‘ಚಿಲ್ಲರೆ ಹೂಡಿಕೆಗೆ ಉತ್ತೇಜನ ನೀಡಿ’

ಗುರುವಾರ , ಜೂನ್ 27, 2019
30 °C
ಹಣಕಾಸು ಸಚಿವೆ ನಿರ್ಮಲಾಗೆ ಬಂಡವಾಳ ಮಾರುಕಟ್ಟೆ ಪ್ರತಿನಿಧಿಗಳ ಮನವಿ

‘ಚಿಲ್ಲರೆ ಹೂಡಿಕೆಗೆ ಉತ್ತೇಜನ ನೀಡಿ’

Published:
Updated:

ನವದೆಹಲಿ: ಕಾರ್ಪೊರೇಟ್‌ ಬಾಂಡ್‌ಗಳಲ್ಲಿನ ಹೂಡಿಕೆಗೆ ಸಂಬಂಧಿಸಿದಂತೆ ಚಿಲ್ಲರೆ ಹೂಡಿಕೆದಾರರಿಗೆ ತೆರಿಗೆ ಉತ್ತೇಜನ ನೀಡುವಂತೆ ಹಣಕಾಸು ಮಾರುಕಟ್ಟೆಯ ಪ್ರತಿನಿಧಿಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಹಣಕಾಸು ಮತ್ತು ಬಂಡವಾಳ ಮಾರುಕಟ್ಟೆಯ ಪ್ರತಿನಿಧಿಗಳು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌  ಅವರೊಂದಿಗೆ ಗುರುವಾರ ಇಲ್ಲಿ ನಡೆಸಿದ ಬಜೆಟ್ ಪೂರ್ವ ಸಭೆಯಲ್ಲಿ ಈ ಹಕ್ಕೊತ್ತಾಯ ಮಂಡಿಸಲಾಗಿದೆ.

ಪ್ರಾದೇಶಿಕ ಬ್ಯಾಂಕ್‌ಗಳಲ್ಲಿ ಬಂಡವಾಳ ಹೂಡಿಕೆ, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಅಗತ್ಯವಾದ ನಗದು ಪೂರೈಕೆ ವಿಷಯಗಳ ಬಗ್ಗೆ ತೀವ್ರ ಗಮನ ಹರಿಸುವಂತೆಯೂ ಮನವಿ ಮಾಡಿದ್ದಾರೆ.

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಪರಾಮರ್ಶೆ, ಸಮಿತಿ ರಚನೆ ಮಾಡುವ ಮೂಲಕ ಬ್ಯಾಂಕ್‌ಗಳ ಎನ್‌ಪಿಎ ಪರಿಶೀಲನೆ, ಸಾಲ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಸ್ಥಾಪನೆ, ಬಂಡವಾಳ ಮಾರುಕಟ್ಟೆಯಲ್ಲಿ ಸುರಕ್ಷತಾ ವಹಿವಾಟು ತೆರಿಗೆಯಂತಹ (ಎಸ್‌ಟಿಟಿ) ವಿವಿಧ ತೆರಿಗೆ ದರ ಇಳಿಕೆ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಕಾರ್ಪೊರೇಟ್‌ ಬಾಂಡ್‌ ಮಾರುಕಟ್ಟೆಯನ್ನು ವಿಸ್ತರಿಸುವುದು ಹೇಗೆ ಎನ್ನುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸದ್ಯಕ್ಕೆ ಚಿಲ್ಲರೆ ಹೂಡಿಕೆದಾರರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಹೂಡಿಕೆ ಮಾಡುತ್ತಿದ್ದಾರೆ. ಮ್ಯೂಚುವಲ್‌ ಫಂಡ್‌ಗಳಿಗೆ ನೀಡಿರುವಂತೆಯೇ ಚಿಲ್ಲರೆ ಹೂಡಿಕೆದಾರರಿಗೂ ಒಂದಿಷ್ಟು ತೆರಿಗೆ ಪ್ರಯೋಜನ ನೀಡಿದರೆ ಮಾರುಕಟ್ಟೆಗೆ ನೆರವಾಗಲಿದೆ’ ಎಂದು ಐಡಿಬಿಐ ಬ್ಯಾಂಕ್‌ನ ಸಿಇಒ ರಾಕೇಶ್‌ ಶರ್ಮಾ ತಿಳಿಸಿದ್ದಾರೆ.

‘ಹೂಡಿಕೆ ಹೆಚ್ಚಿಸಲು ಅವಧಿ ಯೋಜನೆಗಳಿಗೆ ತೆರಿಗೆ ಉತ್ತೇಜನ ನೀಡಬೇಕು’ ಎಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರದ (ಐಆರ್‌ಡಿಎಐ) ಅಧ್ಯಕ್ಷ ಸುಭಾಷ್ ಚಂದ್ರ ಕುಂಠಿಯಾ ಸಲಹೆ ನೀಡಿದ್ದಾರೆ.

‘ಮೂಲಸೌಕರ್ಯಕ್ಕೆ ಹಣಕಾಸು ನೆರವು, ಎಂಎಸ್‌ಎಂಇ, ರಫ್ತು ವಲಯಗಳಲ್ಲಿ ಹೂಡಿಕೆ ಹೆಚ್ಚಿಸಲು ಯಾವ ರೀತಿಯ ತೆರಿಗೆ ಪ್ರಯೋಜನಗಳನ್ನು ನೀಡಬಹುದು ಎನ್ನುವ ಕುರಿತು ಹಲವಾರು ಸಲಹೆಗಳು ಬಂದಿವೆ’ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

‘ವಾಹನ ಬಿಡಿಭಾಗ: ಜಿಎಸ್‌ಟಿ ತಗ್ಗಿಸಿ’

ವಾಹನಗಳ ಬಿಡಿಭಾಗಗಳು, ಅಲ್ಯುಮಿನಿಯಂ ಪಾತ್ರೆಗಳ ಮೇಲಿನ ಜಿಎಸ್‌ಟಿ ತಗ್ಗಿಸುವಂತೆ ಅಖಿಲ ಭಾರತ ವರ್ತಕರ ಒಕ್ಕೂಟವು (ಸಿಎಐಟಿ) ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

ಬಹಳಷ್ಟು ವಾಹನ ಬಿಡಿಭಾಗಗಳು ಮತ್ತು ಅಲ್ಯುಮಿನಿಯಂ ಪಾತ್ರೆಗಳು ಐಷಾರಾಮಿ ವರ್ಗಕ್ಕೆ ಬರುವುದಿಲ್ಲ. ಹೀಗಾಗಿ ಶೇ 28ರ ಗರಿಷ್ಠ ತೆರಿಗೆ ದರದಿಂದ ಕೈಬಿಡಬೇಕು. ಜಿಎಸ್‌ಟಿಯ ವಿವಿಧ ತೆರಿಗೆ ದರಗಳಲ್ಲಿ ಇರುವ ಸರಕುಗಳ ಪರಿಶೀಲನೆ ನಡೆಸುವಂತೆಯೂ ಕೇಳಿಕೊಂಡಿದೆ.

ಹಾರ್ಡ್‌ವೇರ್‌, ಮೊಬೈಲ್‌ ಕವರ್‌, ಐಸ್‌ಕ್ರೀಂ, ಹೆಲ್ತ್‌ ಡ್ರಿಂಕ್ಸ್‌, ಪೇಂಟ್ಸ್‌, ಮಾರ್ಬಲ್‌, ಬಳಸಿದ ಕಾರುಗಳು ಮತ್ತು ದ್ವಿಚಕ್ ರವಾಹನಗಳ ಮೇಲಿನ ತೆರಿಗೆಯನ್ನೂ ತಗ್ಗಿಸುವ ಸಂಬಂಧ ಹಣಕಾಸು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಅದನ್ನು ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ ಎಂದು ಒಕ್ಕೂಟ ತಿಳಿಸಿದೆ.

ವಾಹನ ಉದ್ಯಮದ ಬೇಡಿಕೆ: ದೇಶದಲ್ಲಿ ವಾಹನ ಮಾರಾಟ 11 ತಿಂಗಳಿನಿಂದಲೂ ಇಳಿಮುಖವಾಗಿದೆ. ಹೀಗಾಗಿ ಎಲ್ಲಾ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 28 ರಿಂದ ಶೇ 18ಕ್ಕೆ ತಗ್ಗಿಸುವಂತೆ ಉದ್ಯಮವೂ ಬೇಡಿಕೆ ಇಟ್ಟಿದೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !