ್ಪಿಕೊಳ್ಳಲು ಕಷ್ಟವಾಗುತ್ತಿರುವುದು.

* ಆಟಿಸಂ ಮಕ್ಕಳ ವರ್ತನೆಯ ಕುರಿತು ಶಿಕ್ಷಕರಿಗೆ ಇರುವ ಅರಿವಿನ ಅಭಾವ ಮತ್ತು ಭಯ.

* ಸಾಮಾನ್ಯ ಶಾಲೆಯಲ್ಲಿ ಸಾಮಾನ್ಯ ಮಕ್ಕಳ ಪೋಷಕರು ಆಟಿಸಂ ನ್ಯೂನತೆಯುಳ್ಳ ಮಕ್ಕಳ ಬಗ್ಗೆ ಹೊಂದಿರುವ ಋಣಾತ್ಮಕ ಮನೋಭಾವ. ಅಂತಹ ಮಕ್ಕಳ ಜೊತೆ ತಮ್ಮ
ಮಕ್ಕಳು ಕಲಿತರೆ ಪ್ರಗತಿ ಕುಂಠಿತವಾಗುತ್ತದೆಂಬ ಭಾವನೆ.

* ಶಾಲೆಗಳಲ್ಲಿ ಆಟಿಸಂ ಮಕ್ಕಳ ಅಗತ್ಯಗಳನ್ನು ಭರಿಸಲು ಸೂಕ್ತವಾದ ಕಲಿಕಾ ಪರಿಸರ
ಮತ್ತು ಭೌತಿಕ ಪರಿಸರದ ಕೊರತೆ. ಶಾಲಾ ಶಿಕ್ಷಕರು ಇಂತಹ ಮಕ್ಕಳನ್ನು ಪ್ರೋತ್ಸಾಹಿಸಲು ಕೆಲವು ಕಡೆ ಶಾಲಾ ಆಡಳಿತ ಮಂಡಳಿಯ ಸಹಕಾರದ ಕೊರತೆ.

* ಆಟಿಸಂ ಮಕ್ಕಳನ್ನು ನಿಭಾಯಿಸುವಲ್ಲಿ ಅವರಿಗೆ ಸೂಕ್ತವಾದ ಮೌಲ್ಯಮಾಪನ ವಿಧಾನ / ಕಲಿಕಾ ತಂತ್ರಗಳನ್ನು ಬಳಸಲು ಅಗತ್ಯವಾದ ತರಬೇತಿ, ಆಲೋಚನೆ ಮತ್ತು ಕ್ರಿಯಾತ್ಮಕ ಪರಿಸರದ ಅಭಾವ.

* ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಸಹಪಾಠಿಗಳ ಸಹಕಾರ ತುಂಬಾ ಮುಖ್ಯ. ಆದರೆ ಅದನ್ನು ಪೂರೈಸಲು ಸಹಪಾಠಿಗಳ ಗುಂಪನ್ನು ಜಾಗೃತಿಗೊಳಿಸುವ
ಕಾರ್ಯ ನಡೆಯುತ್ತಿಲ್ಲ.

ಇಷ್ಟೆಲ್ಲಾ ಸಮಸ್ಯೆಗಳಿಂದಾಗಿ ಆಟಿಸಂ ಮಕ್ಕಳನ್ನು ಮುಖ್ಯವಾಹಿನಿಗೆ ತರುವುದು ಕಷ್ಟವಾಗುತ್ತಿದೆ. ಈ ಸಮಸ್ಯೆಗಳನ್ನು ನಿವಾರಿಸಿ, ಸೂಕ್ತ ಅಗತ್ಯಗಳನ್ನು ಒದಗಿಸಿದರೆ ಅವರನ್ನು ಸ್ವಾವಲಂಬಿಗಳಾಗಿ ಮಾಡಲು ಸಹಕಾರಿಯಾಗುತ್ತದೆ.

ಈ ನಿಟ್ಟಿನಲ್ಲಿ ಅಂತಹ ಮಕ್ಕಳನ್ನು ಶೀಘ್ರವಾಗಿ ಗುರುತಿಸುವ, ತರಬೇತಿ ನೀಡುವ, ಫಲಿತಾಂಶಗಳನ್ನು ದಾಖಲಿಸುವ ಕಾರ್ಯ ನಡೆಯಬೇಕು.

ಇದು ಒಂದು ದೀರ್ಘಾವಧಿಯ ಪ್ರಯತ್ನವಾಗಿದ್ದು, ಈ ಪ್ರಯತ್ನಕ್ಕೆ ಪೋಷಕರು, ಶಿಕ್ಷಕರು, ವೃತ್ತಿಪರರು ಮತ್ತು ಶಾಲಾ ಆಡಳಿತ ಮಂಡಳಿಯ ಸಹಕಾರದಿಂದ ಆಟಿಸಂ ನ್ಯೂನತೆಯುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ಸಫಲತೆಯನ್ನು ಪಡೆಯಬಹುದು.

**

ಆಟಿಸಂ ಸಮಸ್ಯೆ ಮತ್ತು ದಿ ಕಾಮ್ ಡೀಲ್ ಟ್ರಸ್ಟ್

ಆಟಿಸಂ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದಲೇ ಡಾ. ಪ್ರತಿಭಾ ಕಾರಂತ್‌ ಅವರು ದಿ ‘ಕಾಮ್ ಡೀಲ್ ಟ್ರಸ್ಟ್’ ಅನ್ನು ಪ್ರಾರಂಭಿಸಿದ್ದಾರೆ. ಈ ಟ್ರಸ್ಟ್ ಕಳೆದ 17 ವರ್ಷಗಳಿಂದ ಸಂವಹನ ಸಮಸ್ಯೆಗಳಿಂದ ತೊಂದರೆಗೆ ಒಳಗಾಗಿರುವ ಮತ್ತು ಆಟಿಸಂ ಸಮಸ್ಯೆಗಳಿರುವ ಮಕ್ಕಳನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಕಾರ್ಯಕ್ರಮವನ್ನು (Early Identification & Intervention) ರೂಪಿಸಿ ಜಾರಿಗೊಳಿಸಿದೆ. ಆಟಿಸಂ ನ್ಯೂನ್ಯತೆಯುಳ್ಳ ಮಕ್ಕಳನ್ನು ಶಾಲಾ ಪೂರ್ವ ಮತ್ತು ದೈನಂದಿನ ಶಾಲೆಗಳಲ್ಲಿ ಶಿಕ್ಷಣ ಒದಗಿಸುವ ಅಥವಾ ಮುಖ್ಯವಾಹಿನಿಗೆ ತರುವ ಕೆಲಸ ಮಾಡುವುದು ಸಂಸ್ಥೆಯ ಮುಖ್ಯ ಉದ್ದೇಶವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT